Pages

Ads 468x60px

Monday, 27 May 2013

ಬಾಳೇ ಹಣ್ಣು, ......ವಿಶೇಷ ಖಾದ್ಯಗಳು







ಒಂದು ಬಾಳೆಗೊನೆ ಹಣ್ಣಾದರೆ ಸಾಕು,  ಏನೇನೆಲ್ಲಾ ಮಾಡಬಹುದು, 

  " ಹಾಗೇನೇ ತಿಂದರಾಯಿತು ಮುಗೀತಲ್ಲ ಸಮಸ್ಯೆ "  ಅಂತೀರಾ.

ಅದಕ್ಕೂ ಮನೆಯೊಳಗೆ ಸಾಕಷ್ಟು ಜನ ಇದ್ದರಾದೀತು,  ಇಲ್ಲವೇ ಹಟ್ಟಿಯಲ್ಲಿ ದನ ಇದ್ದರೂ ಆದೀತು.  

 ಈಗ ನಾಳೆ ಮುಂಜಾನೆಗೊಂದು ತಿಂಡಿ ಆಗ್ಬೇಕಿದೆಯಲ್ಲ,  ದೋಸೆ ಮಾಡೋಣ.

ಬೇಕಾಗುವ ಸಾಮಗ್ರಿ:
2 ಕಪ್ ಅಕ್ಕಿ
ಕಾಲು ಕಪ್ ಉದ್ದು
1 ಚಮಚ ಮೆಂತೆ
2 ಕಪ್ ಕತ್ತರಿಸಿಟ್ಟ ಬಾಳೆಹಣ್ಣುಗಳು
ರುಚಿಗೆ ಉಪ್ಪು

ಅಕ್ಕಿ ಬೇಳೆಗಳನ್ನು ನೆನೆ ಹಾಕಿ.  
ಮೊದಲು ಬೇಳೆಗಳನ್ನು ನುಣ್ಣಗೆ ಅರೆಯಿರಿ.   
ಉದ್ದಿನ ಹಿಟ್ಟು ತೆಗೆದಿಡಿ.  
 ಅಕ್ಕಿಯನ್ನು ಅವಶ್ಯವಿದ್ದಷ್ಟು ನೀರೆರೆದು ಮಿಕ್ಸೀಯಲ್ಲಿ ಅರೆಯಿರಿ.  
 ನುಣ್ಣಗಾಗಲು ಒಂದೊಂದೇ ಕಪ್ ಅಕ್ಕಿ ಹಾಕುವುದು ಉತ್ತಮ,  ನುಣ್ಣಗಾಯಿತೇ,  ಈಗ ಒಂದು ಕಪ್ ಬಾಳೆಹಣ್ಣಿನ ಹೋಳುಗಳನ್ನು ಹಾಕಿ ಅರೆಯಿರಿ,  ನೀರು ಪುನಃ ಸೇರಿಸುವ ಅವಶ್ಯಕತೆಯಿಲ್ಲ.  ಉಳಿದ ಅಕ್ಕಿ ಹಾಗೂ ಬಾಳೆಹಣ್ಣನ್ನು ಹೀಗೆ ಅರೆದು ಹಿಟ್ಟಿಗೆ ಉಪ್ಪು ಹಾಕಿ.   ಚೆನ್ನಾಗಿ ಕಲಸಿ 8 ಗಂಟೆಗಳ ಕಾಲ ಮುಚ್ಚಿಡಿ.

ತೆಳ್ಳಗೆ ಪೇಪರ್ ದೋಸೆ ತಯಾರಿಸಿ,  ಒಳಗೆ ಮಸಾಲೆ ಹೂರಣ ತುಂಬಿಸಿ ಮಕ್ಕಳಿಗೆ ಕೊಡಿ.
ಮಸಾಲೆ ಪಲ್ಯ ಮಾಡಿಲ್ಲವೇ,   ತೆಂಗಿನಕಾಯಿ ಚಟ್ನಿ ಮಾಡಿದರಾಯಿತು.
ಇಷ್ಟವಿದ್ದವರಿಗೆ ದಪ್ಪ ದೋಸೆಯನ್ನೂ ಮಾಡಬಹುದು.






ಬೇಳೇಕಾಳುಗಳನ್ನು ಹಾಕದೇ ದೋಸೆ ಮಾಡೋಣ:
2 ಕಪ್ ಅಕ್ಕಿ
1 ಕಪ್ ತೆಂಗಿನ ತುರಿ
2 ಕಪ್ ಹೆಚ್ಚಿಟ್ಟ ಬಾಳೇಹಣ್ಣು
ರುಚಿಗೆ ಉಪ್ಪು

ನುಣ್ಣಗೆ ಅರೆದಿಡಿ.  ಮಾರನೇ ದಿನ ದೋಸೆ ಎರೆದುಕೊಳ್ಳಿ.   ಸಿಹಿ ಬೇಕಿದ್ದರೆ ಬೆಲ್ಲ ಹಾಕಬಹುದು.
ಇದೇ ಹಿಟ್ಟಿನಿಂದ ಗುಳಿಯಪ್ಪ ಬೇಕಿದ್ದರೂ ಮಾಡಬಹುದು,  ಬೆಲ್ಲ ಜಾಸ್ತಿ ಹಾಕಿದರಾಯಿತು.  ಹಿಟ್ಟು ನೀರಾಗಿರಬಾರದು,  ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಹಿಟ್ಟನ್ನು ದಪ್ಪಗಟ್ಟುವಂತೆ ಮಾಡಿ. ನಂತರ ಅಪ್ಪದ ಗುಳಿಕಾವಲಿಯಲ್ಲಿ ಎರೆಯಿರಿ. ನಿಮ್ಮ ಅಪ್ಪಂ ಚೆನ್ನಾಗಿ ಗುಳಿಯಿಂದ ಎದ್ದು ಬರುವುದು,  ಹೆಚ್ಚು ಎಣ್ಣೆ ಕುಡಿಯುವುದಿಲ್ಲ.


<><><> <><><> <><><>



ಬಾಳೆಹಣ್ಣಿನಿಂದ ತಯಾರಿಸಬಹುದಾದ ಇನ್ನೊಂದು ಭಕ್ಷ್ಯ ಹಲ್ವಾ.  ಇದರ ತಯಾರಿ ಹೇಗೆಂದು ನೋಡೋಣ.

ಚೆನ್ನಾಗಿ ಹಣ್ಣಾದ ಕದಳೀ ಬಾಳೆ ಹಣ್ಣುಗಳು - 25ರಿಂದ 30
ಚಿಕ್ಕದಾಗಿ ಕತ್ತರಿಸಿ ಇಡಿ.

2 ಕಪ್ ಸಕ್ಕರೆ
1 ಅಚ್ಚು ಬೆಲ್ಲ ( ಮುಸುಂಬಿ ಗಾತ್ರದ್ದು )
4 ಚಮಚಾ ತುಪ್ಪ

ಬಾಣಲೆಗೆ ತುಪ್ಪ ಸವರಿ ಬಾಳೆಹಣ್ಣು ಬೇಯಲಿಡಿ.  ದೊಡ್ಡ ಉರಿಯಲ್ಲಿ ಬೇಯಿಸಲೇಬಾರದು.  ಸೌಟಿನಿಂದ ಮಗುಚುತ್ತಾ ಇದ್ದಂತೆ ರಸಭರಿತ ಹಣ್ಣಿನ ಸುವಾಸನೆ ಬರಲಾರಂಭಿಸುವುದು.  ಈ ಹಂತದಲ್ಲಿ ಬೆಲ್ಲ ಸೇರಿಸಿ.   ಬೆಲ್ಲ ಕರಗಿ,  ಕುದಿದು ಬಾಳೆಹಣ್ಣಿನೊಂದಿಗೆ ಸೇರಿತೇ,  ಈಗ ಸಕ್ಕರೆ ಹಾಕಿ ಬಿಡಿ.  

ನಿಧಾನಗತಿಯ ಈ ರಸಪಾಕ ಸಿದ್ಧವಾಗಲು ಕನಿಷ್ಠ 3 ಗಂಟೆಗಳ ಕಾಲ ಬೇಕಾಗಿರುವುದರಿಂದ ಇನ್ನಿತರ ಮನೆಕೆಲಸಗಳ ಜೊತೆಯಲ್ಲಿ ಮಾಡುವುದು ಉತ್ತಮ.

ಸಕ್ಕರೆ ಕರಗಿದ ಹಂತದಲ್ಲಿ ಈ ಅರೆ ಬೆಂದ ಪಾಕದಿಂದ  ಒಂದು ಪಾಯಸ ಮಾಡಿಕೊಳ್ಳೋಣ :

2 ಸೌಟು ಹಣ್ಣಿನ ಪಾಕ ತೆಗೆದು ಪಾಯಸ ತಯಾರಿಸುವ ಪಾತ್ರೆಗೆ ರವಾನಿಸಿ.  ಒಂದು ಲೋಟ ತೆಂಗಿನಕಾಯಿ ಹಾಲು ಎರೆದು ಚಿಕ್ಕ ಉರಿಯಲ್ಲಿ ಕುದಿಸಿ.   ಇದಕ್ಕೆ ಯಾಲಕ್ಕಿ ಹಾಕಬೇಕಾಗಿಲ್ಲ.  





ನೀರಿನಂಶವೆಲ್ಲ ಆರಿದ ನಂತರ ಹಲ್ವಾ ತಳ ಬಿಟ್ಟು ಬರಲಾರಂಭಿಸುವುದು.   ಈಗ ಉಳಿದ ತುಪ್ಪ ಹಾಕಿಕೊಳ್ಳಿ.   ಒಂದೇ ಮುದ್ದೆಯಾದ ಹಂತದಲ್ಲಿ ಕೆಳಗಿಳಿಸಿ ತಟ್ಟೆಗೆ ಹಾಕಿ.   ಚೆನ್ನಾಗಿ ಆರಿದ ಮೇಲೆ ಬೇಕಾದಂತೆ ತುಂಡು ಮಾಡಿಟ್ಟು,  ಡಬ್ಬಾದಲ್ಲಿ ತುಂಬಿಸಿ ಮಕ್ಕಳಿಗೆ ಕೊಟ್ಟು ನೀವೂ ತಿನ್ನಿ.











ಸುಟ್ಟವು ಹೀಗೆ ಮಾಡೋಣ:

10ರಿಂದ 15 ಚೆನ್ನಾಗಿ ಹಣ್ಣಾದ ಕದಳೀ ಬಾಳೆಹಣ್ಣು
ಮುಸುಂಬಿ ಗಾತ್ರದ ಬೆಲ್ಲ
1 ಕಪ್ ಮೈದಾ
ಕರಿಯಲು ತೆಂಗಿನೆಣ್ಣೆ
ರುಚಿಗೆ ಚಿಟಿಕೆ ಉಪ್ಪು

ಬಾಳೇಹಣ್ಣುಗಳನ್ನು ಮಿಕ್ಸೀಗೆ ಹಾಕಿ,  ತೆಗೆದಿಡಿ.
ಬೆಲ್ಲಕ್ಕೆ ಸ್ವಲ್ಪ ನೀರೆರೆದು ಕುದಿಸಿ, ಕರಗಿಸಿಕೊಳ್ಳಿ.
ಬೆಲ್ಲದ ಬಿಸಿ ಆರಿತೇ,  ಈಗ ಬಾಳೇಹಣ್ಣಿನ ಮುದ್ದೆ,  ಮೈದಾ, ಚಿಟಿಕೆ ಉಪ್ಪನ್ನೂ ಸೇರಿಸಿ ಬೆಲ್ಲದ ಪಾಕದೊಂದಿಗೆ ಕಲಸಿಕೊಳ್ಳಿ.   ಕಲಸುವಾಗ ಬೇರೆ ನೀರು ಹಾಕಬೇಕಾಗಿಲ್ಲ.  

ಬಾಣಲೆಯಲ್ಲಿ ಎಣ್ಣೆ ಬಿಸಿಯೇರಿತೇ,  ಕೈಯಲ್ಲಿ ಹಿಟ್ಟನ್ನು ಒಂದೇ ಗಾತ್ರದಲ್ಲಿ ಎಣ್ಣೆಗೆ ಇಳಿಸುತ್ತಾ ಬನ್ನಿ.   ಬಾಣಲೆಯಲ್ಲಿ ಹಿಡಿಸುವಷ್ಟು ಒಂದೇ ಬಾರಿ ಹಾಕಬಹುದು.   ಎರಡೂ ಬದಿ ಕೆಂಪಗಾದೊಡನೆ ತೆಗೆಯಿರಿ.   ಇದನ್ನು ಒಂದೆರಡು ದಿನ ಇಟ್ಟುಕೊಳ್ಳಬಹುದು.





Posted via DraftCraft app

0 comments:

Post a Comment