Pages

Ads 468x60px

Saturday, 25 August 2012

ದೀವಿ ಹಲಸು , ಬಲು ಸೊಗಸುಮಳೆಗಾಲ ಆರಂಭವಾದೊಡನೆ ಮನೆಯಂಗಳ ತರಕಾರೀ ಬೇಸಾಯಕ್ಕೆ ಮೀಸಲು. ಅಂಗಳದ ಅಡಿಕೆಯೆಲ್ಲ ಅಟ್ಟ ಸೇರಿದ ಮೇಲೆ, ತೋಟದ ಕೃಷಿ ಚಟುವಟಿಕೆಗಳು ಬಹುತೇಕ ಸ್ಥಗಿತ. ಒಂದು ಹದ ಮಳೆ ಬಂದು ಬಿದ್ದರೆ ಸಾಕು, ದಾಸ್ತಾನು ಕೊಠಡಿಯಿಂದ ತರಕಾರಿ ಬೀಜಗಳು ಹೊರಗೆ ಬರುತ್ತವೆ, ಮಣ್ಣಿನೊಂದಿಗೆ ಬೆರೆತು, ಮೊಳೆತು, ಬೆಂಡೆಕಾಯಿ, ಪಡುವಲ, ದಾರಲೆ, ಅಲಸಂದೆ ಎಲ್ಲವೂ " ನಾನಿದ್ದೇನೆ " ಎಂದು ಮನೆಯೊಡತಿಯನ್ನು ಕೈ ಬೀಸಿ ಕರೆಯುತ್ತವೆ. ಆದರೂ ಅದೇ ಕಾಲಕ್ಕೆ ಸಿದ್ದವಾಗುವ ಇನ್ನೊಂದು ತಾಜಾ ತರಕಾರಿ ಇದೆ. ಅದೇ ದೇವಿ ಹಲಸು. ಹೆಮ್ಮೆಯಿಂದ ಬೀಗುತ್ತ ಮರದಿಂದ ಇಳಿದು ಬರುವಾಗ ಯಾವ ಗೃಹಿಣಿಯಾದರೂ ಮೊದಲ ಆದ್ಯತೆ ನೀಡುವುದು ಈ ದೀವಿ ಹಲಸಿಗೆ . " ಯಾಕೆ ಅಂತೀರಾ, " ದೀವಿ ಹಲಸಿನ ಖಾದ್ಯಗಳ ಪಟ್ಟಿ ಬಹಳ ದೊಡ್ಡದಿದೆ.

ಅಷ್ಟಕ್ಕೂ ಇದು ದಕ್ಷಿಣ ಕನ್ನಡದ ಕರಾವಳಿಗರಿಗೆ ಬಲು ಅಚ್ಚುಮೆಚ್ಚಿನದು. ಶ್ರಾವಣ ಮಾಸ ಬಂದೊಡನೆ ಹಬ್ಬಗಳ ಸಾಲು ಸಾಲು. ಅದೇ ಸಮಯಕ್ಕೆ ಇದೂ ಮಾರುಕಟ್ಟೆಗೆ ಬರುತ್ತದೆ. ನಾನು ಚಿಕ್ಕವಳಿದ್ದಾಗಲೇ ಗಮನಿಸಿದ್ದೇನೆ, ನನ್ನಪ್ಪ ತೋಟದ ಒಂದು ದೀವಿಹಲಸನ್ನೂ ವ್ಯರ್ಥ ಮಾಡುತ್ತಿರಲಿಲ್ಲ. ಎಲ್ಲವನ್ನೂ ಬಲಿತ ಹಾಗೆ ಕೊಯ್ಲು ಮಾಡಿಸಿ ಪಕ್ಕದ ಮನೆಯ ಮಲ್ಯರ ತರಕಾರಿ ಅಂಗಡಿಗೆ ಕಳಿಸುತ್ತಿದ್ದರು. ಆ ಕಾಲದಲ್ಲೇ ಅದಕ್ಕೆ ಒಳ್ಳೆಯ ಕ್ರಯ ಸಿಗುತ್ತಿತ್ತು. ಊರಿಂದ ದೀವಿಹಲಸು ಗೋಣಿಗಳಲ್ಲಿ ಬಂದೊಡನೆ ನನ್ನಮ್ಮ ಮನೆ ಖರ್ಚಿಗೆ ತೆಗೆದಿರಿಸುತ್ತಿದ್ದಳು. ಊಟದ ಹೊತ್ತಿಗೆ ಹತ್ತರಿಂದ ಹದಿನೈದು ಮಂದಿಯಾದರೂ ಇರುತ್ತಿದ್ದರು. ಎರಡು ದೀವಿಹಲಸು ಇದ್ದರೆ ಸಾಕು, ಅಷ್ಟು ಜನಕ್ಕೂ ಭೂರಿ ಭೋಜನ ! ಮದುವೆ, ಮುಂಜಿ ಶುಭ ಸಮಾರಂಭಗಳಲ್ಲಿ ಇದರ ಸಾಂಬಾರಿಗೆ ಪ್ರಾಶಸ್ತ್ಯ. ಇದು ನಮಗೆ ಎಷ್ಟು ಒಗ್ಗಿ ಹೋಗಿದೆಯೆಂದರೆ ಇರುವವರು ಆಪ್ತರಿಗೆ ಹಂಚುವುದರಲ್ಲಿ ಆನಂದಿಸುವಷ್ಟು.

ಮೋರೆಸಿ ಕುಟುಂಬಕ್ಕೆ ಸೇರಿದ ದೀವಿ ಹಲಸಿನ ವೈಜ್ಞಾನಿಕ ಹೆಸರು ಆರ್ಟೋಕಾರ್ಪಸ್ ಇನ್ಸೈಸ್. ಹಲಸಿನ ಮರದ ವರ್ಗಕ್ಕೆ ಸೇರಿದೆ. ಆದರೆ ಗುಣಧರ್ಮದಲ್ಲಿ ವೈರುಧ್ಯಗಳಿವೆ. ದೀವಿಹಲಸಿನಲ್ಲಿ ಬೀಜಗಳಿಲ್ಲ, ಮೇಣವೂ ಕಡಿಮೆ ಎಂದೇ ಹೇಳಬೇಕು. ಬೇರಿನಿಂದ ಪುನರುತ್ಪಾದನೆ. ಎಲೆಗಳು ಅಲಂಕಾರಿಕ ಸೊಗಸನ್ನು ಹೊಂದಿವೆ. ಗಿಡ ನೆಟ್ಟು ಮೂರೇ ವರ್ಷದಲ್ಲಿ ಫಲ ಕೊಡಲು ಪ್ರಾರಂಭ. ಹೂ ಬಿಡಲು ಆರಂಭವಾದೊಡನೆ ಗೊಬ್ಬರ ಹಾಕಿ ನೀರುಣಿಸುತ್ತಿದ್ದಲ್ಲಿ ಭಾರೀ ಗಾತ್ರದ ಫಲಗಳನ್ನು ಪಡೆಯಬಹುದು. ಹಲಸಿನ ಮರದ ದಿಮ್ಮಿ ಬಹು ಬೆಲೆಯುಳ್ಳದ್ದು, ಸಾಗುವಾನಿ, ಬೀಟಿಗಳಂತೆ. ಆ ನಿಟ್ಟಿನಲ್ಲಿ ದೀವಿಹಲಸಿನ ಕಟ್ಟಿಗೆಯೂ ವ್ಯರ್ಥ.
ಕೆಸುವಿನೆಲೆ , ಹಲಸಿನ ಬೀಜ ಸೇರಿಸಿ ಮಾಡುವ ' ಜೀಗುಜ್ಜೆ ಬೆಂದಿ ' ಚೆನ್ನಾಗಿರುತ್ತದೆ. ತೊಗರಿಬೇಳೆ ಹಾಕಬೇಕಾಗಿಲ್ಲ. ತೆಂಗಿನಕಾಯಿಯೊಂದಿಗೆ ಖಾರಕ್ಕೆ ಬೇಕಷ್ಟು ಮೆಣಸು ಹುರಿದು, ಚೆನ್ನಾಗಿ ಅರೆದು, ಬೇಯಿಸಿಟ್ಟ ಮೇಲಿನ ಸಾಮಗ್ರಿ ಸೇರಿಸಿ, ರುಚಿಗೆ ಉಪ್ಪು, ಹುಳಿ, ಬೆಲ್ಲ ಹಾಕಿ, ಅವಶ್ಯವಿದ್ದಷ್ಟು ನೀರು ಎರೆದು ಕುದಿಸಿ, ಬೆಳ್ಳುಳ್ಳಿ ಒಗ್ಗರಣೆ ಕೊಡಿ.

ತುಸು ಎಳೆಯ ಕಾಯಿಗಳನ್ನು ಪಲ್ಯ ಮಾಡಿ.
ಕಡ್ಲೆ ಹಿಟ್ಟಿನಲ್ಲಿ ಮುಳುಗಿಸಿ ತಯಾರಿಸಿ ಪೋಡಿ.
ತೆಳ್ಳಗೆ ಹಚ್ಚಿ ಚಿಪ್ಸ್ ಮಾಡಿ ನೋಡಿ.
ಮಜ್ಜಿಗೆ ಹುಳಿಯನ್ನೂ ಮಾಡಿ.
ಇನ್ನೂ ಮುಗಿದಿಲ್ಲವೇ, ಹಪ್ಪಳ ತಯಾರಿಸಿ ಇಟ್ಟುಕೊಳ್ಳಿ. " ಚಳಿ ಚಳಿ " ಅನ್ನಿಸುವಾಗ ಕರಿದು ತಿನ್ನಿ. ಹಲಸಿನ ಹಪ್ಪಳದಂತೆ ಸೊಗಸಾಗಿರುತ್ತದೆ.


ಸಾಂಬಾರ್ ಹೀಗೆ ಮಾಡಿ ,

ಅವಶ್ಯವಿದ್ದಷ್ಟು ತೊಗರಿಬೇಳೆ ಬೇಯಿಸಿಡಿ. ದೀವಿಹಲಸಿನ ದೊಡ್ಡ ಗಾತ್ರದ ತುಂಡುಗಳನ್ನು ಮಾಡಿಟ್ಟುಕೊಳ್ಳಿ. ಚೆನ್ನಾಗಿ ಬಲಿತ ಕಾಯಿ ಬಹು ಬೇಗನೆ ಬೇಯುತ್ತದೆ. ಚಿಕ್ಕ ತುಂಡುಗಳು ಕದಡಿ ಮುದ್ದೆಯಾಗುವ ಸಾಧ್ಯತೆ ಇದೆ. ಉಪ್ಪು, ಹುಳಿ ಹಾಕಿ. ತೆಂಗಿನತುರಿಯೊಂದಿಗೆ ಹುರಿದ ಮೆಣಸು, ಕೊತ್ತಂಬರಿ, ಜೀರಿಗೆ, ಮೆಂತೆ, ಉದ್ದಿನಬೇಳೆ, ಇಂಗು, ಒಂದು ಎಸಳು ಕರಿಬೇವು ಸೇರಿಸಿ ಅರೆಯಿರಿ. ಈ ತರಕಾರಿ ವಾತಕಾರಕವಾದ್ದರಿಂದ ಕೊತ್ತಂಬರಿ ಜೀರಿಗೆ ಹಾಗೂ ಇಂಗನ್ನು ಸ್ವಲ್ಪ ಹೆಚ್ಚೇ ಹಾಕುವುದು ಉತ್ತಮ. ಅರೆದ ಮಸಾಲೆಗೆ ಬೇಯಿಸಿಟ್ಟ ತರಕಾರಿ, ತೊಗರಿಬೇಳೆ ಸೇರಿಸಿ, ಬೇಕಿದ್ದಲ್ಲಿ ರುಚಿಗೆ ಬೆಲ್ಲ ಸೇರಿಸಿ, ಅವಶ್ಯವಿದ್ದಷ್ಟು ನೀರು ಹಾಕಿ ಕುದಿಸಿ, ತೆಂಗಿನೆಣ್ಣೆಯಲ್ಲಿ ಬೇವಿನಸೊಪ್ಪಿನ ಒಗ್ಗರಣೆ ಕೊಡಿ.

ದೊಡ್ಡ ಗಾತ್ರದ ತುಂಡುಗಳಿಗೆ ಎರಡೂ ಬದಿ ಎಣ್ಣೆ ಸವರಿ, ಉಪ್ಪು ಹಾಗೂ ಮಸಾಲೆಹುಡಿ ಉದುರಿಸಿ ಕಾವಲಿಯ ಮೇಲಿಟ್ಟು ರೋಸ್ಟ್ ಮಾಡಿ, ಬ್ರೆಡ್ ಥರ ತಿನ್ನಬಹುದು. ಹಾಗಾಗಿಯೇ ಇದು ನಮ್ಮೂರಿನ ಆಡು ಭಾಷೆಯ 'ಜೀಗುಜ್ಜೆ ' , ಇಂಗ್ಲಿಷ್ ನಲ್ಲಿ ಬ್ರೆಡ್ ಫ್ರುಟ್ ಎಂದು ಖ್ಯಾತಿ ಪಡೆದಿದೆ.


ಟಿಪ್ಪಣಿ : ಈ ಬರಹವನ್ನು ದಿನಾಂಕ 17, ಮೇ, 2013ರಂದು ಪುನಃ ಪರಿಶೀಲಿಸಿ, ಪೂರಕ ಮಾಹಿತಿಗಳನ್ನು ಈ ಕೆಳಗೆ ಬರೆದಿದ್ದೇನೆ.

ಒಂದು ಸ್ಪಷ್ಟೀಕರಣ :

ಕಳೆದ ವರ್ಷ ಬರೆದ ಈ ಬರಹಕ್ಕೆ ಬಹಳಷ್ಟು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲಿ ಆಶ್ಚರ್ಯ ಮೂಡಿಸಿದ ಒಂದು ಪ್ರತಿಕ್ರಿಯೆಯನ್ನು ಇಲ್ಲಿ ಹೇಳ ಬಯಸುತ್ತೇನೆ. ದೀವಿಹಲಸಿನ ಸ್ವೀಟ್ಸ್, ಅಂದರೆ ಪಾಯಸ ವಗೈರೆ ಮಾಡುವ ವಿಧಾನವನ್ನು ತಿಳಿಸಿಕೊಡಿ - ಎಂಬುದಾಗಿತ್ತು.

ಜೀಗುಜ್ಜೆ ಚಿಪ್್ಸ ಫೋಟೋ ಒಂದನ್ನು ಫೇಸ್ ಬುಕ್ ಮಾಧ್ಯಮದಲ್ಲಿ ಪ್ರದರ್ಶಿಸಿದಾಗ, ಬಂದ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ಯುವ ಪೀಳಿಗೆಯ ಮಂದಿ ಈ ತರಕಾರಿಯ ಬಗ್ಗೆ ಅದೆಷ್ಟು ಅಜ್ಞಾನಿಗಳೆಂಬುದು ಅರಿವಿಗೆ ಬಂತು. ಆಗ ಸಿದ್ಧವಾದದ್ದು ಈ ಬರಹ.

ನಾವೆಲ್ಲರೂ ಬಾಲ್ಯದಿಂದಲೇ ತಿನ್ನುತ್ತಾ ಬಂದಿರುವ ಈ ದೀವಿಹಲಸಿನ ಸಿಹಿ ಖಾದ್ಯಗಳನ್ನು ನಾನು ಇದುವರೆಗೂ ತಿಂದೇ ಇಲ್ಲ. ನನ್ನಮ್ಮ, ಅಜ್ಜಿಯಂದಿರೂ ಹುಳಿ, ಪಲ್ಯ, ಪೋಡಿ, ಚಿಪ್ಸ್, ಹಪ್ಪಳ ... ಇಂತಹ ವೆರೈಟೀ ಅಡುಗೆಗಳನ್ನು ಮಾತ್ರ ಮಾಡುತ್ತಿದ್ದರು, ಈಗಲೂ ಅಷ್ಟೇ. ಬ್ರೆಡ್ ಫ್ರುಟ್ ಎಂಬ ಈ ತರಕಾರಿ, ಫ್ರುಟ್ ಎಂದು ಹೆಸರಿಸಿಕೊಳ್ಳಲು ಎಳ್ಳಷ್ಟೂ ಯೋಗ್ಯವಲ್ಲ. ಹಣ್ಣಾದ ಜೀಗುಜ್ಜೆಯನ್ನು ಎಸೆಯುತ್ತಾರೆಯೇ ವಿನಃ ಯಾರೂ ತಿನ್ನುವುದಿಲ್ಲ. ಬೇಸಿಗೆಯಲ್ಲಿ ಬಿಸಿಲಿನ ಝಳಕ್ಕೆ ದೀವಿಹಲಸು ಪಕ್ವವಾಗುವ ಮೊದಲೇ ಬಾಡಿ ಬೀಳುವುದಿದೆ, ಅದೂ ತಿನ್ನಲು ಯೋಗ್ಯವಲ್ಲ. ಸದಾಕಾಲ ನೀರು ಹರಿಯುತ್ತಿರುವ ಹಳ್ಳಗಳ ಬದಿ, ತೋಟದ ತಂಪು ವಾತಾವರಣ ಈ ತರಕಾರಿ ಬೆಳೆಗೆ ಅವಶ್ಯವಾಗಿದೆ.

4 comments:

  1. Wonderful. Regards from America!

    ReplyDelete
  2. Dear Ms.Subhashini Hiranya.. is this Kannada... any translation to English or Malayamam...thanks

    ReplyDelete