Sunday, 22 January 2012
ಆರೋಗ್ಯದ ಗಣಿ..........ಈ ಚಕ್ರಮುನಿ
"ಹೋಗಿ ಚಕ್ರಮಾಂಙ ಸೊಪ್ಪು ತಾ" ಅಮ್ಮ ಮಗಳಿಗಂದಳು. ಜಗಲಿಯಲ್ಲಿ ಕುಳಿತು ಗಜ್ಜುಗದ ಆಟ ಆಡುತ್ತಿದ್ದ ಮಗಳು ಮನೆಹಿತ್ತಿಲಿಗೆ ಓಡಿದಳು. ಒಂದಾಳೆತ್ತರದ ಗಿಡದ ಗೆಲ್ಲು ಬಗ್ಗಿಸಿ ಕುಡಿ ಚಿಗುರುಗಳನ್ನು ಚಿವುಟಿ ಕೈ ಬೊಗಸೆಯಲ್ಲಿ ಹಿಡಿವಷ್ಟು ತಂದಳು. ಅಮ್ಮ ತಯಾರಿಸುವ ಈ ಸೊಪ್ಪಿನ ತಂಬುಳಿ ಅವಳಿಗೆ ಪ್ರಿಯವಾಗಿತ್ತು. ಆಟ ಬಿಟ್ಟು ಅಡುಗೆ ತಯಾರಿಯನ್ನು ವೀಕ್ಷಿಸಿದಳು.
ಬಾಣಲೆಗೆ ತುಪ್ಪ ಹಾಕಿ ಚಿಗುರೆಲೆಗಳನ್ನು ಬಾಡಿಸಿ ಒಲೆಯಿಂದ ಇಳಿಸಿದಳು ಅಮ್ಮ. ಒಂದು ಹಿಡಿ ಕಾಯಿತುರಿ, ಉಪ್ಪು, ನಾಲ್ಕು ಜೀರಿಗೆಕಾಳು ಎಲ್ಲವನ್ನೂ ಅರೆಯುವ ಕಲ್ಲಿಗೆ ಹಾಕಿ ಕಡೆಯುತ್ತಿದ್ದಂತೆ ಹಸಿರು ಹಸಿರಾದ ರಸ ಸಿದ್ದವಾಗಿಬಿಟ್ಟಿತು. ಮಜ್ಜಿಗೆ ಭರಣಿಯಿಂದ ಒಂದು ಲೋಟ ಮಜ್ಜಿಗೆ ಸೇರಿಸಿ ಒಂದು ಒಗ್ಗರಣೆ ಸಿಡಿಸುವಷ್ಟರಲ್ಲಿ ತಂಬುಳಿ ತಯಾರಾಯಿತು.
ಅನ್ನದೊಂದಿಗೆ ಈ ಹಸಿರು ತಂಬುಳಿ ಸವಿಯುತ್ತಿದ್ದ ನೆನಪು ಈಗಲೂ ನನ್ನ ಮನದಲ್ಲಿ ಹಸಿರಾಗಿಯೇ ಇದೆ. ಹಾಗಾಗಿ ಈಗಲೂ ನೆನಪಾದಾಗ ಮಾಡುತ್ತಿರುತ್ತೇನೆ.
ಈ ಚಕ್ರಮಾಂಙ ಅಥವಾ ಚಕ್ರಮುನಿ ಸಸ್ಯ ಸೊಪ್ಪು ತರಕಾರಿಗಳಲ್ಲೇ ವಿಶೇಷವಾದದ್ದು. ಪಲ್ಯ, ತೊವ್ವೆ, ಸಾಂಬಾರ್, ಮಜ್ಜಿಗೆಹುಳಿ, ಸಲಾಡ್, ರೊಟ್ಟಿ, ಬೋಂಡಾ, ಪತ್ರೊಡೆ, ಯಾವುದಕ್ಕೂ ಇದು ಸೈ. ಹಾಗಾಗಿ ಇದು ಸರ್ವಸಾಂಬಾರು ಸೊಪ್ಪು ಎನಿಸಿಕೊಂಡಿದೆ.
ಚಕ್ರಮಾಂಙ ಎಳೆಯ ಸೊಪ್ಪನ್ನು ಸಣ್ಣಗೆ ಹೆಚ್ಚಿಟ್ಟು ಬೇಯಿಸಿ. ಬೇಯಿಸಿದ ನೀರು, ಸೊಪ್ಪು ಸಹಿತವಾಗಿ ಚಪಾತಿ ಹಿಟ್ಟಿನೊಂದಿಗೆ ಕಲಸಿ ವಿಟಮಿನ್ ಚಪಾತೀ ತಯಾರಿಸಿ.
ಪರೋಟಾ ಮಾಡುವಾಗಲೂ ಒಳಗೆ ತುಂಬಿಸುವ ಹೂರಣದೊಂದಿಗೆ ಚಕ್ರಮುನಿ ಸೊಪ್ಪನ್ನೂ ಸೇರಿಸಿ.
ಸಾಂಬಾರು ಮಾಡೋದು ಹೀಗೆ :
ತೋಟದಲ್ಲಿ ಅಡ್ಡಾಡಿ ಬರುವಾಗ ಕೈಯಲ್ಲಿ ಹಿಡಿಸುವಷ್ಟು ಚಿಗರೆಲೆಗಳ್ನು ಚಿವುಟಿ ತಂದು ತುಂಡರಿಸಿ, ಅರ್ಧ ಸೌತೆಕಾಯಿ ಹೋಳು ಹಾಗೂ ತೂಗರಿಬೇಳೆ ಜೊತೆ ಕುಕ್ಕರಿನಲ್ಲಿ ಬೇಯಿಸಿ, ಎಂದಿನಂತೆ ಮಸಾಲೆ ಹುರಿದು ತೆಂಗಿನತುರಿಯೊಂದಿಗೆ ಮಿಕ್ಸಿಯಲ್ಲಿ ನೀರು ಹಾಕದೆ ತಿರುಗಿಸಿ. ರುಚಿಗೆ ಬೇಕಾದ ಉಪ್ಪು ಹುಳಿ ಬೆಲ್ಲ ಗಳನ್ನು ಕೂಡಿಸಿ, ಅವಶ್ಯವಿದ್ದಷ್ಟು ನೀರು ಸೇರಿಸಿ ಕುದಿಸುವಾಗ ಒಂದು ನೀರುಳ್ಳಿ ಸಣ್ಣಗೆ ಕೊಚ್ಚಿ ಹಾಕಿ, 10 ಎಸಳು ಬೆಳ್ಳುಳ್ಳಿ ಒಗ್ಗರಣೆ .....
ನನ್ನ ಚಿಕ್ಕಫ್ಫ ಮದ್ರಾಸಿನಲ್ಲಿ ಕಲಿಯುತ್ತಿದ್ದಾಗ ಅಲ್ಲಿಂದ ಇದರ ಗಿಡ ಅಂದರೆ ಕಡಿದ ಗೆಲ್ಲು ತಂದು ಮನೆಯಲ್ಲಿ ನೆಟ್ಟಿದ್ದಂತೆ. ಹಾಗಂತ ಅಮ್ಮ ಹೇಳಿದ ನೆನಪು. ಮೂಲತಃ ಇದು ಮಲೇಷ್ಯಾದ್ದು. ಭಾರತಕ್ಕೆ ಸುಮಾರು 1950ರಲ್ಲಿ ಬಂದಿದೆ. ಸಸ್ಯಶಾಸ್ತ್ರೀಯವಾಗಿ sauropus androgynus ಎಂಬ ಹೆಸರನ್ನು ಹೊಂದಿದೆ. ದಕ್ಷಿಣ ಭಾರತದಲ್ಲಿ ಇದು ಸಮೃದ್ಧವಾಗಿ ಕಾಣಿಸುವ ಸಸ್ಯ ಆಗಿ ಬಿಟ್ಟಿದೆ. ತೋಟಗಳಲ್ಲಿ ತಡೆಬೇಲಿಯಾಗಿ ಗಿಡಗಳನ್ನು ಬೆಳೆಸುತ್ತೀರಷ್ಟೆ ? ಅಂಥಲ್ಲಿ ಇದನ್ನೂ ನೆಟ್ಟು ಬಿಟ್ಟರೆ ಬೇಲಿಯೂ ಆಯಿತು, ಬೇಕಾದಾಗ ಚಿವುಟಿ ತೆಗೆಯಲು ಸೊಪ್ಪು ತರಕಾರಿಯೂ ಆಯಿತು, ಗೆಲ್ಲುಗಳನ್ನು ಆಗಾಗ ಸವರುತ್ತಿದ್ದರೆ ಜಾನುವಾರುಗಳಿಗೆ ಉ್ತಮ ಮೇವೂ ಆಯಿತು. ಕತ್ತರಿಸಿದಲ್ಲಿ ಬಹು ಬೇಗನೆ ಹೊಸ ಚಿಗುರುಗಳು ಮೂಡುತ್ತವೆ. ' cut and come again ' ಸೂತ್ರ ಈ ಸಸ್ಯದ್ದು.
ವಿಟಮಿನ್ ಎ, ಬಿ, ಸಿ ಹೇರಳವಾಗಿರುವ ಸಸ್ಯ. ವಿರಳವಾದ ವಿಟಮಿನ್ k ಕೂಡಾ ಇದರಲ್ಲಿದೆ. ಪ್ರೂಟೀನ್, ಕ್ಯಾಲ್ಸಿಯಂ, ಖನಿಜಾಂಶಗಳು ಇರುವುದರಿಂದ ಇದಕ್ಕೆ ವಿಟಮಿನ್ ಸೊಪ್ಪು ಎಂಬ ಹೆಸರೂ ವಾಡಿಕೆಯಲ್ಲಿದೆ. ಬಾಣಂತಿಯರಿಗೆ ಎದೆಹಾಲು ವೃದ್ಧಿಯಾಗುವುದು. ಪುರುಷರಿಗೆ ವೀರ್ಯವರ್ಧಕ. ಜ್ವರದಿಂದ ಬಳಲಿ ನಿಃಶಕ್ತರಾದವರು ನವಚೈತನ್ಯವನ್ನು ಪಡೆಯುವರು. ಒಳ್ಳೆಯದೆಂದು ಅತಿಯಾಗಿ ಸೇವಿಸದಿರಿ. ಅತಿಯಾದರೆ ಅಮೃತವೂ ವಿಷವೆಂದು ಮರೆಯದಿರಿ.
Subscribe to:
Post Comments (Atom)
0 comments:
Post a Comment