Pages

Ads 468x60px

Monday, 15 April 2013

ಬಂದಿದೆ ಬಿರು ಬೇಸಿಗೆ, ಇಲ್ಲಿದೆ ನೀರು ಮಜ್ಜಿಗೆ....





ಪಕ್ಕದಮನೆಯಾಕೆ ಬಂದರು.  ಕೈಯಲ್ಲಿ ಒಂದು ಸ್ಟೀಲು ಲೋಟ,  " ಮಜ್ಜಿಗೆ ಬೇಕಿತ್ತು..."
" ಅಷ್ಟೇನಾ,  ಕೂತಿರಿ,  ತರ್ತೇನೆ .."
" ಮಜ್ಜಿಗೆ ಮಾಡೂದು ಹೇಗೇ..."
ಆಕೆಗೆ ಮಜ್ಜಿಗೆ ತಯಾರಿಸುವ ವಿಧಾನವನ್ನು ಸಾದ್ಯಂತವಾಗಿ ವಿವರಿಸಿ ಹೇಳಿಯಾಯ್ತು.

ಮಜ್ಜಿಗೆಯಲ್ಲಿ ಅಂತಹ ಮಹತ್ವವೇನಿದೆ ?   ಕಾದಾರಿದ ಹಾಲಿಗೆ ಸ್ವಲ್ಪ ಹುಳಿಯಾದ ಮೊಸರು ಅಥವಾ ಮಜ್ಜಿಗೆ ಎರೆದು ಮುಚ್ಚಿಟ್ಟರಾಯಿತು,  ಕೆಲವು ಗಂಟೆಗಳಲ್ಲಿ ದಪ್ಪ ಮೊಸರು ಸಿದ್ಧ.  ಮೊಸರನ್ನು ಕಡೆದು,  ಬೆಣ್ಣೆಯನ್ನು ತೆಗದು ಉಳಿಯುವ ಶೇಷವೇ ಮಜ್ಜಿಗೆ.   ಈ ಮಜ್ಜಿಗೆಗೆ ಉಪ್ಪು,  ಹಸಿಮೆಣಸು ಹಾಗೂ ಬೇವಿನೆಲೆಯ ಒಗ್ಗರಣೆ ಕೊಟ್ಟು ಬೇಕಾದ ನೀರು ಸೇರಿಸಿದರೆ ಮಜ್ಜಿಗೆನೀರು ತಯಾರು.   ಸಾಂಪ್ರದಾಯಿಕ ಔತಣಕೂಟಗಳಲ್ಲಿ  ಕೊನೆಯ ತುತ್ತು ಅನ್ನ ಈ ಒಗ್ಗರಣೆಭರಿತ ಮಸಾಲಾ ಮಜ್ಜಿಗೆಗೆ ಮೀಸಲು.

ಬಂದಿದೆ ಬಿರು ಬೇಸಿಗೆ
ಇಲ್ಲಿದೆ ನೀರು ಮಜ್ಜಿಗೆ
ತಣಿಯಲಿ ದಾಹದ ಬೇಗೆ....

ಇದಲ್ಲದೆ ನಮಗೆ ಇಷ್ಟ ಬಂದಂತೆ ಮಸಾಲಾ ಮಜ್ಜಿಗೆ ತಯಾರಿಸಬಹುದು.   ಶುಂಠೀ,  ಗಾಂಧಾರೀಮೆಣಸು ನುರಿದು,  ಸುವಾಸನಾಯುಕ್ತ ಮಾಂಙನ್ನಾರೀ ಜೊತೆಯಲ್ಲಿ ಕುಡಿಯಬಹುದು.
  ಅನ್ನದ ಗಂಜಿಗೆ ಮಜ್ಜಿಗೆ ಬೆರೆಸಿ,  ಈ ಸೂಪ್ ಊಟದ ಅರ್ಧ ಗಂಟೆ ಮುಂಚಿತವಾಗಿ ಕುಡಿದು ಬಳಲಿಕೆ ನಿವಾರಿಸಿ.





ಮೊಸರನ್ನು ಹಾಗೇ ಮಿಕ್ಸಿಯಲ್ಲಿ ತಿರುಗಿಸಿ ಉಪ್ಪು ಅಥವಾ ಸಕ್ಕರೆಯೊಂದಿಗೆ ಕುಡಿಯುವ ಸಂಪ್ರದಾಯ ಉತ್ತರಭಾರತೀಯರದ್ದು.   ಇದಕ್ಕೆ ವಾಡಿಕೆಯಲ್ಲಿ ಲಸ್ಸೀ ಎಂದೂ ಹೆಸರಿದೆ.  ಸಿಹಿ ಮಜ್ಜಿಗೆ ಹಾಗೂ ಮಾವಿನಹಣ್ಣಿನ ರಸದ ಸಂಯೋಜನೆ ಮ್ಯಾಂಗೋ ಲಸ್ಸೀ ಎಂದೇ ಜನಪ್ರಿಯವಾಗಿದೆ.

ಇನ್ನೊಂದು ಕುತೂಹಲಕಾರೀ ಸಂಗತಿ ಗೊತ್ತಾ,  ಬಡಜನರೇ ಹೆಚ್ಚಿರುವ ನಮ್ಮೀ ಭಾರತದೇಶದಲ್ಲಿ ವಾಶಿಂಗ್ ಮೆಶೀನುಗಳು ಹೆಚ್ಚು ಮಾರಾಟವಾಗುತ್ತಿರುವುದು ವಿದೇಶೀ ಉದ್ಯಮಿಗಳನ್ನು ಚಕಿತಚಿತ್ತರನ್ನಾಗಿಸಿ,  ಇಲ್ಲಿಗೆ ಅಧ್ಯಯನತಂಡವೊಂದು ಬಂದು ಬೆಕ್ಕಸಬೆರಗಾಗುವಂತೆ ಮಾಡಿದ್ದು ಲಸ್ಸೀ ಪಾರ್ಲರುಗಳು.   ಯಾಕಂತೀರಾ,  ಲಸ್ಸೀ ಪಾರ್ಲರುಗಳ ಒಳಗಿರುವ ಯಂತ್ರಗಳು ವಾಶಿಂಗ್ ಮೆಶೀನುಗಳಾಗಿದ್ದುವು !

ತಂಪು ಹುಳಿ ಅಥವಾ ತಂಬುಳಿ: 
 ತೆಂಗಿನತುರಿ, ತುಸು ಜೀರಿಗೆ ಹಾಗೂ ಮಜ್ಜಿಗೆ,  ರುಚಿಗೆ ಉಪ್ಪು.   ಇವಿಷ್ಟನ್ನು ನುಣ್ಣಗೆ ಅರೆದು,  ಇನ್ಯಾವುದೇ ಸೊಪ್ಪುಸದೆ ಸೇರಿಸಿದ್ದೇ ಆದಲ್ಲಿ ಆ ತಂಬುಳಿಗೆ ಶುಂಠಿ ತಂಬುಳಿ,  ಒಂದೆಲಗದ ತಂಬುಳಿ ಇತ್ಯಾದಿ ಹೆಸರುಗಳು.   ಈ ತಂಬುಳಿಗಳನ್ನು ಕುದಿಸುವ ಪದ್ಧತಿ ಇಲ್ಲ.   ಔಷಧೀ ರೂಪದ ತಂಬುಳಿಗಳನ್ನು ಕುದಿಸುವ ವಾಡಿಕೆ ಇದೆ.   ಹಿಂದೆ ಬಾಣಂತಿಯರಿಗೆ ಹತ್ತು ದಿನಗಳ ಕಾಲ ಕಡ್ಡಾಯವಾಗಿ ಪಥ್ಯಾಹಾರ ರೂಢಿಯಲ್ಲಿತ್ತು.   ಓಮದ ತಂಬುಳಿ,  ಮೆಂತೆ ತಂಬುಳಿಗಳ ಬಳಕೆ ಸಾಮಾನ್ಯವಾಗಿತ್ತು.  ಈ ಕಾಳುಗಳನ್ನು ತುಪ್ಪದಲ್ಲಿ ಹುರಿದು,  ತೆಂಗಿನತುರಿಯೊಂದಿಗೆ ಅರೆದು,  ಮಜ್ಜಿಗೆ ಎರೆದು ಕುದಿಸಿಯೇ ಇಡುವ ಕ್ರಮ.  ಆದರೆ ಈಗಿನ ವೈದ್ಯಕೀಯ ಪದ್ಧತಿ ಈ ಹಳೇ ಕ್ರಮಗಳನ್ನು ಪಾಲಿಸಬೇಕೆಂದು ಹೇಳುವುದೇ ಇಲ್ಲ,    ಚಿಂತೆ ಬೇಕಿಲ್ಲ.




ಮಜ್ಜಿಗೆ ಹುಳಿ:
ತರಕಾರಿ ಬೇಯಿಸಿ.   ಸೌತೆ,  ಕುಂಬಳ,  ತೊಂಡೆಕಾಯಿಗಳು ಮಜ್ಜಿಗೆಹುಳಿ ತಯಾರಿಯಲ್ಲಿ ಹೆಸರುವಾಸಿಯಾಗಿವೆ.  ತೆಂಗಿನತುರಿ ನುಣ್ಣಗೆ ಬೆಣ್ಣೆಯಂತೆ ಅರೆದು,  ದಪ್ಪ ಮಜ್ಜಿಗೆ ಸೇರಿಸಿ ಬೇವಿನಸೊಪ್ಪು ಒಗ್ಗರಣೆ ಕೊಟ್ಟರಾಯಿತು.  ಬೆಲ್ಲ ಹಾಕಬೇಕಾಗಿಲ್ಲ,  ಹುಳಿ ಮಜ್ಜಿಗೆಯಲ್ಲೇ ಇದೆ.  ರುಚಿಗೆ ಉಪ್ಪು ಹಾಕಿದ್ರೆ ಮುಗೀತು.   ಅತೀ ಕಡಿಮೆ ಖರ್ಚಿನ ವ್ಯಂಜನ. ಯಾರಿಗೆ ?   ಮನೆಯಲ್ಲಿ ಹೈನುಗಾರಿಕೆ ಇದ್ದವರಿಗೆ,  ಹಿತ್ತಿಲಲ್ಲಿ ಕಲ್ಪವೃಕ್ಷವೆನಿಸಿದ ತೆಂಗಿನಮರಗಳು ಇದ್ದವರಿಗೆ ಮಾತ್ರ.   ಎಲ್ಲಾ ಸಾಮಗ್ರಿಗಳನ್ನು ಮಾರ್ಕೇಟ್ ನಿಂದ ತಂದೇ ಆಗಬೇಕಾದವರಿಗೆ ಮಜ್ಜಿಗೆಹುಳಿ ದುಬಾರಿಯೇ.   ಮಜ್ಜಿಗೆಹುಳಿಗೆ ಉಪಯೋಗಿಸುವ ತೆಂಗಿನಕಾಯಿ ಕೂಡಾ ಹಸಿಯಾಗಿದ್ದರೇ ಚೆನ್ನ.  

ಇಲ್ಲಿ ಮಜ್ಜಿಗೆಹುಳಿ ಹಾಗೂ ಮೇಲೋಗರ ಅಂದ್ರೆ ಒಂದೇನಾ ಎಂಬ ಪ್ರಶ್ನೆ ಏಳಬಹುದು.   ಅನ್ನದ ಮೇಲೆ ಎರೆದು ತಿನ್ನುವಂತಹ ಯಾವುದೇ ವ್ಯಂಜನಕ್ಕೆ ಮೇಲೋಗರ ಎಂದು ಹೆಸರು.   " ಊಟಕ್ಕೆ ಏನು ಮೇಲೋಗರ ಮಾಡಿದ್ದೀರಾ "   ಅಂದ್ರೆ ನಿಮ್ಮ ರಸಂ ಅಥವಾ ಕರೀ ಯಾವ ನಮೂನೆಯದು ಎಂದು ಅರ್ಥೈಸಬಹುದು.




ಪಳದ್ಯ:
  2 ಚಮಚಾ ಕಡ್ಲೇಹಿಟ್ಟನ್ನು ಒಂದು ಲೋಟ ನೀರಿನಲ್ಲಿ ಕಾಳುಕಟ್ಟದಂತೆ ಮಿಶ್ರಗೊಳಿಸಿ ಇಡಿ.   ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ಸಾಸಿವೆ ಸಿಡಿಯುತ್ತಿದ್ದಂತೆ ಬೇವಿನೆಲೆ,  ಸಿಗಿದ ಹಸಿಮೆಣಸು,  ಚಿಟಿಕೆ ಅರಸಿನ ಹಾಕಿ,  ಕಡ್ಲೇಹಿಟ್ಟಿನ ನೀರನ್ನು ಎರೆದು ಕುದಿಸಿ.   ಕುದಿದು ದಪ್ಪ ಬಂದ ಹಾಗೆ ಒಂದು ಲೋಟ ಮಜ್ಜಿಗೆ ಎರೆದು ಬಿಡಿ.  ಒಂದು ಕುದಿ ಬಂದೊಡನೆ ಕೆಳಗಿಳಿಸಿ.   ಸೆಕೆಗಾಲದಲ್ಲಿ ಇಂತಹ ಸಹವ್ಯಂಜನಗಳೇ ಊಟಕ್ಕೆ ಹಿತವೆನ್ನಿಸುತ್ತವೆ.   ಸಾಂಪ್ರದಾಯಿಕವಾಗಿ ತೆಂಗಿನತುರಿಯಲ್ಲಿ ಪಳದ್ಯ ತಯಾರಿ.     ಆದರೆ ಈ ಮೇಲಿನ ವಿಧಾನದಲ್ಲಿ ಇದರ ತಯಾರಿಯೂ ಸರಳ,  ಅಡುಗೆ ಗೊತ್ತಿಲ್ಲದವರಿಗೂ ಮಾಡಿಕೊಳ್ಳಬಹುದು.   ಸೂಪ್ ಥರ ಕುಡಿಯಲೂ ಅಡ್ಡಿಯಿಲ್ಲ.




ಅನಾರೋಗ್ಯದಿಂದ ಹಾಲನ್ನು ಜೀರ್ಣಿಸಿಕೊಳ್ಳಲು ಶಕ್ತಿಯಿಲ್ಲದಿದ್ದಾಗ ಕುದಿಯುತ್ತಿರುವ ಹಾಲಿಗೆ ಲಿಂಬೇರಸ ಎರೆದು ಆ ಕೊಡಲೇ ದಪ್ಪಗಟ್ಟಿದ ಕೆನೆ ತೆಗೆದು ಉಳಿದ ತಿಳಿರಸದ ಸೇವನೆ ಮಜ್ಜಿಗೆಯ ಸರ್ವಶಕ್ತತೆಗೆ ಸಾಕ್ಷಿ.   ಹೀಗೆ ದಪ್ಪಗಟ್ಟಿದ ಕೆನೆಯನ್ನು ಸಿಹಿತಿಂಡಿಗಳ ತಯಾರಿಗೆ ಬಳಸುವ ರೂಢಿ.   ಮೊಸರು ಹಾಗೂ ಜೇನು ಸೇರಿಸಿದ ದ್ರವ್ಯ ಧಾರ್ಮಿಕ ವಿಧಿಗಳಲ್ಲಿ ದೇವತಾಪ್ರಸಾದವಾಗಿ ವಿನಿಯೋಗಿಸಲ್ಪಡುತ್ತದೆ.

ಪಕ್ಕದಮನೆಯಾಕೆಗೆ ಮಜ್ಜಿಗೆ ತಯಾರಿಯ ಕ್ರಮ ಹೇಳಿಕೊಟ್ಟರೆ ಸಾಕೇ,  ಇಲ್ಲಿಯೂ ಬರೆಯದಿದ್ದರೆ ಹೇಗೆ ?

ಪ್ರತಿದಿನವೂ ಮೊಸರು ಕಡೆದು,  ಬೆಣ್ಣೆ ತೆಗೆದು  ಮಜ್ಜಿಗೆಯನ್ನು ಗಾಳಿಯಾಡದ ಹಾಗೆ ಹಿಂದಿನವರು ಭರಣಿಗಳಲ್ಲಿ  ಶೇಖರಿಸಿಡುತ್ತಿದ್ದರು.  ಈಗಿನ ಕಾಲಕ್ಕೆ ತಕ್ಕ ಹಾಗೆ ನಾವು ಗಾಜಿನ ಜಾಡಿಗಳಲ್ಲಿ ತುಂಬಿಟ್ಟರೆ ಸೈ.  ಮಾರನೇ ದಿನ ಪುನಃ ಮೊಸರು ಕಡೆದು,  ನಿನ್ನೆಯ ಮಜ್ಜಿಗೆಯ ಮೇಲಿನ ನೀರು ಚೆಲ್ಲಿ,  ಇನ್ನೊಂದು ಜಾಡಿಗೆ ಮಜ್ಜಿಗೆಯನ್ನು ವರ್ಗಾಯಿಸಿ,  ಮೇಲಿನಿಂದ ಇಂದಿನ ಸಿಹಿ ಮಜ್ಜಿಗೆ ಎರೆದಿಡಬೇಕು.   ನಿನ್ನೆಯ ಮಜ್ಜಿಗೆಯ ಜಾಡಿಯ ತಳದಲ್ಲಿ ದಪ್ಪಗಟ್ಟಿದ ಮಜ್ಜಿಗೆಯೂ ಬೇಡ.   

ಮಜ್ಜಿಗೆಯನ್ನು ಹೀಗೆ ಎರಡು ವಾರಗಳ ತನಕ ಸಂಗ್ರಹಿಸಿಡಬಹುದು.   ನಿರುಪಯುಕ್ತವೆನಿಸಿದ ಮಜ್ಜಿಗೆಯನ್ನು ಕೈತೋಟದ ಸಸ್ಯಗಳಿಗೆ ಎರೆಯುವುದರಿಂದ ಆಮ್ಲೀಯತೆಯನ್ನು ಬಯಸುವ ಗಿಡಗಳೂ ಸೊಗಸಾಗಿರುತ್ತವೆ.

ಮನೆಮದ್ದು :
ವಿಪರೀತ ತಿಂದು ವಾಯುಪ್ರಕೋಪಗೊಂಡಾಗ,   ಇಂಗು ಹಾಗೂ ಉಪ್ಪು ಹಾಕಿ ಮಜ್ಜಿಗೆಯ ಸೇವನೆ.   ಚಟಿಕೆ ಅರಸಿನವನ್ನೂ ಹಾಕಬಹುದು.
ಮಜ್ಜಿಗೆಗೆ ಬೆಳ್ಳುಳ್ಳಿ ಜಜ್ಜಿ ಹಾಕಿ ಕುಡಿಯುವುದರಿಂದ ಜಂತುಹುಳಗಳ ಪೀಡೆ ಶಮನ.
ದಾಳಿಂಬೆ ಸಿಪ್ಪೆ ಅರೆದು ಮಜ್ಜಿಗೆ ಬೆರೆಸಿ ಕುಡಿಯುವುದರಿಂದ ಬೇಧಿಯಿಂದ ಮುಕ್ತಿ.
ಪ್ರತಿದಿನವೂ ಶುಂಠಿ ಬೆರೆಸಿದ ಮಜ್ಜಿಗೆಯ ಉಪಯೋಗದಿಂದ ಗಂಟುನೋವುಗಳಿಗೆ ಉಪಶಮನ ಪ್ರಾಪ್ತಿ.

ಹಾಲಿಗಿಂತ ಕಡಿಮೆ ಕೊಬ್ಬು ಹಾಗೂ ಹಾಲಿಗಿಂತ ಹೆಚ್ಚು ಲ್ಯಾಕ್ಟಿಕ್ ಆಮ್ಲ ಮಜ್ಜಿಗೆಯಲ್ಲಿದೆ,  ಜೀರ್ಣಿಸಲು ಸುಲಭ.   ಪೊಟ್ಯಾಷಿಯಂ,   ವಿಟಮಿನ್ ಬಿ ಕಾಂಪ್ಲೆಕ್ಸ್,  ರಿಬೊಫ್ಲೆವಿನ್,  ಕ್ಯಾಲ್ಸಿಯಂ ಹಾಗೂ ಫಾಸ್ಫರಸ್ ಗಳಿಂದ ಸಮೃದ್ಧವಾಗಿದೆ ಈ ಮಜ್ಜಿಗೆ.

Posted via DraftCraft app

0 comments:

Post a Comment