Pages

Ads 468x60px

Monday, 25 November 2024

ಜೀರಿಗೆ ಕೂಟು

 


 ಈಗ ಏನಾಗ್ಬಿಟ್ಟಿದೆ ಅಂದ್ರೆ ಅಡುಗೆಗೆ ಹಿತವಾಗುವಂತಹ ಮಜ್ಜಿಗೆ ಲಭಿಸುವುದೇ ಇಲ್ಲ.  ಎರಡು ದಿನಕ್ಕೊಮ್ಮೆ ತರುವ ಹಾಲು,  ಅದು ಚಹಾ ಕಾಫಿ, ಹಾಗೇನೇ ಕುಡಿಯಲುೂ ಆಯ್ತು, ನಂತರ ಮೊಸರು ಆಗಬೇಕು, ಯಾವುದೂ ನಿರರ್ಥಕ ಆಗದ ಹಾಗೆ ಬೆಣ್ಣೆ, ತುಪ್ಪವೂ ಮೇಲೆದ್ದು ಬರಬೇಕು.  ಉಳಿದಂತಹ ಮಜ್ಜಿಗೆಯನ್ನು ಗಟಗಟನೆ ಕುಡಿಯಬೇಕು.


ಮನೆಯಲ್ಲೇ ಎಮ್ಮೆ ದನ ಇದ್ದ ಕಾಲದಲ್ಲಿ, ಮನೆಯ ಹೊರಗೂ ನಮ್ಮ ಮಜ್ಜಿಗೆ ಬಟವಾಡೆ ಆಗುತ್ತಿದ್ದ ಕಾಲ ಅದು.  ನೆರೆಕರೆಯ ಮನೆಗಳಲ್ಲಿ ವಿಶೇಷ ಸಮಾರಂಭಗಳಿದ್ದಲ್ಲಿ ನಮ್ಮ ಮಾವ ಮೊದಲೇ ತಿಳಿಸಿರುತ್ತಿದ್ದರು, ಏನಂತ?    “ ಆ ಮದುವೆ ಮನೆಗೆ ಒಂದು ಕೊಡ ಮಜ್ಜಿಗೆ ಶೇಖರಿಸಿ ಇಡು.. “    ಈಗ ಏನೇ ಇದ್ದರೂ ನಂದಿನಿ ಪ್ಯಾಕೆಟ್ ಹಾಲು, ಮೊಸರು,  ಮಜ್ಜಿಗೆಯೂ ಸಿಗುತ್ತೆ ಪ್ಯಾಕೆಟ್ಟು.


ಮಜ್ಜಿಗೆಹುಳಿ ಮಾಡೋಣ ಅಂತ ಆಲೋಚನೆ ಮಾಡುತ್ತ ಇದ್ದ ಹಾಗೆ ಮಜ್ಜಿಗೆ ಮುಗಿಯಿತು.  ತಣ್ಣಗೆ ಅರ್ಧ ಲೋಟ ಮೊಸರು ಉಳಿದಿತ್ತು.  ಮೊಸರೂ ಆದೀತು.   ಸೌತೇ ಕಾಯಿ ಇದೆ.   ಯಾವುದೇ ಅಡುಗೆಗಾದೀತು ಎಂದು ನೆನೆಸಿದ ಕಾಬೂಲಿ ಚನಾ ಇದೆ.  ತೆಂಗಿನಕಾಯಿ ಅರ್ಧ ಕಡಿ ಇದೆಯಷ್ಟೇ,  ಅದೂ ಸಣ್ಣ ಕಡಿ.  ಇನ್ನೊಂದು ಕಾಯಿ ಸುಲಿದು ಕೊಡಲಿಕ್ಕೆ ರಂಗಣ್ಣ ಇವತ್ತು ಬಂದಿಲ್ಲ… ಹೀಗೆಲ್ಲ ಚಿಂತಿಸುತ್ತ ಇದ್ದಂತೆ ವಿದ್ಯುತ್ ಕುಕ್ಕರಲ್ಲಿ ಕಾಬೂಲಿ ಚನಾ ಬೇಯಲಿಕ್ಕೆ ಇಟ್ಟಾಯ್ತು.   ಸೌತೇಕಾಯಿ ಹೋಳಾಯ್ತು.  ಅಗಾರೋ ರೈಸ್ ಕುಕ್ಕರ್ ಅನ್ನ ಬೇಯಿಸುತ್ತ ಇದೆ.  ಬೆಳ್ತಿಗೆ ಅನ್ನ ಕೇವಲ ಇಪ್ಪತೈದು ನಿಮಿಷದಲ್ಲಿ ಆಗುತ್ತೆ,  ಕುಚ್ಚುಲಕ್ಕಿ ಅನ್ನ ಬೇಯಲಿಕ್ಕೆ ಒಂದೂವರೆಯಿಂದ ಎರಡು ಗಂಟೆಗಳ ಅವಧಿ.  ವಿದ್ಯುತ್ ಖರ್ಚು ಕಡಿಮೆ ಎಂದು ನಮ್ಮ ಯಜಮಾನರ ಅಂಬೋಣ.





ಈಗ ಸ್ವಲ್ಪ ಬಿಡುವು,  ದೈನಂದಿನ ಇನ್ನಿತರ ಕೆಲಸ ಕಾರ್ಯಗಳನ್ನು ಮುಗಿಸಿ ಅಡುಗೆ ಮನೆಗೆ ಬಂದಾಗ ಅನ್ನ ಬೆಂದಿದೆ,  ಕಾಬೂಲಿ ಚನಾ ಹದವಾಗಿ ಬೆಂದಿದೆ.  ಆಗ್ಗಿಂದಾಗ್ಗೆ ಮುಚ್ಚಳ ತೆರೆದು ನೋಡಲಡ್ಡಿಯಿಲ್ಲ.


ತೆಂಗಿನತುರಿ ಕಡಿಮೆ ಆದ ಬಾಬ್ತು ಒಂದು ಸೌಟು ಬೆಂದಂತಹ ಕಾಬೂಲಿ ಚನಾ ತೆಗೆದಿರಿಸಲಾಯಿತು.

ಸೌತೆ ಹೋಳುಗಳನ್ನು ಬೇಯಲು ಹಾಕಿ, ರುಚಿಗೆ ಉಪ್ಪು ಕೂಡಿ, ಮುಚ್ಚಿ ಇರಿಸಲಾಯಿತು. ಮರೆತು ಹೋದ ಹಸಿಮೆಣಸನ್ನು ಎರಡಾಗಿ ಸಿಗಿದು ಹಾಕಲಾಯಿತು.

ಬೇಯುತ್ತ ಇರಲಿ,  ಈಗ ಅರೆಯುವ ಸಮಯ.


ತೆಂಗಿನತುರಿ, ಕಾಬೂಲಿ ಚನಾ, ಮೊಸರು ಮಿಕ್ಸಿ ಜಾರೊಳಗೆ ತುಂಬಿ, ಒಂದು ಹಸಿಮೆಣಸು,  ತುಸು ಜೀರಿಗೆ,  ಚಿಟಿಕೆ ಅರಸಿಣ ಕೂಡಿ ಅರೆಯಲಾಯಿತು.  ಅರೆದ ಮಿಶ್ರಣ ಸೇರಿದಾಗ ಒಂದು ಪದಾರ್ಥ ಸಿದ್ಧಗೊಂಡಿದೆ.  ಹುಳಿ ಹಾಕುವುದಕ್ಕಿಲ್ಲ,  ಉಪ್ಪು ಬೆಲ್ಲ, ನೀರು ಹೊಂದಿಸಿದರಾಯಿತು.  ಕುದಿದ ನಂತರ ಕರಿಬೇವು ಕೂಡಿದ ಒಗ್ಗರಣೆಯೊಂದಿಗೆ ವಿದ್ಯುತ್ ರೈಸ್ ಕುಕ್ಕರ್ ಅಡುಗೆ ಮುಗಿಯಿತು.




0 comments:

Post a Comment