Pages

Ads 468x60px

Sunday, 19 February 2012

ಕುಡಿದದ್ದು ಶರಬತ್ತು, ತಂದಿತ್ತು ಆಪತ್ತು !




" ಅಡಿಕೆ ಸುಲಿಯಬೇಕಿತ್ತಲ್ಲ "
" ಆ ರಮೇಶ ಇದಾನಲ್ಲ, ಫೋನ್ ಮಾಡಿದ್ರಾಯ್ತು "
ಫೋನ್ ಮಾಡಿದ್ದಾಯ್ತು, ಅವನಮ್ಮ ಅಲ್ಲಿಂದ ಉತ್ತರಿಸಿದ್ದೂ ಆಯಿತು.
" ಏನಂತೆ ! "
" ಅವನೀಗ ಕಟ್ಟಡದ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದಾನಂತೆ "
" ಆಯ್ತು, ಇನ್ನು ಅವ ಸಿಕ್ಕಲಿಕ್ಕಿಲ್ಲ. ಬೇರೆ ಯಾರು ಸಿಗುತ್ತಾರೋ ನೋಡಬೇಕು "

ನೆರೆಮನೆಯ ಹಸೀನಾ ಬಂದಳು. ಕೈಯಲ್ಲಿ ಒಂದು ಬಕೇಟು, ನಮ್ಮ ಮನೆಯ ಕಲಗಚ್ಚು ಪೂರಾ ಅವಳ ಮನೆಯ ಹಸುಗಳಿಗೆ. ಅಲ್ಲಿಂದ ನಮ್ಮ ಅಗತ್ಯದ ಹಾಲು ಪೂರೈಕೆ. ಹೀಗೆ ಒಂದು ವಿಧವಾದ ವಿನಿಮಯ ಪದ್ಧತಿ ರೂಢಿಸಿಕೊಂಡಿದ್ದೇವೆ. ಅವಳೋ ಮಾತು ಬಾರದ, ಕಿವಿ ಕೇಳಿಸದ ಹುಡುಗಿ. ನಮ್ಮ ಅಡಿಕೆ ಸುಲಿಯಬೇಕಾದ ಅಗತ್ಯವನ್ನು ಅವಳಿಗೆ ಕಣ್ಸನ್ನೆ, ಕೈಸನ್ನೆ, ಬಾಯ್ಸನ್ನೆಗಳ ಮೂಲಕ ತಿಳಿಸಿ, ಅವಳು ತನ್ನ ಅಣ್ಣನನ್ನು ಕಳಿಸುತ್ತೇನೆಂದು ಒಪ್ಪಿಕೊಂಡಿದ್ದೂ ಆಯಿತು.

ಮತ್ತೊಂದು ಅರ್ಧ ಗಂಟೆಯಲ್ಲಿ ಅವಳ ಇನ್ನೊಬ್ಬ ಅಣ್ಣ ಖಾದರ್ ಕೈಯಲ್ಲಿ ಕತ್ತಿ ಆಡಿಸುತ್ತಾ ಬಂದ. ತೋಟದ ಹುಲ್ಲು ಒಯ್ಯುವುದು ಅವನ ಡ್ಯೂಟಿ.
" ಏನಯ್ಯಾ ಖಾದರ್, ನಿನ್ನಣ್ಣ ಅಡಿಕೆ ಸುಲಿಯಲು ಬರುವನೋ ಹೇಗೆ ? "
" ಅವ ಈಗ ಆಸ್ಪತ್ರೆಯಲ್ಲಿ "
" ಯಾಕೆ, ಏನಾಯ್ತು ? "
" ಏನು ಹೇಳೂದು ಅವನ ಕಥೆ ....."
ಕುತೂಹಲ ಕೆರಳಿತು.
" ಆಗಿದ್ದೇನು ಹೇಳಿಬಿಡು "
" ಅವನೂ, ಅವನ ಹೆಂಡ್ತೀ, ಇಬ್ರು ಮಕ್ಕಳೂ ಹೋಗಿದ್ದು ........"
" ಎಲ್ಲಿಗೆ ? "
" ಮದುವೇಗೆ, ಇಲ್ಲೇ ಹತ್ರ, ಪೈವಳಿಕೆಯಲ್ಲಿ " ಅವನ ಶುದ್ಧ ಕನ್ನಡದಲ್ಲಿ ವಿವರಣೆ ಮುಂದುವರಿಯಿತು.
" ಅಲ್ಲಿ ಶರಬತ್ತು ಕುಡಿದದ್ದು, ಅಷ್ಟೇ, ಮತ್ತೆಂತ ಇಲ್ಲ, ಎಲ್ಲರೂ ಹೋಗಿದ್ದು ಆಸ್ಪತ್ರೆಗೆ, ಇವ ಒಬ್ಬ ಅಲ್ಲ, ನಾನ್ನೂರು ಜನ ಆಸ್ಪತ್ರೇಗೆ. ಇನ್ನೂ ಉಸಾರಾಗ್ಲಿಲ್ಲ "
" ಅದೆಂತ ಶರಬತ್ತು ? "
" ಅದಾ, ನಾನು ಹೇಳ್ತೇನೆ ಕೇಳೀ...ಉಂಟಲ್ಲ, ಡ್ರಮ್ಮು ದೊಡ್ಡದು ...." ಕೈಯಲ್ಲಿ ಡ್ರಮ್ಮಿನ ಅಗಲ ಎತ್ತರಗಳನ್ನು ಅಭಿನಯಿಸಿ ತೋರಿಸಿದ ಖಾದರ್. " ಅದನ್ನು ಸರೀ ತೊಳೀಲಿಕಿಲ್ಲ, ಏನಿಲ್ಲ, ಹಾ...ಗೇ ನೀರು ಸಕ್ಕರೆ ಹಾಕಿ ಶರಬತ್ತು ಮಾಡಿದ್ರು, ಇವರೆಲ್ಲ ಕುಡುದ್ರು ಅಷ್ಟೇಯ, "

ಇದು ಕಥೆಯಲ್ಲ, ನಮ್ಮ ನೆರೆಯಲ್ಲಿ ನಡೆದ ನೈಜ ಘಟನೆ. ಆ ಪ್ಲಾಸ್ಟಿಕ್ ಡ್ರಮ್ ಅವನು ಹೇಳಿದಂತೆ ಕೀಟನಾಶಕದ್ದೋ, ರಾಸಾಯನಿಕ ದ್ರಾವಣದ್ದೋ ಆಗಿರಲೇಬೇಕು. ಬೇಕಾಬಿಟ್ಟಿ ಸಿಗುವ ಇಂತಹ ಡ್ರಮ್ಮುಗಳಿಗೆ ತೂತು ಕೊರೆದು ಉಪಯೋಗಿಸುವ ಜಾಣತನ ತೋರಿದವರು ಯಾರು ? ಈ ಬೇಜವಾಬ್ದಾರಿತನಗಳಿಗೆ ಯಾರು ಹೊಣೆ ?
ಸದ್ಯ, ಸಿದ್ಧೀಕ್ ಗುಣಮುಖನಾಗಿ ಬಂದು ಅಡಿಕೆ ಸುಲಿಯುತ್ತಿದ್ದಾನೆ.
""ಆಗಿದ್ದೇನು ಮಾರಾಯಾ "
"ಅದು ಮಾಟ ಮಾಡಿದ್ದು ಹ್ಞೂಂ...ಸುಮ್ಮನೆಯ ಅಲ್ಲ, ಎಲ್ಲಾರೂ ಬೋಧ ತಪ್ಪಿ ಬೀಳ್ತಾರಲ್ಲ, ಆಗ ಕುತ್ತಿಗೇದು ಚಿನ್ನ ಹಾರಿಸೂ ಪ್ಲಾನು, ಮಂತ್ರ ಮಾಡಿದ್ದು ...." ಕಣ್ಣರಳಿಸಿ ಗೂಣಗಿದ.


4 comments:

  1. Very scary... ಹೀಗಿರುವ drumಗಳನ್ನು ಅಲ್ಲಲ್ಲಿ ಮಾರಾಟ ಮಾಡುವುದನ್ನು ಕಂಡಿದ್ದೇನೆ. ಸುಮಾರು ಮನೆಗಳಲ್ಲಿ, ಮಳೆ ನೀರನ್ನು ಸಂಗ್ರಹಿಸಲು ಉಪಯೋಗಿಸುವುದನ್ನೂ ನೋಡಿದ್ದೇನೆ. ಇನ್ನು, ಹಾಗೆ ಕಂಡಲ್ಲಿ, ಈ ಕತೆಯನ್ನು ಹೇಳಲು ನಿರ್ಧರಿಸಿದ್ದೇನೆ!

    ReplyDelete
  2. Recycling / reusing of drums/ paint containers ..etc is very harmful..but poeople get tempted seeing their utility..should not be used for storing edible items..

    ReplyDelete