Pages

Ads 468x60px

Saturday 3 May 2014

ಎಲೆ ಎಲೆ ಮಾವಿನಹಣ್ಣೇ








ಮಾವಿನಹಣ್ಣೇ ಬಂದೆಯ
ಸಿಹಿ ಸಿಹಿ ಹಣ್ಣೇ ಎಂದೆಯ
ಗೊಜ್ಜೂ ಸಾರೂ ತಿಂದೆಯ
ಸಾಸಮೆ ಮಾಡೂ ಎಂದೆಯ
ರಸಾಯನ ಇರಲೀ ಅಂದೆಯ 
ಮಾಂಬಳ ಎರೆಯಲು ಬಂದೆಯ |

ಭರಣೀ ತೊಳೆದು ಇಟ್ಟೆಯ
ಉಪ್ಪೂ ಬೆರೆಸಿ ಇಟ್ಟಿಯ
ಬಗೆ ಬಗೆ ವ್ಯಂಜನ ತರ್ತೀಯ
ಹಣ್ಣೂ ಉಪ್ಪಾಡೂ ಆಗ್ತಿಯ
ಹಾಗೇ ಗುಳುಂ ತಿಂದೀಯ
ಹ್ಞಾಂ ಗೊರಟೂ ತೆಗೆದಿಟ್ಟೀಯ |

ಕಲ್ಯಾಣಿ ತೋಟದಿಂದ ಬಂದಳು.    ದೂರದ ಪಳ್ಳಿಯಿಂದ ಬಾಂಙ್ ಕೇಳುತ್ತಲೇ ಅವಳ ಮದ್ಯಾಹ್ನದ ಕೆಲಸ ಮುಗಿಯಿತು.   ಇವತ್ತು ಬರುವಾಗಲೇ ಮುಖವರಳಿದೆ.   ನನ್ನನ್ನು ಕಂಡೊಡನೆ  " ಇನ್ನು ಗಂಜಿಯೂಟಕ್ಕೆ ಕೊದ್ದೆಲ್ ಬೇಡಾ ಅಕ್ಕ "
ನನಗೂ ಅವಳ ಮಹದಾನಂದದ ಕಾರಣ ತಿಳಿಯಿತು,  ಅವಳ ಕೈಯಲ್ಲಿದ್ದ ಅಡಿಕೆ ಹಾಳೆಯ ಚೀಲದೊಳಗಿನಿಂದ ಕಾಟ್ಟು ಮಾವಿನಹಣ್ಣುಗಳು ಇಣುಕುತ್ತಿದ್ದುವು.  

" ಹೌದೂ,  ಗಂಜಿಯೂಟಕ್ಕೆ ಮಾವಿನಹಣ್ಣಿನ ಉಪ್ಪು ಮೆಣಸು ಮಾಡಿದರಾಯ್ತಲ್ಲ , ಇದು ಯಾವ ಮರದ ಹಣ್ಣು ?" 
" ಇದು ಚಟ್ಟೆ ಮಾವಿನಹಣ್ಣು... ಇನ್ನೊಂದ್ ನಾಲ್ಕು ದಿನ ಕಳೀಲಿ,  ಗೋಣಿ ಗೋಣಿ ಹಣ್ಣು ಸಿಕ್ಕೀತು " ಅಂದಳು.
ಈ ಮಾವಿನ ಗೊರಟು ಚಪ್ಪಟೆಯಾಗಿರುವುದರಿಂದ ಇದು ನಮ್ಮ ಬಾಯಲ್ಲಿ ಚಟ್ಟೆ ಮಾವಿನಹಣ್ಣು ಅಗ್ಹೋಗಿದೆ.

ಮಿಡಿ ಉಪ್ಪಿನಕಾಯಿ ಹಾಕಿದ ಬೆನ್ನಿಗೇ ಮಾವಿನ ಹಣ್ಣುಗಳ ಕಾಲ ಬಂತೆಂದೇ ಲೆಕ್ಕ.   ಒಂದೊಂದು ಮರದ ಹಣ್ಣೂ ಒಂದೊಂದು ರುಚಿ,  ಪರಿಮಳ.   ಮರದ ಬುಡದಲ್ಲಿ ಬಿದ್ದ ಹಣ್ಣುಗಳನ್ನು ಹೆಕ್ಕಿ ತರುವುದಷ್ಟೇ ಅಲ್ಲ,  ಬಗೆಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸುವುದೇ ಗ್ರಾಮೀಣ ಗೃಹಿಣಿಯರ ಉದ್ಯೋಗ.   ಆಪ್ತೇಷ್ಟರಿಗೆ,  ಮಿತ್ರವರ್ಗದವರಿಗೆ ಹಣ್ಣುಗಳನ್ನು ಹಂಚುವುದೂ ಇದ್ದೇ ಇರುತ್ತದೆ.   ಅದರ ಜೊತೆಜೊತೆಗೆ ಹೆಚ್ಚುವರಿ ಹಣ್ಣುಗಳನ್ನು ಮುಂದಿನ ಮಳೆಗಾಲದ ಉಪಯೋಗಕ್ಕಾಗಿ ಮಾಂಬಳ ಎರೆಯುವಂತಹ ಜವಾಬ್ದಾರಿಯೂ ಇರುತ್ತದೆ.

" ಮಾಂಬಳ ಅಂದ್ರೇನು ?  ಹೇಗೆ ಮಾಡ್ತೀರಾ ?"

ತಟ್ಟೆಯ ಮೇಲೆ ತೆಳ್ಳಗಿನ ಹತ್ತಿಯ ಬಟ್ಟೆ ಹರಡಿಟ್ಟು ಪ್ರತಿದಿನವೂ ಮಾವಿನ ಹಣ್ಣಿನ ರಸವನ್ನು ಎರೆಯುತ್ತಾ,  ನೀರು ಸ್ವಲ್ಪವೂ ಸೇರಿಸಬಾರದು,  ತುಸು ಉಪ್ಪು ಹಾಕಿಕೊಳ್ಳಬಹುದು. ಬಿಸಿಲಿನಲ್ಲಿ ಒಣಗಿಸುತ್ತಾ ದಪ್ಪ ಪದರವಾದೊಡನೆ ತುಂಡು ಮಾಡಿಟ್ಟು ಹಿಂಬದಿಯನ್ನೂ ಚೆನ್ನಾಗಿ ಒಣಗಿಸಿ ತೆಗೆದಿರಿಸಿ ಡಬ್ಬದಲ್ಲಿ ತುಂಬಿಸಿಟ್ಟುಕೊಂಡರಾಯಿತು.   ಇದು ಮಾಂಬಳ.  ಮಳೆಗಾಲದಲ್ಲಿ ಮಾವಿನ ಗೊಜ್ಜು ಪುನಃ ಮಾಡಬಹುದು,  ಹಾಗೇನೇ ಚಾಕ್ಲೇಟ್ ತಿಂದಂತೆ ತಿಂದರೂ ಆದೀತು.   ನಗರವಾಸಿಗಳಿಗೂ ಮಾರ್ಕೆಟ್ ಧಾರಣೆ ಕಡಿಮೆ ಇದ್ದಾಗ ಮಾವಿನಹಣ್ಣುಗಳನ್ನು ಕೊಂಡು ತಂದು ಮಾಂಬಳ ಎರೆಯಬಹುದು.   ಗೃಹಕೃತ್ಯ,  ಆಫೀಸ್ ಕೆಲಸ ಎಂದು ನಿಭಾಯಿಸಲು ಕಷ್ಟ ಎನಿಸಿದರೆ ಮೈಕ್ರೋವೇವ್ ಅವೆನ್ ಇದೆಯಲ್ಲ,  ಅದರಲ್ಲಿಟ್ಟು ಒಣಗಿಸಿ. 

ಮಾವಿನಮರದ ಬುಡದಲ್ಲಿ ಗೋಣಿ ತುಂಬ ದೊರೆಯುವ ಮಾವಿನಹಣ್ಣುಗಳನ್ನು ಮಾಂಬಳ ಎರೆಯಲು ತಟ್ಟೆ ಸಾಲದು,  ದೊಡ್ಡ ಚಾಪೆಯನ್ನು ಬಳಸಬೇಕಾಗುತ್ತದೆ.  ಹಾಗೂ ಈ ಗೃಹೋದ್ಯಮಕ್ಕೆ ಮನೆಯ ಹಿರಿಕಿರಿಯರೂ ಸಹಕರಿಸಿದರೆ ಮಾತ್ರ ಮಾಡಿಕೊಳ್ಳಬಹುದು.   ಈ ಮಾಂಬಳಕ್ಕೂ ಉತ್ತಮ ಮಾರುಕಟ್ಟೆ ಧಾರಣೆಯೂ ಇದೆ,  ವಿದೇಶಗಳಿಗೂ ರಪ್ತು ಆಗುವಂಥ ವಸ್ತು.

ನೀರು ಮಾವಿನಕಾಯಿ:
ಮಾವಿನಕಾಯಿ ಗೊರಟು ಕಟ್ಟಿದ ನಂತರ ಉಪ್ಪು ಬೆರಸಿ ಭರಣಿಯಲ್ಲಿ ಅಥವಾ ಮಣ್ಣಿನ ಮಂಡಗೆಯಲ್ಲಿ ತುಂಬಿಸಿ,  ಮೇಲಿನಿಂದ ಕುದಿಸಿದ ನೀರು ಎರೆದು,   ಆರಿದ ನಂತರ ಭರಣಿಯ ಬಾಯಿ ಬಿಗಿದು ಕಟ್ಟಬೇಕು.  ಉಪ್ಪು ಕಡಿಮೆಯಾಗಬಾರದು,  ಕೆಟ್ಟುಹೋದೀತು. ಉಪ್ಪು ಹೆಚ್ಚಾದ್ರೆ ಏನು ಗತಿ ಎಂಬ ಚಿಂತೆ ಬೇಡ,   ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ಹಾಕಿಟ್ಟಿರಿ,  ಉಪ್ಪು ಬಿಡುತ್ತದೆ.   ಮನೆ ತುಂಬ ಜನ ಇರುವಲ್ಲಿ,  ಆಳುಕಾಳುಗಳೂ ದಿನನಿತ್ಯ ಇರುವ ಸಂದರ್ಭದಲ್ಲಿ,  ತರಕಾರಿ ಏನೂ ಸಿಗದೇ ಇರುವ ಆಷಾಢ ಮಾಸದಲ್ಲಿ,  ಇದು ಮಳೆಗಾಲದ ಅಡುಗೆ ಉಪಯೋಗಕ್ಕಿರುವಂಥಾದ್ದು.  ಇದೆಲ್ಲ ಹಿಂದಿನ ಕಾಲದ ಕಥೆ.   ಈಗಲೂ ಆಸಕ್ತರು ಅವಶ್ಯವಿದ್ದಷ್ಟು ನೀರು ಮಾವಿನಕಾಯಿ ( ನೀರ್ ಕುಕ್ಕು )  ಹಾಕಿಟ್ಟುಕೊಳ್ಳುತ್ತಾರೆ.   ಭರಣಿಯೇನೂ ಬೇಡ,   ಗಾಳಿ ಒಳ ಹೋಗದಂತೆ ಮುಚ್ಚಳವಿರುವ ದೊಡ್ಡ ಪ್ಲಾಸ್ಟಿಕ್ ಜಾಡಿ ಇದ್ದರೆ ಸಾಕು.    

ಫಲಭರಿತ ವೃಕ್ಷದ ಅಡಿಯಿಂದ ಹಣ್ಣುಗಳನ್ನು ಹೆಕ್ಕುತ್ತಿರಬೇಕಾದರೆ,  ಅಡವಿಯಲಿ ಹುಟ್ಟಿ ಬೆಳೆವಂತಹ ವೃಕ್ಷಗಳಿಗೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ ಎಂದ ನಮ್ಮ ಹರಿದಾಸರ ವಾಣಿ ಈ ವನ್ಯವೃಕ್ಷವನ್ನು ಅನ್ವಯಿಸಿ ಹಾಡಿದ್ದಾಗಿರಬಹುದೇನೋ ಎಂದೂ ಅನ್ನಿಸಿಬಿಟ್ಟಿತು.  ಜಾಗತಿಕ ಮಟ್ಟದಲ್ಲಿ ಇದರಷ್ಟು ತುಂಬಾ ಫಲ ನೀಡುವ ಮರ ಬೇರೂಂದಿಲ್ಲ.   ಇದರ ಮೂಲನೆಲೆ ಭಾರತವೇ ಆಗಿರುವುದರಿಂದ ಸಸ್ಯಶಾಸ್ತ್ರಜ್ಞರು Mangifera indica ಎಂದು ನಾಮಕರಣ ಮಾಡಿರುತ್ತಾರೆ.   ವನ್ಯವೃಕ್ಷವಾದ ಈ ಮರದ ಹಣ್ಣನ್ನು ಕಾಟ್ಟು ಮಾವು ಎಂದೇ ನಮ್ಮ ದಕ್ಷ್ಣಿಣ ಕನ್ನಡಿಗರು ಹೇಳುವ ವಾಡಿಕೆ. ಬೃಹತ್ ವೃಕ್ಷವಾಗಿ ನೂರು ಅಡಿ ಮೀರಿ ಬೆಳೆಯುವ ಕಾಟ್ಟು ಮಾವಿನ ಮರದ ಕಾಂಡವೂ 12-14 ಅಡಿ ಸುತ್ತಳತೆ ಹೊಂದಿರುತ್ತದೆ,   20 ಆಡಿ ಸುತ್ತಳತೆ ಇರುವುದೂ ಇದೆ.   ಕಾಳಿದಾಸನ ಕಾವ್ಯದಲ್ಲಿಯೂ ಮಾವಿನ ವರ್ಣನೆ ಇದೆ,  ಮಾವು ನಮ್ಮ ದೇಶದ ರಾಷ್ಟೀಯ ಫಲ ಕೂಡಾ ಹೌದು.

ಒಂದು ಮರದ ಹಣ್ಣಿನ ರುಚಿ,  ಪರಿಮಳ,  ಗಾತ್ರ ಮತ್ತೊಂದು ಮರಕ್ಕೆ ಇಲ್ಲವೇ ಇಲ್ಲ.   ಕೆಲವು ಕಸಿ ಹಣ್ಣಿನಂತೆ ಗುಳಭರಿತವಾಗಿ,  ಗಾತ್ರದಲ್ಲಿ ದೊಡ್ಡ ಹಣ್ಣುಗಳಾಗಿರುತ್ತವೆ.  ಇನ್ನೂ ಹಲವು ಕೇವಲ ಸಿಪ್ಪೆ ಗೊರಟು ಅನ್ನಿಸಿಕೊಳ್ಳುತ್ತವೆ,  ಆದರೂ ತನ್ನ ವಿಶಿಷ್ಟ ಸುವಾಸನೆಯಿಂದ ಗ್ರಾಹಕರನ್ನು ಬರಮಾಡಿಕೊಳ್ಳುತ್ತವೆ.  ಈ ಕಾಟ್ಟು ಮಾವುಗಳ ಗುಣಧರ್ಮಗಳನ್ನು ಬರೆಯುತ್ತಾ ಹೋದರೆ ದೊಡ್ಡ ಪ್ರಬಂಧವೇ ಆದೀತು. 

 ಅಜ್ಜನ ಮನೆಯಲ್ಲಿ ಇದ್ದ ಒಂದು ಮಾವಿನ ಮರ,   ಕಸಿಮಾವಿನಂತೆ ದೊಡ್ಡದು,  ಅದನ್ನು ಕರ್ಪೂರ ಮಾವಿನ ಹಣ್ಣು ಎಂದು ಹೆಸರಿಟ್ಟು ಕೊಂಡಿದ್ದರು.  ನಾವು ಮಕ್ಕಳೆಲ್ಲ ಹೆಕ್ಕಿ ತಂದ ಹಣ್ಣುಗಳಲ್ಲಿ ಕರ್ಪೂರ ಹಣ್ಣನ್ನು ಮಾತ್ರ ಒಳಗಿಟ್ಟು ನಮ್ಮಜ್ಜಿ ಉಳಿದ ಕಾಟಂಗೋಟಿ ಹಣ್ಣುಗಳನ್ನು ಮಾಂಬಳ ತಯಾರಿಗೆ ಹೊರಗಿಡುತ್ತಿದ್ದರು.   ಅಪ್ಪನ ಮನೆಯಲ್ಲೂ ಇಂತಹುದೇ ಒಂದು ಮರ,  ಇದಕ್ಕೂ ಒಂದು ಹೆಸರಿದೆ,  ಒಳ್ಳೇ ಹಣ್ಣಿನ ಮರ.   ಗಾಳಿ ಬೀಸಿದಾಗ ಬೀಳುವ ಒಳ್ಳೇ ಹಣ್ಣನ್ನು ಹೆಕ್ಕಿಕೊಳ್ಳಲು ಹಿರಿಕಿರಿಯರ ದಂಡೇ ಓಡಿ ಬರ್ತಾ ಇತ್ತು.   ನಮ್ಮ ಹಿರಣ್ಯದಲ್ಲೂ ಇಂತಹದ್ದೇ ಇನ್ನೊಂದು ಮರವಿದೆ.   ಅದು ನೀರಿನ ಸುರಂಗದ ಪಕ್ಕ ಇದೆ,  ಇದಕ್ಕೂ ಸುರಂಗದ ಕಸಿ ಮಾವು ಎಂದು ಹೆಸರಿಸಿಕೊಂಡಿದ್ದೇವೆ.   ಈ ಮೂರು ಹಣ್ಣುಗಳೂ ರುಚಿ, ಪರಿಮಳಗಳಲ್ಲಿ ವಿಭಿನ್ನವಾಗಿವೆ.   ಇಂತಹ ಮಾವಿನಲ್ಲಿ ವೈವಿಧ್ಯ ನಮ್ಮ ಪರಂಪರೆಯಿಂದ ಬಂದಿದೆ.   ನಮ್ಮ ಪಶ್ಚಿಮಘಟ್ಟ ಅರಣ್ಯವಲಯದೊಳಗೆ ಅದೆಷ್ಟೋ ಮಾವಿನಮರಗಳು ಇದ್ದಿರಬಹುದು.   ಕಾಡು ಕಡಿದು ನಾಡು ಬೆಳೆಸುವ ಆತುರದಲ್ಲಿ ಅದೆಷ್ಟು ವೃಕ್ಷತಳಿಗಳು ನಾಶವಾಗಿವೆ ?  ಗೊತ್ತಿಲ್ಲ.   ವೃಕ್ಷಬೀಜ ನ್ಯಾಯದ ಹಾಗೆ ಒಮ್ಮೆ ಅಳಿದ ತಳಿಗೆ ಮರುಹುಟ್ಟು ಕೊಡಲಾಗದು.

ಇದೆಲ್ಲ ಇರಲಿ,  ಮಾವಿನ ಹಣ್ಣಿನ ರಸರುಚಿಗಳ ಪಟ್ಟಿಯೇ ದೊಡ್ಡದಿದೆ.   ಕಾಲೇಜ್ ವ್ಯಾಸಂಗ ಮಾಡುತ್ತಿರುವ ನನ್ನ ಮಗಳೂ ಮೊನ್ನೆ ತಾನೂ ಸ್ನೇಹಿತೆಯರೂ ಕೂಡಿ ತಯಾರಿಸಿದ ಮಾವಿನ ಸಾರು..... ನನಗೆ ಮೆಸೆಂಜರ್ ಮೂಲಕ ಫೋಟೋ ಕಳುಹಿಸಿದಳು.    ಕುದಿಸಿ ಒಗ್ಗರಣೆ ಕೊಟ್ಟಿದ್ದು ಸಾರು.   ಕುದಿಸದೇ ಒಗ್ಗರಣೆ ಕೊಟ್ರೆ ಗೊಜ್ಜು.   ಸಾಸಿವೆ,  ಹಸಿಮೆಣಸು ಕಾಯಿತುರಿ ಅರೆದು ಸೇರಿಸಿ,  ನಮ್ಮ ಕಡೆ ಸಾಸಮೆ ಆಯ್ತು,  ಅಚ್ಚಗನ್ನಡದಲ್ಲಿ ಬೇಕಿದ್ರೆ ಮಾವಿನ ಸಾಸಿವೆ ಅನ್ನಿ,   ಏನೇ ಮಾಡುವುದಿದ್ದರೂ ರಾಶಿ ರಾಶಿ ಬೆಲ್ಲ ದಾಸ್ತಾನು ಇಟ್ಟುಕೊಳ್ಳಿ.

ಬೇಸಿಗೆಯ ಕಾಲದಲ್ಲೇ ಆಗಮಿಸುವ ಈ ಮಾವಿನ ಹಣ್ಣಿನ ಶರಬತ್ ಬಿಸಿಲಿನ ತಾಪವನ್ನು ಶರೀರದಿಂದ ಓಡಿಸುವ ಶಕ್ತಿ ಹೊಂದಿದೆ ಹಾಗೂ ಪಚನಾಂಗಗಳ ಕಾರ್ಯಕ್ಷಮತೆಯೂ ವೃದ್ಧಿಸುವುದು,  ಮಜ್ಜಿಗೆ ಎರೆದು ಕುಡಿದು ಲಸ್ಸೀ ಅನ್ನಿ,  ಹಾಲು ಎರೆದು ಕುಡಿದು ಮಿಲ್ಕ್ ಶೇಕ್ ಅನ್ನಿ,  ಒಟ್ಟಿನಲ್ಲಿ ಕುಡಿಯಿರಿ.   ಬಾಯಿರುಚಿಯನ್ನೂ ಹೆಚ್ಚಿಸುವ ಈ ಹಣ್ಣು ಅಡುಗೆಮನೆಗೆ ಬಂತೆಂದರೆ ಅನ್ನದ ತಪಲೆ ಖಾಲಿಯಾಯ್ತೇಕೆ ಎಂದು ಬಾಯ್ಬಿಡದಿರಿ.

ಊಟದ ರುಚಿ ಹೆಚ್ಚಿಸುವ ಮಾವಿನ ಖಾದ್ಯಗಳನ್ನು ಬರೆಯ ಹೊರಟರೆ ಒಂದು ಗ್ರಂಥವೇ ಸಿದ್ಧವಾದೀತು.   
ಮಾವಿನ ಕಾಯಿ ಪಚ್ಚಡಿ:
ಅವಶ್ಯವಿದ್ಷಷ್ಟು ತೆಂಗಿನ ತುರಿ 
ಮಾವಿನಕಾಯಿ ಹೋಳುಗಳು, ಸಿಪ್ಪೆ ತೆಗೆದು ತುರಿದರೆ ಉತ್ತಮ.
ಹುರಿದ ಕಡ್ಲೇಬೇಳೆ
ಒಣಮೆಣಸು ಅಥವಾ ಹಸಿಮೆಣಸು
ರುಚಿಗೆ ಉಪ್ಪು
ಕರಿಬೇವು ಹಾಗೂ ಒಗ್ಗರಣೆ ಸಾಮಗ್ರಿ
ಎಲ್ಲವನ್ನೂ ನೀರು ಹಾಕದೆ ಅರೆದು ಒಗ್ಗರಣೆ ಕೂಡಿ.   ಈ ಥರದ ಪಚ್ಚಡಿಗೆ ನೆಕ್ಕರೆ ಮಾವಿನಕಾಯಿ ಚೆನ್ನಾಗಿರುತ್ತದೆ. ನೆಕ್ಕರೆ ಮಾವಿನಕಾಯಿಗೆ ಹೊಳೆಮಾವು ಅಂತಲೂ ಹೆಸರಿದೆ.   ಸುವಾಸನಾಭರಿತವಾದ ಈ ಪಚ್ಚಡಿ ಒಂದಿದ್ದರೆ ಸಾಕು,  ಉಪ್ಪಿನಕಾಯಿ ಬೇಕಾಗುವುದೇ ಇಲ್ಲ.  

ಶಿರಾ/ಕೇಸರಿಬಾತ್ ಎಂಬ ಸಿಹಿ ಭಕ್ಷ್ಯ ಎಲ್ಲರಿಗೂ ತಿಂದು ಗೊತ್ತು.  ಮಾವಿನಹಣ್ಣಿನ ಕೇಸರಿಬಾತ್ ಅತಿ ವೇಗವಾಗಿ ಈ ಸಮಯದಲ್ಲಿ ಮಾಡಬಹುದು,   ಸಂಜೆಗೊಂದು ತಿನಿಸು ದೊರೆಯಿತು ಅನ್ನಿ.

ಚಿರೋಟಿ ರವೆ ಒಂದು ಕಪ್
ಮಾವಿನಹಣ್ಣಿನ ರಸ 2 ಕಪ್
ಸಕ್ಕರೆ ಒಂದು ಕಪ್
ಚಿಟಿಕೆ ಉಪ್ಪು
ತುಪ್ಪ 4 ಚಮಚ

ಚಿರೋಟಿ ರವೆಯನ್ನು ತುಪ್ಪದಲ್ಲಿ ಪರಿಮಳ ಬರುವಷ್ಟು ಹುರಿಯಬೇಕು.   ದಪ್ಪ ತಳದ ಬಾಣಲೆ ಅವಶ್ಯ.
ಹುರಿದಾಯಿತೇ,  ಮಾವಿನ ರಸ ಎರೆದು ಬೇಯಿಸಿ.
ಬೆಂದಿತೇ,  ಸಕ್ಕರೆ ಸುರುವಿರಿ,  ಚಿಟಿಕೆ ಉಪ್ಪು ಬೀಳಲಿ.
2 ಚಮಚ ತುಪ್ಪ ಎರೆದು ಸಕ್ಕರೆ ಕರಗಿ ರವೆಯೊಂದಿಗೆ ಕೂಡಿಕೊಳ್ಳುವ ತನಕ ಸೌಟಾಡಿಸಿ.
ದ್ರಾಕ್ಷಿ,  ಗೋಡಂಬಿ ಬೇಕಿದ್ದರೆ ಹಾಕಬಹುದು.





ಮಾವಿನ ಹಣ್ಣಿನ ರಸಂ
10-12 ಮಾವಿನ ಹಣ್ಣುಗಳು,   ಸುಲಿದು ಸಿಪ್ಪೆಯಿಂದಲೂ ರಸ ತೆಗೆಯಿರಿ.
ಸಿಹಿ ಬೇಕಿದ್ದಷ್ಟು ಬೆಲ್ಲ
ರುಚಿಗೆ ತಕ್ಕಷ್ಟು ಉಪ್ಪು
ಮಸಾಲೆ ಸಾಹಿತ್ಯ:
2 ಚಮಚ ಕಡ್ಲೇಬೇಳೆ
2 ಚಮಚ ಕೊತ್ತಂಬರಿ
2 ಚಮಚ ಎಳ್ಳು
1 ಚಮಚ ಜೀರಿಗೆ
ಇಂಗು,  2-3 ಒಣಮೆಣಸು
ತುಸು ಎಣ್ಣೆಯಲ್ಲಿ ಘಮ್ ಎಂಬಂತೆ ಹುರಿದುಕೊಳ್ಳಿ,   ನುಣ್ಣಗೆ ಹುಡಿ ಮಾಡಿಟ್ಕೊಳ್ಳಿ.
ಮಾವಿನ ಹಣ್ಣುಗಳನ್ನು  ಸಿಪ್ಪೆಯ ರಸ ಸಹಿತವಾಗಿ ಬೆಲ್ಲ, ಉಪ್ಪು ಸೇರಿಸಿ ಕುದಿಸಿ.
ಒಂದು ಕುದಿ ಬಂದರೆ ಸಾಕು,  ಮಾಡಿಟ್ಟ ಮಸಾಲೆ ಹುಡಿ ಹಾಕಿ,  ಸೌಟಿನಲ್ಲಿ ತಿರುವಿ ಅವಶ್ಯವಿದ್ದರೆ ನೀರು ಎರೆಯಿರಿ.
ಕರಿಬೇವಿನ ಒಗ್ಗರಣೆ ಕೊಡಿ,  ಈ ರಸಂ ಒಂದೆರಡು ದಿನ ಇಟ್ಟುಕೊಳ್ಳಬಹುದು.
ಮಸಾಲೆ ಅರೆಯುವಾಗ ತೆಂಗಿನ ತುರಿಯೊಂದಿಗೆ ಅರೆದಿರೋ,  ಇದು ಮಾವಿನ ಮೆಣಸ್ಕಾಯಿ ಅನ್ನಿಸಿಕೊಳ್ಳುತ್ತದೆ.   ಒಂಥರಾ ಬದಲಾವಣೆಗಾಗಿ ಕಾಯಿ ತುರಿ ಹಾಕದೇ ರಸಂ ಎಂದು ಹೆಸರು ಕೊಟ್ಟಿದ್ದೇನೆ.




ಒಮ್ಮೆ ಏನಾಯ್ತೂಂದ್ರೆ ಚಿಕ್ಕಮ್ಮ ಮುಂಬೈಯಿಂದ ಊರಿಗೆ ಬಂದರು.   ಅವರಿಗೆ ನಮ್ಮ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ,  ಹೊಸ ಮದುಮಕ್ಕಳನ್ನು ಆಶೀರ್ವದಿಸಲು ನಮ್ಮ ಮನೆಗೇ ಬಂದರು.    ಆಗ ಕಾಟ್ಟು ಮಾವಿನಹಣ್ಣುಗಳ ಕಾಲ.   ನಾನೂ ನನಗೆ ತಿಳಿದಂತೆ ಮಾವಿನಹಣ್ಣುಗಳ ಷಡ್ರಸೋಪಚಾರದಿಂದ ಸತ್ಕರಿಸಿದೆ.   ಹಣ್ಣುಗಳ ಸಾಸಿವೆಗೆ ತೆಂಗಿನಕಾಯಿ ಅರೆದೆ,   ಮಾವಿನಹಣ್ಣುಗಳ ರಸಾಯನಕ್ಕಾಗಿ ತೆಂಗಿನಕಾಯಿ ಹಾಲು ತೆಗೆದೆ. ಅಡುಗೆಯೇನೂ ತಿಳಿದಿರದಿದ್ದ ನನ್ನ ನಳಪಾಕದಿಂದ ಸುಪ್ರೀತರಾದ ಚಿಕ್ಕಮ್ಮ ಮಾವಿನಹಣ್ಣಿನ ಹೊಸರುಚಿಯೊಂದನ್ನು ಹೇಳಿಕೊಟ್ಟರು.

" ನಮ್ಮ ಮುಂಬೈಯಲ್ಲಿ ಹೀಗೆ ಹಣ್ಣಿನ ರಸ ತೆಗೆದು,  ಸಕ್ಕರೆ ಹಾಕಿ ಹಾಲು ಎರೆದ್ರೆ ಆಗ್ಹೋಯ್ತು ಆಮ್ರಸ್ "
" ಹೌದಾ,   ಅದನ್ನು ಸಂಜೆ ಮಾಡುವ ಹಾಗಿದ್ರೆ "
" ಇಲ್ಲಿನ ಹಾಗೆ ತೆಂಗಿನಕಾಯಿ ಹಾಕಿ ಅಲ್ಲಿ ಮಾಡಲಿಕ್ಕಾಗುವುದಿಲ್ಲ,  ಅಷ್ಟು ರೇಟ್ ತೆಂಗಿನಕಾಯಿಗೆ ಗೊತ್ತಾ "
" ಓ,  ಹಾಗೋ,  ನಮ್ಮ ಕೊದಿಲ್ ಮೇಲಾರ ಮಾಡುವುದು ಕಷ್ಟವೇ ...."
" ಅದೆಲ್ಲ ಮಾಡುವ ಹಾಗೇ ಇಲ್ಲ. ಏನಿದ್ರೂ ತೊಗರಿಬೇಳೆ ಬೇಯಿಸಿ,  ತರಕಾರಿ ಹಾಕಿ ಒಂದಿಷ್ಟು ಸಾಂಬಾರ್ ಹುಡಿ ಹಾಕೂದು ಮತ್ತೇನಿಲ್ಲ "

     <><><><><><>

  ಬಾಳೆಲೆ ಮೇಲೆ  " ವಿವಾಹ ಭೋಜನವಿದು.... ವಿಚಿತ್ರ ಭಕ್ಷ್ಯಗಳಿವು....."  ಎಂಬಂತೆ ವಿಧವಿಧವಾದ ವ್ಯಂಜನಗಳು ಬಂದವು.   ಭೋಜನವನ್ನು ಉಣ್ಣಲಿಕ್ಕಾಗಿ ನೆಲದ ಪಂಕ್ತಿಯಲ್ಲಿ ಕುಳಿತಿದ್ದೆ,  ಆಗಲೂ ಮಾವಿನಹಣ್ಣುಗಳ ಕಾಲ,   ಮಾವಿನ ಸಾಸಮೆ ಬಂದಿತು.   ಬಡಿಸುವವರು ಎಲ್ಲರ ಬಾಳೆಲೆಗೂ ಮಾವಿನಹಣ್ಣು ಸಿಗುವಂತೆ ಹಾಕುತ್ತಾ ಹೋದರು.   ನನ್ನ ಪಕ್ಕದಲ್ಲಿ ಕುಳಿತಿದ್ದ ತಂಗಿ ಗಾಯತ್ರಿ ಅಂದಳು  " ಎದುರು ಕಡೆ ಕೂತಿದಾರಲ್ಲ ಆ ಹುಡ್ಗೀರು,  ಮಾವಿನಹಣ್ಣನ್ನು ಪಕ್ಕಕ್ಕೆ ತಳ್ಳಿದ್ದು ನೋಡಕ್ಕಾ "

" ಹೌದಲ್ಲ,  ಅವರಿಗೆ ಹಣ್ಣು ತಿನ್ನ ಬೇಡ ಅಂತ ಹೇಳಿದವರು ಯಾರು ?"  ನನಗೋ ಅಚ್ಚರಿ.

" ಈಗೆಲ್ಲ ಹಾಗೇ,  ಗೊರಟು ಚೀಪಲಿಕ್ಕೆ ಗೊತ್ತಿಲ್ಲ,   ಅವರ ಪ್ರೆಸ್ಟೀಜ್ ಹಾಳಾಗ್ತದೆ..." 

ಇಷ್ಟು ದೊಡ್ಡ ಸಮಾರಂಭದಲ್ಲಿ ಮಾವಿನ ಸಾಸಿವೆಗೆ ಏನಿಲ್ಲಾಂದ್ರೂ ಒಂದ್ ಸಾವಿರ ಹಣ್ಣು ಸಂಗ್ರಹ ಮಾಡಬೇಕಾಗುತ್ತದೆ,   ನೆಂಟರಿಷ್ಟರು,  ಆಪ್ತರೇ ಸಂಗ್ರಹಿಸಿ ತಂದಿರುತ್ತಾರೆ.   ಅದಕ್ಕೆ ಕಿಲೋಗಟ್ಟಲೆ ಬೆಲ್ಲ ಸುರಿದು,  ತೆಂಗಿನಕಾಯಿ ಎಷ್ಟು ಹಾಕಿರ್ತಾರೋ,   ಪಾಕಭಟರ ಶ್ರಮ,  ಇದನ್ನೆಲ್ಲ ನೆನೆದೇ   " ಅಯ್ಯೋ ದೇವ್ರೇ ,  ಹೀಗೂ ಉಂಟೇ... " ಎಂಬ ಉದ್ಗಾರ ನನ್ನಿಂದ ಬಂದಿತು.

ಬರೆಯುತ್ತಾ ಇದ್ದ ಹಾಗೆ ಮಳೆ ಬರುವ ಲಕ್ಷಣ ಕಾಣಿಸ್ತಾ ಇದೆ.   ಟೆರೇಸ್ ಮೇಲೆ ಒಣಗಲಿಟ್ಟ ಮಾಂಬಳ ಮಳೆ ಹನಿ ಬೀಳುವ ಮೊದಲೇ ಒಳಗಿಡಬೇಕು.   ಮತ್ತೊಂದು ವಿಷಯ,  ಮಳೆ ಬಂದ ಮೇಲೆ ಈ ಕಾಟ್ಟು ಮಾವಿನಹಣ್ಣುಗಳ ಮೇಲೆ ಮಮಕಾರ ಕಡಿಮೆಯಾಗುವ ಸಮಯ ಬಂತೆಂದೇ ತಿಳಿಯಿರಿ.  ಅದೇನಪ್ಪಾ ಅಂದ್ರೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಬೀಸಿ ಬರುವ ಗಾಳಿಗೆ ಈ ದೈತ್ಯಗಾತ್ರದ ಮರಗಳ ಹಣ್ಣುಗಳು ಉದುರಿಯೇ ಹೋಗುತ್ತವೆ.   ತರಗೆಲೆ ಮೇಲೆ ಚದುರಿ ಬಿದ್ದ ಹಣ್ಣುಗಳು ಹುಳ ಹುಪ್ಪಟಿಗಳಿಗೆ ಆಹಾರವಾಗಿ ಕೊಳೆತುಹೋಗುವ ಕಾಲ.   ಮಳೆ ನಿಂತ ಮೇಲೆ ಮರದಡಿಗೆ ಬಂದವರಿಗೆ ಈ ದಾರುಣ ದೃಶ್ಯ ವೀಕ್ಷಣೆಗೆ ಲಭ್ಯ.



ಎಂದಿನಂತೆ   " ರಜಾ ಇದೆ "  ಅನ್ನುತ್ತಾ ಮಗಳು ಮನೆಗೆ ಬಂದಳು.   ಅವಳಂತೂ ತಾಜಾ ಹಣ್ಣನ್ನು ಮಾತ್ರ ತಿನ್ನುವವಳು.   ಈ ಬಾರಿ ಮಾಂಬಳ ಅವಳ ಕಣ್ಣಿಗೆ ಬಿದ್ದಿತು.   " ಮನೆಯಲ್ಲಿ ತಿನ್ನೋರು ಯಾರೂ ಇಲ್ಲ ನೋಡು,  ಹೆಕ್ಕಿ ತಂದ ಹಣ್ಣನ್ನು ಮಾಂಬಳ ಮಾಡದೇ ಬಿಸಾಡೋದಿಕ್ಕಾಗುತ್ತಾ... ಬೇಕಿದ್ದರೆ ತಿನ್ನು "  ಅಂದೆ.

" ಒಂದು ತುಂಡು ಕೊಡು ತಿಂತೇನೆ "

" ಪೀಸ್ ಮಾಡ್ಬೇಕಿದ್ರೆ ಪೀಸಕತ್ತಿ ತಾ "

ಚಾಕು ಬಂದಿತು,  ತಟ್ಟೆಯಲ್ಲಿ ಬಟ್ಟೆಯ ಮೇಲೆ ಒಣಗಿದ್ದ ಮಾಂಬಳವನ್ನು ಕತ್ತಿಯ ತುದಿಯಿಂದ ಗೆರೆ ಹಾಕಿ ಎಬ್ಬಿಸಿ ತುಂಡುಗಳಾಯಿತು.   ಅವಳೋ ಒಂದು ಚಿಕ್ಕ ತುಂಡು ತಿಂದಳು.   " ಹುಳಿ ಹುಳಿ..." ಅಂದಳು.

" ಮಾಂಬಳ ತಿನ್ನುವ ಸಮಯ ಈಗ ಅಲ್ಲ,    ಮಾವಿನಹಣ್ಣು ಮುಗಿಯಬೇಕು,   ಮಳೆಗಾಲ ಪ್ರಾರಂಭ ಆಗಬೇಕು..."  ಅವಳ ಅಪ್ಪ ವಿವರಣೆ ಕೊಟ್ಟರು.




ಕಾಟ್ಟು ಮಾವಿನಹಣ್ಣುಗಳ ಕಾಲ ಮುಗಿಯುತ್ತ ಬಂದಿರಲು,   ಮಗಳೂ ಮನೆಯಲ್ಲಿದ್ದಾಳಲ್ಲ,  ಒಂದು ರಸಾಯನ ಮಾಡಿಯೇ ಬಿಡೋಣ.
ರಸಾಯನಕ್ಕೆ ಮಾವಿನಹಣ್ಣಿನ ಸಿಪ್ಪೆ ತೆಳ್ಳಗೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿ ಇಟ್ಟುಕೊಳ್ಳಿ.   ಸಿಪ್ಪೆ ತೆಗೆದ ಹಣ್ಣಿನಿಂದ ಚೂರಿಯಲ್ಲಿ ಗೀರು ಹಾಕಿ ಪುಟ್ಟ ಪುಟ್ಟ ಹೋಳು ಮಾಡುವುದೂ ಒಂದು ಕಲೆಗಾರಿಕೆ.   ನುರಿತವರನ್ನು ಕೇಳಿ,  ನೋಡಿ ಕಲಿಯಿರಿ.  ಕೇವಲ ಸಿಪ್ಪೆಗೊರಟಿನ ಹಣ್ಣು ಆಗದು,  ದೊಡ್ಡ ಗಾತ್ರದ ಹಣ್ಣುಗಳು ಯೋಗ್ಯ.  ಗೋಮಾವು ಎಂದು ಕರೆಯಲ್ಪಡುವ ಹಣ್ಣೂ ಆದೀತು.  ಹಣ್ಣುಗಳು ಸಿಹಿಯಾಗಿಯೂ ಇರಬೇಕು.
ತೆಂಗಿನಕಾಯಿ ಹಾಲು ತೆಗೆಯಿರಿ.
ಸಿಹಿಗೆ ಸಕ್ಕರೆ.
ತುಸು ಎಳ್ಳು,  ಹುರಿದು ಜಜ್ಜಿಕೊಳ್ಳಿ.
ಎಲ್ಲವನ್ನೂ  ತಪಲೆಗೆ ಸುರಿದು ಸೌಟಾಡಿಸಿ.  
ಪುಟ್ಟ ತಟ್ಟೆಗೆರೆದು ಊಟದ ಕೊನೆಯಲ್ಲಿ ಕುಡಿಯಿರಿ.



Posted via DraftCraft app

ಟಿಪ್ಪಣಿ:   ಈ ಬರಹ ದಿನಾಂಕ 15,  ಜೂನ್,  2014ರಂದು ಮುಂದುವರಿದದ್ದು...


ಮಾವಿನ ಹಣ್ಣುಗಳ ಕಾಲ ಮುಗಿಯಿತೇ,  ಛೆ,ಛೆ... ಇದೆ ಮುಗಿದಿಲ್ಲ.   ಹತ್ತು ಹಲವಾರು ಮಾಮರಗಳಿರುವಲ್ಲಿ ಹಲಕೆಲವು ಮರಗಳಲ್ಲಿ ಮಳೆ ಬಂದ ಮೇಲೆ ಹಣ್ಣು ಬೀಳಲು ಆರಂಭ.   ಮಳೆ ಬಂದ ನಂತರ ಹುಳಿ ಹಣ್ಣು ಸಿಹಿಯಾಗುವುದೂ ಇದೆ.   ಆದರೆ ಹಸಿ ಹಣ್ಣುಗಳನ್ನು ತಿನ್ನಲು ಧೈರ್ಯ ಬರುವುದಿಲ್ಲ,   ಏನಾದರೂ ರೋಗರುಜಿನಗಳಿಗೆ ದಾರಿ ಮಾಡಿಕೊಟ್ಟಂತಾದೀತೆಂಬ ಭಯ.   ಇದಕ್ಕೂ ನಮ್ಮ ಹಿರಿಯರು ಸೂತ್ರವೊಂದನ್ನು ಮಾಡಿಟ್ಕೊಂಡಿದ್ದಾರೆ,   ' ಬೇಯಿಸಿ ತಿಂದರೆ ಭಯವಿಲ್ಲ '   ಈ ನಿಯಮ ಪ್ರಕಾರ ನಮ್ಮ ಅಡುಗೆ ಮುಂದುವರಿಸೋಣ.

ಮಾವಿನಹಣ್ಣಿನ ಬೋಳು ಹುಳಿ:

.ಚೆನ್ನಾಗಿರುವ ಮಾವಿನಹಣ್ಣುಗಳನ್ನು ಆಯ್ದು,  ತೊಳೆದು,  ತೊಟ್ಟು ತೆಗೆದು ಕತ್ತಿಯಲ್ಲಿ ಗೀರು ಹಾಕಿ ನೋಡಿಕೊಳ್ಳಿ,  ಒಳಗೆ ಹುಳುಹುಪ್ಪಟಿಗಳಿರಬಾರದಲ್ಲ!   ಹಣ್ಣುಗಳು ಮುಳುಗುವಷ್ಟು ನೀರೆರೆದು,  ಉಪ್ಪು ಹಾಕಿ ಬೇಯಿಸಿ.   ಹಸಿಮೆಣಸು ಹಾಕಬಹುದು,   ಮೆಣಸಿನ ಹುಡಿಯೂ ಆದೀತು,  ಒಗ್ಗರಣೆಯ ಮೆಣಸು ಸಾಕು.  ಬೆಲ್ಲ ಹಾಕೂದೇನೂ ಬೇಡ.   ಮಳೆ ಬಂದ ಮೇಲೆ ಮಾಂಬಳ ಎರೆಯುವಂತಿಲ್ಲ,  ಹಸಿ ಹಣ್ಣು ತಿನ್ನುವಂತಿಲ್ಲ.   ಗಂಜಿಯೂಟಕ್ಕೆ ಈ ಬೋಳು ಹುಳಿ ಸೊಗಸಾಗಿರುತ್ತದೆ.




ಮಾವಿನಹಣ್ಣಿನ ಕೊದಿಲ್:
ಒಂದು ಚಿಕ್ಕ ಹಣ್ಣು ಸೌತೆಕಾಯಿ
ಮೂರು ಮಾವಿನಹಣ್ಣು
ತರಕಾರಿ ಹಾಗೂ ಮಾವಿನಹಣ್ಣುಗಳನ್ನು ಉಪ್ಪು ಹಾಕಿ ಬೇಯಿಸಿ.

ಒಂದು ಕಡಿ ತೆಂಗಿನತುರಿ
4 ಒಣಮೆಣಸು
2 ಚಮಚ ಕೊತ್ತಂಬರಿ
1 ಚಮಚ ಉದ್ದಿನಬೇಳೆ
ಜೀರಿಗೆ, ಮೆಂತೆ,  ಇಂಗು ಸ್ವಲ್ಪ

ಎಣ್ಣೆಪಸೆಯಲ್ಲಿ ಹುರಿಯಿರಿ,  ತೆಂಗಿನತುರಿಯೊಂದಿಗೆ ಅರೆಯಿರಿ.  ಬೆಂದ ತರಕಾರಿಗೆ ಕೂಡಿಸಿ,  ಅವಶ್ಯವಿದ್ದಂತೆ ನೀರು,  ಬೇಕಿದ್ದರೆ ಬೆಲ್ಲ ಹಾಕಬಹುದು,  ಕುದಿಸಿ ಬೇವಿನೆಸಳಿನ ಒಗ್ಗರಣೆ ಇರಲಿ.   ಈ ಕೊದಿಲ್ ಅಥವಾ ಕೊದ್ದೆಲ್ ಗೆ ತೊಗರಿಬೇಳೆ ಹಾಕಬೇಕಾಗಿಲ್ಲ.   ಉಪ್ಪಿನಲ್ಲಿ ಹಾಕಿಟ್ಟ ಮಾವಿನಕಾಯಿಗಳನ್ನೂ ಇಂತಹ ಅಡುಗೆಯಲ್ಲಿ ಬಳಸಬಹುದಾಗಿದೆ.




0 comments:

Post a Comment