Pages

Ads 468x60px

Friday, 31 August 2012

ಬೆಂಡೆಯ ಸರಸ , ಕಾಯಿರಸ


ಫೋಟೋ ಕೃಪೆ : ಶಂಕರನಾರಾಯಣ ಭಟ್


ಮಳೆಗಾಲದ ಅಂಗಳ ತರಕಾರೀ ಬೇಸಾಯಕ್ಕೆ ಮೀಸಲು . ಇದು ನಮ್ಮ ಕೃಷಿಕರ ಸಾಮಾನ್ಯ ಪದ್ಧತಿ . ಅದರಲ್ಲಿ ಪ್ರಮುಖವಾದದ್ದು ಬೆಂಡೆ . ಇದನ್ನು ವರ್ಷಪೂರ್ತಿ ಬೆಳೆಯಬಹುದಾಗಿದ್ದರೂ ಮಳೆಗಾಲದ ಬೆಳೆಗೆ ಪ್ರಾಮುಖ್ಯತೆ . ಆಗ ನೀರು ಹಾಕಬೇಕಾಗಿಲ್ಲ . ಇನ್ನಿತರ ಕೃಷಿ ಚಟುವಟಿಕೆಗಳೂ ಸ್ಥಗಿತವಾಗಿರುತ್ತವೆ . ಹಿಂದಿನ ವರ್ಷದ ಬೆಳೆಯಲ್ಲಿ ತೆಗೆದಿರಿಸಿದ ಬೀಜಗಳನ್ನು ಮಣ್ಣಿನಲ್ಲಿ ಹದವಾಗಿ ಮಿಶ್ರಗೊಳಿಸಿ , ಮೇಲಿನಿಂದ ತರಗೆಲೆ , ಕಸಕಡ್ಡಿ , ಅಡಿಕೆಯ ಕೊಳೆತ ಸೋಗೆ ಇತ್ಯಾದಿಗಳನ್ನು ಮುಚ್ಚಿ ನಾಟಿ ಸಿದ್ಧತೆ ಮಾಡಲು ಸುಲಭ . ಬಿತ್ತಿದ ನಾಲ್ಕೇ ದಿನಗಳಲ್ಲಿ ಮೊಳಕೆ ಬರುವ ಸಸಿಗಳು ಬಹು ಶೀಘ್ರವಾಗಿ ಬೆಳೆಯುತ್ತವೆ . ಹಸಿರೆಲೆ ಗೊಬ್ಬರ , ಬೂದಿ ಅಥವಾ ಸುಡುಮಣ್ಣು ಹಾಕಿ ಮೇಲಿನಿಂದ ಮಣ್ಣು ಮುಚ್ಚಿದರೆ ಮುಗಿಯಿತು , ಗಿಡವು ತಾನೇ ತಾನಾಗಿ ಸೊಕ್ಕಿ ಬೆಳೆಯುತ್ತದೆ . ವಾರಕ್ಕೊಮ್ಮೆ ಸೆಗಣಿ ನೀರು ಹಾಕುತ್ತಿದ್ದರೆ ಇನ್ನೂ ಉತ್ತಮ . ಇಷ್ಟೆಲ್ಲಾ ಕೆಲಸ ಮಾಡಿದಿರೋ , ಗಣೇಶನ ಹಬ್ಬ ಬರುವಾಗ , ಬೆಂಡೆಕಾಯಿ ಅಡುಗೆಮನೆಯಲ್ಲಿ ದರ್ಬಾರು ಪ್ರಾರಂಭಿಸುತ್ತದೆ .

ಪಲ್ಯ , ಸಾರು , ಸಾಂಬಾರು , ಬೋಳುಹುಳಿ , ಮಜ್ಜಿಗೆಹುಳಿ , ಇನ್ನೂ ಏನೇನೋ ಹೊಸ ಹೊಸ ರುಚಿಗಳನ್ನು ಕಂಡುಹಿಡಿದಿದ್ದಾರೆಂದು ಲೆಕ್ಕವಿಲ್ಲ . ಎಲ್ಲದಕ್ಕೂ ಸೈ ಅನ್ನುತ್ತದೆ ಈ lady's fingers . ಎಲ್ಲ ಅಡುಗೆ ವೈವಿಧ್ಯಗಳಲ್ಲಿ ನನಗ ಬಹಳ ಇಷ್ಟವಾಗಿರುವುದು ಕಾಯಿರಸ . ಇದನ್ನು ಮಾಡಲು ಹೆಚ್ಚಿನ ಶ್ರಮವಿಲ್ಲ . ನನ್ನಜ್ಜಿ ಬಹಳ ಚೆನ್ನಾಗಿ ಮಾಡ್ತಿದ್ರು , ಯಾಕಂದ್ರೆ ನಮ್ಮಜ್ಜನಿಗೆ ಬೆಂಡೆಕಾಯಿ ರಸ ತುಂಬಾ ಇಷ್ಟವಾಗಿತ್ತು .

ಹೀಗೆ ಮಾಡಿ :
ಧಾರಾಳವಾಗಿ ಬೆಂಡೆ ಹೋಳು ಮಾಡಿ ಇಡಿ .
ಒಂದು ತೆಂಗಿನಕಾಯಿ ಡಬಡಬನೆ ಒಡೆದು ತುರಿ ಮಾಡಿ ಇಡಿ .
ನಾಲ್ಕು ಒಣ ಮೆಣಸು , ಒಂದು ದೊಡ್ಡ ಚಮಚ ಉದ್ದಿನಬೇಳೆ ಘಂ ಎಂದು ಹುರಿದು ಕಾಯಿತುರಿಯೊಂದಿಗೆ ರುಬ್ಬಿ ಇಡಿ .
ಉಪ್ಪು , ಹುಳಿ , ಬೆಲ್ಲ ಹಾಕಿ ನೀರು ಕುದಿಯಲಿಡಿ .
ಹ್ಞಾ , ನೆನಪಿಡಿ , ಕುದಿಯುತ್ತಿರುವಾಗಲೇ ಬೆಂಡೆ ಹೋಳುಗಳನ್ನು ಹಾಕಿ , ಇಲ್ಲಾಂದ್ರೆ ಲೋಳೆ ಲೋಳೆಯಾದೀತು .
ಬಹು ಬೇಗನೆ ಬೇಯುವ ತರಕಾರಿ , ತೊಗರೀಬೇಳೆ ಹಾಕಬೇಕಾಗಿಲ್ಲ .
ಬೆಂದ ನಂತರ ರುಬ್ಬಿದ ಮಸಾಲೆ ಹಾಕಿ ಕುದಿಸಿ .
ಕುದಿ ಬಂದೊಡನೆ ಕೆಳಗಿಳಿಸಿ .
ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡಿ , ಕಾಯಿರಸ ರೆಡಿ .





ಇಷ್ಟೆಲ್ಲಾ ಬೆಂಡೆ ಬಗ್ಗೆ ಹೇಳಿ ಆಯ್ತು . ಇದು ಆಫ್ರಿಕಾ ಮೂಲದಿಂದ ಬಂದಿದೆಯಂತೆ . ಸಸ್ಯಶಾಸ್ತ್ರೀಯವಾಗಿ Abelmoschus esculentus ಹೆಸರನ್ನು ಪಡೆದಿದೆ .
ಅತ್ಯಧಿಕ ನಾರಿನಂಶ ಹೊಂದಿರುವ ತರಕಾರಿ . ಇದೇ ಇದರ ವಿಶೇಷತೆ . ವಯಸ್ಸಾದವರು , ಮಲಬದ್ಧತೆಯ ಖಾಯಿಲೆಯಿಂದ ಬಳಲುತ್ತಿರುವವರು ದಿನಾ ತಿನ್ನುವುದು ಉತ್ತಮ . ವ್ಯದ್ಯರ ಬಳಿ ಹೋಗಬೇಕಾಗಿಲ್ಲ , ಮಾತ್ರೆ ನುಂಗುವ ಅಗತ್ಯವಿಲ್ಲ .
ತಂಪು ತರಕಾರಿ , ಹಸಿಯಾಗಿಯೇ ತಿನ್ನುವವರಿದ್ದಾರೆ .
ಉತ್ತಮ ಹೇರ್ ಕಂಡೀಶನರ್ , ತಲೆಸ್ನಾನ ಮಾಡುವಾಗ ಲೋಳೆ ಬರುವ ಸೊಪ್ಪುಗಳನ್ನು ಬಳಸುವ ಪದ್ಧತಿ ನಮ್ಮಲ್ಲಿ ಹಿಂದಿನಿಂದಲೇ ಇದೆ . ಅವೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಇರುವವರಿಗೆ ಮಾತ್ರ ಲಭ್ಯ . ಬೆಂಡೆಕಾಯಿಗಳನ್ನು ಚೆನ್ನಾಗಿ ಹಿಸುಕಿ ತಣ್ಣೀರಿನಲ್ಲಿ ಹಾಕಿ ಲೋಳೆ ತಯಾರಿಸಿ , ತಲೆಸ್ನಾನದ ನೀರಾಗಿ ಉಪಯೋಗಿಸಿ .
ವಿಟಾಮಿನ್ ಎ , ಬಿ ಕಾಂಪ್ಲೆಕ್ಸ್ ಗಳ ಗಣಿ . ಬೀಜಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ .
ಮಹಿಳೆಯರಿಗೆ ಋತು ಬಂಧದ ವಯಸ್ಸಿನಲ್ಲಿ , 45 ವರ್ಷ ದಾಟಿದವರಿಗೆ ನಿಯಮಿತವಾಗಿ ತಿನ್ನುವುದು ಉತ್ತಮ . ಅಧಿಕ ರಕ್ತಸ್ರಾವವನ್ನು ನಿಲ್ಲಿಸುವುದು , ಆಂತರಿಕ ಖಿನ್ನತೆಯನ್ನು ಹೋಗಲಾಡಿಸುವುದು .
2 ಬೆಂಡೆಕಾಯಿಗಳನ್ನು ತೊಟ್ಟು ಹಾಗೂ ತುದಿ ಕತ್ತರಿಸಿ , ನಡುವಿನಲ್ಲೂ ಕೊಂಚ ಸೀಳಿ , ಒಂದು ಲೋಟ ನೀರಿನಲ್ಲಿ ಹಾಕಿ , ರಾತ್ರಿ ಬೆಳಗಾಗುವವರೆಗೆ ಮುಚ್ಚಿಡಿ .ಮುಂಜಾನೆ ಲೋಟದೊಳಗಿನ ಬೆಂಡೆಕಾಯಿಗಳನ್ನು ತೆಗೆದಿರಿಸಿ ಆ ತಣ್ಣನೆಯ ನೀರನ್ನು ಕುಡಿಯಿರಿ . ಪ್ರತಿದಿನವೂ ಹೀಗೇ ಮಾಡುತ್ತಾ ಬನ್ನಿ . ಮಧುಮೇಹಿಗಳು " ಎಲ್ಹೊಯ್ತು ನನ್ನ ರಕ್ತದಲ್ಲಿನ ಸಕ್ಕರೆ " ಎಂದು ಚಕಿತಚಿತ್ತರಾಗದಿದ್ದರೆ ಮತ್ತೇನು ಕಮ್ಮಿ !



ಮನುಕುಲದ ಒಳಿತಿಗಾಗಿ ಶ್ರಮಿಸುವ ಜೀವರಾಶಿಗಳಲ್ಲಿ ಒಂದಾದ ಬೆಂಡೆಗೂ ಕಾಯಿಲೆ ಕಸಾಲೆಗಳು ಬರುವುದಿದೆ . ಅಂಥಹ ಸಂದರ್ಭಗಳಲ್ಲಿ ಕೀಟನಾಶಕ ಸಿಂಪಡಿಸಿ ವಾತಾವರಣವನ್ನೇ ಕಲುಷಿತಗೊಳಿಸುವುದು ಸಲ್ಲದು . " ಬಿತ್ತಿದ ಬೆಂಡೆ ಮೊಳಕೆ ಬಂದೇ ಇಲ್ಲ , ಏನು ಮಾಡೋಣ " ಅಂತೀರಾ , ಅಡುಗೆಮನೆ ಡಬ್ಬದ ಅರಸಿನಹುಡಿ ಹೊರ ತನ್ನಿ . ಬೀಜ ಬಿತ್ತುವಾಗಲೇ ಮಣ್ಣಿನಲ್ಲಿ ಅರಸಿನಹುಡಿಯನ್ನು ಪದರವಾಗಿ ಹರಡಬೇಕು . ಆಗ ಇರುವೆಗಳು ಸಾಲಾಗಿ ಬಂದು ಬೀಜಗಳನ್ನು ಹೊತ್ತೊಯ್ಯುವುದನ್ನು ತಪ್ಪಿಸಬಹುದು . ಬೀಜಗಳನ್ನು ನೀರಿನಲ್ಲಿ ನೆನೆಸಿ , ಬಟ್ಟೆಯಲ್ಲಿ ಕಟ್ಟಿ , ಮೊಳಕೆ ಬರಿಸಿ ನಾಟಿ ಮಾಡುವುದು ಮತ್ತೊಂದು ವಿಧಾನ .

ಸಸಿಗಳು ದೊಡ್ಡದಾದಂತೆ ದಿನವೂ ತಪಾಸಣೆ ಮಾಡುತ್ತಿರಬೇಕು . ಕೀಟಗಳು ಹಾರಾಡುತ್ತಿವೆಯೇ ಎಂದು ಪರೀಕ್ಷಿಸಿ ನೋಡಿ , ಸಂಜೆಯ ಹೊತ್ತು ಬೂದಿಯನ್ನು ಗಿಡಗಳ ಮೇಲಿನಿಂದ ಹಾರಿಸುವುದು ಒಂದು ಉಪಾಯ . ಕೈಯಲ್ಲಿ ಹಿಡಿಯಲು ಸಿಗುವ ಕೀಟ , ಮಿಡತೆಗಳನ್ನು ಹುಡುಕಿ ತೆಗೆದು ಕೊಳ್ಳಬೇಕಾಗುತ್ತದೆ . ಎರಡು ದಿನಕ್ಕೊಮ್ಮೆ ಕಹಿಬೇವಿನ ಎಣ್ಣೆ ಹಾಗೂ ಬೆಳ್ಳುಳ್ಳಿ ಜಜ್ಜಿದ ರಸವನ್ನು ನೀರಿನೊಂದಿಗೆ ಗಿಡಗಳ ಮೇಲೆ ಚಿಮುಕಿಸುವುದು ಉತ್ತಮ . ಕೀಟಗಳು ಗಿಡದ ಹತ್ತಿರ ಬರುವುದೇ ಇಲ್ಲ .
ಹಚ್ಚಹಸಿರಾಗಿರಬೇಕಾದ ಎಲೆಗಳು ಹಳದಿ ವರ್ಣಕ್ಕೆ ತಿರುಗುತ್ತವೆ , ಇದೂ ಒಂದು ರೋಗ . ಇದನ್ನು ಪಾಂಡು ರೋಗ ಎಂದು ಹೆಸರಿಸುತ್ತಾರೆ ನಮ್ಮ ಕೃಷಿಕರು . ಒಂದು ಜಾತಿಯ ವೈರಸ್ ಖಾಯಿಲೆ . ಇಂತಹ ಗಿಡಗಳನ್ನು ಕಡಿದು ಹಾಕುವುದು ಸೂಕ್ತ . ಧಾರಾಳವಾಗಿ ಹಸಿರೆಲೆ ಗೊಬ್ಬರ ಹಾಕುತ್ತಿದ್ದರೆ ಈ ರೋಗ ಬಾರದಂತೆ ತಡೆಯಬಹುದು . ಸೆಗಣಿ ನೀರು ಗಿಡಗಳ ಬುಡಕ್ಕೆ ಎರೆಯುತ್ತಾ ಇದ್ದರೆ ಗಿಡಗಳು ಆರೋಗ್ಯದಿಂದ ಕಂಗೊಳಿಸುತ್ತವೆ . ಮನೆ ಉಪಯೋಗಕ್ಕಿಂತ ಹೆಚ್ಚು ಬೆಳೆಸುವ ಸಾಮರ್ಥ್ಯ ನಿಮ್ಮಲ್ಲಿದೆಯಾದರೆ ಮಾರಾಟ ಮಾಡಿಯೂ ಕೈತುಂಬಾ ಕಾಸು ಗಳಿಸಬಹುದು . ತರಹೇವಾರಿ ಜಾತಿಗಳಿದ್ದರೂ ಊರ ಬೆಂಡೆಗೆ ಒಳ್ಳೆಯ ಬೇಡಿಕೆಯಿದೆ .



ಟಿಪ್ಪಣಿ: ದಿನಾಂಕ 13, ಆಗಸ್ಟ್ 2013 ರಂದು ವಿಜಯಕರ್ನಾಟಕ ಕನ್ನಡ ದಿನಪತ್ರಿಕೆಯ ' ಬ್ಲಾಗಿಲು ' ಅಂಕಣದಲ್ಲಿ ಬಂದಿರುವಂತಹ ಮಿಂಚುಬ್ಲಾಗ್ ಬಗೆಗಿನ ಒಂದು ಇಣುಕುನೋಟ ಇಲ್ಲಿದೆ.






2 comments: