ಸಂಸ್ಕೃತದಲ್ಲಿ ' ಘೃತ ' ಎಂದರೆ ತುಪ್ಪ ಎಂದರ್ಥ. ಇಂಗ್ಲಿಷ್ ನ ghee ಶಬ್ದವೂ ಸಂಸ್ಕೃತದಿಂದಲೇ ಬಂದಿದೆ. ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲೇ ತುಪ್ಪ ಇರಬೇಕಾದರೆ ತುಪ್ಪದ ಇತಿಹಾಸ ವೇದಕಾಲದಿಂದ ಆರಂಭವೆಂದು ಚಿಟಿಕೆ ಹೊಡೆಯುವಷ್ಟರಲ್ಲೇ ತಿಳಿದುಕೊಳ್ಳಬಹುದಾಗಿದೆ. ಇತಿಹಾಸ ತಿಳಿಸುವಂತೆ ವೇದಕಾಲವು ಹೈನುಗಾರಿಕೆಯನ್ನೇ ಪ್ರಧಾನ ವೃತ್ತಿಯನ್ನಾಗಿ ಸ್ವೀಕರಿಸಿತ್ತು. ಇಂತಿಷ್ಟು ಗೋವುಗಳ ಒಡೆಯನೆಂಬುವಲ್ಲಿ ಒಬ್ಬ ವ್ಯಕ್ತಿಯ ಸ್ಥಾನಮಾನ ನಿರ್ಣಯದ ಕಾಲವಾಗಿತ್ತು ಅಂದು. ವೈದಿಕ ಸಾಹಿತ್ಯವೂ ಶ್ರೀಕೃಷ್ಣನನ್ನು ಗೋಪಾಲಕನನ್ನಾಗಿ ಸ್ವೀಕರಿಸಿದೆ.
ದಾಸ ಸಾಹಿತ್ಯದಲ್ಲಿಯೂ ಪುರಂದರದಾಸರು ಲಕ್ಷ್ಮಿಯನ್ನು " ಮಜ್ಜಿಗೆಯೊಳಗಿನ ಬೆಣ್ಣೆಯಂತೇ...." ಎಂದು ಕೊಂಡಾಡಿದ್ದಾರೆ. ಲಕ್ಷ್ಮಿ ಸಮುದ್ರಮಥನದಿಂದ ಬಂದವಳು ಎಂದು ಪುರಾಣಗಳು ಹೇಳುತ್ತವೆ.
ಹಾಲಿನ ಸಮುದ್ರದಲ್ಲಿ ಮಂದರ ಪರ್ವತವನ್ನು ಕಡಗೋಲಾಗಿ ನಿಲ್ಲಿಸಿ, ವಾಸುಕಿ ಎಂಬ ಮಹಾಸರ್ಪವನ್ನು ಅದಕ್ಕೆ ಸುತ್ತಿ ನಡೆಸಿದ ಸಮುದ್ರಮಥನವನ್ನು ನಮ್ಮಂಥ ಜನಸಾಮಾನ್ಯರು ಕಾಣೆವು. ಮೊಸರು ಕಡೆದಾಗ ಮಜ್ಜಿಗೆಯೊಳಗೆ ಬೆಣ್ಣೆ ತೇಲಿ ಬರುವುದೊಂದು ಗೊತ್ತು. ಶ್ರೇಷ್ಠ ದರ್ಜೆಯ ತುಪ್ಪವೂ ಗೊತ್ತು. ಇಂತಹ ಘನವಾದ ತುಪ್ಪವನ್ನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಯೊಂದಿಗೆ ' ಸಕ್ಕರೆ ತುಪ್ಪ ಕಾಲುವೆ ಹರಿಸಿ...ಶುಕ್ರವಾರದ ಪೂಜೆಯ ವೇಳೆಗೆ...ಬಾರಮ್ಮ' ಎಂದು ಸಮೀಕರಿಸಿದ್ದಾರೆ ನಮ್ಮ ದಾಸವರೇಣ್ಯರು. ಬೆಣ್ಣೆಯನ್ನು ಕಾಯಿಸಿ ತುಪ್ಪ ಮಾಡಬೇಕಾದರೂ ಶುಕ್ರವಾರದ ದಿನವೇ ಆಗಬೇಕು ನಮ್ಮ ಸಂಪ್ರದಾಯ ಶರಣರಿಗೆ.
ಇಂತಿಪ್ಪ ಬೆಣ್ಣೆ ಪುರಾಣವನ್ನು ಯಾಕೆ ಹೇಳ್ತಾ ಇದ್ದೀನಂದ್ರೆ ನಾನು ಮದುವೆಯಾಗಿ ಬಂದ ಈ ಮನೆಯಲ್ಲಿ ಕರೆಯುವ ಹಸುಗಳೂ, ಎಮ್ಮೆಗಳೂ ಜೊತೆಗೊಂದು ಆಡು ಕೂಡಾ ಇತ್ತು. ವಸ್ತುಶಃ ಹಾಲಿನ ಹೊಳೆಯೇ ಹರಿಯುತ್ತಿತ್ತು. ಹಸುವಿನ ಹಾಲು, ಎಮ್ಮೆ ಹಾಲು ಒಟ್ಟಿಗೇ ಹಾಕಿ ಕಾಯಿಸುವಂತಿಲ್ಲ. ಪ್ರತ್ಯಪ್ರತ್ಯೇಕವಾಗಿ ಕಾಯಿಸಿ, ಬೇರೆ ಬೇರೆ ಮಜ್ಜಿಗೆ, ಮೊಸರು, ತುಪ್ಪ ಮಾಡಿ ಇಡುವ ಸಂಪ್ರದಾಯ. ದನದ ಹಾಲು, ತುಪ್ಪ ಶ್ರೇಷ್ಠ ದರ್ಜೆಯದೆಂದು, ಪೂಜೆ, ಹೋಮ, ಹವನಗಳಿಗೆ ಮೀಸಲು. ಎಮ್ಮೆ ಹಾಲು ಎರಡನೇ ದರ್ಜೆಯದು. ಆಡಿನ ಹಾಲು ನಮ್ಮತ್ತೆಯವರ ಕಾಫಿ, ಚಹಾಗಳಿಗೆ ಆಗಿ ಉಳಿದದ್ದು ಮುದ್ದಿನ ಬೆಕ್ಕುಗಳಿಗೆ. ಇಷ್ಟೆಲ್ಲಾ ಹಾಲಿನ ಸಮೃದ್ಧಿ ಇರುವಾಗ ನನ್ನತ್ತೆ ಯಾಕಾಗಿ ಆಡನ್ನೂ ಸಾಕುತ್ತಿದ್ದರು ಎಂದು ಹುಬ್ಬೇರಿಸಿ ಪ್ರಶ್ನೆ ಕೇಳಿಯೇ ಕೇಳ್ತೀರಾ. ಹೊಸ ಸೊಸೆಯಾಗಿ ಬಂದಿದ್ದ ನಾನೂ ಮನೆಯೊಳಗೆ ಮುದ್ದಾದ ಆಡನ್ನು ಕಂಡು ಕಣ್ ಕಣ್ ಬಿಟ್ಟಿದ್ದೆ. ಆಗ್ಗಿದಾಗ್ಗೆ ಬಾಧಿಸುತ್ತಿದ್ದ ಅಸ್ತಮಾ ಖಾಯಿಲೆಯ ನಿಯಂತ್ರಣಕ್ಕಾಗಿ ನನ್ನತ್ತೆ ಆಡಿನ ಹಾಲಿನ ಪಥ್ಯ ಮಾಡುತ್ತಿದ್ದರು ಅಷ್ಟೇ.
ಹಾಲು ಮಜ್ಜಿಗೆ ವಹಿವಾಟು ಆಗ ನನಗೆ ತಿಳಿದಿರುವುದಾದರೂ ಹೇಗೆ ? ಎಲ್ಲವನ್ನೂ ಅತ್ತೆಯೇ ಹೇಳಿ ಕೊಟ್ಟಿದ್ದು. ಅಚ್ಚುಕಟ್ಟಾಗಿ ತುಪ್ಪ ಹೀಗೆ ತಯಾರಿಸೋಣ:
ಹಾಲು ಕೆನೆ ಕಟ್ಟುವ ತನಕ ಮಂದಾಗ್ನಿಯಲ್ಲಿ ಕಾಯಿಸಿ. ಕೆನೆ ಕಟ್ಟಿದ ಹಾಲು ಚೆನ್ನಾಗಿ ತಣಿದ ಮೇಲೆ ಮುಚ್ಚಿಡಿ. ಕೆನೆಯೇ ಬೆಣ್ಣೆಯ ಮೂಲ. ಮೊಸರು ಮಾಡಬೇಕಾದರೆ ಹಾಲು ಚೆನ್ನಾಗಿ ತಣಿದಿರಬೇಕು. ಅಗತ್ಯವಿದ್ದಷ್ಟೇ ಮಜ್ಜಿಗೆ ಅಥವಾ ಮೊಸರು ಒಂದು ಚಿಕ್ಕ ಸೌಟಿನಲ್ಲಿ ತಣಿದ ಹಾಲಿಗೆ ಎರೆದರೆ ಮೊಸರು ಎಂಟು ಗಂಟೆಯೊಳಗೆ ಸಿದ್ಧ. ಉಪಯೋಗಕ್ಕೆ ಬೇಕಾದಷ್ಟೇ ಮೊಸರನ್ನು ಪ್ರತ್ಯೇಕವಾಗಿ ಮಾಡಿಕೊಳ್ಳಿ. ಉಳಿದ ಹಾಲನ್ನು ಕೆನೆಸಮೇತವಾಗಿ ಮೊಸರು ಮಾಡಿ.
ಕೈಯಲ್ಲಿ ಹಗ್ಗ ಹಿಡಿದು ಮೊಸರು ಕಡೆಯುವ ಶ್ರಮ ಈಗ ಇಲ್ಲ. ಎಲ್ಲ ಕೆಲಸಗಳಿಗೂ ಯಂತ್ರಗಳಿವೆ. ಮಿಕ್ಸಿಯಲ್ಲೇ ತಿರುಗಿಸಿದರಾಯಿತು. ಸಂಗ್ರಹಿಸಿದ ಬೆಣ್ಣೆಯನ್ನು ಮಜ್ಜಿಗೆಯಲ್ಲೇ ಇಡಬೇಕು. ಬೆಣ್ಣೆಯನ್ನು ಪ್ರತಿದಿನವೂ ಹೊಸ ಮಜ್ಜಿಗೆಗೆ ರವಾನಿಸುತ್ತಿದ್ದರೆ ಮಾತ್ರ ಸುವಾಸನಾಭರಿತ ತುಪ್ಪ ಪಡೆಯಲು ಸಾಧ್ಯ. ನಾಲ್ಕನೇ ದಿನ ಈ ಬೆಣ್ಣೆಮುದ್ದೆಯನ್ನು ಮಜ್ಜಿಗೆಯಿಂದ ತೆಗೆದು ಚೆನ್ನಾಗಿ ತೊಳೆಯಿರಿ. ತೊಳೆಯುವ ಮೊದಲು ಅಂಗೈಯನ್ನು ಬಿಸಿನೀರಿನಲ್ಲಿ ಅದ್ದಿ ತಗೆಯಿರಿ, ಇಲ್ಲಾಂದ್ರೆ ಬೆಣ್ಣೆ ಕೈಗಳಿಗೆ ಹತ್ತಿಕೊಂಡೀತು. ಏಳೆಂಟು ಬಾರಿ ನೀರು ಬದಲಾಯಿಸಿ ತೊಳೆದು ಮಜ್ಜಿಗೆಯ ವಾಸನೆ ಹೋಗಲಾಡಿಸಿ. ಶುಕ್ರವಾರ ಹಾಗೂ ಮಂಗಳವಾರದಂದೇ ದನದ ತುಪ್ಪ ಕಾಯಿಸಬೇಕೆಂಬ ಸಂಪ್ರದಾಯ ಇದೆ. ಈಗ ನಾವು ತರುವ ಪ್ಯಾಕೆಟ್ ಹಾಲು ಇಂತಹ ರೂಲ್ಸ್ ಕೇಳುವುದಿಲ್ಲ ಬಿಡಿ.
ಬೆಣ್ಣೆಯನ್ನು ಉರಿಯಲ್ಲಿಡಿ. ಕುದಿಯುತ್ತಿದ್ದಂತೆ ಉರಿ ತಗ್ಗಿಸಿ. ನೀರಿನಂಶ ಆರಿದೊಡನೆ ಕುದಿಯುವ ಸದ್ದು ನಿಂತು ಸುವಾಸನೆ ಬರುತ್ತಿದ್ದಂತೆ ಕೆಳಗಿಳಿಸಿ, ಆರಲು ಬಿಡಿ. ತಣಿದ ಮೇಲೆ ಶುದ್ಧವಾದ ಒಣ ಜಾಡಿಗೆ ಎರೆಯಿರಿ.
ಇಂತಹ ಘನವಾದ ತುಪ್ಪದಿಂದ ಒಂದು ವಿಶೇಷವಾದ ಖಾದ್ಯ ತಯಾರಿಸೋಣ:
ಅಕ್ಕಿ, ಬೆಲ್ಲ, ತೆಂಗಿನಕಾಯಿ, ಬಾಳೇಹಣ್ಣು ಕಚ್ಛಾವಸ್ತುವಾಗಿ ತಯಾರಿಸುವ ನೆಯ್ಯಪ್ಪಂ ನಮ್ಮ ದೇವಸ್ಥಾನಗಳಲ್ಲಿ ಪ್ರಸಾದರೂಪವಾಗಿ ವಿತರಣೆಯಾಗುವ ಸಿಹಿಭಕ್ಷ್ಯ. ಆ ಸಾಂಪ್ರದಾಯಿಕ ವಿಧಾನದ ಅನುಸರಣೆಯಿಲ್ಲದೇ ಸುಲಭವಾಗಿ ಮಾಡೋಣ.
ಹೇಗೂ ಮುಜಾನೆಗೊಂದು ತಿಂಡಿ ತಯಾರಿಸುತ್ತೀರಿ. ಅದು ನೀರುದೋಸೆಯಾಗಿರಲಿ. ದೋಸೆಹಿಟ್ಟು ಎರಡು ಲೋಟದಷ್ಟು ಉಳಿದಿದೆ, ಅದೇ ಸಾಕು.
7-8 ಖರ್ಜೂರಗಳನ್ನು ಬೀಜ ಬಿಡಿಸಿ ಮಿಕ್ಸಿಯಲ್ಲಿ ಪುಡಿ ಪುಡಿ ಮಾಡಿಕೊಳ್ಳಿ. ಖರ್ಜೂರ ಸಿಹಿಯಾಗಿರುವುದರಿಂದ ಹೆಚ್ಚು ಬೆಲ್ಲ ಬೇಡ.
ಬೆಲ್ಲವನ್ನು ಹುಡಿ ಮಾಡಿ ಬಾಣಲೆಗೆ ಹಾಕಿ, ಸ್ವಲ್ಪ ನೀರುದೋಸೆ ಹಿಟ್ಟನ್ನೇ ಎರೆದು ಬೆಲ್ಲ ಕರಗಿಸಿ. ಮಂದಾಗ್ನಿಯಲ್ಲಿ ಸೌಟಿನಿಂದ ಕೆದಕುತ್ತಾ, ಖರ್ಜೂರದ ಹುಡಿಯನ್ನೂ ಹಾಕಿ, ಉಳಿದ ದೋಸೆಹಿಟ್ಟನ್ನೂ ಎರೆಯಿರಿ.
ತಳ ಹತ್ತದಂತೆ ಸೌಟಿನಲ್ಲಿ ಕೈಯಾಡಿಸುತ್ತಾ, ತೆಳ್ಳಗಿದ್ದ ಹಿಟ್ಟು ದಪ್ಪವಾದೊಡನೆ ಕೆಳಗಿಳಿಸಿ. ಅಲ್ಲಲ್ಲಿ ದಪ್ಪಗಟ್ಟಿದ ಹಿಟ್ಟನ್ನು ಸೌಟಿನಲ್ಲಿ ಕೆದಕಿ ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ. ಈಗ ಅರೆ ಬೆಂದ ಹಿಟ್ಟು ತಯಾರಾಯಿತು.
ಅಪ್ಪದ ಗುಳಿಗಳಿಗೆ ತುಪ್ಪ ಎರೆದು ಬೆಂಕಿಯ ಮೇಲಿಡಿ. ತುಪ್ಪದ ಶಾಖದಲ್ಲೇ ಇದು ಬೇಯುವ ಕಾರಣ ಗುಳಿಗಳಿಗೆ ಸ್ವಲ್ಪ ತುಪ್ಪದ ಪಸೆ ಮಾಡಿದರೆ ಸಾಲದು, ಚೆನ್ನಾಗಿ ಎರಡು ಚಮಚದಷ್ಟು ತುಪ್ಪ ಬೀಳಲಿ. ಚಿಕ್ಕ ಸೌಟಿನಲ್ಲಿ ತುಪ್ಪದ ಬಿಸಿಯೇರಿದ ಗುಳಿಗಳಿಗೆ ಹಿಟ್ಟಿನ ಮುದ್ದೆಯನ್ನು ಎರೆಯಿರಿ. ಬೇಯುತ್ತಿದ್ದಂತೆ ತಳ ಬಿಟ್ಟು ಬರುವ ಅಪ್ಪಗಳನ್ನು ಕವುಚಿ ಹಾಕಿ. ಎರಡೂ ಬದಿ ಕೆಂಪಗಾದ ಮೇಲೆ ತೆಗೆಯಿರಿ.
ಸಂಜೆಯ ಟೀ, ಕಾಫೀಯೊಂದಿಗೆ ಸವಿಯಿರಿ. ಪ್ರಾಯೋಗಿಕವಾಗಿ ತಯಾರಿಸಿದ ಈ ವಿಧಾನದ ನೆಯ್ಯಪ್ಪಂ ಈಗ ನನ್ನ ಮಗಳ ಅಚ್ಚುಮೆಚ್ಚಿನದು. " ಇನ್ನು ಯಾವಾಗಲೂ ಹೀಗೇ ಮಾಡಮ್ಮ" ಅಂದಿದ್ದಾಳೆ.
ನಮ್ಮಜ್ಜೀ ಕಾಲದಲ್ಲಿ ತುಪ್ಪ ಹಾಗೂ ಜೇನು ಸೇರಿಸಿ ಹಾಲುಹಸುಳೆಗಳಿಗೆ ದಿನಂಪ್ರತಿ ಚಮಚಾದಲ್ಲಿ ಕುಡಿಸುವ ಪದ್ಧತಿ ಇತ್ತು. ಬಸುರಿ ಬಾಣಂತಿಯರಿಗೆ ತುಪ್ಪ ಹಾಕಿಯೇ ಅನ್ನ ಕಲಸಿ ತಿನ್ನುವ ಸಂಪ್ರದಾಯ. ಜಠರಾಗ್ನಿಯನ್ನು ಪ್ರಚೋದಿಸಿ ಜೀರ್ಣಕ್ರಿಯೆ ಸರಾಗವಾಗಿ ನಡೆಸುವ ಶಕ್ತಿ ಇದರಲ್ಲಿದೆ. ಅಡುಗೆಗೆ ಬಳಸುವ ಇತರ ವನಸ್ಪತಿ ಎಣ್ಣೆಗಳು ಹೆಚ್ಚು ತಾಪವನ್ನು ತಾಳಿಕೊಳ್ಳುವ ಶಕ್ತಿ ಹೊಂದಿಲ್ಲ. ದೇವತಾ ಪೂಜಾವಿಧಿಗಳಲ್ಲಿ ಪ್ರಸಾದರೂಪವಾಗಿ ವಿತರಣೆಯಾಗುವ ಪಂಚಾಮೃತದಲ್ಲಿ ಹಾಲು, ಜೇನು, ಸಕ್ಕರೆ, ಮೊಸರುಗಳೊಂದಿಗೆ ತುಪ್ಪವೂ ಇರಬೇಕು. ಹೋಮ ಹವನಗಳಲ್ಲಿ ಅಗ್ನಿಯನ್ನು ಉದ್ದೀಪನಗಳಿಸಲು ಬಳಸುವ ಹಸುವಿನ ತುಪ್ಪದ ಧೂಮವು ವಾತಾವರಣ ಶುದ್ಧಿಕಾರಕವೆಂದು ವೈಜ್ಞಾನಿಕ ಸಂಶೋಧನೆಗಳು ಹೇಳುತ್ತವೆ, ತನ್ಮೂಲಕ ಓಝೋನ್ ವಲಯದ ರಕ್ಷಣೆ. ಕಲುಷಿತ ಪ್ರಕೃತಿಯನ್ನು ಶುದ್ಧೀಕರಿಸುವ ಶಕ್ತಿ ಈ ತುಪ್ಪಕ್ಕೆ ಇದೆ. ಅಂದಮೇಲೆ ಪ್ರಕೃತಿಯ ಒಂದು ಭಾಗವೇ ಆಗಿರುವ ಮನುಷ್ಯ ಶರೀರಕ್ಕೆ ತುಪ್ಪದ ಸೇವನೆ ಹಿತವೆಂಬುದರಲ್ಲಿ ವಿವಾದಕ್ಕೆಡೆಯಿಲ್ಲ. ಹಸುವಿನ ತುಪ್ಪ ಹಳೆಯದಾದರೂ ಬೆಲೆ ಬಾಳುವಂತಹುದು. ಪ್ರಾಚೀನ ವೈದ್ಯಶಾಸ್ತ್ರವಾಗಿರುವ ಆಯುರ್ವೇದ ಕ್ರಮ ರೀತ್ಯಾ ತಯಾರಾಗುವ ಲೇಹ್ಯಗಳಲ್ಲಿ ತುಪ್ಪ ಒಂದು ಪ್ರಮುಖ ಆಕರ ವಸ್ತು ಎಂಬುದನ್ನು ಮರೆಯದಿರೋಣ.
ಟಿಪ್ಪಣಿ: 27 / 11 / 2016 ರಂದು ಮುಂದುವರಿದ ಬರಹ.
ಮೊಸರನ್ನು ಕಡೆದು ಬೆಣ್ಣೆ ತೆಗೆದಿದೆ, ತುಪ್ಪವೂ ಆಯ್ತು. ಮನೆಯಲ್ಲಿ ಮಕ್ಕಳೂ ಇದ್ದರು. ಸಂಜೆಯ ಟೀ ಹೊತ್ತಿಗೆ ಒಂದು ವಿಶೇಷ ತಿನಿಸು ಆಗಲೇಬೇಕು, ನೆಯ್ಯಪ್ಪಂ ಮಾಡೋಣ.
ಘಮಘಮಿಸುವ ತುಪ್ಪವೇ ಇಲ್ಲಿ ಮುಖ್ಯವಾಗಿದೆ.
ಒಂದು ಪಾವು ಬೆಳ್ತಿಗೆ ಅಕ್ಕಿ, ಎರಡು ಗಂಟೆ ನೆನೆದಿರಬೇಕು.
ಅರ್ಧ ಕಡಿ ತೆಂಗಿನ ತುರಿ.
ದೊಡ್ಡ ಅಚ್ಚು ಬೆಲ್ಲ, ಸಿಹಿಗೆ ಬೇಕಾದಷ್ಟು.
ರುಚಿಗೆ ಉಪ್ಪು.
ಬಾಳೆಗೊನೆಯೂ ಹಣ್ಣಾಗಿದೆ, ಒಂದು ಬಾಳೆಹಣ್ಣು ನುರಿದು ಇಡುವುದು.
ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಾಳೆಹಣ್ಣು, ತೆಂಗಿನ ತುರಿ, ರುಚಿಗೆ ಉಪ್ಪು ಕೂಡಿಕೊಂಡು ಅರೆಯಿರಿ.
ಬೆಲ್ಲವನ್ನು ದಪ್ಪ ಬಾಣಲೆಯಲ್ಲಿ ಕರಗಿಸಿ, ಸಾಂದ್ರವಾಗುತ್ತ ಬಂದಾಗ ರುಬ್ಬಿದ ಅಕ್ಕಿಹಿಟ್ಟನ್ನು ಎರೆದು, ಉರಿ ಸಣ್ಣದಾಗಿಸಿ, ಒಂದೆರಡು ಬಾರಿ ಸೌಟಾಡಿಸಿ ಕೆಳಗಿಳಿಸಿ.
ಏಲಕ್ಕಿ ಪುಡಿ ಇದ್ದರೆ ಹಾಕಬಹುದು.
ಅಪ್ಪಂ ಕಾವಲಿಯನ್ನು ಚೆನ್ನಾಗಿ ಒರೆಸಿ, ಗುಳಿಗಳಿಗೆ ಎರಡೆರಡು ಚಮಚ ತುಪ್ಪ ಎರೆದು ಗ್ಯಾಸ್ ಸ್ಟವ್ ಮೇಲಿರಿಸಿ. ಕಾವಲಿ ಬೆಚ್ಚಗಾದಾಗ ಗುಳಿಗಳಿಗೆ ಹಿಟ್ಟು ತುಂಬಿಸಿ, ಎರಡೂ ಬದಿ ಬೇಯಿಸಿದಾಗ ರುಚಿಕರವಾದ ನೆಯ್ಯಪ್ಪಂ ಸಿದ್ಧ.
ಸಾಮಾನ್ಯವಾಗಿ ಕೇರಳದ ದೇವಾಲಯಗಳಲ್ಲಿ ಪ್ರಸಾದರೂಪವಾಗಿ ನೆಯ್ಯಪ್ಪಂ ಇರುತ್ತದೆ. ದೇವತಾಪೂಜಾವಿಧಿಗಳ ಕೆಲವಾರು ಹೋಮಹವನಗಳಲ್ಲೂ ನೆಯ್ಯಪ್ಪಂ ದೇವರಿಗೆ ಮುಖ್ಯ ನೈವೇದ್ಯವಾಗಿರುತ್ತದೆ. ವಿಶೇಷವಾಗಿ ಕಾಸರಗೋಡು ಮಧೂರು ಕ್ಷೇತ್ರದ ಅಪ್ಪಂ ಪ್ರಸಾದವು ಬಹಳ ಪ್ರಸಿದ್ಧಿಯನ್ನು ಪಡೆದಿರುವಂತದ್ದಾಗಿದೆ.
ತುಪ್ಪದಿಂದ ಮಾಡಿದಂತಹ ಈ ಸಿಹಿಭಕ್ಷ್ಯವು ಕೆಲವಾರು ದಿನ ಕೆಡದೆ ಇರಬೇಕಾದರೆ ತೆಂಗಿನ ತುರಿಯನ್ನು ಹುರಿದುಕೊಳ್ಳುವುದು ಉತ್ತಮ.
ಬಾಳೆಹಣ್ಣು ಹಾಕಿಯೂ, ಹಾಕದೆಯೂ ಅಪ್ಪಂ ಮಾಡಬಹುದು. ಬಾಳೆಹಣ್ಣು ಹಾಕಿದಂತಹ ತಿನಿಸು ಪ್ರತ್ಯೇಕವಾಗಿ ಉಣ್ಣಿಯಪ್ಪಂ ಎಂದು ಹೆಸರು ಪಡೆದಿದೆ.
ತುಂಬ ಹಳೆಯಕಾಲದ ಸಿಹಿಭಕ್ಷ್ಯವಾದ ನೆಯ್ಯಪ್ಪಂ ತಯಾರಿಗೆ ಜನಸಾಮಾನ್ಯರ ಬಳಕೆಗೆ ಮಣ್ಣಿನ ಕಾವಲಿಗಳೂ, ದೇವಾಲಯಗಳಲ್ಲಿ ಕಂಚಿನ ಯಾ ತಾಮ್ರದ ಘನಗಾತ್ರದ ಕಾವಲಿಗಳೂ, ಮೂರು ಕುಳಿಗಳಿಂದ ಪ್ರಾರಂಭವಾಗುವ ಕಾವಲಿಗಳ ಗುಳಿ ಗಾತ್ರಕ್ಕನುಗುಣವಾಗಿ ಹದಿನೈದು, ಇಪ್ಪಂತ್ತೊಂದರ ಗುಳಿಗಳ ವರೇಗೆ ಯಾ ಮತ್ತೂ ಹೆಚ್ಚು ವಿಸ್ತರಿತವಾಗಿವೆ. ಗ್ಯಾಸ್ ಸ್ಟವ್ ಮೇಲಿರಿಸಲು ಹಿಂಡಾಲಿಯಂ ಕಾವಲಿ ಉತ್ತಮ. ಆಧುನಿಕ ಗೃಹಿಣಿಯರಿಗೆ ನಾನ್ ಸ್ಟಿಕ್ ಅಪ್ಪಂ ತವಾ, ಇಂಡಕ್ಷನ್ ಕುಕ್ಕಿಂಗ್ ಪ್ರಿಯರಿಗೆ ಇಂಡಕ್ಷನ್ ಬೇಸ್ ಇರುವಂತಹ ಅಪ್ಪಂ ತವಾ ಕೂಡಾ ಮಾರುಕಟ್ಟೆಯಲ್ಲಿದೆ!
0 comments:
Post a Comment