Pages

Ads 468x60px

Friday, 3 April 2015

ಬೀಟ್ ರೂಟ್ ರಸಾಯಣಬೀಟ್ ರೂಟ್ ಗೆಡ್ಡೆ ತರಕಾರಿ, ಮಾರುಕಟ್ಟೆಯಲ್ಲಿ ಬೆಲೆಯೂ ಕಡಿಮೆ, ತರಕಾರಿ ಎಂದು ಮನೆಗೆ ತಂದರೂ ಇನ್ನೂ ಅಸಡ್ಡೆ. ಆದರೇನಂತೆ, ಇನ್ನಿತರ ತರಕಾರಿಗಳಂತೆ ಹಾಳಾಗುವಂತಹುದಲ್ಲ, ಹಲವು ದಿನಗಳ ಬಳಕೆಗೆ ಯೋಗ್ಯ. ನನ್ನ ಮಗಳೂ ಇದರ ಪದಾರ್ಥಗಳನ್ನು ಇಷ್ಟಪಡುವವಳಲ್ಲ. " ನಾನು ಮನೆಯಲ್ಲಿರುವಾಗ ಬೀಟ್ರೂಟು ಕೊದಿಲು ಮಾಡ್ಬೇಡಾ...." ಹೀಗೆ ಹುಕುಂ ಇರುವಾಗ, ಬೀಟ್ ರೂಟ್ ಮನೆಗೆ ಬಂದಿತು. " ಯಾಕೆ ತಂದ್ರೀ... " ಎಂದು ಕೇಳಲುಂಟೇ, ಮಾಡೋಣ.

" ಪಲ್ಯ ಆದೀತಲ್ಲ ಮಗಳೇ... "
" ಹ್ಞೂ..."
ಸಿಪ್ಪೆ ತೆಳ್ಳಗೆ ಹೆರೆದು ತೆಗೆದು, ಬಿಲ್ಲೆಗಳಂತೆ ಕತ್ತರಿಸಿ, ಅಡ್ಡಕ್ಕೂ ಉದ್ದಕ್ಕೂ ಪೀಸಕತ್ತಿ ಚಕಚಕನೆ ಓಡಿಯಾಡಿದಾಗ ಪಲ್ಯದ ಸಾಮಗ್ರಿ ಸಿದ್ಧ.
ತೆಂಗಿನತುರಿ ಇರಬೇಕು.
ಒಗ್ಗರಣೆ ಸಾಹಿತ್ಯ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು, ಚಿಟಿಕೆ ಅರಶಿಣ.
ರುಚಿಗೆ ತಕ್ಕ ಉಪ್ಪು.
ಗೆಡ್ಡೆ ತರಕಾರಿಯಾದ್ದರಿಂದ ಬೇಯಿಸಲು ಕುಕ್ಕರ್ ಆದೀತು, ಬೇಯಲು ಬೇಕಾದ ನೀರೆರೆದು, ಉಪ್ಪು ಕೂಡಿಸಿ. ಒಂದು ಶೀಟಿ ಕೇಳುವ ತನಕ ಬೆಂದರೆ ಸಾಕು.

ಬಾಣಲೆಯಲ್ಲಿ ಒಗ್ಗರಣೆಗಿಡಿ.
ಸಾಸಿವೆ ಸಿಡಿದಾಗ ಕರಿಬೇವು, ಅರಶಿಣ ಹಾಕಿಡಿ.
ಬೆಂದ ತರಕಾರಿಯನ್ನು ಕೂಡಿ.
ತೆಂಗಿನತುರಿಯನ್ನು ಮರೆಯಬೇಡಿ.
ನೀರಾರುವ ತನಕ ಸೌಟಾಡಿಸಿ ಮುಚ್ಚಿಡಿ.
ತಾಜಾ ಬೀಟ್ ರೂಟ್ ಪಲ್ಯ ರೆಡಿ.
ಬೀಟ್ ರೂಟ್ ಸಾಸಿವೆ:
ತೆಂಗಿನತುರಿ, ಬೀಟ್ ರೂಟ್ ತುರಿ, ಸಾಸಿವೆ, ಹಸಿಮೆಣಸಿನೊಂದಿಗೆ ಆ ದಿನದ ಸಿಹಿ ಮಜ್ಜಿಗೆ ಎರೆದು ನುಣ್ಣಗೆ ಅರೆಯಿರಿ. ರುಚಿಗೆ ತಕ್ಕ ಉಪ್ಪು ಕೂಡಿಸಿ. ಕುದಿಸುವ ಕೆಲಸ ಇಲ್ಲಿಲ್ಲ. ಅನ್ನದೊಂದಿಗೆ ಸವಿಯಿರಿ.

ಬೀಟ್ ರೂಟ್ ಗೊಜ್ಜು:

ಬೀಟ್ ರೂಟ್ ತುರಿದು ಕೊಳ್ಳಿ. ಹೆಚ್ಚೇನೂ ಬೇಡ. ಮೊಸರು, ಉಪ್ಪು ಬೆರೆಸಿ, ಗೊಜ್ಜು ಅನ್ನಿ. ಮಕ್ಕಳಿಗೆ ಅನ್ನದೊಂದಿಗೆ ಕಲಸಿ
ತಿನ್ನಲು ಇಷ್ಟವಾದೀತು. ಬೀಟ್ ರೂಟ್ ಅಡುಗೆ ಮುಗಿಯಿತೇ, ಇನ್ನೂ ಇದೆ. ಬೀಟ್ ರೂಟ್ ತಂದಿಟ್ಕೊಂಡಿರಿ.....ಬೀಟ್ ರೂಟ್ ಗೆಡ್ಡೆಗೆ ಕನ್ನಡದಲ್ಲಿ ಪ್ರತ್ಯೇಕ ಹೆಸರು ಇದ್ದಂತಿಲ್ಲ. ಅಮೇರಿಕಾ ಇದರ ಮೂಲನೆಲೆ. ನಮ್ಮ ಋಷಿಮುನಿಗಳು ಗೆಡ್ಡೆಗೆಣಸು, ಕಂದಮೂಲಾದಿಗಳನ್ನು ಬಲ್ಲವರಾಗಿದ್ದರು. ಈ ಪರಿಯ ವರ್ಣದ್ರವ್ಯ ನಮ್ಮ ಆಯುರ್ವೇದ ರಸಾಯನಶಾಸ್ತ್ರದಲ್ಲೂ ಇದ್ದ ಹಾಗಿಲ್ಲ. ಹೋಗಲಿ, ಚಿಂತೆ ಬೇಡ. ನಾವು ಈಗ ಅಮೇರಿಕದ ಆರೋಗ್ಯ ಸಂಸ್ಥೆ ತಿಳಿಸಿರುವ ಆರೋಗ್ಯಲಾಭಗಳನ್ನು ಓದಿಕೊಳ್ಳೋಣ.

ಬೀಟ್ರೂಟ್ ರಸದ ಸೇವನೆ ಒಳ್ಳೆಯದು. ಅತಿಯಾಗಿ ಬೇಡ. ಕಿಡ್ನಿ ತೊಂದರೆ ಇದ್ದರಂತೂ ಮುಟ್ಟದಿರಿ.
ಕ್ಯಾನ್ಸರ್ ಪ್ರತಿಬಂಧಕ. Betacyanin ಎಂಬ ಧಾತು ಈ ಗೆಡ್ಡೆಯಲ್ಲಿರುವುದೇ ವೈದ್ಯಕೀಯ ಮಹತ್ವವನ್ನು ಪಡೆದಿದೆ. ಜೀವಕಣಗಳ ಸಹಜಸ್ಥಿತಿಯನ್ನು ಉಳಿಸುವತ್ತ ಹಾಗೂ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ತಡೆಯುವಲ್ಲಿ ಯಶಸ್ಸನ್ನು ಪಡೆದಿವೆ. ಆಹಾರದಲ್ಲಿ ಇರಲೇಬೇಕಾದ ಜೀವಸತ್ವಗಳು ಇದರಲ್ಲಿವೆ. ಮುಖ್ಯವಾಗಿ ವಿಟಮಿನ್9, ಮ್ಯಾಂಗನೀಸ್, ಐರನ್, ವಿಟಮಿನ್ ಸಿ, ಇನ್ನಿತರ ಖನಿಜಗಳಿಂದ ಸಮೃದ್ಧವಾಗಿದೆ. ಅತಿ ಕಡಿಮೆ ಕೆಲೊರಿಯಿಂದ ಕೂಡಿರುವ ಹಾಗೂ ನಾರುಯುಕ್ತ ತರಕಾರಿಯೂ ಹೌದು. ನೖಟ್ರಿಕ್ಓಕ್ಸೖಡ್ (NO) ಕೂಡಾ ಬೀಟ್ರೂಟ್ ಗೆಡ್ಡೆಯಲ್ಲಿರುವಂಥದು. ಇದು ರಕ್ತನಾಳಗಳ ಸಡಿಲಿಕೆಗೆ ಪೂರಕ. ಹೃದಯಸಂಬಂಧೀ ತೊಂದರೆಗಳ ನಿವಾರಕ. ಶರೀರಕ್ಕೂ ತಂಪು.

ಇನ್ನಿತರ ರಸಭರಿತ ಹಣ್ಣುಗಳ ಮಿಶ್ರಣದೊಂದಿಗೆ ಬೀಟ್ರೂಟ್ ತುರಿಯನ್ನೂ ಕೂಡಿಸಿ ಜ್ಯೂಸ್ ಮಾಡಿ ಕುಡಿದರೆ ಹೆಚ್ಚು ಪರಿಣಾಮಕಾರಿ ಎಂದು ಆಹಾರತಜ್ಞರ ಅಭಿಮತ. ಕಬ್ಬಿಣಾಂಶ ಹೇರಳವಾಗಿರುವ ಬೀಟ್ರೂಟ್ ಚರ್ಮದ ಮೇಲಿನ ಕಪ್ಪುಕಲೆ ಮತ್ತು ಮೊಡವೆಗಳ ನಿವಾರಕ. ಬೀಟ್ರೂಟ್ ಸೊಪ್ಪುಗಳೂ ಖಾದ್ಯಯೋಗ್ಯವಾಗಿವೆ. ರುಚಿಯಲ್ಲಿ ಪಾಲಕ್ ಸೊಪ್ಪಿಗೆ ಸಮಾನವಾಗಿರುವುದು. ಹರಿವೆ ಪ್ರವರ್ಗಕ್ಕೆ ಸೇರಿದ ಬೀಟ್ರೂಟ್ ವೖಜ್ಞಾನಿಕವಾಗಿ beta vulgaris ಆಗಿರುತ್ತದೆ.

Posted via DraftCraft app

0 comments:

Post a Comment