Pages

Ads 468x60px

Thursday, 22 May 2014

ಕ್ಯಾಲೆಂಡರ್ ಕನ್ಯೆಒಂದು ಹಂತದ ಪದವಿ ವಿದ್ಯಾಭ್ಯಾಸ ಕಾಸರಗೋಡಿನ ಸರಕಾರೀ ಕಾಲೇಜಿನಲ್ಲಿ ಮುಗಿಯಿತು.   ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆಯಬಹುದಾಗಿತ್ತು.   ಅಂತಹ ಗೊತ್ತುಗುರಿಯೇನೂ ಇಟ್ಟುಕೊಂಡಿರದ ನಾನು ರೆಕ್ಕೆ ಬಿಚ್ಚಿದ ಹಕ್ಕಿಯಂತಾಗಿದ್ದೆ.   ದಿನವಿಡೀ ಚಿತ್ರ ಬಿಡಿಸುತ್ತಾ ಇದ್ದಾಗಲೂ ನನ್ನಮ್ಮ ಒಂದಿಷ್ಟೂ ರೇಗಲಿಲ್ಲ.   " ಬಾ,  ಅಡುಗೆ ಕೆಲ್ಸ ಕಲೀ...."  ಇಂತಹ ಯಾವುದೇ ಮಾತುಗಳನ್ನು ನಾನು ಕೇಳಿಯೇ ಇಲ್ಲ.   ಆದರೆ ಚಿತ್ರಕಲಾ ಶಾಲೆಗೆ,  ಮಂಗಳೂರಿನಲ್ಲಿ ಇತ್ತು,   " ಸೇರ್ತೇನೆ "  ಅಂದಾಗ ಅಪ್ಪ ವಿರೋಧಿಸಿದರು.  " ಇಷ್ಟು ಚೆನ್ನಾಗಿ ನಿನ್ನಷ್ಟಕೇ ಮಾಡ್ತಾ ಇದೀಯಲ್ಲ,  ಅದೇ ಸಾಕು,  ಅಲ್ಲಿ ಹೋಗಿ ಕಲಿಯುವಂಥದು ಏನಿದೆ ?  ಈಗ ಮಾಡ್ತಿರೋದನ್ನೇ ಮನೆಯಲ್ಲೇ ಮಾಡ್ತಾ ಇರು ....ನಿನ್ನ ಕಾಲ ಮೇಲೆ ನಿಲ್ಲುವಂತಹ ಕೋರ್ಸ್ ಬೇರೆ ಯಾವ್ದಾದ್ರೂ ಕಲಿತರಾದೀತು "  ಅಂದರು.    ಆದರೂ ಪಟ್ಟು ಬಿಡದೆ ಮಂಗಳೂರಿನ ಆರ್ಟ್ ಸ್ಕೂಲ್ ಗೆ ಹೋದೆ.   ಒಂದೇ ದಿನ ಹೋಗಿದ್ದು.   ಗೆರೆ ಎಳೆಯುವ,  ವೃತ್ತ ಬಿಡಿಸುವ ಆರಂಭದ ಪಾಠಗಳು ಹಿಡಿಸದೇ ಹೋಯಿತು.   ಅಂತೂ ಅಪ್ಪನೇ ಗೆದ್ದರು.

ನನ್ನ ತಮ್ಮ ವೆಂಕಟೇಶ್ ಬೆಂಗಳೂರಿನಲ್ಲಿ ತನ್ನ ಕಾಲ ಮೇಲೆ ನಿಲ್ಲಲು ಯಾವುದೋ ಒಂದು ಕೋರ್ಸ್ ಗೆ ಸೇರಿದ.   ಹಾಗೆ ಹೋದವನು ನನಗಾಗಿ ಹೊಸ ಮಾದರಿಯ ಡ್ರಾಯಿಂಗ್ ಶೀಟುಗಳನ್ನು ತಂದು ಕೊಟ್ಟ.  " ಅಕ್ಕ,  ನಿನ್ನ ಪೆಯಿಂಟಿಂಗ್ ಯಾವತ್ತಿಗೂ ಉಳಿಯಬೇಕಾದ್ರೆ ಈ ಹ್ಯಾಂಡ್ ಮೇಡ್ ಪೇಪರ್ ಆಗ್ಬೇಕು,  ಇದ್ರಲ್ಲೇ ಮಾಡು,  ಮುಗಿದ ಹಾಗೇ ತಂದ್ಕೊಡ್ತೇನೆ "  ಅಂದ.   ಅದುವರೆಗೂ ನಾನು ಚಿತ್ರ ಬಿಡಿಸ್ತಾ ಇದ್ದಿದ್ದು ಸಾಮಾನ್ಯ ದಪ್ಪ ಡ್ರಾಯಿಂಗ್ ಕಾಗದದಲ್ಲಿ.  

ಒಬ್ಬ ಕ್ಯಾಲೆಂಡರ್ ಕನ್ಯೆ ಕಣ್ಣಿಗೆ ಬಿದ್ದಳು.   ಇವಳದೇ ಪ್ರತಿಬಿಂಬ ಬಿಡಿಸೋಣವೆಂದು ಕ್ಯಾಲೆಂಡರ್ ಗಾತ್ರದಷ್ಟು ದೊಡ್ಡದಾಗಿ ಹ್ಯಾಂಡ್ ಮೇಡ್ ಪೇಪರ್ ಕತ್ತರಿಸಿ.....

ಚಿತ್ರ ಮೂಡಿ ಬಂದಿತು.   ಹ್ಯಾಂಡ್ ಮೇಡ್ ಪೇಪರು ಹಾಳಾಗುವಂಥದ್ದಲ್ಲ,   ಹಾಗೇನೇ ಸುತ್ತಿ ಇಟ್ಟೆ,  ಫ್ರೇಮ್ ಹಾಕಿಸಲಿಲ್ಲ,  ಈಗಾಗಲೇ ಮನೆಯ ಗೋಡೆ ತುಂಬಾ ಚಿತ್ರಗಳು ನೇತಾಡ್ತಿವೆ,  ಇದಂತೂ ಸಿಕ್ಕಾಪಟ್ಟೆ ದೊಡ್ಡ ಸೈಜಿನದು.   ಅದೂ ಅಲ್ಲದೆ ಮರದ ಚೌಕಟ್ಟು ಹಾಕಿಸಬೇಕಾದರೆ ಕಾಸರಗೋಡಿಗೆ ಹೋಗಬೇಕಾಗಿತ್ತು.   ಅದೇನಪ್ಪಾಂದ್ರೆ ನನ್ನ ತಂದೆ ವೈದ್ಯರ ಸಲಹೆಯಂತೆ ಕಾಸರಗೋಡಿನಲ್ಲಿ ವಕಾಲತ್ ಮಾಡುವುದನ್ನು ಬಿಟ್ಟು ನೀರ್ಚಾಲಿನ ಹಳ್ಳಿ ಮನೆಗೆ ಬಂದಿದ್ದರು.   ನಾವೆಲ್ಲರೂ ಹಳ್ಳಿಗೆ ವಲಸೆ ಬಂದ ಹಾಗೆ ಆಗಿತ್ತೂ ಅನ್ನಿ.   ಈ ಚಿತ್ರ ಹಾಗೇ ಯಾರೂ ಕೇಳುವವರಿಲ್ಲದೆ ಮುದುರಿ ಕೊಂಡು ನನ್ನ ಸಂಗ್ರಹದಲ್ಲಿ ಇದ್ದಿತು.

ಮದುವೆಯಾಯಿತು,  ಅಪ್ಪನ ಮನೆಗೂ ಗಂಡನ ಮನೆಗೂ ಹೆಚ್ಚು ದೂರವಿಲ್ಲ.   ಹಾಗಾಗಿ ಎರಡೂ ಮನೆಗಳಲ್ಲಿ ಓಡಿಯಾಡುತ್ತಾ ಇದ್ದಂತಹ ಆ ಕಾಲದಲ್ಲಿ ತರತರನ ಹವ್ಯಾಸಗಳು ಮೂಲೆಗುಂಪಾದವು.   ಓದುವ ಹವ್ಯಾಸವೊಂದೇ ಉಳಿಯಿತು.   ಹಳ್ಳಿಯ ಬದುಕಿನ ವಿಸ್ತೃತ ಅನುಭವಗಳ ಸಾರವೇ ನನ್ನದಾಯಿತು.   ಗದ್ದೆ ಬೇಸಾಯದ ತಿಳುವಳಿಕೆ,   ಹಸುಸಾಕಣೆ,  ನಿರ್ವಹಣೆ ಎಲ್ಲವೂ ಒಂದೊಂದು ರಸಬುತ್ತಿ.   ಒಂದು ಹಂತದಲ್ಲಿ ನಮ್ಮದೂ ಒಂದು ನೂತನ ಗೃಹವೂ ಆಯಿತು.  ಆಗ ನೆನಪಾಯಿತು,  ನನ್ನ ಚಿತ್ರಸಂಪುಟಗಳು,   ಅಪ್ಪನ ಮನೆಯ ಗೋಡೆಯಲ್ಲಿ ನೇತಾಡುತ್ತಿದ್ದ ಹಳೆಯ ಕಲೆಗಳು,  ಒಂದೊಂದಾಗಿ ಹಿರಣ್ಯಕ್ಕೆ ಬಂದವು.   " ಎಲ್ಲ ತಗೊಂಡ್ ಹೋಗ್ಬೇಡ,  ಒಂದೆರಡಾದ್ರೂ ಇಲ್ಲೂ ಇರ್ಲೀ..." ಅಂದರು ನನ್ನಮ್ಮ.

ನನ್ನ ಕ್ಯಾಲೆಂಡರ್ ಕನ್ಯೆಯನ್ನು ಹೊಸ ಮನೆಯ ಮುಂಚಾವಡಿಯಲ್ಲಿ ನೇತಾಡಿಸಬೇಕೆಂದಿದ್ದೆ.   ಆದರೆ ಈ ಕುಗ್ರಾಮದಲ್ಲಿ ಮರದ ಚೌಕಟ್ಟು ಹಾಕಿಸಲು ಸಾಧ್ಯವಾಗದೇ ಹೋಯಿತು.   ಮನೆ ಯಜಮಾಂತಿಯಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಹಿಂದಿನಂತೆ ಪೇಟೆ ತಿರುಗಲು ಹೋಗಲುಂಟೇ ?   ಕ್ಯಾಲೆಂಡರ್ ಕನ್ಯೆ  ಹಾಯಾಗಿ ಪೆಟ್ಟಿಗೆಯೊಳಗೆ ಮಲಗಿರಬೇಕಾಯಿತು.

ಅದೊಂದು ದಿನ ಏನಾಯ್ತೂಂದ್ರೆ ನಮ್ಮ ಚೆನ್ನಪ್ಪನ ಕತ್ತಿಯ ಹಿಡಿ ಮುರಿಯಿತು.  ಅದರ ರಿಪೇರಿಗೆ ಬೇಕಾದ ರೂಪಾಯಿಯೊಂದಿಗೆ ಚೆನ್ನಪ್ಪ ಆಚಾರಿಯ ಬಳಿ ಹೋದ,  ಹೊಸ ಹಿಡಿ ಹಾಕಿಸಿ ಬಂದ, ಜೊತೆಗೆ ಹೊಸ ಸುದ್ದಿಯನ್ನೂ ತಂದ.   ಆಚಾರಿಯನ್ನು ಹೊಗಳುತ್ತಾ  " ಪಟಗಳಿಗೆ ಫ್ರೇಮ್ ಹಾಕ್ತಾನೆ..." ಅಂದಿದ್ದೇ ತಡ ಕ್ಯಾಲೆಂಡರ್ ಕನ್ಯೆ ಹೊರಗಿಣುಕಿದಳು.   ಸಂಜೆಯ ಚಹಾ ಕುಡಿದು ಹೊರಟ ಚೆನ್ನಪ್ಪನ ಜೊತೆ ಕ್ಯಾಲೆಂಡರ್ ಕನ್ಯೆ ನಡೆದಳು ಆಚಾರಿಯ ಬಳಿಗೆ.   ಮರದ ಚೌಕಟ್ಟಿನಿಂದ ಶೋಭಿತೆಯಾಗಿ ಮರಳಿ ಬಂದಳು.   ಚೆನ್ನಪ್ಪನೇ ನಾನು ಹೇಳಿದ ಜಾಗದಲ್ಲಿ ಎರಡು ಆಣಿ ಹೊಡೆದು ಅವಳನ್ನು ನೇತಾಡಿಸಿದ.   ನನಗಂತೂ ಹಿಗ್ಗು ಹೇಳತೀರದು,  ಎಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ... ಇದೂನೂ ಅದೇ ಥರ ಅಂದ್ಕೊಳ್ಳಿ....

ಅಂತರ್ಜಾಲದ ತಾಂತ್ರಿಕ ಯುಗ ಬಂದ ಈ ಹೊತ್ತಿನಲ್ಲಿ ಹಳೆಯ ಯಾವುದೇ ಫೋಟೋ,  ಚಿತ್ರ ಅಥವಾ ಇನ್ಯಾವುದೇ ಡಾಕ್ಯುಮೆಂಟ್ಸ್ ಇರಲಿ,  ನೆನಪುಗಳೇ ಆಗಿರಲಿ.... ಇವುಗಳಿಗೆ ಅಳಿವಿಲ್ಲ,  ಅಂತಹ ಸುಧಾರಿತ ವ್ಯವಸ್ಥೆ ಇಲ್ಲಿದೆ.   ಕಲಿತು ಮುಂದುವರಿಯುವ ಜಾಣ್ಮೆ ನಮ್ಮದಾಗಬೇಕಾಗಿದೆ.Posted via DraftCraft app

ಟಿಪ್ಪಣಿ:  24/12/2015 ರಂದು ಸೇರ್ಪಡೆಯಾಗಿದ್ದು.


0 comments:

Post a Comment