ಮೊನ್ನೆ ದೊಡ್ಡ ಗಾತ್ರದ ಬಚ್ಚಂಗಾಯಿ ಮನೆಗೆ ಬಂದಿತು. ಅಪ್ಪ, ಮಗಳು ಮಂಗಳೂರಿಗೆ ಗಿರೀಶ್ ಮನೆಯ ಔತಣಕೂಟಕ್ಕೆ ಹೋದೋರು ಬರುವಾಗ ಉಪ್ಪಳ ಪೇಟೆಯಿಂದ ತಂದರು.
" ಈಗ ತಿನ್ನಲು ಹಸಿವಿಲ್ಲ, ನಾಳೆ ಹತ್ತು ಗಂಟೆಗೆ..." ಅನ್ನುತ್ತ ಮಗಳು ಕಂಪ್ಯೂಟರ್ ಮುಂದೆ ಕುಕ್ಕರಿಸಿದಳು.
" ಊಟಕ್ಕೇನೇನು ಸ್ಪೆಶಲ್ ಇತ್ತೇ ಅಲ್ಲಿ..." ಕೇಳುತ್ತಿದ್ದಂತೆ
" ಹ್ಞಾಂ, ಹೋಳಿಗೆ ಕೊಟ್ಟಿದ್ದಾಳೆ ಶೀಲಕ್ಕ..." ಬ್ಯಾಗಿನಿಂದ ಈಗ ಹೋಳಿಗೆ ಪ್ಯಾಕ್ ಹೊರ ಬಂತು.
ಬೆಳಗಾಯಿತು. ಗಂಟೆ ಹತ್ತೂ ಆಯಿತು. " ಇಷ್ಟು ದೊಡ್ಡದಾಗಿದೆಯಲ್ಲ, ಅಪ್ಪನ ಹತ್ರಾನೇ ತುಂಡು ಮಾಡಿ ಕೊಡಲು ಹೇಳು ಆಯ್ತಾ " ಅಂತಂದು ಹಿತ್ತಿಲ ತೋಟದಿಂದ ನೆಲಬಸಳೆ ಚಿವುಟಿ ತರುವಷ್ಟರಲ್ಲಿ ಅಪ್ಪ ಮಗಳು ಸೇರಿ ಬಚ್ಚಂಗಾಯಿ ಸ್ವಾಹಾ.. ಮಾಡಲು ಪ್ರಾರಂಭಿಸಿದ್ದರು.
" ತುಂಡು ಮಾಡಿ ಆಯ್ತಾ, ಇನ್ನು ನಾನೇ ಹೋಳು ಮಾಡಿ ತಟ್ಟೆಗೆ ಹಾಕಿ ಕೊಡ್ತೇನೆ "
" ಏನೂ ಬೇಡಾ, ಹಾಗೇ ತಿಂತೇವೆ "
ನನಗಾಗಿ ಇಟ್ಟಿದ್ದ ತುಂಡುಗಳ ಕೆಂಪಾದ ಭಾಗವನ್ನು ಅಚ್ಚುಕಟ್ಟಾಗಿ ಕತ್ತರಿಸಿ ತಿಂದಾಯ್ತು.
" ತಿಂದುಳಿದದ್ದು ಆಚೆ ಎಸಿಯೋದು " ಅಂತೀರಾ,
ಛೆ, ಛೆ ಬೇಡ, ಲಕ್ಷಣವಾಗಿ ಹಸಿರು ಸಿಪ್ಪೆಯನ್ನು ಚಾಕುವಿನಲ್ಲಿ ಹೆರೆದು ತೆಗೆಯಿರಿ. ಇನ್ನುಳಿದ ಬಿಳಿ ಭಾಗವನ್ನು ತುರಿಮಣೆಯಲ್ಲಿ ತುರಿದು, ಉಪ್ಪು ಬೆರೆಸಿ ಅಗತ್ಯವಿದ್ದಷ್ಟು ಮೊಸರು ಎರೆದು ಇಂಗು ಹಾಕಿದ ಬೇವಿನಸೊಪ್ಪಿನ ಒಗ್ಗರಣೆ ಕೊಟ್ಟು ಬಿಟ್ಟರಾಯ್ತು. ಮೊಸರು ಗೊಜ್ಜು ತಯಾರಾಗಿ ಬಿಟ್ಟಿತು, ನಾನಂತೂ ಮಾಡದೆ ಬಿಡ್ತೇನಾ,
" ತುಂಬಾ ಚೆನ್ನಾಗಿದೆ " ಶಿಫಾರಸೂ ಸಿಕ್ಕಿತು.
ಸಂಜೆ ವೇಳೆಗೆ ಇನ್ನಷ್ಟು ಬಚ್ಚಗಾಯಿ ಓಡುಗಳು ನನ್ನ ಮುಂದೆ ಕುಳಿತವು. " ಇದನ್ನೇ ದೋಸೆ ಮಾಡೂದು ಬೇಡ, ನಂಗೆ ಉದ್ದಿನದೋಸೆಯೇ ಆಗ್ಬೇಕು " ಸುಪ್ರೀಂ ಕೋರ್ಟು ಆರ್ಡ ವಾಣಿ ತೇಲಿ ಬಂದಿತು.
" ಆಯ್ತೂ ..."
ಒಂದು ಬಟ್ಟಲು ತುಂಬಾ ತುರಿದಿಟ್ಟುಕೊಳ್ಳಿ.
ಎರಡು ಕಪ್ ಅಕ್ಕಿಗೆ ಒಂದು ಕಪ್ ಉದ್ದು ಹಾಕ್ತೀರಾ, ಅಷ್ಟು ಬೇಡ. ಅರ್ಧ ಕಪ್ ಉದ್ದು ಸಾಕು. ಎರಡು ಚಮಚಾ ಮೆಂತ್ಯ ಇರಲಿ.
ಇವನ್ನೆಲ್ಲ ತುರಿದಿಟ್ಟ ಬಚ್ಚಂಗಾಯಿ ತುರಿಯೊಂದಿಗೆ ಸೇರಿಸಿ ನುಣ್ಣಗೆ ಅರೆದು ಮುಚ್ಚಿಡಿ. ಅರೆಯುವಾಗ ಬೇರೆ ನೀರು ಹಾಕಬೇಕಾಗಿಯೇ ಇಲ್ಲ. ಮಾರನೇ ದಿನ ಸೊಗಸಾದ ಉದ್ದಿನ ದೋಸೆ ಮಾಡಬಹುದು. ಕೊತ್ತಂಬರೀ ಸೊಪ್ಪಿನ ಚಟ್ನಿ ಜತೆಗಿರಲಿ.
ಉದ್ದು ಹಾಕದೆಯೂ ಮಾಡಬಹುದು. ಕೇವಲ ಅಕ್ಕಿಯೊಂದಿಗೆ ಇದರ ತುರಿ ಹಾಕಿ ಅರೆದು ತೆಳ್ಳವು ( ನೀರು ದೋಸೆ ) ಎರೆದರಾಯಿತು. ಹುಳಿ ಬರಿಸುವ ಅಗತ್ಯವಿಲ್ಲ, ಇದು ದಿಢೀರ್ ದೋಸೆ.
ಇನ್ನಷ್ಟು ಬಚ್ಚಂಗಾಯಿ ಸಿಪ್ಪೆಗಳು ಬಾಕಿಯಿದ್ದವು. ಅವನ್ನೂ ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಪಲ್ಯ ಮಾಡಿಯೂ ಆಯ್ತು.
ಪಲ್ಯಕ್ಕೆ ಬೇಯಿಸುವ ಮೊದಲು ಅರ್ಧ ಕಪ್ ತಗೆದಿರಿಸಿ, ಎರಡು ಟೊಮ್ಯಾಟೋ, ಒಂದು ಹಸಿಮೆಣಸು, ಚಿಕ್ಕ ತುಂಡು ಶುಂಠಿ ಸಣ್ಣಗೆ ಹಚ್ಚಿಟ್ಟು, ಉಪ್ಪು ಬೆರೆಸಿ ಸಲಾಡ್ ಕೂಡಾ ಮಾಡಿಕೊಳ್ಳಿ.
ಪಾಯಸ, ಇಡ್ಲಿ, ಕಡುಬು, ಗುಳಿಯಪ್ಪ ಇತ್ಯಾದಿಗಳನ್ನು ಮಾಡಬಹುದಾಗಿತ್ತು. ಬಚ್ಚಂಗಾಯಿ ಮುಗಿದಿತ್ತು
.
ನಮ್ಮೂರಿನ ಬಚ್ಚಂಗಾಯಿ ಅಖಂಡ ಕರ್ನಾಟಕ ವ್ಯಾಪ್ತಿಯಲ್ಲಿ ಕಲ್ಲಂಗಡಿ ಹಣ್ಣು ಎಂದೂ ಜನಪ್ರಿಯತೆ ಗಳಿಸಿದೆ. ಸಸ್ಯಶಾಸ್ತ್ರೀಯವಾಗಿ Citrullus lanatus. ದೊಡ್ಡ ಗಾತ್ರದ ಇದರ ಕೌಟುಂಬಿಕ ವ್ಯಾಪ್ತಿಯೂ Cucurbitaceae ಸಾಕಷ್ಟು ದೊಡ್ಡದಿದೆ, ಬೂದುಗುಂಬಳಕಾಯಿ, ಚೀನೀಕಾಯಿ ಇತ್ಯಾದಿ ... ಇನ್ನಿತರ ಫಲಗಳಂತೆ ಬಚ್ಚಂಗಾಯಿ ಕೂಡಾ ವಿಟಮಿನ್ C ಯಿಂದ ಸಮೃದ್ಧವಾಗಿದೆ. ಶೇಕಡಾವಾರು 92 ಪಾಲು ನೀರಿನಂಶ ಇರುವುದರಿಂದ ಆಂಗ್ಲ ಭಾಷೆಯಲ್ಲಿ watermelon ಎಂದೇ ಖ್ಯಾತವಾಗಿದೆ. 6 ಶೇಕಡಾ ಸಕ್ಕರೆಯೂ ಈ ಫಲದಲ್ಲಿದೆ. ಬಿಸಿಲಿನ ತಾಪದಿಂದ ಬಳಲಿದವರಿಗೆ ಇದರ ನೋಟ ಮಾತ್ರದಿಂದಲೇ ಬಳಲಿಕೆ ದೂರವಾಗುವುದರಲ್ಲಿ ಅಚ್ಚರಿಯೇನೂ ಇಲ್ಲ. ದಕ್ಷಿಣ ಆಫ್ರಿಕಾ ಮೂಲಸ್ಥಾನವಾಗಿರುವ ಈ ಹಣ್ಣು ಅಲ್ಲಿನ ಒಂದು ಕಾಡು ಬೆಳೆ.
ಟಿಪ್ಪಣಿ: ಓಡು ಎಂಬ ಶಬ್ದಾರ್ಥ = ಕುಂಬಳಕಾಯಿ ತಿರುಳು, ಹೋಳು ಕತ್ತರಿಸಿ ತೆಗೆದು ಉಳಿದ ಸಿಪ್ಪೆಯನ್ನು ಓಡು ಎಂದು ಹೇಳುವ ಕ್ರಮ ನಮ್ಮ ಊರಿನ ಆಡುನುಡಿಯಲ್ಲಿದೆ. ಕುಂಬಳ ಓಡು ಪಲ್ಯಕ್ಕೆಂದೇ ಸಣ್ಣಗೆ ಹಚ್ಚಿಟ್ಟು ಮಾಡುವುದು ಸಾಂಪ್ರದಾಯಿಕ ವಿಧಾನ. ಕೆಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ತಯಾರಿಸುವುದೂ ಇದೆ.
Posted via DraftCraft app
ಟಿಪ್ಪಣಿ: 24/ 4/ 2016 ರಂದು ಹೊಸ ಚಿತ್ರದೊಂದಿಗೆ ವಿಸ್ತರಿಸಿ ಬರೆದಿದ್ದೇನೆ.
ಬಚ್ಚಂಗಾಯ್ ಪಾನಕ
ಬೇಸಿಗೆಯ ಔತಣಕೂಟ, ಉಪನಯನಕ್ಕೆ ಹೋಗಿದ್ದೆವು. ಇಲ್ಲೇ ಹತ್ತಿರ, ಬಾಯಾರು ಶ್ರೀ ಪಂಚಲಿಂಗೇಶ್ವರ ದೇಗುಲದ ಸಭಾಂಗಣದಲ್ಲಿ ಊರ ಮಂದಿ, ನೆಂಟರಿಷ್ಟರು ಎಲ್ಲರೂ ತುಂಬಿ ತುಳುಕುತ್ತಿದ್ದಂತೆ ಉಪನಯನದ ಧಾರ್ಮಿಕ ವಿಧಿವಿಧಾನಗಳನ್ನು ಅವಲೋಕಿಸುತ್ತ, ಅಲ್ಲೊಂದು ಸಂಗೀತ ಕಛೇರಿಯೂ ಏರ್ಪಾಡಾಗಿತ್ತು.
ಈ ಎಲ್ಲ ಸಂಭ್ರಮಗಳ ಎಡೆಯಲ್ಲಿ ಮಹಿಳೆಯರ ಪಟ್ಟೇ ಸೀರೆಗಳ ಹಾರಾಟ, ಮಲ್ಲಿಗೆಯ ಮಾಲೆಗಳ ಮೇಲಾಟ, ಮಟ ಬಿಸಿಲಿಗೆ ಬೆವರಧಾರೆಯಾಟ, " ಒಂದು ಆಸರಿಗೆ ಕುಡಿಯದಿದ್ದರಾಗದು. "
" ಎದುರುಗಡೆ ಇತ್ತಲ್ಲ, ಬರುವಾಗ್ಲೇ ಕುಡಿಯೂದಲ್ವ? " ಅಂದ್ರು ಗೌರತ್ತೆ.
" ಹೌದಾ, ನಾ ನೋಡ್ಲಿಲ್ಲ... ಈಗ ಹೋಗಿಕುಡಿದು ಬರೋಣ. " ಪಾನಕ ಇದ್ದಲ್ಲಿಗೆ ಎದ್ದು ಹೋದೆವು.
" ವಾಹ್... ಬಚ್ಚಂಗಾಯ್ ಪಾನಕ! " ಎರಡೆರಡು ಲೋಟ ಶರಬತ್ತು ಕುಡಿದು ತಟ್ಟೆಯಲ್ಲಿಡುತ್ತಿದ್ದಂತೆ ನಮ್ಮ ಸೋದರಳಿಯ ವೆಂಕಟೇಶ ಎದುರಾದ.
" ಅತ್ತೇ, ಶರಬತ್ತು ಕುಡಿದ್ರಾ? "
" ಹ್ಞೂ, ತುಂಬಾ ಚೆನ್ನಾಗಿತ್ತು, ಹ್ಯಾಗೇ ಮಾಡಿದ್ದೂ... ನೋಡಿದ್ದೀಯಾ? " ಅವನೋ ಮುನ್ನಾದಿನವೇ ಹಾಜರಾಗಿದ್ದ, ಸರ್ವಸುಧರಿಕೆಗಳನ್ನೂ ನಿಭಾಯಿಸಬೇಡ್ವೇ...
ಅದಾ, ಬಚ್ಚಂಗಾಯ್ ಸಿಪ್ಪೆ, ಬೀಜ ತೆಗೆದು ಕೆಂಪು ತಿರುಳನ್ನು ಮಿಕ್ಸೀಯಲ್ಲಿ ತಿರುಗಿಸ್ಬೇಕು, ನೀರು ಹಾಕ್ಬೇಕೂ, ಸಕ್ರೆಯೂ ಬೀಳ್ಬೇಕೂ..."
" ಅಷ್ಟೇಯಾ... "
" ಅತ್ತೇ, ಈ ಪಾನಕಕ್ಕೆ ಕಾಳುಮೆಣಸಿನ ಹುಡಿ ಹಾಕ್ಲೇ ಬೇಕು, ಉಪ್ಪೂ ಹಾಕ್ಬೇಕು. "
" ಹಾಗ್ಹೇಳು... " ಇಲ್ಲಿದೆ ಒಳಗುಟ್ಟು.
0 comments:
Post a Comment