Pages

Ads 468x60px

Wednesday, 16 August 2017

ಬೇಳೆಚಕ್ಕೆ ಬೆಂದಿನೀರುಳ್ಳಿ ಸಾರು,  ಹರಿವೆ ಪಲ್ಯ ಊಟದ ಟೇಬಲ್ ಮೇಲೆ ಇಟ್ಟು ನಮ್ಮವರ ಆಗಮನಕ್ಕಾಗಿ ಕಾಯುತ್ತಾ ಫೇಸ್ ಬುಕ್ ಓದು ಮುಂದುವರಿದಿತ್ತು.


ಊಟಕ್ಕೆ ಕುಳಿತವರೇ  " ಹಾಗಿದ್ರೆ ತೋಟದಲ್ಲಿ ಹಲಸಿನ ಗುಜ್ಜೆ ಉಂಟೂಂತ ಗೊತ್ತಿಲ್ವಾ.. "

" ಗುಜ್ಜೆ ಎಷ್ಟು ಬೇಕಾದರೂ ಇರಲಿ,  ತಂದು ಕೊಟ್ಟರಾಗುತ್ತಿತ್ತು.. "

" ಚೆನ್ನಪ್ಪ ಇರೂವಾಗ ಹೇಳೂದಲ್ವ.. "

" ಅವನು ಬಾರದೇ ದಿನ ಎರಡಾಯ್ತು,  ನಾಳೆ ಹೇಗೂ ಭಾನುವಾರ,  ಬಂದ ಹಾಗೇ..  ನೀವೇ ಕೊಯ್ದು ತನ್ನಿ. "


ಎರಡು ಹಲಸಿನ ಗುಜ್ಜೆಗಳು ಬಂದುವು.   ಎಳೆಯ ಕಾಯಿ ಆದರೂ ಘನ ಗಾತ್ರದ ಗುಜ್ಜೆಯನ್ನು ಎರಡು ಹೋಳು ಮಾಡಲು ಪೂರ್ವ ಸಿದ್ಧತೆಯೂ ಇರಬೇಕು.  ಮಯಣ ಒಸರುವ ಈ ಫಲಕ್ಕೆ ಇನ್ನಿತರ ತರಕಾರಿಗಳಂತೆ ಅಡುಗೆಮನೆಯೊಳಗೆ  ಬರಲವಕಾಶವಿಲ್ಲ.  ಇದರ ಕಾರ್ಯಕ್ಷೇತ್ರವೇನಿದ್ದರೂ ಮನೆಯ ಹಿತ್ತಲಿನ ಅಂಗಳ.  ನಿರುಪಯುಕ್ತ ಗೋಣಿತಾಟು ಇಲ್ಲವೇ ಪ್ಲಾಸ್ಟಿಕ್ ಚೀಲಗಳನ್ನು ನೆಲದಲ್ಲಿ ಹಾಕಿಕೊಂಡಲ್ಲಿ ಅಂಗಳದ ಕಸಕಡ್ಡಿಗಳನ್ನು ನಿವಾರಿಸಿಕೊಳ್ಳಲು ಸಾಧ್ಯ .   ಹರಿತವಾದ ಆಯುಧದಿಂದ ಹೋಳು ಆಯ್ತು.   ಒಂದು ಹೋಳು ಇಂದಿನ ಪಲ್ಯಕ್ಕಿರಲಿ,  ಇನ್ನೊಂದು ತುಂಡು ನಾಳೆಗೆ ಗುಜ್ಜೆ ಬೆಂದಿ ಆಗಲಿದೆ.


ಹೋಳಾದ ಗುಜ್ಜೆಯಿಂದ ಮಯಣ ಸುರಿಯುತ್ತಿದೆಯಲ್ಲ!   ಮಯಣವನ್ನು ಬಿದಿರಿನ ಪುಟ್ಟ ಕೋಲಿನಲ್ಲಿ ಒರೆಸಿ ತೆಗೆಯುವುದು,   ಹರಿಯುವ ನೀರಿನಲ್ಲಿ ತೊಳೆದೂ ಮಯಣ ತೆಗೆಯಬಹುದಾಗಿದೆ.  ನಾವು ಹಳ್ಳಿಯ ನಿವಾಸಿಗಳು ಹಲಸಿನ ಮಯಣವನ್ನೂ ಸಂಗ್ರಹಿಸಿ ಇಡುವ ರೂಢಿ ಇಟ್ಟುಕೊಂಡಿದ್ದೇವೆ.   ಹೇಗೇ?  


ಮಯಣವನ್ನು ಕೋಲಿನಲ್ಲಿ ಒರೆಸಿ ತೆಗೆದಾಯ್ತಲ್ಲ,  ಅದನ್ನು ಕಸದ ತೊಟ್ಟಿಗೆ ಬಿಸಾಡುವುದಲ್ಲ,  ' ಹಲಸಿನ ಕಾಯಿ ಕಾಳಗ ' ವೆಂದು ಮೆಟ್ಟುಕತ್ತಿ ಬುಡದಲ್ಲಿ ಕುಳ್ಳಿರುವಾಗ ಅದೇ ಕೋಲಿನಿಂದ ಮಯಣ ತೆಗೆದು ಮಯಣದ ಕೋಲನ್ನು ಜಾಗ್ರತೆಯಿಂದ ತೆಗೆದಿರಿಸುವುದು.   ಇದರ ಉಪಯೋಗ ಏನು?


ತೂತು ಬಿದ್ದ ಹಿತ್ತಾಳೆಯ ಕೊಡ ಇತ್ಯಾದಿ ದಿನಬಳಕೆಯ ಪಾತ್ರೆಪರಡಿಗಳ ತೂತನ್ನು ಈ ಮಯಣ ಸಮರ್ಥವಾಗಿ ಮುಚ್ಚಿ ಬಿಡುತ್ತದೆ.   ಮಯಣದ ಮುದ್ದೆಯನ್ನು ಕಟ್ಟಿಗೆಯ ಒಲೆಯ ಬಿಸಿ ತಾಗುವಂತೆ ಇಟ್ಟಾಗ ಮಯಣ ಕರಗಿ ಜಿನುಗಲು ಪ್ರಾರಂಭವಾದಾಗ ತೂತಿನ ಜಾಗಕ್ಕೆ ಲೇಪಿಸಿದರಾಯಿತು,  ಬಹಳ ಸುಲಭವಾದ ಈ ಕಾಯಕವನ್ನು ನನ್ನ ಕೆಲಸಗಿತ್ತಿ ಮಾಡಿ ಕೊಡುತ್ತಿದ್ದಳು.    ಆದರೆ ಒಲೆಯಲ್ಲಿ ಇಡುವ ತಪಲೆಗಳನ್ನು ಈ ಥರ ರಿಪೇರಿ ಮಾಡಿಯೂ ಪ್ರಯೋಜನವಿಲ್ಲ,  ಬಿಸಿ ತಾಕಿದಾಗ ಮಯಣ ಕರಗುವುದಿದೆಯಲ್ಲ!   ಇವೆಲ್ಲ ಹಳೆಯ ನೆನಪುಗಳು,  ಈಗಿನ ಕಾಲಕ್ಕೆ ಹೇಳಿದ್ದಲ್ಲ ಬಿಡಿ.


  ಗುಜ್ಜೆಯ ನಿರುಪಯುಕ್ತ ಭಾಗ ಅಂದ್ರೆ ಸಿಪ್ಪೆ,  ಮಯಣ ಒಸರುವ ಗೂಂಜುಗಳನ್ನು ಕತ್ತರಿಸಿ ಗೊಬ್ಬರದ ಗುಂಡಿಗೆ ಎಸೆಯಿರಿ.   ಉಳಿದ ತುಂಡುಗಳನ್ನು ತರಕಾರಿಯಂತೆ ಚಿಕ್ಕದಾಗಿ ಹಚ್ಚಿಕೊಳ್ಳಿ.  ಹ್ಞಾ,  ಕೈಗಳಿಗೆ ತೆಂಗಿನೆಣ್ಣೆ ಸವರಿಕೊಂಡಿದ್ದೀರಾ ತಾನೇ?  ನೀರು ತುಬಿದ ತಪಲೆಯೊಳಗೆ ತುಂಬಿಸಿ ಮನೆಯೊಳಗೆ ನಡೆಯಿರಿ.   ಇಷ್ಟೂ ವಿಧಿವಿಧಾನಗಳನ್ನು ನಾವು ಮನೆಯ ಹೊರಾಂಗಣದಲ್ಲಿ ಮಾಡಿರುತ್ತೇವೆ ಎಂದು ನೆನಪಿರಲಿ.


ಒಲೆಯಲ್ಲಿ ಗುಜ್ಜೆ ಬೇಯುವುದು ನಿಧಾನಗತಿಯಲ್ಲಿ,   ಪ್ರೆಶರ್ ಕುಕ್ಕರ್ ಯೋಗ್ಯ.   ರುಚಿಗೆ ಉಪ್ಪು ಹಾಗೂ ಬೇಯಲು ಅವಶ್ಯವಿರುವ ನೀರು ಕೂಡಿಕೊಂಡು ಬೇಯಲಿ.  ಬೇಯುವಾಗ ಎರಡು ಚಮಚ ತೆಂಗಿನೆಣ್ಣೆ ಎರೆದಿರಾದರೆ ಕುಕ್ಕರಿನ ಒಳಭಾಗಕ್ಕೆ ಮಯಣದ ಅಂಟು ಹಿಡಿಯುವುದಿಲ್ಲ.   ಎರಡು ಸೀಟಿ ಹಾಕಿದಾಗ ಒಲೆಯಿಂದ ಇಳಿಸಿ.


ಬೆಂದಿದೆ,  ಬಾಣಲೆಯಲ್ಲಿ ಒಗ್ಗರಣೆಗಿಡಿ.  ಏನೇನು?

ತೆಂಗಿನೆಣ್ಣೆ,  ಸಾಸಿವೆ,  ಉದ್ದಿನಬೇಳೆ,  ಒಣಮೆಣಸು,  ಚಿಟಿಕೆ ಅರಸಿಣ,  ಕರಿಬೇವಿನೆಸಳು.


 ಬೆಂದಿರುವ ಗುಜ್ಜೆಯ ನೀರು ಬಸಿದು ಸಾಸಿವೆ ಸಿಡಿದಾಗ ಹಾಕುವುದು,  ಖಾರ ಇಷ್ಟಪಡುವವರು ಮೆಣಸಿನ ಹುಡಿಯನ್ನು ಹಾಕಿಕೊಳ್ಳಿ.   ನೀರಿನಂಶವೆಲ್ಲ ಬತ್ತುವಷ್ಟು ಹೊತ್ತು ಒಲೆಯ ಮೇಲಿರಲಿ.  ಕಾಯಿತುರಿಯ ಅಲಂಕರಣವನ್ನು ಗುಜ್ಜೆ ಬಯಸದು,  ಕಾಯಿತುರಿ ಇದ್ದರೆ ಹಾಕಲಡ್ಡಿಯಿಲ್ಲ.   ಸಂಬಾರ ಮಸಾಲೆಗಳಿಂದ ಕೂಡಿದ ತೆಂಗಿನಕಾಯಿ ಅರಪ್ಪು ಮಾಡಿಕೊಂಡು ರುಚಿಯಲ್ಲಿ ವೈವಿಧ್ಯತೆಯನ್ನು ತರಲೂ ಇಲ್ಲಿ ಸಾಕಷ್ಟು ಅವಕಾಶಗಳಿವೆ.   ಊಟದೊಂದಿಗೂ ಸಂಜೆಯ ಚಹಾದೊಂದಿಗೂ ಸೇವಿಸಲು ಗುಜ್ಜೆ ಪಲ್ಯ ಯೋಗ್ಯವಾಗಿದೆ.  ನಾರುಯುಕ್ತವಾದ ಗುಜ್ಜೆಪಲ್ಯ ಎಲ್ಲ ವಯೋಮಾನದವರಿಗೂ ಸೂಕ್ತ ಆಹಾರ.   ಹಸಿವಿನ ಬಾಧೆ ಗೋಚರಿಸದು,  ಪ್ರಾಯಸ್ಥರಿಗೆ ಮಲಬದ್ಧತೆಯ ಸಮಸ್ಯೆಯೂ ಇಲ್ಲವಾಗುವುದು.


ಗುಜ್ಜೆ ಮುದ್ದೆಹುಳಿ


ಹೋಳು ಮಾಡಿದ್ದಾಯಿತು,   ಚಿಕ್ಕ ಗಾತ್ರವೇನೂ ಬೇಡ,  ದೊಡ್ಡ ಹೋಳುಗಳು ಚೆನ್ನಾಗಿರುತ್ತವೆ.  ಉಪ್ಪು ಸಹಿತವಾಗಿ ಕುಕ್ಕರಿನಲ್ಲಿ ಬೇಯಿಸುವುದು.   ಹಲಸಿನ ಗುಜ್ಜೆಯ ಪದಾರ್ಥವು ತೊಗರಿಬೇಳೆ ಯಾ ಇನ್ನಿತರ ಬೇಳೆಗಳನ್ನು ಮತ್ತು ಮಸಾಲಾ ಸಾಮಗ್ರಿಗಳನ್ನು ಬಯಸದು,  ಅದೇ ಇದರ ಹೆಗ್ಗಳಿಕೆ.


ಹಾಗಿದ್ದರೆ ತೆಂಗಿನಕಾಯಿ ಅರಪ್ಪು ಹೇಗೆ?

ಅರ್ಧ ಕಡಿ ತೆಂಗಿನತುರಿ

ನಾಲ್ಕಾರು ಒಣಮೆಣಸು,  ಹುರಿಯಿರಿ.

ನೆಲ್ಲಿಕಾಯಿ ಗಾತ್ರದ ಹುಣಸೇ ಹಣ್ಣು

ತೆಂಗಿನತುರಿಯೊಂದಿಗೆ ಹುರಿದ ಒಣಮೆಣಸಿನಕಾಯಿಗಳನ್ನು ಅರೆಯಿರಿ.  ರುಚಿಕಟ್ಟಾಗಲು ಬೇಕಾದ ಹುಳಿ ಇದೆಯಲ್ಲ,  ಅರೆಯುವಾಗಲೇ ಹುಣಸೇ ಹಣ್ಣನ್ನು ಹಾಕಿಕೊಳ್ಳಬಹುದಾಗಿದೆ.   ಅರೆಯುವಾಗ ಸ್ವಲ್ಪ ನೀರು ಕೂಡಿಕೊಳ್ಳುವುದು ಉತ್ತಮ.   ಅರಪ್ಪು ಸಿದ್ಧವಾಯಿತು.   ಬೆಂದಂತಹ ಗುಜ್ಜೆಯ ಹೋಳುಗಳಿಗೆ ತೆಂಗಿನ ಅರಪ್ಪನ್ನು ಕೂಡಿ,  ಕುದಿಸುವುದು.  ರುಚಿಕರವಾಗಲು ಬೆಲ್ಲ ಕೂಡಾ ಹಾಕಬಹುದು.  ಜಜ್ಜಿದ ಬೆಳ್ಳುಳ್ಳಿ,  ಕರಿಬೇವು ಕೂಡಿದ ಒಗ್ಗರಣೆ ಬಿದ್ದೊಡನೆ ಗುಜ್ಜೆ ಮುದ್ದೆಹುಳಿ ಎಂಬ ಪದಾರ್ಥವು ತಯಾರಾಗಿದೆ.


ಇಂದು ಬೇಳೆಚಕ್ಕೆಯ ಬೆಂದಿ

ನಿನ್ನೆ ಗುಜ್ಜೆಯ ಮುದ್ದೆಹುಳಿ

ಮೊನ್ನೆ ಗುಜ್ಜೆಯ ಪಲ್ಯ

ಅಂತೂ ಇಂತೂ ದಿನವೂ

ಹಲಸಿನ ಭೋಜನ!


" ಅದೇನ್ರೀ ಬೇಳೆಚಕ್ಕ ಅಂದ್ರೆ? "


ನಮ್ಮೂರ ಪರಿಭಾಷೆಯಲ್ಲಿ ಚಕ್ಕ ಅಂದ್ರೆ ಹಲಸು ಎಂದರ್ಥ.  ವಿದೇಶೀಯರ ಆಗಮನವಾಗಿದ್ದು ನಮ್ಮ ಕರಾವಳಿಯ ಸಮುದ್ರಮಾರ್ಗದಲ್ಲಿ ಎಂಬುದು ಗೊತ್ತು ತಾನೇ,  ಇಲ್ಲಿನ ಜನರ ಬಾಯಲ್ಲಿ ನಲಿದಾಡುತ್ತಿದ್ದ  ' ಚಕ್ಕ ' ಪದವು ಅವರ ನಾಲಗೆಯಲ್ಲಿ ಜ್ಯಾಕ್ ಎಂದಾಗಿದೆ,  ಈಗಂತೂ ಜ್ಯಾಕ್ ಫ್ರುಟ್ ಸಾರ್ವತ್ರಿಕ ಪದವಾಗಿ ಬಿಟ್ಟಿದೆ!


ಇರಲಿ,  ಹಲಸಿನ ಬೇಳೆಗಳು ಪುಟ್ಟದಾಗಿ ಮೂಡಿದಂತಹ ಗುಜ್ಜೆಯು ಬೇಳೆಚಕ್ಕೆ ಯಾ ಬೇಳೆಚಕ್ಕ ಎಂದು ಹೆಸರಿಸಿಕೊಂಡಿದೆ ಹಾಗೂ ಸಾಂಬಾರು, ಗಸಿ, ಹುಳಿ,  ಪಲ್ಯ ಅಥವಾ ಇನ್ಯಾವುದೇ ಮಾದರಿಯ ಅಡುಗೆಗೂ ಸೈ ಎನ್ನಿಸಿಕೊಂಡಿದೆ.


ತೋಟದಲ್ಲಿ ಹಲಸಿನಕಾಯಿಗಳು ಇರುವಾಗ  " ಇವತ್ತೇನು ಬೆಂದಿ ಮಾಡಲೀ.. " ಎಂದು ಪರದಾಡುವ ಪ್ರಶ್ನೆಯೇ ಇಲ್ಲ.   " ಹಲಸಿನಕಾಯಿ ಉಂಟಲ್ಲ. "  ಎಂಬ ಉತ್ತರದೊಂದಿಗೆ ಹಲಸಿನ ಗುಜ್ಜೆ ಬಂದೇ ಬರುತ್ತದೆ.   ಒಂದೇ ಒಂದು ಗುಜ್ಜೆ ನಾಲ್ಕು ದಿನಗಳ ಅಡುಗೆಗೆ ಸಾಕು,  ಇನ್ನಿತರ ತರಕಾರಿಗಳಂತೆ ಶೀತಲಪೆಟ್ಟಿಗೆ ಯಾ ಫ್ರಿಜ್ ಇದಕ್ಕೆ ಬೇಕಾಗುವುದಿಲ್ಲ.  ಈ ದಿನ ಬೇಳೆಚಕ್ಕೆಯಾದಂತಹ ಹಲಸು ಬಂದಿತು.  ಹೇಗೂ ಬೇಳೆ ಮೂಡಿರುವಂತಹುದು,  ತೊಗರಿಬೇಳೆ ಬೇಯಿಸಬೇಕಾದ ಪ್ರಶ್ನೆಯೇ ಇಲ್ಲ.  ಹಲಸನ್ನು ಹೋಳು ಮಾಡಿಕೊಳ್ಳುವ ಕೌಶಲ್ಯವೊಂದು ತಿಳಿದಿದ್ದರೆ ಸಾಕು,  ನಿಮ್ಮಂತಹ ಜಾಣರು ಇನ್ನೊಬ್ಬರಿಲ್ಲ ಎಂದೇ ತಿಳಿಯಿರಿ.


ಈಗ ನಾವು ಈ ಮೊದಲೇ ತಿಳಿಸಿದಂತೆ ತಪಲೆ ತುಂಬ ಹೋಳು ಮಾಡಿಟ್ಕೊಳ್ಳೋಣ.   ಬೇಳೆಚಕ್ಕೆ ಹಲಸು ಬೇಗನೆ ಬೇಯುವಂತಹುದು,  ಹೋಳು ಮುಳುಗುವಷ್ಟು  ನೀರೆರೆದು,  ಉಪ್ಪು ಕೂಡಿಸಿ,  ಒಂದೆರಡು ಚಮಚ ತೆಂಗಿನೆಣ್ಣೆ ಎರೆದು ಬೇಯಿಸಿ.   ಅತಿಯಾಗಿ ಖಾರ ಇಷ್ಟಪಡುವವರು ಬೇಕಿದ್ದ ಹಾಗೆ ಮೆಣಸಿನಹುಡಿ ಹಾಗೂ ಚಿಟಿಕೆ ಅರಸಿಣವನ್ನು ತರಕಾರಿ ಬೇಯುವಾಗಲೇ ಹಾಕಿಕೊಳ್ಳತಕ್ಕದ್ದು. ಒಂದು ಕಡಿ ತೆಂಗಿನಕಾಯಿ ತುರಿಯಿರಿ.   ಮಸಾಲೆ ಏನೇನು?


ನಾಲ್ಕಾರು ಒಣಮೆಣಸು

ಎರಡು ಚಮಚ ಕೊತ್ತಂಬ್ರಿ

ಅರ್ಧ ಚಮಚ ಜೀರಿಗೆ

ಕಡ್ಲೆ ಗಾತ್ರದ ಇಂಗು

ಒಂದೆಸಳು ಕರಿಬೇವು


ತುಸು ಎಣ್ಣೆಪಸೆಯಲ್ಲಿ ಮೇಲಿನ ಸಾಮಗ್ರಿಗಳನ್ನು ಹುರಿಯಿರಿ,   ತೆಂಗಿನತುರಿಯೊಂದಿಗೆ ಅರೆಯಿರಿ.   ಅರೆಯುವಾಗ ದೊಡ್ಡ ನೆಲ್ಲಿಕಾಯಿ ಗಾತ್ರದ ಹುಣಸೆಹುಳಿಯನ್ನೂ ಕೂಡಿ ಅರೆಯಿರಿ.  ತೆಂಗಿನಕಾಯಿ ಅರಪ್ಪು ಸಿದ್ಧವಾಗಿದೆ.  ಬೆಂದಿರುವ ತರಕಾರಿಗೆ ಅರಪ್ಪು ಕೂಡಿ,  ಅಗತ್ಯದ ನೀರು,  ರುಚಿಯ ಉಪ್ಪು,  ಸಿಹಿಯ ಬೆಲ್ಲ ( ಬೇಕಿದ್ದರೆ ಮಾತ್ರ ) ಕೂಡಿಸಿ ಕುದಿಸಿರಿ.  ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಕೊಡುವಲ್ಲಿಗೆ ಬೇಳೆಚಕ್ಕೆ ಬೆಂದಿ ಊಟಕ್ಕೆ ಬಡಿಸಲು ತಯಾರಾಗಿದೆ.ಟಿಪ್ಪಣಿ:  ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ,  ಜೂನ್, 2017.  


0 comments:

Post a Comment