Pages

Ads 468x60px

Sunday, 22 January 2012

ಮೈಕ್ರೋ ವೇವ್ ಕುಕ್ಕಿಂಗ್


ಮೈಕ್ರೋ ವೇವ್ ಓವೆನ್ ನನ್ನ ಅಡುಗೆ ಮನೆಗೆ ಬಂದೇ ಬಿಟ್ಟಿತು . ಈಗಲ್ಲ , 8 ವರ್ಷಗಳ ಹಿಂದೆ. ಇನ್ನಿತರ ಅಡುಗೆ ಉಪಕರಣಗಳ ಮುಂದೆ ಭೂಷಣಪ್ರಾಯವಾಗಿ ಕುಳಿತೇ ಬಿಟ್ಟಿತು .

ಮುಂದಿನ ಕೆಲಸ , ಅಡುಗೆ ತಯಾರಿ ? ಹೇಗೆ , ಏನು , ಎತ್ತ ಯಾವ ಮಾಹಿತಿಯೂ ಅದರ ಕ್ಯಾಟಲಾಗ್ ನಲ್ಲಿ ಇಲ್ಲ .

"ಗೊತ್ತಾಗದಿದ್ರೆ ಇಂಟರ್ನೆಟ್ ನೋಡಿ ಕಲಿ " ಎಂದರು ಮನೆ ಯಜಮಾನ್ರು .

ಸರಿ , ನೆಟ್ ಜಾಲಾಟ ಪ್ರಾರಂಭಿಸಿಯೇ ಬಿಟ್ಟೆ . ಏನೇನೋ ಮಾಹಿತಿಗಳು ಸಿಕ್ಕವು , ಉಪಯೋಗದ ಮಾಹಿತಿ ಬಿಟ್ಟು . ಆರೋಗ್ಯಕ್ಕೆ ಹಾನಿಕರ ಎಂಬ ಮಾಹಿತಿಯಂತೂ ನನ್ನ ತಲೆ ಚಿಟ್ಟು ಹಿಡಿಸಿ ಬಿಟ್ಟಿತು.

"ಇಲೆಕ್ಟ್ರಾನಿಕ್ ಸಾಮಗ್ರಿಗಳ ಆಯುಸ್ಸು ಒಂದರಿಂದ ಎರಡು ವರ್ಷದ ವರೆಗೆ , ಅದನ್ನು ನೆನಪಿಟ್ಟುಕೋ " ಎಂಬ ಹಿತೊಪದೇಶವೂ ನಮ್ಮವರಿಂದ ದೊರೆಯಿತು .

ಅಕ್ಕ ಪಕ್ಕದ ಮನೆಯವರಲ್ಲಿ ನೆಟ್ಟಗೆ ಅನ್ನ, ಪಲ್ಯ ಮಾಡುವುದು ಹೇಗೆ ಎಂದು ಕೇಳೋಣ ಎಂದರೆ ಅವರಾರೂ ಇಂತಹ ಪೆಟ್ಟಿಗೆಯನ್ನು ಕಂಡವರೇ ಅಲ್ಲ .

ಸರಿ, ನನ್ನ ಪಾಡಿಗೆ ಪ್ರಯೋಗ ಆರಂಭಿಸಿದೆ . ನೀರು ಕ್ಷಣದಲ್ಲಿ ಕುದಿಯಿತು. ಚಹಾ ಪುಡಿ ಹಾಕಿ ಟೀ ತಯಾರಿ ಆಯಿತು . ಈ ಚಹಾ ಕುಡಿಯಲು ನಮ್ಮ ಕೆಲಸದವನೂ ಒಪ್ಪಲಿಲ್ಲ . "ಎನ್ನ ಚಾಯ ಈರು ಗ್ಯಾಸುಟೆ ಮನ್ಪುಲೇ " ಎಂದ !

ಮುಂದಿನ ಪ್ರಯೋಗದಲ್ಲಿ ಅನ್ನ ಬೇಯಲಿಲ್ಲ ! ಬೇಳೆ ಇಟ್ಟದ್ದು ಹಾಗೇ ಇತ್ತು ! ತರಕಾರಿಗಳೂ ಸುಮ್ಮನಿದ್ದುವು ! ಹಾಗಾಗಿ ನನ್ನ ಪೆಟ್ಟಿಗೆ ಸುಮ್ಮನೆ ಬಿದ್ದುಕೊಂಡಿತ್ತು . ಒಂದು ದಿನ ನನ್ನ ಅತ್ತಿಗೆ ಬಂದವರು , "ನನ್ನ ತಮ್ಮ ತಂದು ಕೊಟ್ಟಿದ್ದನ್ನು ಉಪಯೋಗಿಸದೇ ಹಾಗೇ ಇಟ್ಟಿದ್ದಿಯಲ್ಲ " ಎಂದು ಮೂದಲಿಸಿ ಹೋದರು .

ನನ್ನ ತಂಗಿ ಬಂದಳು . ಬರುವಾಗ ಒಂದಷ್ಟು ಲಡ್ಡುಗಳನ್ನೂ ತಂದಿದ್ದಳು . ಲಡ್ಡುಗಳನ್ನು ಡಬ್ಬಿಗೆ ತುಂಬಿಸಿ ಆ ಪ್ಲಾಸ್ಟಿಕ್ ಕ್ಯಾರೀ ಬ್ಯಾಗನ್ನು ಆಚೆ ಎತ್ತಿಟ್ಟೆ . ಹಾಗೇ ಸುಮ್ಮನೆ ಅದರಲ್ಲಿ ಬರೆದಿದ್ದರ ಕಡೆ ಕಣ್ಣು ಹಾಯಿಸಿದೆ . ಬಾಸುಮತಿ ಅಕ್ಕಿಯ ಬ್ಯಾಗ್ ಅದಾಗಿತ್ತು . ಬಾಸುಮತಿ ಅನ್ನ ಒಲೆಯಲ್ಲಿ, ಕುಕ್ಕರಿನಲ್ಲಿ , ಮೈಕ್ರೋ ವೇವ್ ನಲ್ಲಿ ಮಾಡುವುದನ್ನು ಅದರಲ್ಲಿ ಬರೆದಿತ್ತು !

ಅಡುಗೆಯ ಗುಟ್ಟು ತಿಳಿದೇ ಬಿಟ್ಟಿತು . 1 ಲೋಟ ಅಕ್ಕಿಯನ್ನು 10 ನಿಮಿಷ ನೆನೆಸಿ ಓವೆನ್ ನಲ್ಲಿ 7 ನಿಮಿಷಗಳ ಕಾಲ ಮುಚ್ಚಿ 100 ಡಿಗ್ರಿ ಉಷ್ಣತೆಯಲ್ಲಿ ಅಕ್ಕಿಯ ಎರಡರಷ್ಟು ನೀರು ಹಾಕಿ ಇಟ್ಟರಾಯಿತು . ಆದ ಕೂಡಲೇ ತೆರೆಯುವಂತಿಲ್ಲ . 10 ನಿಮಿಷ ಬಿಟ್ಟೇ ತೆಗೆಯಬೇಕೆಂಬ ಸೂಚನೆಯನ್ನು ಪಾಲಿಸಿ ಅನ್ನ ತಯಾರಿಸಿಯೇ ಬಿಟ್ಟೆ ! ಅಲ್ಲಿಂದ ಮತ್ತೆ ನಾನು ಓವೆನ್ ಅಡುಗೆಯಲ್ಲಿ ಸೋತದ್ದೇ ಇಲ್ಲ .


0 comments:

Post a Comment