ಆಗಿನ್ನೂ 1983-84ರ ಕಾಲಘಟ್ಟ. ಮಂಗಳೂರಿನಲ್ಲಿ ಟಿ.ವಿ. ಸಬ್ ಸ್ಟೇಶನ್ ಪ್ರಾರಂಭಿಕ ಹಂತದಲ್ಲಿತ್ತು. ಉದ್ಘಾಟನೆ ಆಗುವುದು ಬಾಕಿ ಉಳಿದಿತ್ತು. ಉಪ್ಪಳ ಪೇಟೆಯಲ್ಲಿ ರೇಡಿಯೋ ರಿಪೇರಿ ತಜ್ಞರಾಗಿದ್ದ ನಮ್ಮವರು ಒಂದು ದಿನ ದಿಢೀರನೆ ಕಣ್ಣೂರಿಗೆ ಹೋಗಿ ಒಂದು keltron ಟೀವಿ ತಂದರು. ಕಪ್ಪು ಬಿಳುಪಿನದ್ದು, ಬಹಳ ಪುಟ್ಟದು. .....
" ಅಲ್ಲ, ಮಂಗಳೂರಿನಲ್ಲಿ ಇರಲಿಲ್ಲವೇ " ಎಂದು ನೀವು ಕೇಳಬಹುದು.
ಮಂಗಳೂರಿನ ಅಂಗಡಿಗಳಲ್ಲಿ ಟೀವಿ ಸ್ಟಾಕ್ ಎಲ್ಲ ಖಾಲಿಯಾಗಿತ್ತಂತೆ. ಹಾಗಾಗಿ ಕಣ್ಣೂರಿಗೆ ಹೋಗಲೇಬೇಕಗಿತ್ತು ಎನ್ನುತ್ತಾರೆ ನಮ್ಮವರು. ಕಣ್ಣೂರಿನಿಂದ ಟೀವಿಯೊಂದಿಗೆ ಬರುತ್ತಿರಬೇಕಾದರೆ , ಕಾಸರಗೋಡು ತಲಪುವ ಹೊತ್ತಿಗೆ ಉದ್ಘಾಟನಾ ಪ್ರಸಾರ ಕಾರ್ಯಕ್ರಮ ಪ್ರಾರಂಭವಾಗಿತ್ತಂತೆ. ಆ ವೇಳೆಗೆ ಕಾಸರಗೋಡು ನಗರದಲ್ಲೂ ವಿದ್ಯತ್ ಕೈ ಕೊಟ್ಟು ಜನರೇಟರು ಉಪಯೋಗಿಸಿ ಹೇಗಾದರೂ ಉದ್ಘಾಟನೆ ನೋಡಿಯೇ ಇವರು ಮನೆಗೆ ಬಂದರು. ಟೀವಿ ಸ್ಟೇಶನ್ ಆರಂಭವಾಗುವ ಮೊದಲೇ ಇವರ ಟೀವಿ ಸರ್ವೀಸ್ ಸೆಂಟರ್ ಉಪ್ಪಳದಲ್ಲಿ ಇತ್ತು. ಹಾಗಾಗಿ ಆಂಟೆನಾ, ಬೂಸ್ಟರ್, ಕೇಬಲ್ ವಯರ್ ಇತ್ಯಾದಿ ಸ್ಟಾಕ್ ಇದ್ದಿತು. ಹಲವಾರು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಿ ದೂರದ ಪಣಜಿ ರಿಲೇ ಸ್ಟೇಶನುಗಳಿಂದ ಸಿಗ್ನಲ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದೂ ಒಮ್ಮೊಮ್ಮೆ ಮಾತ್ರ. ಮಂಗಳೂರಿನ ಟೀವಿ ರಿಲೇ ಸ್ಟೇಶನ್ ಇಂಜಿನಿಯರ್ಸ ಇವರ ಸಂಪರ್ಕ ಪಡೆದು ಎಲ್ಲಿಯವರೆಗೆ ಟೀವಿ ಸಿಗ್ನಲ್ ಸಿಗಬಹುದು ಎಂದು ಪರಿವೀಕ್ಷಣೆ ನಡೆಸಿದ್ದರು.
ಬಾಯಾರು ಗ್ರಾಮದ ನಮ್ಮ ಹಳ್ಳಿ ಮನೆಗೆ ಟೀವಿ ಬಂದಿತು. ಅಂಗಳದಲ್ಲಿ ಕತ್ತಿ ಬೀಸಿಕೊಂಡು ತಿುಗುತ್ತಿದ್ದ ಕೆಲಸಗಾರರು ಇವರ ಕೈ ಸನ್ನೆಗೆ ಓಡಿ ಬಂದು, ಸುತ್ತಲೂ ಕೈ ಕಟ್ಟಿ ನಂತರು. ನಮ್ಮ ಮಾವ ಅವರನ್ನು ಗದ್ದೆಗೆ ಎಳಕೊಂಡು ಹೋಗಲು ಅಣಿಯಾಗುತ್ತಾ ಇದ್ದರು....... .
ಮನೆಯ ಹಿಂಭಾಗದ ದರೆಯ ಮೇಲೆ ಎತ್ತರವಾದ ಒಂದು ದಡ್ಡಾಲದ ಮರ. ಇವರ ಅಣತಿಯಂತೆ ಮರದ ರೆಂಬೆಕೊಂಬೆಗಳನ್ನು ಕತ್ತರಿಸಿ ಹಾಕಲಾಗಿ, ಮರ ಒಂದು ಪ್ರಾಕೃತಿಕ ಏಣಿಯ ರೂಪವನ್ನು ಹೊಂದಿತು. ನಮ್ಮ ಟಿಲ್ಲರ್ ಡ್ರೈವರ್ ಬಾಬು ಸ್ಕ್ರೂಡ್ರೈವರ್, ಸುತ್ತಿಗೆ, ಆಣಿ ಇತ್ಯಾದಿ ಇವರು ಕೊಟ್ಟಂತಹ ಸಲಕರಣೆಗಳನ್ನು ಹೆಗಲಿಗೇರಿಸಿಕೊಂಡು ಮರದ ತುದಿಯೇರಿದ. ಇನ್ನಿಬ್ಬರು ಸಿದ್ದಪಡಿಸಿದ್ದ ಆಂಟೆನಾವನ್ನು ಮೇಲೇರಿಸಿದರು. ಇವರು ಕೆಳಗಿನಿಂದ ನೀಡುತ್ತಿದ್ದ ತಾಂತ್ರಿಕ ನಿರ್ದೇಶನದಂತೆ ಮೇಲೆ tಹತ್ತಿದ್ದ ತಂತ್ರಜ್ಞ ಮಾಡುತ್ತಾ ಇದ್ದುದನ್ನು ಉಳಿದವರು ಕಣ್ಣು ಕಣ್ಣು ಬಿಟ್ಟುಕೊಂಡು ನೋಡ್ತಿದ್ದರು. ಅಂತೂ ಒಂದು ಹಂತದಲ್ಲಿ ಅವನು ಕೆಳಗಿಳಿದ.
ಕೇಬಲ್ ವಯರ್ ತೆವಳುತ್ತಾ ವಿಶಾಲವ್ಯಾಪ್ತಿಯ ಅಡುಗೆಮನೆಯ ಒಳಗೆ ಬಂದಿತು. ಟೀವಿಯೂ ಬಂದಿತು, ಹಿಂಬಾಲಿಸಿಕೊಂಡು ಕೈಸಾಲೆಯಲ್ಲಿದ್ದ ಟೇಬಲ್ ಸಹಾ. ಇವರು ಆ ಟೀವಿಯಲ್ಲಿ ಚಿತ್ರ ಮೂಡಿಸಲು ಹರಸಾಹಸ ಪಡುವುದು, ಪುನಃ ಬಾಬು ಮರ ಹತ್ತಿ ಆಂಟೆನಾ ದಿಕ್ಕು ತಪ್ಪಿದೆಯೋಎಂದು ಪರೀಕ್ಷಿಸುವುದು, ಇನ್ನಷ್ಟು ಮೇಲೆ ಆಂಟೆನಾ ಏರಿಸುವುದು, ಹೀಗೆಲ್ಲಾ ಮಾಡುತ್ತಿರಬೇಕಾದರೆ ತೋಟದ ಬೇರೆಬೇರೆ ಡಿಪಾರ್ಟುಮೆಂಟುಗಳಲ್ಲಿ ತೊಡಗಿಸಿಕೊಂಡಿದ್ದ ಕೆಲಸಗಾರರು ಅಲ್ಲಿ ನೆರೆದು ಸಹಕಾರ ನೀಡಲಾರಂಭಿಸಿದರು.
ಕೊನೆಗೂ ಮಿರಿಮಿರಿ ಮಿಂಚಲಾರಂಭಿಸಿತು ಟೀವಿ. ಅಷ್ಟು ಹೊತ್ತಿಗೆ ಸಂಜೆಯಾಗಿತ್ತು. ಮುಂದಿನ ಕೆಲಸ ನಾಳೆಗೆ ಮುಂದೂಡಲಾಯಿತು. ಆ ವೇಳೆಗೆ ನಮ್ಮ ಹಳ್ಳಿಪೇಟೆಯಲ್ಲಿ ಸುದ್ದಿಯಾಗಿತ್ತು. ಸ್ನೇಹಿತರು, ಇನ್ನಿತರರು ಒಬ್ಬೊಬ್ಬರಾಗಿ ಬಂದು ತನಿಖೆ ಆರಂಭಿಸಿದರು. ಎಲ್ಲರೂ ಸೇರಿ ಗಾಡ ಮಂತ್ರಾಲೋಚನೆ ಮಾಡಿದ ಫಲವೋ ಏನೋ ಮಾರನೇ ದಿನ ಮಸುಕು ಮಸುಕಾಗಿ ದೃಶ್ಯ ತೋರಿ ಬಂದಿತು. ಕ್ರಿಕೆಟ್ ಆಟ ಆಡುತ್ತಿದ್ದರು. ನಮ್ಮವರ ಅಣ್ಣ ಕ್ರಿಕೆಟ್ ಪ್ರಿಯರು. ಮಜಬೂತಾದ ಕುರ್ಚಿಯನ್ನು ಎಳೆದು ತಂದು ಕುಳಿತೇ ಬಿಟ್ಟರು, ಜೊತೆಯಲ್ಲಿ ಇಬ್ಬರು ಪುಟ್ಟ ಮಕ್ಕಳೂ ಅಪ್ಪನ ಮಡಿಲೇರಿದುವು. ಕ್ರಿಕೆಟ್ ಆಟಗಾರರು ಯಾರೆಂದು ತಿಳಿಯುವಂತಿರಲಿಲ್ಲ. ಅತ್ತ ಇತ್ತ ಓಡುವುದು ಗೊತ್ತಾಗುತ್ತಿತ್ತು. ನಮ್ಮ ಭಾವ ಕಿವಿಗೆ ಒಂದು ಪುಟ್ಟ ರೇಡಿಯೋ ಕೂಡಾ ತಗಲಿಸಿಕೊಂಡಿದ್ದರು. ಹೀಗೇ ಕೆಲವು ದಿನ ಹೋಯಿತು. ಕೆಲಸಗಾರರೂ ಆಗಾಗ ಬಂದು ಇಣುಕಿ ಹೋಗುತ್ತಿದ್ದರು.
ನಮ್ಮ ಮಾವ ಗದ್ದೆಯಿಂದ ವಾಪಾಸು ಬಂದರು. ಆಗ ಘಂಟೆ ಹನ್ನೊಂದಾಗಿತ್ತು. ಅವರಿಗೆ ಆಗಾಗ ಕಾಫಿ, ಚಹಾ ಕುಡಿಯುವ ಅಭ್ಯಾಸ ಇರಲಿಲ್ಲ. ಭಾವಿಯ ನೀರೇ ಆಗಬೇಕು. ಹಾಗಾಗಿ ಫ್ರೆಶ್ ವಾಟರ್ ತರೋಣವೆಂದು ಅಡುಗೆಮನೆಗೆ ತಗುಲಿಕೊಂಡಿದ್ದ ಭಾವಿಯ ನೀರು ಸೇದಿ ತರುತ್ತಾ ಇದ್ದೆ. ಅಷ್ಟರಲ್ಲಿ ನಮ್ಮ ಭಾವ " ಹ್ಞಾ.... ಇಂದಿರಾಗಾಂಧಿ..." ಎಂದು ಉದ್ಗರಿಸಿದರು. ಆಗ ಇಂದಿರಾಜೀ ನಮ್ಮ ಅಧಿನಾಯಕಿಯಾಗಿದ್ದ ಕಾಲ. ಸೊಂಟದಲ್ಲಿ ಕೊಡ ಇದ್ದಂತೇ ನಾನೂ ಟೀವಿ ನೋಡಿದೆ.
ಒಬ್ಬ ಮಹಿಳೆಯನ್ನು ಸ್ಟ್ರೆಚರಿನಲ್ಲಿ ಸಾಗಿಸುತ್ತಿದ್ದಂತೆ ಕಾಣಿಸಿತು. ಕ್ರಿಕೆಟ್ ನಿಂತಿತು. ಈ ವಿಷಯ ಇಂಟರ್ ನೆಟ್ ವೇಗದಲ್ಲಿ ಎಲ್ಲರನ್ನೂ ಹೇಗೆ ತಲಪಿತು ಗೊತ್ತಿಲ್ಲ. ಆಗ ಟೆಲಿಫೋನ್ ಕೂಡಾ ಇರಲಿಲ್ಲ. ಒಟ್ಟಿನಲ್ಲಿ ಜನ ಸೇರಿದರು. ಈಗ ನಿಜವಾದ ಸಮಸ್ಯೆ ಮನೆಮಂದಿಗೆ ಎದುರಾಯಿತು. ಉಪ್ಪಳದಿಂದ ಸಂಜೆ ಹೊತ್ತಿಗೆ ಕಿರಿಮಗ ಬರುತ್ತಲೇ " ಈ ಟೀವಿ ಇಲ್ಲಿದ್ದರಾಗದು, ...ಹೊರಚಾವಡಿಗೆ ಸಾಗಹಾಕಬೇಕು " ಎಂದರು ನಮ್ಮ ಮಾವ.
ಟೀವಿಯ ಪ್ರಯಾಣ ಮುಂದುವರಿಯಿತು. ಹೊರಚಾವಡಿಯ ಯಾವ ಜಾಗ ಸೂಕ್ತ ಎಂದು ಮಾವನೇ ಆಯ್ಕೆ ಮಾಡಿದರು. ಬಂದ ಅಷ್ಟೂ ಮಂದಿಗೆ ಕಾಣಿಸಬೇಕಲ್ಲ, ಹಾಗೂ ಮನೆಗೆ ಬಂದವರನ್ನು ಸುಧರಿಸುವುದರಲ್ಲಿ ನಮ್ಮ ಮಾವ ಎತ್ತಿದ ಕೈ. ಒಳಾಂಗಣದಿಂದ ಟೀವಿ ಹೊರಾಂಗಣಕ್ಕೆ ಹೋಯಿತು. ಒಳಗಿದ್ದ ಮಹಿಳೆಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.
ಆದರೆ ಅಲ್ಲಿಗೆ ಕಥೆ ಮುಗಿಯಲಿಲ್ಲ. ಇಂದಿರಾಗಾಂಧಿಯವರೇನೋ ಹೋದರು. ಟೀವಿ ಪ್ರಸಾರ ಮುಂದುವರಿಯಿತು. ವೈಕುಂಠ ಪ್ರಾಪ್ತಿವರೆಗೆ ನೇರ ಪ್ರಸಾರ ಬರುತ್ತಾ ಇದ್ದಿತು. ಪ್ರತಿದಿನವೂ ನಮ್ಮ ಹಿರಣ್ಯಮನೆಯಲ್ಲಿ ಜನಸಾಗರ. ಇಷ್ಟು ಚಿಕ್ಕ ಹಳ್ಳಿಯಲ್ಲಿ ಇವರೆಲ್ಲ ಎಲ್ಲಿದ್ದರು ಎಂಬ ಆಶ್ಚರ್ಯ ಚಿಹ್ನೆ ಆಗ ಖಂಡಿತವಾಗಿಯೂ ನನ್ನನ್ನು ಕಾಡಿತ್ತು. ವಿಶೇಷ ಅತಿಥಿಗಳನ್ನು ಮಾವ ಒಳಗೆ ಕರೆದು ಆಸರಿಗೆ ಕೊಡಿಸುವುದೂ ಇತ್ಯಾದಿ ಉಪಚಾರಗಳನ್ನು ಮಾಡುತ್ತಿದ್ದರು. ಮಾವ ದೊಡ್ಡ ಹೀರೋ ಆಗಿ ಬಿಟ್ಟಿದ್ದರು ! ಅಲ್ಲಿ ಜಾತಿ ನೀತಿಯ ಪ್ರಶ್ನೆಯೇ ಉದ್ಭವಿಸಲಿಲ್ಲ. ಹೊರಗಿನವರು, ಒಳಗಿನವರು ಎಂಬ ತಾರತಮ್ಯ ಬರಲೇ ಇಲ್ಲ. ಹಗಲಾಯಿತು, ಇರುಳಾಯಿತು ಎನ್ನುವಂತಿರಲಿಲ್ಲ. ಯಾಕೆಂದರೆ ಜನಸಾಗರ ಕಮ್ಮಿಯಾಗುವುದು ಕಾಣಿಸುತ್ತನೇ ಇರಲಿಲ್ಲ.
ಆ ಹತ್ತೂ, ಹನ್ನೊಂದು ದಿನಗಳು ಹೇಗೆ ಕಳೆದುವೆಂದೇ ಗೊತ್ತಿಲ್ಲ. ಆದರೆ ಅದೊಂದು ಅವಿಸ್ಮರಣೀಯ ಘಟನೆಯಾಗಿ ಉಳಿದಿದೆ. ಈಗಲೂ ಆ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಎಷ್ಟೋ ಜನರನ್ನು ನಮ್ಮವರು ಭೇಟಿಯಾಗುತ್ತಲೇ ಇರುತ್ತಾರೆ. " ನಾನು ಬಂದಿದ್ದೆ ಸಾರ್, ನಿಮ್ಮ ಮನೆಗೆ ಆಗ, ಅಂಗಳದಲ್ಲಿ ಬೈಹುಲ್ಲು ರಾಶಿಯಿತ್ತು, ಅದರ ಮೇಲೆ ನಿಂತ್ಕೊಂಡು ಟೀವಿ ನೋಡಿದ್ವಿ " ಅನ್ನುತ್ತಾರೆ.
ಹೌದು, ನಮ್ಮ ಎರಡಂತಸ್ತಿನ ಮನೆ ಮಾಡಿನೆತ್ತರಕ್ಕೆ ಇದ್ದ ಬೈಹುಲ್ಲ ರಾಶಿ, ಗದ್ದೆಯಿಂದ ಕಟಾವು ಮಾಡಿ ತಂದದ್ದು, ವೀಕ್ಷಕರ ಕಾಲ್ತುಳಿತಕ್ಕೆ ಸಿಕ್ಕು ಧರಾಶಾಯಿಯಾಗಿ ಮಲಗಿಯೇ. ಬಿಟ್ಟಿತ್ತು. ಈ ಘಟನೆ ನಡೆದು ದಶಕಗಳೇ ಕಳೆದಿವೆ. ' ಇಂದಿರಾಗಾಂಧಿ ಇನ್ನಿಲ್ಲ ' ವಾದ ಕೂಡಲೇ ರಾಷ್ಟ್ರವ್ಯಾಪಿ ಸ್ವಯಂಪ್ರೇರಿತ ಬಂದ್ ಆಗಿತ್ತು. ಬಂದ್ ಎಂದೊಡನೆ ವಾಹನ ಸೌಕರ್ಯ ಇಲ್ಲ. ಆದರೂ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನ ಇಲ್ಲಿಗೆ ಬಂದು ಇಂದಿರಾ ಅವರ ಅಂತ್ಯಕ್ರಿಯೆಯ ದರ್ಶನ ಪಡೆದು ಹೋಗಿದ್ದಾರೆ. ಆದರೂ ಕೆಲವು ಪ್ರಶ್ನೆಗಳಿಗೆ ಈಗಲೂ ಉತ್ತರ ದೊರೆತಿಲ್ಲ. ಮಂಗಳೂರಿನಿಂದ ಮೂವತೈದು ಕಿ.ಮೀ. ದೂರದಲ್ಲಿ, ಗುಡ್ಡದ ತಪ್ಪಲಿನಲ್ಲಿರುವ ಸ್ಥಳದಲ್ಲಿ, ಆಂಟೆನಾ ಬೂಸ್ಟರುಗಳ ಜ್ಞಾನ ಏನೇನೂ ಇಲ್ಲದ ಸಮಯದಲ್ಲಿ ಸಿಗ್ನಲ್ ದೊರಕಿದ್ದು ಹೇಗೆ ? ವೀಕ್ಷಕರು ಕೃತಾರ್ಥಭಾವದಿಂದ ಮರಳಿದ್ದು ಹೇಗೆ ? ಕಣ್ಣೂರಿನಿಂದ ಹೊಸ ಟೀವಿ ತಂದರೂ ಇವರು ಉಪಯೋಗಿಸಿದ್ದು 20 ಇಂಚಿನ ಕಪ್ಪು ಬಿಳುಪು , ಸೆಕೆಂಡ್ ಹ್ಯಾಂಡ್ ಟೀವಿ. ಅದೂ 1975ರ ಮಾಡೆಲ್, ವಾಲ್ವ್ ಸೆಟ್, ಬಾಂಬೇಯಿಂದ ತರಿಸಿದ್ದು. ಇಂತಹ ಹಲವು ಪ್ರಶ್ನಾರ್ಥಕ ಚಿಹ್ನೆಗಳು ನಮ್ಮವರನ್ನು ಈಗಲೂ ಕಾಡುತ್ತಿರುತ್ತವಂತೆ.
Saturday, 18 February 2012
ಕೋಡಗನ ಕೋಳಿ ನುಂಗಿತ್ತಾ
Subscribe to:
Post Comments (Atom)
0 comments:
Post a Comment