ಮೊನ್ನೆ ಸಂಕ್ರಾಂತಿ, ಹಿರಣ್ಯ ದೇಗುಲದಲ್ಲಿ ಸಂಭ್ರಮದ ಪೂಜಾ ಕಾರ್ಯಕ್ರಮಗಳು, ಅನ್ನ ಪ್ರಸಾದ ಸ್ವೀಕರಿಸಿ ರಾತ್ರಿ ಮನೆಗೆ ವಾಪಸ್. ನಮ್ಮೊಂದಿಗೆ ಪ್ರಸಾದ, ಹೂವು ಹಣ್ಣು ತೆಂಗಿನಕಾಯಿಗಳೂ ಬಂದಿವೆ. ಎಲ್ಲವನ್ನೂ ತಂಪುಪೆಟ್ಟಿಗೆಯಲ್ಲಿಟ್ಟು ಮಲಗುವ ಹೊತ್ತಿಗೆ ಗಂಟೆ ಹನ್ನೊಂದು ದಾಟಿತ್ತು.
ದಿನವೊಂದು ಉರುಳಿತು. ಹೂವು ಮುಡಿದು ಮುಗಿಯಿತು. ಹಣ್ಣುಗಳು ಬಿಡುವಿನ ವೇಳೆಯಲ್ಲಿ ಸ್ವಾಹಾ ಆದುವು. ತೆೆಂಗಿನಕಾಯಿ ಅಡುಗೆಗೆ ವಿನಿಯೋಗಿಸಲ್ಪಟ್ಟಿತು. ಇನ್ನೂ ಒಂದು ಅವಲಕ್ಕಿ ಕಜ್ಜಾಯ ಬಾಕಿ ಇದೆ. ಬೆಲ್ಲ ಕಾಯಿ ಧಾರಾಳ ಹಾಕಿದಂತಹ ಅವಲಕ್ಕಿ, ಹಾಗೇನೇ ತಿನ್ನಲು ಮನವೊಪ್ಪಲಿಲ್ಲ. ಇದನ್ನು ಮುಗಿಸುವ ಉಪಾಯ ಹೇಗೆ?
ಎಂದಿನಂತೆ ದೋಸೆಯ ಚಿಂತನೆ ನಡೆಸುತ್ತ, ಒಂದೂವರೆ ಲೋಟ ಅಕ್ಕಿ, ಮೂರು ಚಮಚ ಮೆಂತೆ ನೀರಿನಲ್ಲಿ ನೆನೆ ಹಾಕಿದ್ದಾಯಿತು, ಅರೆಯುವಾಗ ಸೂಕ್ತ ಪ್ರಮಾಣದಲ್ಲಿ ಅವಲಕ್ಕಿ ಕಜ್ಜಾಯವನ್ನೂ ಸೇರಿಸತಕ್ಕದ್ದು ಎಂದು ತೀರ್ಮಾನಕ್ಕೆ ಬರಲಾಯಿತು.
ಅರೆದದ್ದೂ ಆಯ್ತು, ಮಾರನೇ ದಿನ ದೋಸೆ ಎರೆದದ್ದೂ ಆಯ್ತು.
0 comments:
Post a Comment