Pages

Ads 468x60px

Wednesday 14 July 2021

ಅಂಬಟೆಯ ಅವಿಲ್

 



ಅಂಬಟೆಯ ಎಳೆ ಮಿಡಿಗಳನ್ನು ಕೊಯ್ದು ಉಪ್ಪಿನಕಾಯಿ ಹಾಕಿದ್ದಾಗಿದೆ ಬೆಂಗಳೂರಿಗೆ ತೆರಳುವಾಗ ಮಧು ತನಗೂ ತಂಗಿಗೂ ಕೊಂಡೊಯ್ದು ಆಯಿತು ಇದೆಲ್ಲ ಒಂದು ತಿಂಗಳ ಹಿಂದಿನ ಮಾತು.


ನಿನ್ನೆ ತೆಂಗಿನಕಾಯಿ ಕೊಯ್ಯಲು ತಾಳ್ತಜೆಯಿಂದ ನಾರಾಯಣ ಬಂದಿದ್ದಾಗ ತೋಟದಿಂದ ಅಂಬಟೆಯನ್ನೂ ಕೊಯ್ದು ತರಲು ಹೇಳಿದಾಗ ಬುಟ್ಟಿ ತುಂಬ ಅಂಬಟೆ ಬಂದಿತು.   ಈಗ ಅಂಬಟೆ ಗೊರಟು ಕಟ್ಟಿದೆ ಇದನ್ನೂ ಕತ್ತಿಯಲ್ಲಿ ಸ್ವಲ್ಪ ಶ್ರಮ ಪಟ್ಟು ಹೋಳು ಮಾಡಿ ಉಪ್ಪಿನಕಾಯಿ ಹಾಕಿಕೊಳ್ಳಬಹುದು.


ದಿನವೂ ಚಟ್ಣಿ ಸಾರುಗೊಜ್ಜು ಎಂದು ಉಣಲಡ್ಡಿಯಿಲ್ಲ ನಾಲ್ಕು ದಿನ ಕಳೆದಾಗ ಬುಟ್ಟಿಯಲ್ಲಿದ್ದ ಅಂಬಟೆಗಳು ಬಾಡುತ್ತಿವೆಯೇನೋ ಎಂದೆನ್ನಿಸಿ ಎಲ್ಲವನ್ನೂ ಉಪ್ಪು ಬೆರೆಸಿ ಜಾಡಿಯಲ್ಲಿ ತುಂಬಿಟ್ಟಾಯ್ತು ನೀರು ಹಾಕುವುದಕ್ಕಿಲ್ಲ ರಸಭರಿತವಾದ ಅಂಬಟೆಯಲ್ಲಿ ತಾನಾಗಿಯೇ ನೀರೆದ್ದುಕೊಳ್ಳುವುದರಿಂದ ಇದನ್ನು ದಾಸ್ತಾನು ಇಡಬಹುದಾಗಿದೆ  ಇದೇ ತರಹ ಮಾವಿನಕಾಯಿಗಳನ್ನೂ ಹಲಸಿನಸೊಳೆಗಳನ್ನೂ ಉಪ್ಪಿನಲ್ಲಿ ದಾಸ್ತಾನು ಇಡುವ ರೂಢಿ ನಮ್ಮದು.  


 ಗ್ರಾಮೀಣ ಪ್ರದೇಶದ ಒಂದು ನಿರ್ಲಕ್ಷಿತ ಬೆಳೆ  ಅಂಬಟೆ.

ಉಪ್ಪಿನ ಅಂಬಟೆಯ ಕೆಲಸ ತ್ರಾಸದಾಯಕವಲ್ಲ ಶುಭ್ರವಾದ ಜಾಡಿಯ ತಳದಲ್ಲಿ ಒಂದು ಹಿಡಿ ಉಪ್ಪು ಹರಡುವುದು,  

ಮೇಲಿನಿಂದ ಹತ್ತಿಪ್ಪತ್ತು ಅಂಬಟೆಗಳನ್ನು ಹಾಕುವುದು ಪುನಃ ಉಪ್ಪು ಮತ್ತು ಅಂಬಟೆ ಹಾಕುತ್ತ ಬರುವುದು,

ಕೊನೆಯಲ್ಲಿ ಮೇಲಿನಿಂದ ಇನ್ನಷ್ಟು ಉಪ್ಪು ಹಾಕಿಟ್ಟು ಜಾಡಿಯನ್ನು ಭದ್ರವಾಗಿ ಗಾಳಿ ಹೋಗದಂತೆ ಮುಚ್ಚಿದರಾಯಿತು.


ಅಂಬಟೆಯ ಹುಳಿಯಿಂದಾಗಿ ಉಪ್ಪಿನಲ್ಲಿ ಅದ್ದಿದ ಅಂಬಟೆ ಅಡುಗೆಯಲ್ಲಿ ಬಹಳ ಉಪಯುಕ್ತ ಹುಣಸೆಹುಳಿಗೆ ಪರ್ಯಾಯವಾಗಿ ಬಳಸಿರಿ ಸಾಂಬಾರು ಮಾಡುವಾಗ ಎರಡು ಅಂಬಟೆಗಳನ್ನು ಹಾಕಿದರಾಯಿತು ಹುಣಸೆ ಹುಳಿ ಬೇಕಾಗಿಲ್ಲ ತುಸುವೇ ಗೊರಟು ಕಟ್ಟಿರುವುದರಿಂದ ತಿನ್ನಲೂ ಹಿತವಾಗಿರುತ್ತದೆ.


 ದಿನ ನಾವು ಅಂಬಟೆಯನ್ನು ಬಳಸಿ ಅವಿಲ್ ಯಾ ಅವಿಯಲ್ ಮಾಡುವವರಿದ್ದೇವೆ.

ಸಾಕಷ್ಟು ವೈವಿಧ್ಯಮಯ ತರಕಾರಿಗಳಿವೆ.

ಹಸಿ ತೆಂಗಿನಕಾಯಿಯೂ ಇದೆ.

ಈಗ ತಾನೇ ಕಡೆದ ಸಿಹಿ ಮಜ್ಜಿಗೆಯಿದೆ.   ಮಜ್ಜಿಗೆಯೂ ದಪ್ಪವಾಗಿದೆ ಒಂದು ಲೋಟ ಮಜ್ಜಿಗೆ ತೆಗೆದಿರಿಸುವುದು.

ಅರ್ಧ ಕಡಿ ತೆಂಗಿನ ತುರಿ ಸಾಕು.

ತರಕಾರಿಗಳನ್ನು ಇದ್ದಂತೆ ಬಳಸುವುದು.  

ಬೇಕಾದಂತಹ ತರಕಾರಿಗಳನ್ನು ಮೊದಲಾಗಿ ತೊಳೆಯುವುದು.

15 ತೊಂಡೆಕಾಯಿ ನಾಲ್ಕು ಹೋಳು ಮಾಡುವುದು.

10 ರಿಂದ 20 ಅಲಸಂದೆ ಸಮಾನ ಗಾತ್ರದಲ್ಲಿ ಕತ್ತರಿಸುವುದು.

ಒಂದು ಪಡುವಲ ಕಾಯಿ,  

ಗಡ್ಡೆ ತರಕಾರಿಯ ಬಾಬ್ತು ನಿನ್ನೆಯ ಅಡುಗೆಯಲ್ಲಿ ಬಳಸಿ ಉಳಿದ ಸಿಹಿಗೆಣಸು ಇದ್ದಿತು ಅದನ್ನೂ ಹೆಚ್ಚಿಡಲಾಯಿತು ಸಾಮಾನ್ಯವಾಗಿ ನಾವು ಹಳ್ಳಿ ಮಂದಿ ಹಿತ್ತಲ ಬೆಳೆಯಾದ ಮುಂಡಿಕೇನೆ ಗೆಡ್ಡೆಗಳನ್ನು ಬಳಸುವ ರೂಢಿ.   ಯಾವುದೂ ಸಿಗದಿದ್ದರೆ ಅಂಗಡಿಯ ಕ್ಯಾರೇಟು ಇದೆಹಾಗೆಂದು ಬೀಟ್ರೂಟ್ ಗೆಡ್ಡೆ ಹಾಕಲೇಬಾರದು ಅದು ಅವಿಲಿನ ಅಂದಗೆಡಿಸಿ ಬಿಟ್ಟೀತು.

ಉಳಿದಂತೆ ಬಾಳೆಕಾಯಿ ಕೂಡಾ ಹಾಕುವುದಿದೆ ಇವತ್ತು ನಾನು ಬಾಳೆಕಾಯಿ ಹಾಕಿಲ್ಲ.

ಎಲ್ಲವೂ ಸೇರಿದಾಗ ಒಂದು ಲೀಟರ್ ಅಳತೆಯ ಪಾತ್ರೆ ತುಂಬಿತು ಇಷ್ಟು ಸಾಕು.


ತರಕಾರಿಗಳನ್ನು ಕುಕ್ಕರಿನಲ್ಲಿ ತುಂಬಿ, 2ರಿಂದ 3 ಅಂಬಟೆಗಳೊಂದಿಗೆ ಬೇಯಿಸಿಬೇಯಲು ಬೇಕಾದಷ್ಟೇ ನೀರು ಎರೆಯಿರಿ ರುಚಿಗೆ ಬೇಕಾದ ಉಪ್ಪು ಈಗಲೇ ಹಾಕಬೇಕುಅಂಬಟೆಗಳನ್ನು ಜಜ್ಜಿ ಹಾಕಿದರೆ ಉತ್ತಮ ಕತ್ತಿಯಲ್ಲಿ ಗೀರು ಎಳೆದರೂ ಸಾಕು.

ಒಂದು ಸೀಟಿ ಹಾಕಿದಾಗ ಸ್ಟವ್ ನಂದಿಸಿ ನಿಧಾನವಾಗಿ ಒತ್ತಡ ತೆಗೆಯಿರಿ ತರಕಾರಿಗಳು ಬೆಂದಿವೆ.


ಇದೀಗ ತೆಂಗಿನಕಾಯಿ ಅರೆಯಿರಿ.

ಅರೆಯುವಾಗ 2 ಹಸಿಮೆಣಸು ಪುಟ್ಟ ಚಮಚ ಜೀರಿಗೆ ಹಾಗೂ ಚಿಟಿಕೆ ಅರಸಿಣ ಹಾಕತಕ್ಕದ್ದು.

ಅತಿ ಕಡಿಮೆ ನೀರು ಬಳಸಿಸಾಧ್ಯವಿದ್ದಷ್ಟು ನುಣ್ಣಗೆ ಅರೆದಷ್ಟೂ ಪದಾರ್ಥ ರುಚಿಕರವಾಗುವುದೆಂದು ತಿಳಿದಿರಲಿ.


ತೆಂಗಿನ ಅರಪ್ಪು  ತರಕಾರಿಗಳೊಂದಿಗೆ ಕೂಡುವ ಮೊದಲೇ ಬೇಯಿಸಿದ ನೀರನ್ನು ಬಸಿದು ಇಟ್ಕೊಳ್ಳಿ ಇದೀಗ ಕಾಯಿ ಅರಪ್ಪು ಯಾ ರುಬ್ಬಿದ  ಮಸಾಲೆ ಬೆರೆಸಿ ತೆಗೆದಿರಿಸಿದ ದಪ್ಪ ಮಜ್ಜಿಗೆ ಎರೆಯಿರಿ ಗಟ್ಟಿ ಮುದ್ದೆಯಂತೆ ಆಯಿತೇ ಇಟ್ಕೊಂಡಿದ್ದೀರಲ್ಲ ತರಕಾರಿ ಬೇಯಿಸಿದ ನೀರು ಅದನ್ನು ಸೂಕ್ತವಾಗುಮಂತೆ ಎರೆದು ಕುದಿಯಲು ಇಡುವುದು.

ರುಚಿಯ ಉಪ್ಪು ಸಾಲದಿದ್ದರೆ ಹಾಕುವುದು ಚಿಕ್ಕ ತುಂಡು ಬೆಲ್ಲವೂ ಬೀಳಲಿ.

ಒಂದು ಕುದಿ ಬಂದಾಗ ಕೆಳಗಿಳಿಸುವುದು.

ತೆಂಗಿನೆಣ್ಣೆಯಲ್ಲಿ ಕರಿಬೇವಿನ ಒಗ್ಗರಣೆ ಬೀಳುವಲ್ಲಿಗೆ ಅಂಬಟೆಯ ಅವಿಲ್ ಎಂಬ ಕಥಾನಕ ಪೂರ್ಣಗೊಂಡಿದೆ.


ಇನ್ನೇನು ಓಣಂ ಹಬ್ಬ ಬರಲಿದೆ ಓಣಂ ಭೋಜನಕೂಟ ಅವಿಲ್ ಇಲ್ಲದೆ ನಡೆಯದು.

ತೆಂಗಿನಕಾಯಿ ಹಾಕಿದ ಯಾವುದೇ ಅಡುಗೆಯಿರಲಿ ತೆಂಗಿನೆಣ್ಣೆಯಂದಲೇ ಒಗ್ಗರಣೆ ಬಿದ್ದರೆ ಅಡುಗೆ ಪರಿಪೂರ್ಣವಾದಂತೆ.



0 comments:

Post a Comment