Tuesday, 29 January 2013
ಘಟ್ಟದ ರೊಟ್ಟೀ....ರಾಗೀ ಸ್ಪೆಶಲ್ !
ರಾಗಿಮುದ್ದೆ ಮಾಡಲು ನಾನು ಇದುವರೆಗೂ ಪ್ರಯತ್ನಿಸಿಯೇ ಇಲ್ಲ. ಏನಿದ್ದರೂ ದೋಸೆ, ಇಡ್ಲೀ. ತೆಂಗಿನಕಾಯಿ ಚಟ್ನೀ, ಬಿಸಿ ತುಪ್ಪ, ದಪ್ಪ ಮೊಸರು, ಸಿಹಿ ಬೇಕಿದ್ದವರಿಗೆ ಜೇನು ಇಲ್ಲಾಂದ್ರೆ ಬೆಲ್ಲದ ರವೆ. ಮುಂಜಾನೆಯ ತಿನಿಸು ಇಷ್ಟರಲ್ಲಿ ಬೇಕಾದಷ್ಟಾಯಿತು.
ಬನ್ನಿ, ಇದು ತಿಂಡಿ ತಿನ್ನುವ ಸಮಯ...
ತೆಳ್ಳವು ಯಾರಿಗಿಷ್ಟವಿಲ್ಲ ಹೇಳಿ, ಬೆಲ್ಲಕಾಯಿಸುಳಿಯೊಂದಿಗೆ ಮುಂಜಾನೆಗೆ ಪ್ರತಿದಿನವೂ ಮಾಡಿ ತಿನ್ನುವವರಿದ್ದಾರೆ. ಎಂದಿನಂತೆ 2 ಕಪ್ ಅಕ್ಕಿ ಅರೆದು, ರಾಗೀಹುಡಿ 2 -3 ಚಮಚಾ ಸೇರಿಸಿ ರಾಗೀ ತೆಳ್ಳವು ಮಾಡಿ ನೋಡಿ.
ಅಕ್ಕೀ ಉಂಡೆ :
2 ಕಪ್ ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರನ್ನೆಲ್ಲ ಬಸಿದು ಒಣಗಲು ಹರವಿ ಬಿಡಿ. ಅರ್ಧ ಗಂಟೆ ಸಾಕು.
ಮಿಕ್ಸೀಯಲ್ಲಿ ತರಿ ತರಿ ಮಾಡಿಕೊಳ್ಳಿ.
ಬಾಣಲೆಗೆ ತುಪ್ಪ ಸವರಿ 4 ಕಪ್ ನೀರು ಅಳೆದು ಎರೆಯಿರಿ.
ಕುದಿಯಲು ಇಡಿ.
ರುಚಿಗೆ ಉಪ್ಪು ಹಾಕೋದನ್ನು ಮರೆಯಬೇಡಿ.
ನೀರು ಬಿಸಿಯಾಗುತ್ತಾ ಬಂತೇ, ಕೆಳಗಿಳಿಸಿ ಅಕ್ಕೀ ತರಿಯನ್ನು ಹಾಕಿ.
ಸೌಟಿನಲ್ಲಿ ತಿರುಗಿಸಿ ಮುದ್ದೆಗಟ್ಟದಂತೆ ನೋಡಿಕೊಳ್ಳಿ.
ಒಂದು ಹಿಡಿ ಕಾಯಿ ತುರಿ ಸೇರಿಸಿ ಪುನಃ ಒಲೆಯ ಮೇಲಿಟ್ಟು ಒಂದೇ ಮುದ್ದೆ ಆಗುವ ತನಕ ಸಣ್ಣ ಉರಿಯಲ್ಲಿ ಕಾಯಿಸಿ.
ಬೆಂದ ಹಿಟ್ಟು ಕೈಗೆ ಅಂಟುವುದಿಲ್ಲ, ಕೈಯನ್ನು ಒದ್ದೆ ಮಾಡಿಕೊಂಡು ನೋಡಿ.
ಕೆಳಗಿಳಿಸಿ ತಣಿಯಲು ಬಿಡಿ. ಬೇಕಾದ ಹಾಗೆ ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಿ. ಕುಡುಂಬಟ್ಎಂದೂ ಇದಕ್ಕೆ ಹೆಸರಿದೆ.
ಜೊತೆಗೆ 2 -3 ಚಮಚ ರಾಗೀಹುಡಿ ಹಾಕಿದ್ರೆ ರಾಗೀ ಉಂಡೆ ಆಯ್ತು.
ಹಿಟ್ಟಿಗೆ ಒಗ್ಗರಣೆ, ಈರುಳ್ಳಿ, ಕೊತ್ತಂಬರೀ ಸೊಪ್ಪು ಅಥವಾ ಬೇವಿನಸೊಪ್ಪು ಸೇರಿದ್ರೆ ಮಸಾಲಾ ಉಂಡೆ ಹೇಳಿದ್ರಾಯ್ತು.
ತಿಂಡಿ ತಿಂದಾಯ್ತೇ, ಉಳಿದ ಉಂಡೆಗಳನ್ನು ಸಂಜೆಯ ಟೀ ಜತೆ ಉಸುಳಿ ಮಾಡೋಣ.
ಉಸುಳಿ ಮಾಡುವಷ್ಟಿಲ್ಲವೇ, ಮದ್ಯಾಹ್ನದ ಅಡುಗೆಗೆ ಉಂಡೆ ಹುಳಿ ಮಾಡಿಕೊಳ್ಳಿ.
ನೀವು ತಯಾರಿಸುವ ಸಾಂಬಾರಿಗೆ ಉಳಿದಿರುವ ಉಂಡೆಗಳನ್ನು ಬಟಾಟೆಯಂತೆ ಹೋಳು ಮಾಡಿ ಹಾಕಿದ್ರಾಯ್ತು. ಸಾಂಬಾರಿಗೆ ಹಾಕಿರುವ ತರಕಾರಿ ಯಾವುದೆಂದು ಯಾರಿಗೂ ಹೇಳುವ ಗೋಜಿಗೇ ಹೋಗಬೇಡಿ.
ಅಕ್ಕಿ ಹಾಗೂ ರಾಗೀಯನ್ನು ಸಮ ಪ್ರಮಾಣದಲ್ಲಿ ನುಣ್ಣಗೆ ಅರೆದು ಕಾಯಿಸಿ, ಉಂಡೆ ಕಟ್ಟಿ ಹಬೆಯಲ್ಲಿ ಬೇಯಿಸಿ ರಾಗೀ ಶಾವಿಗೆಯನ್ನೂ ಮಾಡಬಹುದಾಗಿದೆ. ತಿಂದು ಮಿಕ್ಕುಳಿದ ಶಾವಿಗೆಯನ್ನು ವ್ಯರ್ಥ ಮಾಡದೆ ಬಿಸಿಲಿಗೆ ಒಣಗಿಸಿ ಸಂಡಿಗೆಯಂತೆ ಕರಿದು ತಿನ್ನಬಹುದು.
ಒತ್ತು ಶಾವಿಗೆಯೊಂದಿಗೆ ಬಾಳೇಹಣ್ಣಿನ ರಸಾಯನ ಇರಲೇ ಬೇಕು.
ದಪ್ಪ ತೆಂಗಿನಕಾಯಿ ಹಾಲು ಮಾಡಿ.
ಬಾಳೇಹಣ್ಣು ಚಿಕ್ಕದಾಗಿ ಕತ್ತರಿಸಿಡಿ.
ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರುಕಾಯಿಹಾಲನ್ನೇ ಎರೆದು ಉರಿಯ ಮೇಲಿಡಿ.
ಬೆಲ್ಲ ಕರಗಿ ಕುದಿಯಲಾರಂಭಿಸಿತೇ, ಕೆಳಗಿಳಿಸಿ.
ಬಾಳೇಹಣ್ಣು ಚೂರುಗಳನ್ನು ಹಾಕಿ.
ದಪ್ಪ ಕಾಯಿಹಾಲು ಎರೆಯಿರಿ.
ಎಳ್ಳು ಹುರಿದು ಹಾಕಿ, ರಸಾಯನ ಆಯ್ತು.
ಆಯಾ ಋತುಗಳಲ್ಲಿ ಲಭ್ಯವಿದ್ದಂತೆ ರಸಾಯನದಲ್ಲಿ ಮಾವಿನ ಹಣ್ಣು, ಚಿಕ್ಕೂ, ದಾಳಿಂಬೆ ಇತ್ಯಾದಿಗಳ ಬಳಕೆ ಮಾಡಿದರೆ ಚೆನ್ನ.
ಉಸುಳಿ ಮಾಡುವ ವಿಧಾನ:
ಮೇಲೆ ಹೇಳಿದ ಉಂಡೆ, ಶಾವಿಗೆ, ಇಡ್ಲಿಯೇ ಇರಲಿ, ಸಂಜೆಯ ಹೊತ್ತಿಗೆ ಉಸುಳಿ ಮಾಡೋಣ. ಚೆನ್ನಾಗಿ ಪುಡಿ ಪುಡಿ ಮಾಡುವುದು ಅವಶ್ಯ. ರುಚಿಗೆ ಬೇಕಾದ ಉಪ್ಪು, ಹುಳಿ, ಬೆಲ್ಲಗಳನ್ನು ಒಂದು ಚಿಕ್ಕ ತಟ್ಟೆಯಲ್ಲಿ ನೀರಿನಲ್ಲಿ ಕರಗಿಸಿ ಇಡಿ. ಬಾಣಲೆಯಲ್ಲಿ ಒಗ್ಗರಣೆ ಇಡಿ. ಸಾಸಿವೆ ಸದ್ದು ನಿಲ್ಲುತ್ತಿದ್ದಂತೆ ಬೇವಿನೆಸಳು, ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಶುಂಠಿ ಇತ್ಯಾದಿಗಳನ್ನು ಹಾಕಿ. ಮಾಡಿಟ್ಟುಕೊಂಡ ಉಪ್ಪುನೀರು ಎರೆದು, ಪುಡಿ ಮಾಡಿದ ಶಾವಿಗೆಯನ್ನು ಹಾಕಿ, ಕಾಯಿತುರಿ, ಕೊತ್ತಂಬ್ರಿ ಸೊಪ್ಪು ಇರಲಿ. ಸೌಟಿನಲ್ಲಿ ಕೆದಕಿ ಸಣ್ಣ ಉರಿಯಲ್ಲಿ ಮುಚ್ಚಿ ಬೇಯಿಸಿ. ಕ್ಷಣಕಾಲ ಬಿಟ್ಟು ತಗೆಯಿರಿ.
ಘಟ್ಟದ ರೊಟ್ಟೀ....ರಾಗೀ ಸ್ಪೆಶಲ್ !
ಘಟ್ಟದ ರೊಟ್ಟೀ : ಬೆಳ್ತಿಗೆ ಅಕ್ಕಿ ಹಾಗೂ ಕುಸುಬುಲಕ್ಕಿಯನ್ನು ಸಮ ಪ್ರಮಾಣದಲ್ಲಿ ನುಣ್ಣಗೆ ಅರೆದು, ಕೊತ್ತಂಬರಿ, ಜೀರಿಗೆ, ಮೆಣಸು, ಈರುಳ್ಳಿ, ಶುಂಠಿ, ಹಸಿಮೆಣಸು, ಕಾಯಿತುರಿ ಇತ್ಯಾದಿಗಳನ್ನೂ ಅರೆಯುವಾಗ ಸೇರಿಸಿ. ಹಿಟ್ಟನ್ನು ಸಾಕಷ್ಟು ತೆಳ್ಳಗೆ ಮಾಡಿ ನೀರು ದೋಸೆ ಎರೆಯುವುದು ನಮ್ಮ ರೂಢಿಯ ಕ್ರಮ.
ಈಗ ನಾವು ಕುಸುಬುಲಕ್ಕಿಯನ್ನು ಬಿಟ್ಟು ಬಿಡೋಣ. ಬದಲಾಗಿ ಅರೆಯುವಾಗ ರಾಗೀ ಸೇರಿಸಿ. ರಾಗೀ ಹುಡಿಯೂ ಆದೀತು. ಘಟ್ಟದ ರೊಟ್ಟೀ, ರಾಗೀ ಸ್ಪೆಶಲ್....ಅಂದು ಬಿಡಿ.
I
.
ಈ ಘಟ್ಟದ ರೊಟ್ಟಿಗೆ ಪ್ರತ್ಯೇಕವಾಗಿ ಚಟ್ನಿ ಮಾಡಬೇಕಾಗಿಲ್ಲ. ಸಕ್ಕರೆ ಹಾಗೂ ಬೆಣ್ಣೇ ಮುದ್ದೆಯೊಂದಿಗೆ ಸವಿಯಿರಿ.
ಏನಿದ್ದರೂ ಸ್ವಲ್ಪ ಹಿಟ್ಟು ಮಿಕ್ಕಿದೆ, ಮಸಾಲೆ ಧಾರಾಳವಾಗಿ ಹಾಕಿರುವ ಈ ಹಿಟ್ಟನ್ನು ಸಂಡಿಗೆ ಅಥವಾ ಹಪ್ಪಳ ಮಾಡೋಣ.
ಉಳಿದ ಹಿಟ್ಟನ್ನು ಬಾಣಲೆಗೆ ಸುರುವಿ ಕುದಿಸಿ, ದಪ್ಪಗಾದೊಡನೆ ಕೆಳಗಿಳಿಸಿ. ಚಿಕ್ಕ ಚಮಚಾದಲ್ಲಿ ಸಂಡಿಗೆ ಇಟ್ಟು ಬಿಸಿಲಿಗೆ ಒಣಗಿಸಿ. ಬೇಕಾದಾಗ ಎಣ್ಣೆಯಲ್ಲಿ ಕರಿಯಿರಿ.
ಹಪ್ಪಳ ಮಾಡಬೇಕಾಗಿದ್ದಲ್ಲಿ ಒಲೆಯ ಮೇಲಿಟ್ಟು ಉಂಡೆ ಕಟ್ಟುವ ಹದಕ್ಕೆ ತನ್ನಿ. ಒಂದು ಹಿಡಿ ಅವಲಕ್ಕಿಯನ್ನು ಕಾದ ಕಾವಲಿಯಲ್ಲಿ ಹುರಿದು ಹುಡಿ ಮಾಡಿ ಸೇರಿಸ್ಕೊಳ್ಳಿ. ಬಟಾಟೆ ಬೇಯಿಸಿ, ಚೆನ್ನಾಗಿ ಹಿಸುಕಿ ಸೇರಿಸಿದರೂ ಆದೀತು. ಲಿಂಬೇಗಾತ್ರದ ಉಂಡೆ ಮಾಡಿಕೊಂಡು ಪೊಲಿಥೀನ್ ಶೀಟುಗಳಿಗೆ ಎಣ್ಣೆ ಸವರಿ, ಒಂದೊಂದೇ ಉಂಡೆಯನ್ನು ಇಟ್ಟು, ಹಗುರಾಗಿ ಮಣೆಯಲ್ಲಿ ಒತ್ತಿ ಒಣಗಿಸಿ
.
Posted via DraftCraft app
Subscribe to:
Post Comments (Atom)
0 comments:
Post a Comment