Pages

Ads 468x60px

Saturday 2 November 2013

ತರಕಾರಿ ತನ್ನಿ, ಕ್ಯಾರೆಟ್ ತಿನ್ನಿ....





" ತರಕಾರಿ ತನ್ನಿ "

ಚೀಲ ತುಂಬಾ ಕ್ಯಾರೆಟ್ ಬಂದಿತು.

" ಇಷ್ಟು ಕ್ಯಾರೆಟ್ ಏನ್ಮಾಡ್ಲೀ...  ಬೇರೇನೂ ಸಿಗ್ಲಿಲ್ವೇ ?"

" ಅಲ್ಲಿ ಇದ್ದಿದ್ದು ಇದೊಂದೇ,  ಬೇರೆಲ್ಲಾ ಒಣಗಿದ ಹಾಗಿತ್ತು,  ತಂದಿದ್ದನ್ನು ಏನಾದ್ರೂ ಮಾಡು "

" ಸರಿ ಹೋಯ್ತು,    ನಾಳೆ ಮುಂಜಾನೆಗೊಂದು ದೋಸೆ ಇದ್ರಿಂದಾನೇ ಮಾಡೋಣ,   ಅದಕ್ಕೇನಂತೆ.."

2 ಕಪ್ ಅಕ್ಕಿ
ಅರ್ಧ ಕಪ್ ಉದ್ದು
2 ಚಮಚ ಮೆಂತೆ
2 ಕಪ್ ಕ್ಯಾರೆಟ್ ತುರಿ

ನೆನೆ ಹಾಕಿದ ಬೇಳೆಗಳನ್ನು ಮೊದಲು ನುಣ್ಣಗೆ ಅರೆದು ತೆಗೆಯಿರಿ.
ಅಕ್ಕಿಯನ್ನೂ ಅರೆದು,  ಕ್ಯಾರೆಟ್ ತುರಿ ಸೇರಿಸಿ ಪುನಃ ಅರೆದು ಹಿಟ್ಟುಗಳನ್ನು ಒಟ್ಟಿಗೆ ಕಲಸಿ,  ರುಚಿಗೆ ಉಪ್ಪು ಹಾಕಿ ಮುಚ್ಚಿ ಇಡಿ.
ಎಂಟು ಗಂಟೆಗಳ ಕಾಲ ಹುದುಗು ಬಂದ ಮೇಲೆ ದೋಸೆ ಎರೆಯಿರಿ,  ತೆಂಗಿನಕಾಯಿ ಚಟ್ನಿ ಇರಲಿ.





ಬೇಳೆಕಾಳುಗಳನ್ನು ಹಾಕದೆ ಹೀಗೆ ದೋಸೆ ಮಾಡೋಣ.

2 ಕಪ್ ಅಕ್ಕಿ
2 ಕಪ್ ಕ್ಯಾರೆಟ್ ತುರಿ,  ರುಚಿಗೆ ಉಪ್ಪು
ನುಣ್ಣಗೆ ಅರೆದು ನೀರುದೋಸೆ ಎರೆಯಿರಿ.
ಬೇಕಿದ್ದರೆ ಕೊತ್ತಂಬ್ರಿ ಸೊಪ್ಪು,  ಈರುಳ್ಳಿ,  ಹಸಿಮೆಣಸು,  ಶುಂಠಿ,  ಕಾಯಿತುರಿ ಹಾಕಿಕೊಳ್ಳಿ,  ಚೆನ್ನಾಗಿರುತ್ತದೆ.

ಹೆಚ್ಚಾಗಿ ತಯಾರಿಸುವ ತೆಳ್ಳವು ಹೀಗೂ ಮಾಡಿ,  ಬಣ್ಣ ಬಣ್ಣವಾಗಿ ಮಕ್ಕಳ ಮನ ಗೆಲ್ಲುವುದರಲ್ಲಿ ಸಂಶಯವಿಲ್ಲ.   ಅಕ್ಕಿ ಹಿಟ್ಟಿಗೆ ಒಂದು ಕಪ್ ಕ್ಯಾರೆಟ್ ತುರಿ,  ಕೊತ್ತಂಬ್ರಿ ಸೊಪ್ಪು ಕತ್ತರಿಸಿ ಹಾಕಿದರೆ ಸಾಕು.   ಬೆಲ್ಲ ಬೆರೆಸಿದ ಕಾಯಿತುರಿಯೊಂದಿಗೆ ಸವಿಯಿರಿ.





ಕ್ಯಾರೆಟ್ ಪಾಯಸ

ಕ್ಯಾರೆಟ್ ತುರಿ 1 ಕಪ್
ಅಕ್ಕಿ ಹುಡಿ 2 ಚಮಚ
ಸಕ್ಕರೆ 1 ಕಪ್
ಏಲಕ್ಕಿ,  ದ್ರಾಕ್ಷಿ,  ಗೋಡಂಬಿ ಅವಶ್ಯಕತೆಗೆ ತಕ್ಕಷ್ಟು
 1 ತೆಂಗಿನಕಾಯಿ 

ಮೊದಲಿಗೆ ಕಾಯಿಹಾಲು ಮಾಡಿಕೊಳ್ಳಿ.   ದಪ್ಪ ಕಾಯಿಹಾಲು ಪ್ರತ್ಯೇಕ ತೆಗೆದಿರಿಸಿ.
ಇನ್ನೂ ಎರಡು ಬಾರಿ ನೀರು  ಕಾಯಿಹಾಲು ತೆಗೆಯಿರಿ.

ಒಂದನೇ ನೀರು ಕಾಯಿಹಾಲಿನಲ್ಲಿ ಕ್ಯಾರೆಟ್ ತುರಿ ಬೇಯಿಸಿ.
ಅಕ್ಕಿ ಹುಡಿಯನ್ನು ನೀರು ಕಾಯಿಹಾಲಿನಲ್ಲಿ ಕಲಸಿಕೊಂಡು ಬೆಂದ ಕ್ಯಾರೆಟ್ ಜೊತೆ ಪುನಃ ಕುದಿಸಿ.  ಅಕ್ಕಿಹಿಟ್ಟು ಕುದಿದು,  ಮಿಶ್ರಣ ದಪ್ಪವಾಯಿತೇ,  ಈಗ ಸಕ್ಕರೆ ಸುರಿಯಿರಿ.   ಸಕ್ಕರೆ ಕರಗಿದ ಹಂತದಲ್ಲಿ ಗೋಡಂಬಿ, ದ್ರಾಕ್ಷಿಗಳನ್ನು ತುಪ್ಪದಲ್ಲಿ ಹುರಿದು ಹಾಕಿ.
ಕೊನೆಯದಾಗಿ ದಪ್ಪ ಕಾಯಿಹಾಲು ಎರೆದು,  ಕುದಿದು ಮೇಲೆ ಬರುತ್ತಿದ್ದ ಹಾಗೆ ಏಲಕ್ಕಿ ಹುಡಿ ಉದುರಿಸಿ,  ಕೆಳಗಿಳಿಸಿ.   ಪಾಯಸ ಸಿದ್ಧ.




ಕ್ಯಾರೆಟ್ ಹಲ್ವಾ

ಕ್ಯಾರೆಟ್ ತುರಿ ಒಂದು ಬಟ್ಟಲು
ಸಕ್ಕರೆ ಒಂದು ಕಪ್ 
ಹಾಲು ಒಂದು ಕಪ್
ಗೋಡಂಬಿ,  ದ್ರಾಕ್ಷೀ,  ಏಲಕ್ಕಿ ಇತ್ಯಾದಿ 
ತುಪ್ಪ 4 ಚಮಚ

ಕ್ಯಾರೆಟ್ ತುರಿಯನ್ನು ಅವಶ್ಯವಿದ್ದಷ್ಟೇ ಹಾಲು ಎರೆದು ಮೆತ್ತಗೆ ಬೇಯಿಸಿಕೊಳ್ಳಿ.
ದಪ್ಪ ತಳದ ಬಾಣಲೆಗೆ ತುಪ್ಪ ಸವರಿ ಬೆಂದ ಕ್ಯಾರೆಟ್ ತುರಿಯನ್ನು ಹಾಕಿ,  ಒಲೆಯ ಮೇಲೆ ಇಡಿ.
ಸಕ್ಕರೆ ಹಾಕಿ,  ಸಕ್ಕರೆ ಕರಗಿ ಪಾಕ ಬರುವ ತನಕ ಮಂದಾಗ್ನಿಯಲ್ಲಿ ಸೌಟಿನಲ್ಲಿ ಕೈಯಾಡಿಸುತ್ತಿರಿ.
ದ್ರಾಕ್ಷಿ,  ಗೋಡಂಬಿಗಳನ್ನು ತುಪ್ಪದಲ್ಲಿ ಹುರಿದು ಹಾಕಿ,  ಒಂದೇ ಮುದ್ದೆಗೆ ಬಂದಾಗ ಏಲಕ್ಕಿಪುಡಿಯನ್ನೂ ಹಾಕಿ ಕೆಳಗಿಳಿಸಿ.
ತುಪ್ಪ ಸವರಿದ ತಟ್ಟೆಗೆ ವರ್ಗಾಯಿಸಿ,  ಬಿಸಿ ಬಿಸಿಯಾಗಿ ತಿನ್ನಿ.




ಕ್ಯಾರೆಟ್ ಹಲ್ವಾ,  ಇನ್ನೊಂದು ವಿಧಾನ:

ಮೇಲೆ ಉಪಯೋಗಿಸಿದ ವಸ್ತುಗಳೊಂದಿಗೆ ಒಂದು ಕಪ್ ಚಿರೋಟಿ ರವೆಯನ್ನೂ ಸೇರಿಸುವ ಅಗತ್ಯವಿದೆ.   ಒಂದು ಕಪ್ ಸಕ್ಕರೆಯೂ ಹೆಚ್ಚು ಬೇಕಾಗುತ್ತದೆ.
ಚಿರೋಟಿ ರವೆಯನ್ನು ಪರಿಮಳ ಬರುವಷ್ಟು ಹುರಿದು,  ಒಂದೂವರೆ ಕಪ್ ಕುದಿಯುವ ನೀರು ಎರೆದು ಮೆತ್ತಗೆ ಬೇಯಿಸಿ.   ಬೆಂದ ನಂತರ ಸಕ್ಕರೆ,  ಬೇಯಿಸಿಟ್ಟ ಕ್ಯಾರೆಟ್ ಇತ್ಯಾದಿಗಳನ್ನು ಸೇರಿಸಿ ಹಿಂದಿನ ವಿಧಾನದಲ್ಲಿ ತಿಳಿಸಿರುವಂತೆ ಮಾಡಿದರಾಯಿತು.



ಕ್ಯಾರೆಟ್ ಪಲ್ಯ

ಚಿಕ್ಕದಾಗಿ ಕತ್ತರಿಸಿದ ಕ್ಯಾರೆಟ್ 2 ಕಪ್
ಕಾಯಿ ತುರಿ ಸ್ವಲ್ಪ
ಚಿಟಿಕೆ ಅರಸಿನ
ರುಚಿಗೆ ಉಪ್ಪು
ಒಗ್ಗರಣೆ ಸಾಮಗ್ರಿಗಳು
2 ಚಮಚ ಎಣ್ಣೆ
ಒಂದೆಸಳು ಕರಿಬೇವು

ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ಸಾಸಿವೆ ಸಿಡಿದಾಗ ಬೇವಿನೆಲೆ ಹಾಕಿ,  ಚಿಟಿಕೆ ಅರಸಿನವೂ ಬೀಳಲಿ.  ಕ್ಯಾರೆಟ್ ತುಂಡುಗಳನ್ನು ಹಾಕಿ.   ಉಪ್ಪಿನೊಂದಿಗೆ ನೀರು ಚಿಮುಕಿಸಿ ಮಂದಾಗ್ನಿಯಲ್ಲಿ ಮುಚ್ಚಿ ಬೇಯಿಸಿ.  ಬೆಂದ ನಂತರ ಕಾಯಿ ತುರಿ ಸೇರಿಸಿ.  ಇನ್ನೊಮ್ಮೆ ಸೌಟಾಡಿಸಿ ಕೆಳಗಿಳಿಸಿ.  ಬಹು ಬೇಗನೆ ಮಾಡಿಕೊಳ್ಳಬಹುದಾದ ಈ ಪಲ್ಯ ಸರಳ  ವಿಧಾನದಲ್ಲಿದೆ.  

 


ತಾಜಾ ಕ್ಯಾರೆಟ್ ಹಸಿಯಾಗಿಯೇ ಸೇವಿಸುವುದು ಬಹಳ ಉತ್ತಮ.   ಸಕ್ಕರೆಯ ಮೂಲವಾಗಿರುವ ಕ್ಯಾರೆಟ್ ಸೇವನೆಯಿಂದ ದೇಹಕ್ಕೆ ಅಧಿಕ ಕ್ಯಾಲೊರಿ ಲಭ್ಯ.   ಕ್ಯಾರೆಟ್ ಪೋಷಕಾಂಶಗಳು ಈ ರೀತಿಯಾಗಿವೆ.   88% ನೀರು,  7% ಸಕ್ಕರೆ,   1% ಪ್ರೊಟೀನ್,  1% ನಾರು,  0.2% ಕೊಬ್ಬು ಇರುತ್ತವೆ.  ಕೊಬ್ಬು ಬಹಳ ಕಡಿಮೆ ಇರುವ ತರಕಾರಿ,  ನಾರು, ವಿಟಮಿನ್ ಎ, ಸಿ, ಕೆ, ಬಿ6, ಪೊಟ್ಯಾಷಿಯಂ,  ಮೆಗ್ನೇಶಿಯಂ,  ಥಯಾಮಿನ್,  ನಿಯಾಸಿನ್ ಗಳಿಂದ ಕೂಡಿರುವ ಈ ಕ್ಯಾರೆಟ್ ಸೇವನೆಯಿಂದ ಉರಿಯೂತದಿಂದ ರಕ್ಷಣೆ,  ರಕ್ತನಾಳಗಳ ಹಿಗ್ಗುವಿಕೆಗೆ ಸಹಕಾರಿಯಾಗಿ ಹೃದಯಸಂಬಂಧೀ ಖಾಯಿಲೆಗಳ ಅಪಾಯವನ್ನು ತಡೆಗಟ್ಟುತ್ತದೆ.    ಇತ್ತೀಚೆಗೆ ನಡೆದ ಅಧ್ಯಯನದ ವರದಿಯಂತೆ ನಿಯಮಿತವಾದ ಕ್ಯಾರೆಟ್ ಸೇವನೆ ಕೊಲೆಸ್ಟರಾಲ್ ನಿಯಂತ್ರಕವೂ ಆಗಿದೆ.   ಆದುದರಿಂದಲೇ ತರಕಾರಿ ತನ್ನಿ,  ಕ್ಯಾರೆಟ್ ತಿನ್ನಿ,  ಆರೋಗ್ಯವೆನ್ನಿ.   ಅಲ್ಲವೇ ?


ಟಿಪ್ಪಣಿ: ಸದಭಿರುಚಿಯ ಮಾಸಪತ್ರಿಕೆ ಉತ್ಥಾನದಲ್ಲಿ ಪ್ರಕಟಿತ.  ದಿನಾಂಕ 30. ಮಾರ್ಚ್ 2015



Posted via DraftCraft app

0 comments:

Post a Comment