ದಿನವೂ ದೋಸೆ ವಿಧ ವಿಧ ತರಹಾ.. ಅನ್ನುತ್ತ ಮುಂಜಾನೆಯ ರಾಗ ಪ್ರಾರಂಭ. ಸಂಜೆಯಾಗುತ್ತಲೂ ನಾಳೆಯ ದೋಸೆ ಹೇಗಾದರೆ ಚೆನ್ನ ಎಂಬ ಚಿಂತೆ, ಇರಲಿ ಅಂದ್ಬಿಟ್ಟು ಒಂದು ಲೋಟ ಉದ್ದು ನೀರು ಎರೆದಿಟ್ಟಾಯಿತು. ನಂತರ ರವಾ ಇಡ್ಲಿಯೋ ಅಕ್ಕಿ ಇಡ್ಲಿಯೋ…
ಮಧುಕರ ಊರಿಗೆ ಬಂದಾಗ ಮಂಗಳೂರಿಗೆ ಹೋಗುವುದಿದೆ. ಅಲ್ಲಿಯೂ ಅವನ ಸಂಸ್ಥೆಯ ಶಾಖೆ, ಆಫೀಸ್ ಇದೆ, ಎದುರುಗಡೆ ಬಾಳಿಗಾ ಸ್ಟೋರ್ಸ್ ಮಳಿಗೆ, ನಿತ್ಯಬಳಕೆಯ ಸಾಮಗ್ರಿಗಳನ್ನು ಅಲ್ಲಿಂದಾನೇ ತರುವ ರೂಢಿ, ಕಳೆದ ಬಾರಿ ತಂದಿದ್ದ ಗೋಧಿ ನುಚ್ಚು ಪ್ಯಾಕೆಟ್ ಇನ್ನೂ ಬಿಡಿಸಿಲ್ಲ ಎಂದು ನೆನಪಾಯ್ತು. ಗೋಧಿ ನುಚ್ಚಿನ ಪಾಯಸ ಗೊತ್ತು, ಈ ಸುಡು ಬೇಸಿಗೆಯಲ್ಲಿ ಪಾಯಸದ ಉಸಾಬರಿಯೇಕೆ? ಆದರೂ ಇದನ್ನು ಹೇಗಾದರೂ ಮುಗಿಸೋಣ ಎಂಬ ಹಟದಿಂದ ನಾಳೆ ಗೋಧಿ ಕಡಿ ಇಡ್ಲಿ ಎಂಬ ತೀರ್ಮಾನಕ್ಕೆ ಬರಲಾಯಿತು. ಈಗಾಗಲೇ ರಾತ್ರಿಯ ಮುಸುಕು ಕವಿದಿದೆ, ಗೋಧಿನುಚ್ಚು ನೆನೆಯಬೇಡವೇ, ಉಪಾಯ ಮಾಡದಿದ್ದರಾಗುತ್ಯೇ…, ಬೇಸಿಗೆಯ ಸೋಲಾರ್ ನೀರು ಕುದಿಯುತ್ತಲಿದೆ, ಕೂಡಲೇ ಗೋಧಿ ನುಚ್ಚು ಕುದಿನೀರಿನ ಸ್ನಾನ ಮಾಡಿಯೇ ಬಿಟ್ಟಿತು. ಅರ್ಧ ಗಂಟೆ ನೆನೆಯಲಿ. ಎಷ್ಟು? ಕೇವಲ ಎರಡೂವರೆ ಲೋಟ ಕಣ್ರೀ, ಮೂರು ಲೋಟ ಹಾಕಬಹುದಿತ್ತು, ಇಬ್ಬರ ರಾಜ್ಯದಲ್ಲಿ ಮುಗಿಯದೇ ಹೋದೀತು, ಇಡ್ಲಿ ಕಲ್ಲಿನಂತೆ ಆಗಬಾರದಲ್ಲ!
ಮಲಗುವ ಮುನ್ನ ಅರೆಯುವ ಸಿದ್ಧತೆ, ತೊಳೆದ ಉದ್ದನ್ನು ಅರೆಯುವುದು.
ಗೋಧಿನುಚ್ಚು ಬಿಸಿ ಆರಿದೆ, ನೀರನ್ನು ಬಸಿಯುವುದು.
ನುಣ್ಣಗಾದ ಉದ್ದಿನೊಂದಿಗೆ ಮಿಕ್ಸೀಯಲ್ಲಿ ಒಂದೆರಡು ಸುತ್ತು ತಿರುಗಿಸಿದರೆ ಸಾಕು. ತಪಲೆಗೆ ಹಾಕಿಟ್ಟು, ಉಪ್ಪು ಕೂಡಿಸಿ, ಮುಚ್ಚಿ ಇಡುವುದು. ಮುಂದಿನದು ನಾಳೆಗೆ.
ನನ್ನದೊಂದು ಅಗಾರೋ ರೈಸ್ ಕುಕ್ಕರ್ ಇದ್ದಿತು. ಸಂಪೂರ್ಣ ವಿದ್ಯುತ್ ಚಾಲಿತವಾದಂತಹ ಆ ರೈಸ್ ಕುಕ್ಕರ್ ಬೇಗನೇ ಕೆಟ್ಟು ಹೋಯಿತು. ಅದರೊಳಗೆ ಇಡಲು ಒಂದು ಸ್ಟೀಲ್ ತಪಲೆ, ಅದರಲ್ಲಿ ಇಡ್ಲಿಪಾತ್ರೆಯಂತೆ ನೂರಾರು ತೂತುಗಳು. ನನ್ನ ನಿತ್ಯಬಳಕೆಯ ಇಡ್ಲಿ ಪಾತ್ರೆಯ ಒಳಗೂ ಇರಿಸಲು ಸಾಧ್ಯವಿರುವ ಇದರಲ್ಲಿಯೇ ಇಡ್ಲಿ ಎರೆಯುವ ರೂಢಿ. ದೊಡ್ಡ ಬಟ್ಟಲ ಗಾತ್ರದ ಇಡ್ಲಿ ಲಭ್ಯ. ನನ್ನ ಲೆಕ್ಕಾಚಾರದಲ್ಲಿ ಬೇಯಿಸಲು ಎಂದಿನ ಹತ್ತು ನಿಮಿಷ ಸಾಲದು. ನೀರು ಕುದಿದ ನಂತರ 20-25 ನಿಮಿಷ.
ಇಡ್ಲಿಯ ವಿಷಯ ಆಯ್ತು, ಈ ಮಾದರಿಯ ಅಕ್ಕಿ ಇಡ್ಲಿಯಾಗಿದ್ದರೆ ಬಾಳೆಹಣ್ಣು ರಸಾಯನ ಮಾಡಬಹುದಿತ್ತು, ಇದು ಗೋಧಿ ಕಡಿಯಲ್ಲವೇ, ಒಂದು ಚಟ್ಣಿ ಮಾಡೋಣ.
ಗೋಧಿ ಇಡ್ಲಿಗೆ ಅತ್ಯುತ್ತಮ ಕಾಂಬಿನೇಷನ್ ಎಂದರೆ ಪ್ರೋಟೀನ್-ಯುಕ್ತ ಚಟ್ಣಿ.
ಹುರಿದ ನೆಲಕಡಲೆ ಒಂದು ಹಿಡಿ
ಅರ್ಧ ಕಡಿ ಹಸಿ ತೆಂಗಿನತುರಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ಒಣಮೆಣಸಿನಕಾಯಿ: 2-3 (ನಿಮ್ಮ ಖಾರಕ್ಕೆ ತಕ್ಕಂತೆ) ಹುಣಸೆಹಣ್ಣು: ಒಂದು ಸಣ್ಣ ನೆಲ್ಲಿಕಾಯಿ ಗಾತ್ರ
ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು
ಅಗತ್ಯವಿದ್ದಷ್ಟು ನೀರು ಸೇರಿಸಿ, ನಯವಾಗಿ ರುಬ್ಬಿಕೊಳ್ಳಿ.
ಕೊನೆಯದಾಗಿ ಸಾಸಿವೆ, ಜೀರಿಗೆ ಮತ್ತು ಕರಿಬೇವನ್ನ ಎಣ್ಣೆಯಲ್ಲಿ ಸಿಡಿಸಿ ಒಗ್ಗರಣೆ ಕೊಡಿ.


0 comments:
Post a Comment