ಅಶೋಕ ವೃಕ್ಷ ಒಂದು ಅದ್ಭುತ ಸಸ್ಯ. ಮಹಾಕಾವ್ಯಗಳಲ್ಲಿ ಅಶೋಕ ವೃಕ್ಷವಿದೆ. ರಾಮಾಯಣವೇ ಇದೆಯಲ್ಲ ! ಕಾಳಿದಾಸನೂ ಈ ವೃಕ್ಷವನ್ನು ಬಿಟ್ಟಿಲ್ಲ. ಬೌದ್ಧರಿಗೆ ಹಾಗೂ ಹಿಂದೂಗಳಿಗೆ ಇದು ಪೂಜನೀಯ ವೃಕ್ಷ.
ಎಲ್ಲ ಭಾರತೀಯ ಭಾಷೆಗಳಲ್ಲೂ ಒಂದೊಂದು ಹೆಸರನ್ನು ಹೊಂದಿದೆ ಈ ವೃಕ್ಷ. ದಕ್ಷಿಣ ಭಾರತೀಯ ಭಾಷೆಗಳಲ್ಲಿ ಅಶೋಕವೆಂದೇ ಗುರುತಿಸಿಕೊಂಡಿದೆ. ಇದರ ವೈಜ್ಞಾನಿಕ ಹೆಸರು saraca asoca . ಭಾರತ, ಶ್ರೀಲಂಕಾ, ಮ್ಯಾನ್ಮಾರ್ ಇದರ ತವರು. ಹಿಮಾಲಯದ ತಪ್ಪಲು ಪ್ರದೇಶ, ಪಶ್ಚಿಮ ಘಟ್ಟ ಅರಣ್ಯಗಳಲ್ಲಿ ಅಧಿಕವಾಗಿವೆ.
ಇದು ನಿತ್ಯ ಹರಿದ್ವರ್ಣದ ಸಸ್ಯವಾಗಿದ್ದು ಕಡು ವರ್ಣದ ಕಾಂಡದಿಂದ, ಅನೇಕ ರೆಂಬೆ ಕೊಂಬೆಗಳನ್ನು ಹೊಂದಿ, ಆಕರ್ಷಕ ಕಿತ್ತಳೆ ವರ್ಣದ ಹೂಗೊಂಚಲುಗಳನ್ನು ಸೆಪ್ಟೆಂಬರ್ ಆರಂಭವಾಗುತ್ತಿದ್ದಂತೆ ಬಿಡಲು ಆರಂಭಿಸುತ್ತದೆ. ಸುವಾಸನಾಭರಿತ ಹೂಗಳು ಕ್ರಮೇಣ ಕಡುವರ್ಣಕ್ಕೆ ತಿರುಗುವುದೇ ಒಂದು ವಿಸ್ಮಯ.
ಹೂಗಳು ಧಾರ್ಮಿಕ ಕಾರ್ಯಗಳಲ್ಲಿ ಉಪಯೋಗವಾಗುತ್ತವೆ. ಆದರೂ ಔಷಧವಾಗಿ ಹೆಚ್ಚು ಬಳಕೆಯಲ್ಲಿದೆ. ಇದರ ಹೂಗಳನ್ನು ಒಣಗಿಸಿ ಹುಡಿ ಮಾಡಿ ದಿನನಿತ್ಯ ಹಾಲಿನೊಂದಿಗೆ ಸೇವಿಸುತ್ತ ಬಂದಲ್ಲಿ ಸ್ತ್ರೀಯರ ಮಾಸಿಕ ಋತು ಸ್ರಾವದ ಏರುಪೇರುಗಳು ಮಾಯವಾಗುವುವು. ಉದರಶೂಲೆ, ತಲೆನೋವು ಕೂಡಾ ಮಾಯ.
ಚೆನ್ನಾಗಿ ಬಲಿತ ಕಾಂಡದ ತೊಗಟೆಯನ್ನು ಆಯುರ್ವೇದ ಪದ್ಧತಿಯಲ್ಲಿ ಕಷಾಯ ತಯಾರಿಸುವ ಕ್ರಮವೂ ಇದೆ. ಅತಿಸಾರ, ಆಂತರಿಕ ಗೆಡ್ಡೆಗಳು, ಹುಣ್ಣುಗಳು, ಮೂತ್ರನಾಳ ಸಂಬಂಧೀ ಖಾಯಿಲೆಗಳು, ಸಿಫಿಲಿಸ್ , ಲೈಂಗಿಕ ರೋಗಗಳಿಗೆ ಇದು ರಾಮಬಾಣವಾಗಿದೆ.
2 ತೊಲದಷ್ಟು ಇದರ ತೊಗಟೆಯನ್ನು 1 ಕುಡ್ತೆ ನೀರು, 1 ಕುಡ್ತೆ ಹಾಲು ಸೇರಿಸಿ ಕುದಿಸಿ ತಯಾರಿಸಿದ ಕಷಾಯ ದೇಹ ಯಥಾಸ್ಥಿತಿಗೆ ಮರಳಲು ಸಹಾಯಕ. ಜೀರಿಗೆ ಸೇರಿಸಿ ಇದರ ಎಲೆಗಳಿಂದ ಕಷಾಯ ತಯಾರಿಸಿದರೂ ರಕ್ತ ಶುದ್ಧೀಕರಣ ಆಗುತ್ತದೆ. ಅಶೋಕಾರಿಷ್ಟದ ನಿಯಮಿತ ಸೇವನೆಯನ್ನು ಆಯುರ್ವೇದ ವೈದ್ಯರು ಶಿಫಾರಸು ಮಾಡುತ್ತಾರೆ. ಅದರ ತಯಾರಿಯೂ ಇದೇ ಅಶೋಕ ವೃಕ್ಷದಿಂದ.
ಅಶೋಕ ಎಂದರೆ ಶೋಕವಿಲ್ಲದ್ದು ಎಂದರ್ಥ ! ವಸಂತ ಮಾಸದಲ್ಲಿ ಅರಳುವ ಈ ವೃಕ್ಷದ ಹೂಗಳ ಸೊಬಗಿಗೆ ಸಾಟಿಯಿಲ್ಲ ! ಇದರ ಔಷಧ ಸೇವನೆ ಮಾಡಿದ ಸ್ತ್ರೀಯರು ಆರೋಗ್ಯದಿಂದ, ಶೋಕರಹಿತರಾಗುವರು.
ಟಿಪ್ಪಣಿ: ಈ ಬರಹವನ್ನು ದಿನಾಂಕ 15 , ಮಾರ್ಚ್, 2013 ರಂದು ಇನ್ನಷ್ಟು ವಿಸ್ತರಿಸಿ ಬರೆಯಲಾಗಿದೆ.
ಇದು ಅಂತರ್ಜಾಲ ಮಾಧ್ಯಮದಲ್ಲಿ ನನ್ನ ಪ್ರಥಮ ಬರಹ. ಅಂತರ್ಜಾಲ ಪತ್ರಿಕೆಯೊಂದರಲ್ಲಿ ಪ್ರಕಟವೂ ಆಯಿತು. ಅಶೋಕವೃಕ್ಷದ ಬಗ್ಗೆ ಬರೆಯಲೂ ಕಾರಣವಿದೆ. ನಮ್ಮ ನೆರೆಯ ಹದಿಹರೆಯದ ಯುವತಿಯೊಬ್ಬಳು ವಿಪರೀತ ಋತುಸ್ರಾವದಿಂದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟದಲ್ಲಿದ್ದಳು. ಆಕೆ ಮಾತು ಬಾರದ ಹುಡುಗಿ. ಅವಳ ತಾಯಿ ನನ್ನೊಡನೆ ಗೋಳಾಡಿಕೊಂಡಿದ್ದರು.
" ಗರ್ಭಕೋಶವನ್ನೇ ತೆಗೆಸಬೇಕೆಂದು ಹೇಳ್ತಿದ್ದಾರೆ ಅಕ್ಕ, ಕಿವಿ ಕೇಳದವಳಿಗೆ ಇಂಥಾ ಆಪರೇಷನ್ ಮಾಡಿದ್ರೆ ನಾಳೆ ಅವಳನ್ನು ಯಾರು ಮದುವೆಯಾಗುತ್ತಾರೆ ? ನಾವು ಬೇಡಾ ಅಂದ್ಬಿಟ್ಟು ಮಂಗಳೂರಿನ ಆ ಆಸ್ಪತ್ರೆಯಿಂದ ಕಾಸರಗೋಡಿನ ಈ ಆಸ್ಪತ್ರೆಗೆ ತಂದಿದೇವೆ, ಇಲ್ಲಿ ಏನು ಹೇಳ್ತಾರೇಂತ ನೋಡ್ಬೇಕಷ್ಟೆ "
ನಮ್ಮ ಮಾತುಗಳಿಗೆ ಸಾಕ್ಷಿಯಾಗಿ ನಮ್ಮವರೂ ಅಲ್ಲೇ ಇದ್ದರು. " ಹೌದೂ, ನಮ್ಮ ಅಶೋಕದ ಮರ ಇದೆಯಲ್ಲ, ಅದು ಹೆಂಗಸ್ರ ಈ ರೋಗಕ್ಕೇ ಇರೂದು ಅಂತ ಕಾಣಿಸ್ತದೆ, ಅಬ್ಬು, ಕಮಲ, ಚೋಮು ಎಲ್ಲಾರೂ ಅದರ ಕೆತ್ತೆ ತೆಗೆದುಕೊಂಡು ಹೋಗೋರು, ಯಾಕೇಂತ ಹೇಳಿದ್ರಲ್ವೇ ನಮ್ಗೂ ಗೊತ್ತಾಗೂದು " ಅಂದರು.
" ನೀನು ಇಂಟರ್ನೆಟ್ ನೋಡಿ ತಿಳ್ಕೋ " ಉಪದೇಶ ಸಿಕ್ಕಿತು.
" ಮೊದಲು ಅಮ್ಮನ ಹತ್ರ ಕೇಳ್ತೇನೆ "
ಅಮ್ಮನ ಬಳಿಗೆ ಫೋನ್ ಕಾಲ್ ಹೋಯಿತು. ಮಹಿಳೆಯರ ರಕ್ತಸ್ರಾವದ ಖಾಯಿಲೆಗೇ ಇದನ್ನು ಉಪಯೋಗಿಸ್ತಾರೆ ಎಂದು ಅವರೂ ಹೂಂಗುಟ್ಟಿದರು.
" ಆದ್ರೆ ಈಗ ಆ ಹಳೇ ಮದ್ದಿನ ಕ್ರಮ ಯಾರಿಗೆ ಗೊತ್ತಿರ್ತದೆ, ಸುಮ್ಮನೇ ಏನೇನೋ ಮಾಡುವುದಕ್ಕಿಂತ ಆಸ್ಪತ್ರೆಗೇ ಹೋಗಲಿ " ಎಂದೂ ಹೇಳಿದರು.
ಇಷ್ಟೆಲ್ಲಾ ಪಂಚಾಯಿತಿಕೆ ನಡೆದ ಮೇಲೆ ಅಂತರ್ಜಾಲದಿಂದ ಮಾಹಿತಿಗಳ ಸಂಗ್ರಹ ಮೊದಲ್ಗೊಂಡು ಬರಹ ರೂಪಕ್ಕೂ ಇಳಿಸಿಯಾಯಿತು. ಬರಹ ಪ್ರಕಟಿತವಾದ ಮೇಲೆ ನಮ್ಮವರ ಅಕ್ಕ ಮನೆಗೆ ಬಂದಿದ್ದಾಗ ಇನ್ನಷ್ಟು ಹಳೆಯ ನೆನಪುಗಳನ್ನು ಹೊರ ಹಾಕಿದರು.
ಮನೆಯ ಹಸುಗಳಿಗೆ ಗರ್ಭಧಾರಣೆಯಾಗದಿದ್ದಲ್ಲಿ ಇದರ ಕೆತ್ತೆಯ ಕಷಾಯ ಮಾಡಿ ಕಲಗಚ್ಚಿನೊಂದಿಗೆ ಕುಡಿಸಲಾಗುತ್ತಿತ್ತಂತೆ.
" ಹೌದೇ, ಹಸುಗಳಿಗೆ ಅಶೋಕದ ಸೊಪ್ಪು ಸವರಿ ಹಾಕಿದರೂ ಆದೀತೇನೋ "
" ಆದೀತೂಂತ ಕಾಣ್ತದೆ, ಮತ್ತೆ ಯಾರಿಗ್ಗೊತ್ತು "
" ಕೆಲಸದಾಳುಗಳು ಮರವನ್ನು ಕೆತ್ತಿ ಕೆತ್ತಿ ಸಾಯ್ಸಿಬಿಡ್ತಾರೆ " ಎಂದು ನನ್ನ ಮಾವನವರೂ ಪೇಚಾಡುತ್ತಿದ್ದುದನ್ನು ನಾನೂ ಕಂಡಿದ್ದೇನೆ.
ಅಂತೂ ನಮ್ಮ ನೆರೆಮನೆಯ ಯುವತಿ ಆಪರೇಷನ್ ಇಲ್ಲದೇ ಗುಣಮುಖಳಾಗಿದ್ದಾಳೆ. ಈಗ ವಿವಾಹಿತೆಯೂ ಆಗಿ ನೆಮ್ಮದಿಯ ಬದುಕು ನಡೆಸುತ್ತಿದ್ದಾಳೆ. ಇತ್ತೀಚೆಗೆ ಅವಳ ತಾಯಿಯ ಭೇಟಿ ಆದಾಗ ಆಕೆಯ ಆರೋಗ್ಯ ಈಗ ಹೇಗಿದೆಯೆಂದು ಕೇಳದಿದ್ದರಾಗುತ್ತದೆಯೇ, " ಅಶೋಕ ಕೆತ್ತೆ ಏನಾದ್ರೂ ಪ್ರಯೋಜನ ಕೊಟ್ಟಿತ್ತಾ "
ಅವರೂ ಹೂಂಗುಟ್ಟಿದರು, " ಕಷಾಯ ಕುಡಿದು ಉಪಕಾರ ತತ್ಕಾಲಕ್ಕೆ ಸಿಕ್ತದೆ, ಮತ್ತೆ ಯಾರಿಗ್ಗೊತ್ತದೆ ಸರಿಯಾದ ಕ್ರಮದ ಈ ಹಳ್ಳೀ ಮದ್ದು, ಆಸ್ಪತ್ರೆ ಮದ್ದೂ ತಂದಿದೆ...."
ಹೀಗೆ ನಾನು ಬರೆಯುತ್ತಾ ಇರಬೇಕಾದರೆ ನಮ್ಮ ಖಾದರ್ ಬಂದ.
" ಏನು ಬರೀತಾ ಇದ್ದೀರಿ ಅಕ್ಕಾ "
" ಅದೇ ಅಶೋಕೆ ಮರ ಇದ್ಯಲ್ಲ " ಪುನಃ ಬರೆದಿದ್ದನ್ನು ಓದಿ ಹೇಳಿಯಾಯ್ತು.
" ಹಂಗಿದ್ರೆ ಇದನ್ನೂ ಸೇರಿಸ್ಕೊಳ್ಳೀ, ಮೂತ್ರದಕಲ್ಲಿಗೆ ಅಶೋಕ ಕೆತ್ತೆ ಕಷಾಯ ಕುಡಿದು ಖಾದರ್ ಗುಣಮುಖನಾಗಿದ್ದಾನೇ ಅಂತ "
ಎಲ ಇವನ, ಯಾರಿಗೂ ಹೇಳದೇ ಸ್ವಯಂ ಔಷಧಿ ಮಾಡಿಕೊಂಡಿದ್ದನ್ನು ಈಗ ಬಾಯ್ಬಿಟ್ಟ. ಮೂತ್ರದೊಂದಿಗೆ ರಕ್ತಸ್ರಾವ ಆಗುತ್ತಿದ್ದಲ್ಲಿ ಏನೂ ಭಯ ಪಡಬೇಕಾಗಿಲ್ಲ, ಮೂತ್ರದಲ್ಲಿನ ಕಲ್ಲನ್ನು ಕರಗಿಸಿ ಬಿಡುತ್ತೇಂತ ಅವನ ಅಂಬೋಣ.
Sunday, 22 January 2012
ಪೂಜನೀಯ ಅಶೋಕ ವೃಕ್ಷ
Subscribe to:
Post Comments (Atom)
0 comments:
Post a Comment