ಅಗಾರೋ ರೈಸ್ ಕುಕ್ಕರ್ ನಮ್ಮ ಸಾಂಪ್ರದಾಯಿಕ ವಿಧಾನದಲ್ಲಿ ಬೆಳ್ತಿಗೆ ಅನ್ನವನ್ನೂ ಕುಚ್ಚುಲಕ್ಕಿ ಅನ್ನವನ್ನೂ ಮಾಡಿಕೊಟ್ಟಿತು. ಎರಡೂ ಕ್ರಮದ ಅಡುಗೆಯನ್ನು ಉಂಡಂತಹ ನಮ್ಮವರು “ಹೇಗಿದ್ದರೂ ರೈಸ್ ಕುಕ್ಕರ್ ಪರಿಣಿತರು ಬೆಳ್ತಿಗೆ ಅನ್ನವನ್ನೇ ದೃಷ್ಟಿಯಲ್ಲಿಟ್ಟು ಇಂತಹ ಕುಕ್ಕರ್ ವಿನ್ಯಾಸಗೊಳಿಸಿದ್ದಾರೆ, ನಾಳೆಯಿಂದ ಬೆಳ್ತಿಗೆ ಅನ್ನವನ್ನೇ ಮಾಡು…” ಅಂದರು.
ನಾನು ಯಾವುದೂ ಆದೀತು ಅಂತಿದ್ದರೆ ಇವರು ಇದೇ ಆದೀತು ಅಂತಿದ್ದಾರಲ್ಲ. ತೊಂದರೆಯೇನಿಲ್ಲ, ಝಟಾಪಟ್ ಅಂತ ಇಪ್ಪತೈದೇ ನಿಮಿಷದಲ್ಲಿ ಅನ್ನ ರೆಡಿ.
ಪೇಚಿಗಿಟ್ಕೊಂಡಿದ್ದು ಏನಪ್ಪಾ ಅಂದ್ರೆ ನಿನ್ನೆ ತಾನೇ ಹತ್ತು ಕಿಲೋ ಕುಚ್ಚಿಲಕ್ಕಿ ತರಿಸಿದ್ದಾಗಿದೆ, ಅದನ್ನು ಅಂಗಡಿಗೆ ವಾಪಸ್ ಮಾಡುವುದೋ, ಕ್ರಿಸ್ಮಸ್ ರಜೆಯಲ್ಲಿ ಮಕ್ಕಳ ಪರಿವಾರ ಬರುವುದಿದೆ, ಅಲ್ಲೀ ತನಕ ಇಟ್ಟುಕೊಳ್ಳುವುದೋ ಒಂದೂ ತಿಳಿಯದಾಯಿತು. ಸೊಸೆಯಂತೂ ಒಂದು ದಿನ ಕುಚ್ಚುಲಕ್ಕಿ ತಿಂದ ಶಾಸ್ತ್ರ ಮಾಡಿ, “ನಾನು ಘೀ ರೈಸ್ ಮಾಡ್ತೇನೆ” ಅನ್ನುವವಳು.
“ಅಮ್ಮ, ನಂಗೆ ಕುಚ್ಚುಲಕ್ಕಿ.. ಬೆಂಗ್ಳೂರಲ್ಲಿ ಬಿಳಿ ಅನ್ನ ತಿಂದು ಸಾಕಾಗ್ಬಿಟ್ಟಿದೆ. “ ಇದು ಮಗಳ ದನಿ.
ಅಂತೂ ಅಕ್ಕಿಯ ಚೀಲ ಮನೆಯಲ್ಲಿ ಉಳಿಯಿತು.
ಕುಚ್ಚುಲಕ್ಕಿ, ಅನ್ನ ಮಾತ್ರ ಮಾಡೋದಲ್ಲ, ದೋಸೆ ಇಡ್ಲಿ ರೊಟ್ಟಿ ಬಗೆ ಬಗೆಯ ತಿಂಡಿಗಳು ನೆನಪಾದವು. ಏನೇ ಆದರೂ ನಮ್ಮ ಮಿಕ್ಸಿಯ ಜಾರ್ ಕುಚ್ಚುಲಕ್ಕಿಯನ್ನು ನುಣ್ಣಗೆ ಅರೆದು ಕೊಡಲಾರದು. ಹಿಂದಿನ ಕಾಲಕ್ಕೆ ಇನ್ನು ಹೋಗುವಂತಿಲ್ಲ, ಚಿಂಥನ ಮಂಥನ ಮಾಡುತ್ತಿದ್ದ ಹಾಗೆ ಸೋಲಾರ್ ಬಿಸಿನೀರ ನೆನಪಾಯಿತು. ಮಧ್ಯಾಹ್ನದ ಹೊತ್ತಿಗೆ ಕೊತಕೊತನೆ ಕುದಿಯುತ್ತಿರುವ ನೀರು. ಆಹ್, ಇದಪ್ಪ ಬುದ್ಧಿವಂತಿಕೆ, ಎರಡು ಲೋಟ ಕುಚ್ಚುಲಕ್ಕಿ ತಪಲೆಗೆ ತುಂಬಿ ಬಿಸಿ ನೀರ ಟ್ಯಾಪ್ ತಿರುಗಿಸಿ ಕುದಿಯುವ ನೀರನ್ನು ಎರೆೆದು ತಪಲೆಯನ್ನು ಮುಚ್ಚಿ ಇರಿಸಲಾಯಿತು.
ಸಂಜೆಯಾಗುತ್ತಲೂ ಅಕ್ಕಿ ನೀರನ್ನು ಹೀರಿ ಉಬ್ಬಿದೆ, ಇದ್ದ ನೀರನ್ನು ಬಸಿದು, ಜರಡಿ ಬಟ್ಟಲಿಗೆ ವರ್ಗಾಯಿಸಿ ಇಟ್ಟು , ಒಂದು ಲೋಟ ಉದ್ದಿನಬೇಳೆ ನೆನೆ ಹಾಕಲಾಯಿತು.
ಮುಂದಿನ ಚಿಂತನೆ ಏನು?
ಅಕ್ಕಿಯನ್ನು ನೀರು ತಾಕಿಸದೆ ಹುಡಿ ಮಾಡುವುದು.
ಮಿಕ್ಸಿ ಕುಚ್ಚುಲಕ್ಕಿಯ ಹುಡಿ ಮಾಡಿ ಕೊಟ್ಟಿತು.
ಎಷ್ಟಾಯ್ತು ಅಕ್ಕಿ ಹುಡಿ?
ಹಿಂದೆ ಕುಚ್ಚುಲಕ್ಕಿಯಿಂದಲೇ ಕಡುಬು (ಇಡ್ಲಿ ) ಮಾಡುತ್ತಿದ್ದೆವು, ಬಾಳೆ ಎಲೆಯಲ್ಲಿ ಎರೆದು, ಮನೆಯ ಸದಸ್ಯರು ಮಾತ್ರವಲ್ಲದೆ, ತೋಟದ ಕೆಲಸಕಾರ್ಯಗಳ ಖಾಯಂ ಸದಸ್ಯರ ಚಹಾ ಸಮಾರಾಧನೆಗೂ ಸಾಕಾಗುತ್ತಿತ್ತು.
ಒಂದು ಅಳತೆ ಉದ್ದಿನಬೇಳೆಗೆ ನಾಲ್ಕು ಅಳತೆ ಅಕ್ಕಿ, ನಮ್ಮ ಹಳೇ ಲೆಕ್ಕಾಚಾರ.
ಈಗ ನಾವು ಒಂದು ಲೋಟ ಉದ್ದಿನಬೇಳೆಗೆ ನಾಲ್ಕು ಅಳತೆ ಅಕ್ಕಿ ತರಿ ಹಾಕಬೇಕು.
ಕೇವಲ ಕುಚ್ಚುಲಕ್ಕಿಯ ತರಿ ಹಾಕಲು ಮನ ಒಪ್ಪಲಿಲ್ಲ, ಇಡ್ಲಿಗೆಂದೇ ತಂದ ಅಕ್ಕಿ ತರಿ ಇರುವಾಗ?
ಹಾಗಾಗಿ ಮೂರು ಲೋಟ ಕುಚ್ಚುಲಕ್ಕಿ ತರಿ + ಒಂದು ಲೋಟ ಇಡ್ಲಿ ಅಕ್ಕಿ ತರಿ ಅಳೆದು, ಅರೆದ ಉದ್ದಿನ ಹಿಟ್ಟಿಗೆ ಬೆರೆಸಲಾಯಿತು. ರುಚಿಗೆ ಉಪ್ಪು ಕೂಡಿತು. ಕುಚ್ಚುಲಕ್ಕಿಗೆ ನೀರು ಈಗಾಗಲೇ ಸೇರಿಕೊಂಡಿದೆ, ಹಿಟ್ಟು ದಪ್ಪವಾಗಿಯೇ ಇರಲಿ. ಇನ್ನೇನಿದ್ದರೂ ನಾಳೆ ಮುಂಜಾನೆ ನೋಡಿಕೊಳ್ಳೋಣ.
ಅಂತೂ ನಮ್ಮ ಸಾಂಪ್ರದಾಯಿಕ ವಿಧಾನದ ತಿಂಡಿಗಳನ್ನು ಈ ಆದುನಿಕ ಯುಗದಲ್ಲಿಯೂ ಮಾಡಬಹುದು.
ಈ ಇಡ್ಲಿ ಹಿಟ್ಟು ಸೋಡ ಹುಡಿಯನ್ನು ಬಯಸದು.
ಹಲಸಿನ ಎಲೆಯ ಕೊಟ್ಟೆ ಕಡುಬು ಕೂಡಾ ಮಾಡಲಡ್ಡಿಯಿಲ್ಲ.
ಬಾಳೆ ಎಲೆಯ ಕಡುಬು, ಅಗಾರೋ ರೈಸ್ ಕುಕ್ಕರಿನಲ್ಲಿ ನಿರಾಯಾಸದಿಂದ ಮಾಡಬಹುದಾಗಿದೆ.