" ಅದ್ಯಾವ ಹಣ್ಣು ಸ್ವಾಮೀ, ಅಲ್ಲಿ ಕಾಣಿಸ್ತಿರೋದು " ಮನೆಗೆ ಬಂದ ಅತಿಥಿಯ ಪ್ರಶ್ನೆ.
ಮನೆಯಂಗಳದಲ್ಲಿ ಪೊಗದಸ್ತಾಗಿ ಬೆಳೆದು ನಂತಿದ್ದ ಮರದಲ್ಲಿ ಅಡಿಯಿಂದ ಮುಡಿಯವರೆಗೆ ಹಣ್ಣುಗಳ ಅಲಂಕರಣ.
" ಓ, ಅದಾ, ಬೀಂಬುಳಿ ಹಣ್ಣು. ಬರೇ ಹುಳಿ ಹುಳಿ "
" ನಾನು ನೋಡಿಯೇ ಇಲ್ಲ " ಎನ್ನುತ್ತಾ ಆ ಆಸಾಮಿ ಮರದಿಂದ ಹೀಚುಕಾಯಿಗಳನ್ನು ಕಿತ್ತು ತಂದರು. " ಚಿಕ್ಕ ಸೌತೆಕಾಯಿಯಂತಿದೆ, ಉಪ್ಪು ಹಾಕಿ ತಿನ್ನೋಣ " ತಿಂದಿದ್ದೂ ತಿಂದಿದ್ದೇ. ಮರದಿಂದ ಉದುರಿ ಹಾಳಾದರೂ ಕೇಳುವವರಿಲ್ಲದ ಈ ಹಣ್ಣನ್ನು ಆ ಪ್ಯಾಟೇ ಮಂದಿ ಆಸೆಯಿಂದ ತಿಂದು, ಚೀಲ ತುಂಬ ಕೊಂಡೂ ಹೋದರು.
" ನಾವ್ಯಾಕೆ ಇದನ್ನು ಉಪಯೋಗಿಸ್ತಾ ಇಲ್ಲ ?"
" ಉಪ್ಪಿನಕಾಯಿ ಸ್ವಲ್ಪ ಹಾಕೋಣ "
ಹದವಾಗಿ ಬಲಿತ ಬೀಂಬ್ಳಿಗಳನ್ನು ಉದ್ದವಾಗಿ ನಾಲ್ಕು ತುಂಡು ಮಾಡಿ, ಒಂದು ಪಿಂಗಾಣಿ ಪಾತ್ರೆಯಲ್ಲಿ ಹಾಕಿಡಿ. ಸ್ಟೀಲು, ಅಲ್ಯುಮೀನಿಯಂ ಬೇಡ. ವಿಟಮಿನ್ ಸಿ ಅತ್ಯಧಿಕವಿರುವುದರಿಂದ ಪಾತ್ರೆ ಕಪ್ಪಗಾದೀತು. ಅಂದಾಜು 3 ಕಪ್ ಹೋಳುಗಳು ಸಾಕು.
3 ದೊಡ್ಡ ಚಮಚ ಸಾಸಿವೆ
1 ದೊಡ್ಡ ಚಮಚ ಕೊತ್ತಂಬರಿ ಕಾಳು
1 ಸಣ್ಣ ಚಮಚ ಜೀರಿಗೆ
ಇಷ್ಟನ್ನು ಸ್ವಲ್ಪ ಎಣ್ಣೆ ಪಸೆ ಮಾಡಿ ಹುರಿಯಿರಿ. ಸಾಸಿವೆ ಚಟಪಟ ಹೇಳುವಾಗ ಇಳಿಸಿ.
ಸ್ವಲ್ಪ ಇಂಗು
1 ಚಿಕ್ಕ ಚಮಚ ಅರಸಿನಹುಡಿ ಹಾಕಿ ಚೆನ್ನಾಗಿ ಮಗುಚಿ.
3 ದೊಡ್ಡ ಚಮಚ ಪುಡಿ ಉಪ್ಪು ಸೇರಿಸಿ.
ಇನ್ನೊಮ್ಮೆ ಒಲೆಯ ಮೇಲಿಟ್ಟು ತೆಗೆಯಿರಿ.
ಈ ಮಸಾಲೆ ಆರಿದ ನಂತರ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಈಗ ತಯಾರಾದ ಹುಡಿಗೆ ನಾವು ಮೆಣಸು ಹಾಕಿಲ್ಲ. ತರಾವರಿಯ ಉಪ್ಪಿನಕಾಯಿ ಮಿಕ್ಸ್ ಸಿಗುತ್ತವೆ. ಒಂದು ಪ್ಯಾಕ್ ತನ್ನಿ. ಅದರಲ್ಲಿ 4 ದೊಡ್ಡ ಚಮಚ ಅಳೆದು ಈಗ ತಯಾರಾದ ಹುಡಿಗೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಿಮ್ಮದೇ ಕೈ ರುಚಿಯ ಈ ಸ್ಪೆಶಲ್ ಮಸಾಲೆಯನ್ನು ಬೀಂಬ್ಳಿ ಹೋಳುಗಳಿಗೆ ಬೆರೆಸಿ ಗಾಜಿನ ಭರಣಿಯಲ್ಲಿ ತುಂಬಿಸಿ ಮುಚ್ಚಿ ಇಡಿ. ಬೇಕಿದ್ದರೆ ಎಳ್ಳೆಣ್ಣೆಯಲ್ಲಿ ಬೆಳ್ಳುಳ್ಳಿ ಹುರಿದು ಹಾಕಬಹುದು. ಅರ್ಧ ಗಂಟೆ ಬಿಟ್ಟು ಉಪಯೋಗಿಸಿ. ಕುಚ್ಚಿಲಕ್ಕಿ ಗಂಜಿಯೂಟಕ್ಕೆ ಈ ಉಪ್ಪಿನಕಾಯಿ ಸವಿದು ನೋಡಿ. " ವಾರೆವ್ಹಾ...... ನನ್ನಮ್ಮನಿಗಿಂತಲೂ ಚೆನ್ನಾಗಿ ನಾನು ಮಾಡಬಲ್ಲೆ " ಎಂದು ನಿಮ್ಮ ಬೆನ್ನು ನೀವೇ ತಟ್ಟಿಕೊಳ್ಳುತ್ತೀರ. ನನಗಂತೂ ನನ್ನಮ್ಮ ಹೇಳಿಕೊಟ್ಟಿದ್ದು. ಅವರು ನೆರೆಮನೆಯ ಗೌಡಸಾರಸ್ವತ ಸ್ನೇಹಿತೆಯಿಂದ ಕಲಿತದ್ದು.
ನಮ್ಮ ಕರಾವಳಿಯ ಕೊಂಕಣಿಗರು ಬೀಂಬ್ಳಿಯ ವೈವಿಧ್ಯಮಯ ಅಡುಗೆ ಬಲ್ಲವರು. ಅವರ ಮನೆಹಿತ್ತಿಲುಗಳಲ್ಲಿ ಬೀಂಬ್ಳಿಮರ ಇದ್ದೇ ಇರುತ್ತದೆ. ನೀರಿನಾಶ್ರಯವಿದ್ದಲ್ಲಿ ಯಾವಾಗಲೂ ಫಲ ಕೊಡುತ್ತಿರುತ್ತದೆ. ಒಂದು ಬೇಳೆಸಾರು, ತೊವ್ವೆ ಮಾಡಬೇಕಾದರೂ ಮರದಿಂದ ನಾಲ್ಕು ಬೀಂಬ್ಳಿ ಕಿತ್ತು ತಂದರಾಯಿತು. ಹೇಗೆ ಅಂತೀರಾ ?
4 ಬೀಂಬ್ಳಿಗಳನ್ನು ಹೋಳು ಮಾಡಿ ನೀರಿನಲ್ಲಿ ಹಾಕಿಡಿ, ಇದು ಹುಳಿ ಕಡಿಮೆ ಮಾಡಲು.
ಅವಶ್ಯವಿದ್ದಷ್ಟು ತೊಗರಿಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
2 ನೀರುಳ್ಳಿ, ತುಂಡು ಶುಂಠಿ ಸಣ್ಣದಾಗಿ ಹಚ್ಚಿಕೊಳ್ಳಿ.
2ಹಸಿಮೆಣಸು ಉದ್ದವಾಗಿ ಸಿಗಿಯಿರಿ.
ಬೆಳ್ಳುಳ್ಳಿ ಬೇಕಿದ್ದರೆ ಸಿಪ್ಪೆ ತಗೆದಿಟ್ಟುಕೊಳ್ಳಿ.
ಇಷ್ಟು ಸಾಮಗ್ರಿಗಳನ್ನು ಬೆಂದ ಬೇಳೆಗೆ ಹಾಕಿ ಪುನಃ ಬೇಯಲಿಡಿ.
ಅವಶ್ಯವಿದ್ದಷ್ಟು ನೀರು ಉಪ್ಪು ಹಾಕಿ.
ನೀರಿನಲ್ಲಿಟ್ಟ ಬೀಂಬ್ಳಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ.
ಇಂಗು, ಬೇವಿನಸೊಪ್ಪಿನ ಒಗ್ಗರಣೆ ತಯಾರಿಸಿ, ಸಾಸಿವೆ ಚಟಚಟ ಸಿಡಿಯುತ್ತಿದ್ದಂತೆ
1 ಚಿಟಿಕೆ ಅರಸಿನ ಹುಡಿ, 1 ಚಮಚ ಮೆಣಸಿನಹುಡಿ ಹಾಕಿ ಕೂಡಲೇ ತೊವ್ವೆಗೆ ಸುರಿಯಿರಿ.
ಇಷ್ಟು ರುಚಿಕರ ತೊವ್ವೆ ಇನ್ನೆಲ್ಲಾದರೂ ಕಂಡೀರಾ ಮತ್ತೆ !
ಹದವಾಗಿ ಬಲಿತ ಬೀಂಬುಳಿಗಳನ್ನು ತುಂಡು ಮಾಡಿ ಬಿಸಿಲಿನಲ್ಲಿ ಒಣಗಿಸಿ. ಡಬ್ಬದಲ್ಲಿ ತುಂಬಿಸಿ ಇಡಿ. ಮಳೆಗಾಲದಲ್ಲಿ ಕೆಸುವಿನ ಪತ್ರೊಡೆಗೆ ಧಾರಾಳ ಹುಳಿ ಬೇಕಾಗುತ್ತಲ್ಲ, ಆಗ ಉಪಯೋಗಿಸಿ.
ಹಣ್ಣಾದ ಬೀಂಬ್ಳಿಗಳನ್ನು ಉಪ್ಪಿನೊಂದಿಗೆ ಗಿವುಚಿಟ್ಟುಕೊಂಡು ದೇವರಮನೆಯ ಹಿತ್ತಾಳೆ, ಕಂಚಿನ ಸಾಮಗ್ರಿಗಳನ್ನು ತೊಳೆಯಬಹುದಾಗಿದೆ.
ಹೇಗೂ ಹುಳಿ ಹುಳಿ ಹಣ್ಣು, ತಂಪು ಪಾನೀಯವನ್ನೂ ತಯಾರಿಸಿ. ಹಣ್ಣುಗಳ ರಸ ಹಿಂಡಿ ತೆಗೆಯಿರಿ, ಬೇಕಾದಷ್ಟು ಸಕ್ಕರೆ, ನೀರು ಸೇರಿಸಿ, ಸುವಾಸನೆಗೆ ಏಲಕ್ಕಿಯನ್ನೂ ಹಾಕಿ ಫ್ರಿಜ್ ನಲ್ಲಿ ಇಡಿ. ಕುಡಿದು ನೋಡಿ.
ನಾನ್ ವೆಜ್, ಮೀನಿನ ಅಡುಗೆಯಲ್ಲೂ ಇದನ್ನು ಬಳಸುತ್ತಾರೆ. ಹೇಗೆಂದು ತಿಳಿದವರನ್ನು ಕೇಳಿ ಕಲಿಯಿರಿ.
15ರಿಂದ 30 ಅಡಿಗಳಷ್ಟು ಬೆಳೆಯುವ ಈ ಮರ ಇಂಡೋನೇಷಿಯಾದ್ದು. ದಾರೆಹುಳಿ ಜಾತಿಗೆ ಸೇರಿದ ಒಂದು ಸಸ್ಯ ಪ್ರಭೇದ. ಸಸ್ಯವಿಜ್ಞಾನಿಗಳ ಪ್ರಕಾರ ಇದು averrhoa bilimbi. ಇದರ ಬೀಜಗಳಿಂದ ಹೊಸ ಸಸ್ಯವನ್ನು ಪಡೆಯಬಹುದು. ಚೆನ್ನಾಗಿ ಆರೈಕೆ ಮಾಡಿದಲ್ಲಿ ನೆಟ್ಟ ನಾಲ್ಕೇ ವರ್ಷಗಳಲ್ಲಿ ಫಲ ಸಿಗುವುದು.
ಟಿಪ್ಪಣಿ: 24/1/2016 ರಂದು ಮುಂದುವರಿದಿದೆ.
ಬೀಂಬುಳಿ ಸಲಾಡ್
" ಪೇಟೆಯಲ್ಲಿ ತರಕಾರಿ ಸಂತೆ ಇತ್ತು " ಅನ್ನುತ್ತಾ ನಮ್ಮೆಜಮಾನ್ರು ಚೀಲ ತುಂಬ ತರಾ್ಕರಿ ತಂದು ಅಡುಗೆಮನೆಯಲ್ಲಿ ಸುರುವಿದರು.
ಇತ್ತು, ಟೊಮೇಟೋ, ನೀರುಳ್ಳಿ, ಹಸಿಮೆಣಸು, ಹರಿವೇ ಸೊಪ್ಪು, ಕೊತ್ತಂಬ್ರಿ ಸೊಪ್ಪು.... ಮತ್ತೊಂದೇನಪಾ, ಚಿಂತಿಸಬೇಕಾಯ್ತು. ಹ್ಞಾ, ನೆನಪಾಯ್ತು... ನವಿಲುಕೋಸು. ಸಂಜೆಯಾಗುತ್ತಲೂ ಇನ್ನೊಂದಾವರ್ತಿ ತರಕಾರಿ ಬಂದಿತು. " ತರಾ್ಕರಿ ಸಂತೆ ಖಾಲಿ ಮಾಡ್ತಾ ಇದ್ರೂ, ಸಿಕ್ಕಿದ ರೇಟಿಗೆ ಮಾರಾ್ತರೇಂತ ಗೊತ್ತಾಯ್ತು. ಹತ್ರೂಪಾಯಿಗೆ ಇಷ್ಟೂ ಸಿಕ್ತು "
" ಅಯ್ಯೋ ಹೌದಾ! ಇದ್ಯಾವ ತರಾ್ಕರೀ? "
" ಯಾರಿಗ್ಗೊತ್ತೂ..." ನಮ್ಮವರು ತಂದಿದ್ದ ಗೆಡ್ಡೆ ತರಕಾರಿಯನ್ನು ಕತ್ತರಿಸಿ ತಿಂದೂ ನೋಡಿದ್ರು. " ಏನೂಂತ ಗೊತ್ತಾಗ್ತಾ ಇಲ್ಲ, ಮೆಣಸಿನ ಹಾಗೆ ಖಾರ ಉಂಟಲ್ಲ! "
ಕೂವೆಗೆಡ್ಡೆ ಇರಬಹುದು ಅಂದ್ಕೊಂಡಿದ್ದೆ, ಖಾರ ಇರೂದಾದ್ರೆ ಯಾವುದಿದು ? " ಮೂಲಂಗಿ ಅಂತಾರಲ್ಲ, ಅದಾಗಿರಬಹುದು "
" ಏನೋ ಒಂದು ಮಾಡು, ಕೆಲಸದಾಳುಗಳಿಗೂ ಆಗ್ಬೇಕಲ್ಲ "
ನಮ್ಮೆಜಮಾನ್ರು ತಂದು ಹಾಕಿದ್ದನ್ನು ಏನೋ ಒಂದು ಅಡುಗೆ ಮಾಡಲು ಹೊರಟಾಗ ಸುಲಭದಲ್ಲಿ ನೆನಪಾದದ್ದು ಬೇಯಿಸದೇ ಮಾಡಬಹುದಾದ ವೆಜಿಟೆಬಲ್ ಸಲಾಡ್.
ಹಸಿಹಸಿಯಾಗಿ ತಿನ್ನುವಂತಹ ತರಕಾರಿಗಳನ್ನು ಚೆನ್ನಾಗಿ ತೊಳೆದು ಇಟ್ಟಾಯ್ತು, ಎಷ್ಟಾದರೂ ರಸ್ತೆಪಕ್ಕದ ಮಾಲುಗಳಲ್ವೇ, ತೊಳೆದಷ್ಟೂ ಒಳ್ಳೆಯದು. ಚಿಕ್ಕದಾಗಿ ಹಚ್ಚಿದ್ದೂ ಆಯಿತು.
ನಿತ್ಯಕಟ್ಟಳೆಯ ಕೊದ್ದೆಲ್ ಗೆ ತೆಂಗಿನಕಾಯಿ ತುರಿಯೊಂದಿಗೆ ಇನ್ನಿತರ ಮಸಾಲೆಗಳನ್ನು ಅರೆಯುವಾಗ ನಾಲ್ಕಾರು ಬೀಂಬುಳಿಗಳನ್ನೂ ಕೂಡಿಕೊಂಡು ಅರೆಯುವುದು ನನ್ನ ಪದ್ಧತಿ. ಅದಕ್ಕಾಗಿ ಹತ್ತಾರು ಬೀಂಬುಳಿಗಳನ್ನೂ ಕೊಯ್ದು ಇಟ್ಕೊಂಡಿದ್ದೆ. ಹುಣಸೇಹುಳಿ ಗಿವುಚಿ ಹಾಕುವ ಪ್ರಸಂಗ ಇಲ್ಲಿಲ್ಲ.
ಹಸಿ ತರಕಾರಿಗಳನ್ನು ಹಚ್ಚುತ್ತಿದ್ದ ಹಾಗೆ ಆಗ ತಾನೇ ಮರದಿಂದ ಕೊಯ್ದು ತಂದಿದ್ದ ತಾಜಾ ಬೀಂಬುಳಿ ಕಣ್ಣಿಗೆ ಬಿತ್ತು. ಸರಿ, ಬೀಬುಳಿಯೂ ಕತ್ತರಿಸಲ್ಪಟ್ಟಿತು, ಸಲಾಡ್ ಜತೆ ಸೇರಿ ತಾಜಾ ನಗು ಬೀರಿತು.
0 comments:
Post a Comment