Monday, 22 April 2013
ರಾಗೀ ಹಾಲುಬಾಯೀ
ಮುಂಜಾನೆಗೊಂದು ತಿಂಡಿಯ ಹಿಟ್ಟು ಉಳಿದಿತ್ತು. ಅಕ್ಕೀ, ರಾಗೀ ಹಾಕಿ ಮಾಡಿದ್ದು ತೆಳ್ಳವು, ನಮಗಿಬ್ಬರಿಗೆ ಬೇಕಾದ ದೋಸೆ ಎರೆದು ಮಿಕ್ಕುಳಿದ ಹಿಟ್ಟು ಒಂದು ದೊಡ್ಡ ಲೋಟಾ ಆಗುವಷ್ಟು ಇತ್ತು.
" ಇರಲಿ, ಸಂಜೆ ಪುನಃ ದೋಸೆ ಎರೆದು ತಿಂದ್ರಾಯ್ತು " ಅಂತೀರಾ,
ಅದನ್ನೇ ತಿನ್ನೋದಿಕ್ಕೆ ಬೇಜಾರು. ಇದನ್ನು ಹಾಲುಬಾಯಿ ಮಾಡಿದ್ರೆ ಹೇಗೆ ?
ಹಾಲುಬಾಯಿ ಅಂದ್ರೆ ಏನೂಂತ ಗೊತ್ತಿಲ್ಲದವರಿಗೆ ಮಾಡುವ ವಿಧಾನ ಹೇಳದಿದ್ದರೆ ಹೇಗೆ ?
ಅಕ್ಕಿಹಿಟ್ಟು, ತೆಂಗಿನಕಾಯಿ ಹಾಲು, ಬೆಲ್ಲ. ಇದು ಮಾಮೂಲು ಸಾಮಗ್ರಿ. ತುಂಬ ಮೃದುವಾದ ಈ ಸಿಹಿಭಕ್ಷ್ಯ, ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರಿಗೂ ಹಿತಕರ ಹಾಗೂ ರುಚಿಕರ. ಹಳೇ ಕಾಲದವರ, ಮಾಡಲು ಸುಲಭವಾದ ಸಿಹಿತಿಂಡಿ. ಹಸರೇ ಹೇಳುವಂತೆ ಈ ತಿಂಡಿಯನ್ನು ಕಂಡು ಹಿಡಿದವರೂ ನಮ್ಮ ಕನ್ನಡಿಗರೇ ಎಂದು ನನ್ನ ಊಹೆ. ಬಾಯಿಗೆ ಹಾಕಿದ್ರೆ ಮುಗೀತು, " ಬುಳುಕ್ " ಎಂದು ಉದರ ಪ್ರವೇಶ ಅಲ್ವೇ... ಹಾಲುಗಲ್ಲ, ಹಾಲುಹಸುಳೆ ಇತ್ಯಾದಿ ರೂಢನಾಮಗಳಂತೆ ಈ ತಿಂಡಿ ಹಾಲುಬಾಯಿ ಆಗ್ಹೋಗಿದೆ ಅನ್ನಿ.
ಈ ಪಾಕವಿಧಾನ ಮಾಡಲು ಸುಲಭ ಯಾರಿಗೆ ? ಯಂತ್ರೋಪಕರಣಗಳ ಯುಗದಲ್ಲಿ ಇರುವಂತಹ ನಮ್ಮಂತಹವರಿಗೆ. ಅಂದಿನ ಕಾಲದ ಪಾಕತಜ್ಞೆಯರು ಕಟ್ಟಿಗೆಯ ಒಲೆ, ಮಣ್ಣಿನ ಮಡಕೆ, ರುಬ್ಬುವ ಗುಂಡು, ಬೀಸೋಕಲ್ಲುಗಳ ಸಾಂಗತ್ಯದಿಂದಲೇ ಅಡುಗೆಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದವರೆಂಬುದನ್ನು ಮರೆಯದಿರೋಣ.
ನನ್ನತ್ತೆ ಕೂಡಾ ವೈವಿಧ್ಯಮಯವಾದ ಮಣ್ಣಿನ ಮಡಕೆಗಳನ್ನು ಬಳಸುತ್ತಿದ್ದರು. ಅಡುಗೆಮನೆಯ ಜೆಂಙದ ಮೇಲೆ ಸಾಲಾಗಿ ಉಪ್ಪಿನಕಾಯಿ ಭರಣಿಗಳು, ಅದರ ಮೇಲೆ ಕವುಚಿ ಹಾಕಲ್ಪಟ್ಟ ಮಣ್ಣಿನ ಮಡಕೆಗಳು, ಯಾವುದನ್ನೂ ನಾವು ಮುಟ್ಟುವ ಹಾಗಿರಲಿಲ್ಲ. ಭರಣಿ ಕೆಳಗಿಳಿಸಿ ಉಪ್ಪಿನಕಾಯಿ ಹೊರ ತೆಗೆಯುವ ಕಲೆಗಾರಿಕೆ ನಮ್ಮತ್ತೆಗೆ ಮಾತ್ರ ಗೊತ್ತಿತ್ತು. ಅಡುಗೆಮನೆಯ ಎಬಿಸಿಡಿ.. ಗೊತ್ತೇ ಇಲ್ಲದ ನಾನು ಯಾವ ಉಸಾಬರಿಗೂ ತಲೆ ಹಾಕ್ತಾನೇ ಇರಲಿಲ್ಲ. ಒಮ್ಮೆ ಏನಾಯ್ತು, ನನಗೂ ಅಡುಗೆ ಮಾಡುವ ಉಮೇದು ಬಂದು, ಪುನರ್ಪುಳಿ ಸಾರು ಮಾಡಲು ತೊಡಗಿದೆ. ಸಾರೇನೋ ಆಯ್ತು, ಕಟ್ಟಿಗೆಯ ಒಲೆಯ ಮೇಲಿಂದ ಮಣ್ಣಿನ ಮಡಕೆಯಲ್ಲಿ ಕುದಿದ ಸಾರನ್ನು ಕೆಳಗಿಳಿಸುವ ಧಾವಂತದಲ್ಲಿ ಕೈ ಜಾರಿ ಕೆಳಗೆ ಬಿದ್ದ ಮಡಕೆ ಹೋಳು ಹೋಳಾಗಿ, ಸಾರು ಪೂರಾ ಒಲೆಗೆ ಚೆಲ್ಲಿ, ಒಲೆಯ ಬೆಂಕಿ ಆರಿ, ಬೂದಿಯೆಲ್ಲ ಹಾರಿ, ಅನಾಹುತವನ್ನು ನನ್ನತ್ತೆ ನೋಡಿ " ನೀನು ಮಡಕೆಯಲ್ಲಿ ಅಡುಗೆ ಮಾಡೂದು ಬೇಡ " ಎಂದು ಅಪ್ಪಣೆ ಕೊಡಿಸಿದ್ರು.
ಈ ಹಳೇ ಕಥೆಗಳೆಲ್ಲ ಒತ್ತಟ್ಟಿಗಿರಲಿ, ನಾವು ಇಂದಿನ ಕಾಲಧರ್ಮಕ್ಕನುಸಾರ ಹಾಲುಬಾಯಿ ಮಾಡಿಕೊಳ್ಳೋಣ..
ಈಗ ಉಳಿದಿರುವ ಹಿಟ್ಟಿನಲ್ಲಿ ರಾಗಿಯೂ ಇದೆ. ಅದಕ್ಕೆ ಬೆಲ್ಲ ಹಾಕಿದ್ರೆ ಮತ್ತೂ ಕಪ್ಪಗಾಗಿ ಬಿಡುತ್ತೆ, ನಾವು ಒಂದು ಕಪ್ ಸಕ್ಕರೆ ಹಾಕೋಣ.
ಮನೆಯಲ್ಲಿ ಇರೋರು ನಾವಿಬ್ಬರೇ, ಒಂದ್ಹತ್ತು ಮಂದಿಯಾದರೂ ಇದ್ದಿದ್ದರೆ ತೆಂಗಿನಕಾಯಿ ತುರಿದು, ಕಡೆದು, ಹಾಲು ತೆಗೆದು ಹಾಕಬಹುದಿತ್ತು, ಹಾಗಾಗಿ ಒಂದು ಲೋಟ ಹಸುವಿನ ಹಾಲು ಅಥವಾ ಎಮ್ಮೆಹಾಲು...ಬೇಡ ಬಿಡಿ, ಪ್ಯಾಕೆಟ್ ಹಾಲು ಹಾಕೋಣ.
ಇನ್ನು ತುಪ್ಪ ಸವರಿದ ಬಾಣಲೆ ಒಲೆ ಮೇಲೆ ಇಡಿ. ನೀರುದೋಸೆ ಹಿಟ್ಟು, ಹಾಲು ಎರೆದು ಸೌಟಿನಲ್ಲಿ ಮಗುಚುತ್ತಾ ಇರಿ. ಐದೇ ನಿಮಿಷದಲ್ಲಿ ಹಿಟ್ಟು ಬೆಂದು ಮುದ್ದೆಗಟ್ಟಿತೇ, ಈಗ ಸಕ್ಕರೆ ಸುರಿಯಿರಿ. ಸಿಹಿ ಹೆಚ್ಚು ಬೇಕಾದಲ್ಲಿ ಇನ್ನೂ ಸಕ್ಕರೆ ಹಾಕಬಹುದು, ಸಕ್ಕರೆ ಕರಗಿ ಪುನಃ ಮಿಶ್ರಣದೊಂದಿಗೆ ಕೂಡಿಕೊಳ್ಳುವಂತೆ ಸೌಟಿನಲ್ಲಿ ಕೈಯಾಡಿಸುತ್ತಾ ಇರಿ.
ಬೆಂದ ಹಿಟ್ಟು ಕೈಗೆ ಅಂಟುವುದಿಲ್ಲ ಹಾಗೂ ಪಾಕಕ್ಕೆ ಒಂದು ಹೊಳಪು ಕೂಡಾ ಬರುತ್ತದೆ. ಒಂದೆರಡು ಚಮಚ ತುಪ್ಪ ಎರೆದು ಕೆಳಗಿಳಿಸಿ. ತಟ್ಟೆಗೆ ಹಾಕಿ ಮಟ್ಟಸ ಮಾಡಿ ಬಿಡಿ.
ಆರಿದ ನಂತರ ಬೇಕಾದ ಆಕಾರಕ್ಕೆ ಕತ್ತರಿಸಿ ತಿನ್ನಿ. ಚೆನ್ನಾಗಿ ಆರಿದ ಮೇಲೆ ತಿನ್ನಬೇಕಾಗಿರುವುದರಿಂದ ಮುಂಜಾನೆಯ ತಿಂಡಿ ತಿಂದಾದ ಕೂಡಲೇ ಮಾಡಿಟ್ಟುಕೊಳ್ಳಿ.
ಏಲಕ್ಕಿ, ಗೋಡಂಬಿ, ದ್ರಾಕ್ಷಿ ಇತ್ಯಾದಿ ಬೇಕಿದ್ರೆ ಹಾಕಬಹುದು. ಪರಿಮಳಯುಕ್ತ ಬಾದಾಮ್ ಹುಡಿ ಬೇಕಿದ್ರೂ ಹಾಕಿ. ಅದು ಬೇಡಾಂದ್ರೆ ಗಸಗಸೆ ಹುರಿದು ಹಾಕಿಕೊಳ್ಳಿ. ಹಾಲುಬಾಯಿ ತಿಂದು ರಾತ್ರಿ ಸುಖವಾಗಿ ನಿದ್ರಿಸಿ.
Posted via DraftCraft app
Subscribe to:
Post Comments (Atom)
0 comments:
Post a Comment