ರಾಗಿ ' ಎಂದಾಕ್ಷಣ ನೆನಪಾಗುವುದು ರಾಗಿಮುದ್ದೆ. " ಏನೋ ಬಯಲುಸೀಮೆಯವರ ತಿನಿಸು " ಅಂದ್ಕೊಂಡು ಸುಮ್ಮಗಿರ್ತೀವಿ . ಹಳೆಯ ಕನ್ನಡ ಚಲನಚಿತ್ರಗಳಲ್ಲಿ ರಾಜಕುಮಾರ್ - ಭಾರತಿ ಜೋಡಿ ರಾಗಿಮುದ್ದೆ ತಿನ್ನೋ ವೈಖರಿ ಕಣ್ಣ ಮುಂದೆ ಸುಳಿಯಲೂ ಬಹುದು . ಕರಾವಳಿಯವರಿಗೆ , ಮಲೆನಾಡಿಗರಿಗೆ ಇದು ಅಪರಿಚಿತ ದವಸಧಾನ್ಯಗಳಲ್ಲೊಂದಾಗಿತ್ತು. ಆದರೆ ಈಗ ಕಾಲ ಬದಲಾಗಿದೆ . ಆಧುನಿಕತೆಯ ಆಗಮನದೊಂದಿಗೆ ಜಗತ್ತು ಕುಬ್ಜವಾಗಿಬಿಟ್ಟಿದೆ . ಎಲ್ಲಾ ವಿಧವಾದ ಸರಕುಗಳು ಎಲ್ಲೆಡೆಯೂ ಲಭ್ಯವಿವೆ . ಸುದ್ಧಿಮಾಧ್ಯಮಗಳು , ಟೀವಿ, ಇಂಟರ್ನೆಟ್ ಇತ್ಯಾದಿಗಳಿಂದ ಮಾಹಿತಿಗಳು ನಿರಂತರವಾಗಿ ದೊರೆಯುತ್ತಿವೆ . ಕ್ಷಣಮಾತ್ರದಲ್ಲಿ ' ರಾಗೀಮುದ್ದೇ ' ಮಾಡೋದನ್ನು ಕಲಿಯುವಂತಹ ಚಾಕಚಕ್ಯತೆ ಇಂದಿನ ಗೃಹಿಣಿಗಿದೆ.
ದಕ್ಷಿಣ ಭಾರತದಲ್ಲಿ ರಾಗಿಯ ಬಳಕೆ ವ್ಯಾಪಕವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ರಾಗಿಯ ಬೆಳೆ ಕುಂಠಿತವಾಗಿದೆಯೆಂದು ಅಧ್ಯಯನಗಳು ತಿಳಿಸುತ್ವವೆ. ಇಂದಿನ ಯುವಜನತೆ ಕೃಷಿಯೇತರ ಚಟುವಟಿಕೆಗಳಲ್ಲಿ ಆಸಕ್ತವಾಗಿರುವುದೂ , ಕೃಷಿ ಲಾಭದಾಯಕ ಉದ್ಯಮವಾಗಿಲ್ಲದಿರುವುದೂ ಇದಕ್ಕೆ ಕಾರಣವಾಗಿದೆ . ಇನ್ನಿತರ ಕೃಷ್ಯುತ್ಪನ್ನಗಳಂತೆ ರಾಗಿ ಬೇಸಾಯಕ್ಕೆ ಹೆಚ್ಚಿನ ನೀರಿನ ಅವಶ್ಯಕತೆಯಿಲ್ಲ . ಗೊಬ್ಬರವೂ ಬೇಕಾಗಿಲ್ಲ , ಕೀಟನಾಶಕಗಳ ಹಂಗೂ ಇದಕ್ಕಿಲ್ಲ . ವೈಜ್ಞಾನಿಕವಾಗಿ Eleusine coracana ಹೆಸರನ್ನು ಹೊಂದಿರುವ ರಾಗಿ ಇತಿಯೋಪಿಯಾ ಮೂಲದ್ದು ಎಂದು ಹೇಳಲಾಗುತ್ತಿದೆ . ಈ ವಾದವನ್ನು ಒಪ್ಪಬೇಕೆಂದೇನೂ ಇಲ್ಲ .
ಹರಿದಾಸ ಸಾಹಿತ್ಯದಲ್ಲಿ ರಾಗಿಯನ್ನು ಹಾಡಿ ಹೊಗಳುವ ಅನೇಕ ಕೀರ್ತನೆಗಳಿವೆ . ಸ್ವಯಂ ಪುರಂದರದಾಸರೇ ' ರಾಗಿಯ ತಂದೀರಾ ಬಿಕ್ಷಕೆ ರಾಗಿಯ ತಂದೀರಾ ' ಎಂದು ಹಾಡಿದ್ದಾರೆ. ಆ ಕಾಲದ ಸಾಮಾಜಿಕ ತಾರತಮ್ಯವನ್ನು ಧಾನ್ಯಗಳ ರೂಪಕದ ಮೂಲಕ ಅಪೂರ್ವ ಕಾವ್ಯವನ್ನು ಕನಕದಾಸರು ರಚಿಸಿದ್ದಾರೆ. ಶ್ರೀರಾಮನಿಂದ ರಾಗಿಗೆ ಸಂದ ಗೌರವದ ಕತೆಯೇ `ರಾಮಧಾನ್ಯ`. ರಾಗಿ ಬತ್ತಗಳ ಜಗಳದ ತೀರ್ಪಿನ ಘನತೆಯನ್ನು ಮನಗಾಣಿಸುವ ಪೂರಕ ವರ್ಣನಾವಿಶೇಷತೆಯೂ ಇದಾಗಿದೆ ರಾಗಿ ನಮ್ಮ ಜನಮಾನಸದಲ್ಲಿ ಹೀಗೆ ಬೆರೆತುಕೊಂಡಿದೆ . ಇಂತಹ ಧಾನ್ಯವನ್ನು ' ಎಲ್ಲಿಂದಲೋ ಭಾರತಕ್ಕೆ ಬಂದಿದೆ ' ಎಂದು ಹೇಗೆ ಕರೆಯೋಣ ?
ಇನ್ನಿತರ ದವಸಧಾನ್ಯಗಳು ಹುಳ ಹಿಡಿದು ಹಾಳಾಗುವಲ್ಲಿ ಈ ರಾಗಿ 50 ವರ್ಷಗಳಾದರೂ ಬಾಳಿಕೆಯ ಶಕ್ತಿಯನ್ನು ಹೊಂದಿದೆ . ಹಿಂದೆ ಕ್ಷಾಮಡಾಮರಗಳ ಕಾಲದಲ್ಲಿ ಉಪಯೋಗಿಸಲೆಂದೇ ಇದನ್ನು ದಾಸ್ತಾನು ಮಾಡಲಾಗುತ್ತಿತ್ತು . ಇದಕ್ಕೆಂದೇ ವಿಶೇಷ ' ಹಗೇವು ' ನಿರ್ಮಿಸುತ್ತಿದ್ದರು. ರಾಗಿಯ ಒಣಹುಲ್ಲು ಜಾನುವಾರುಗಳಿಗೆ ಪೌಷ್ಟಿಕ ಆಹಾರ . ಶ್ರಮಜೀವಿಗಳಾದ ರೈತಾಪಿವರ್ಗಕ್ಕೆ ಇದು ಸಂತುಲಿತ ಆಹಾರಧಾನ್ಯವಾಗಿದೆ .
ಕ್ಯಾಲ್ಸಿಯಂ , ಖನಿಜಾಂಶಗಳು , ಪ್ರೊಟೀನ್ ಹೇರಳವಾಗಿರುವ ರಾಗಿ ಪೋಷಕಾಂಶಗಳ ಆಗರ . ಅಬಾಲವೃದ್ಧರಿಗೆ ಆದರ್ಶಪ್ರಾಯ ಆಹಾರ . ವೈದ್ಯರು ಕೊಡುವ ವಿಟಮಿನ್ ಮಾತ್ರೆಗಳನ್ನು ನುಂಗುವ ಬದಲು ರಾಗೀ ಗಂಜಿಯನ್ನು ನಿಯಮಿತವಾಗಿ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ . ಬಳಲಿಕೆ ಮಾಯವಾಗಿ ಶರೀರವೂ ಹಾಯೆನಿಸುವುದು . ಇದರಲ್ಲಿರುವ ಪೋಷಕಾಂಶಗಳು ಬಹು ಬೇಗನೆ ಜೀರ್ಣವಾಗುವಂಥವು . ಹಾಗಾಗಿ ಪುಟ್ಟ ಮಗುವಿಗೆ 6 ತಿಂಗಳಾದೊಡನೆ ರಾಗೀಮಣ್ಣಿ ಕೊಡಬಹುದಾಗಿದೆ . ರಾಗಿಮುದ್ದೆ ತಯಾರಿಗೆ ಪರಿಣತಿಯ ಅವಶ್ಯಕತೆ ಇದೆ , ಹಾಗೆಯೇ ತಿನ್ನಲೂ ಸಹ . ಮಾಡುವುದನ್ನು ನೋಡಿಯೇ ಕಲಿಯಿರಿ . ಸುಲಭವಾಗಿ ತಯಾರಿಸಬಹುದಾದ ಕೆಲವು ವೈವಿಧ್ಯಗಳು ಇಲ್ಲಿವೆ .
ಚಮಚ ರಾಗಿಹುಡಿಯನ್ನು 1 ಕಪ್ ನೀರಿನೊಂದಿಗೆ ಕುದಿಸಿ ರಾಗಿ ಗಂಜಿ ತಯಾರಿಸಿ.
1 ಚಮಚ ಬಾದಾಮ್ ಹುಡಿ ಸೇರಿಸಿ.
2 ಚಮಚ ಸಕ್ಕರೆ ಸೇರಿಸಿ.
1 ಕಪ್ ಬಿಸಿ ಹಾಲು ಸೇರಿಸಿ.
ಈಗ ಬಿಸಿಬಿಸಿ ರಾಗಿ ಪೆಯ ಸಿದ್ಧ. ಇದನ್ನು ನೀವೂ ಕುಡಿಯಿರಿ. ಮುದ್ದು ಮಕ್ಕಳಿಗೂ ಕುಡಿಸಿ. ವಯಸ್ಸಾದವರಿಗೂ ಹಿತಕರ.
ರಾಗೀ ಸೂಪ್ :
ಮೇಲೆ ಹೇಳಿದಂತೆ ರಾಗಿ ಗಂಜಿ ತಯಾರಿಸಿ.
1 ಈರುಳ್ಳಿ ಸಣ್ಣಗೆ ಹಚ್ಚಿ ತುಪ್ಪದಲ್ಲಿ ಹುರಿಯಿರಿ.
ರುಚಿಗೆ ಉಪ್ಪು, ಚಿಟಿಕೆ ಕಾಳುಮೆಣಸಿನ ಹುಡಿ ಸೇರಿಸಿ ಊಟಕ್ಕೆ ಮೊದಲು ಈ ರಾಗೀ ಸೂಪ್ ಸವಿಯಿರಿ.
ರಾಗಿ ಪಾನಕ :
1 ಚಮಚ ರಾಗಿ ಹುಡಿ.
1 ಚಮಚ ಬಾದಾಮ್ ಹುಡಿ.
3 ಚಮಚ ಸಕ್ಕರೆ.
1 ಚಿಟಿಕೆ ಏಲಕ್ಕಿ ಹುಡಿ.
1ದೊಡ್ಡ ಲೋಟ ನೀರು.
ಎಲ್ಲವನ್ನೂ ಚೆನ್ನಾಗಿ ಬೆರೆಸಿ 1ತುಂಡು ಐಸ್ ಹಾಕಿ ಕುಡಿಯಿರಿ, ಅಥವಾ ಫ್ರಿಜ್ ನಲ್ಲಿ ಅರ್ಧ ಗಂಟೆ ಇಟ್ಟು ಕುಡಿಯಿರಿ.
ವೈನ್ ತಯಾರಿಕೆಗೂ ಇದನ್ನು ಬಳಸುತ್ತಾರೆ.
2 ಕಪ್ ಅಕ್ಕಿ ನುಣ್ಣಗೆ ಅರೆದು 1 ಕಪ್ ರಾಗಿ ಹುಡಿ ಸೇರಿಸಿ ನೀರುದೋಸೆ ( ತೆಳ್ಳವು ) ಹಿಟ್ಟಿನ ಹದಕ್ಕೆ ತನ್ನಿ . ರುಚಿಗೆ ಉಪ್ಪು ಸೇರಿಸಿ ದೋಸೆ ಎರೆಯಿರಿ . ಕಾಯ್ ಚಟ್ನಿಯೊಂದಿಗೆ ತಿನ್ನಿ .
1 ಕಪ್ ಉದ್ದು , 1 ಕಪ್ ಅಕ್ಕಿಯಿಂದ ಇಡ್ಲಿ ಹಿಟ್ಟು ತಯಾರಿಸಿ , 1 ಕಪ್ ರಾಗಿ ಹುಡಿ ಸೇರಿಸಿ , ರುಚಿಗೆ ಉಪ್ಪು ಹಾಕಿ 8 ಗಂಟೆ ಮುಚ್ಚಿ ಇಡಿ . ಇಡ್ಲಿ ತಯಾರಿಸಿ .
ಎಣ್ಣೆಯಲ್ಲಿ ಕರಿದ ತಿಂಡಿಗಳಾದ ಚಕ್ಕುಲಿ , ಕೋಡುಬಳೆಗಳನ್ನು ಅಕ್ಕಿಯೊಂದಿಗೆ ರಾಗಿಯನ್ನೂ ಸೇರಿಸಿ ಮಾಡಬಹುದು .
ಬೆಲೆಯೇರಿಕೆಯ ಈ ಕಾಲದಲ್ಲಿ ಮಾರುಕಟ್ಟೆಯಲ್ಲಿ ಅಗ್ಗವಾಗಿ ಸಿಗುವ ಆಹಾರಧಾನ್ಯ ರಾಗಿ. ಚಿಂತೆ ಬಿಡಿ , ಇಂದೇ ರಾಗಿ ಕೊಂಡು ತನ್ನಿ , ಉಪಯೋಗಿಸಿ , ಆರೋಗ್ಯವಂತರಾಗಿ , ದೃಢಕಾಯರಾಗಿ ಬಾಳಿ .
ಟಿಪ್ಪಣಿ: ದಿನಾಂಕ 1, ಎಪ್ರಿಲ್ 2014 ರಂದು ಸೇರಿಸಿದ್ದು...
ಸೆಕೆ ಸಮಯ ಬಂದಿತೇ, ಅಡುಗೆಮನೆಯಲ್ಲಿ ರಾಗೀ ವೈಭವ. ಮುಂಜಾನೆಯ ತಿಂಡಿ ಯಾವುದೇ ಇರಲಿ, ರಾಗಿ ಸೇರಿದ್ರೇನೇ ತಂಪು ತಂಪು. ಶನಿವಾರ ಬಂತೆಂದ್ರೆ ಸಾಕು, ಧಾವಿಸಿ ಮನೆಗೆ ಓಡೋಡಿ ಬರುವ ಮಗಳು.
" ನಾಳೆ ತಿಂಡಿ ಏನ್ಮಾಡ್ಲೀ ?" ಅವಳ ಹುಕುಂ ಪ್ರಕಾರವೇ ನಡೆಯತಕ್ಕದ್ದು.
" ಉದ್ದಿನ ದೋಸೆ ಮಾಡಮ್ಮ "
ಉದ್ದಿನ ದೋಸೆ ಎಂಬ ಹಣೆಪಟ್ಟಿ ಹೊತ್ತು ಮುಂಜಾನೆ ರಾಗಿದೋಸೆ ಹೀಗೆ ಸಿದ್ಧವಾಯಿತು.
2 ಕಪ್ ಬೆಳ್ತಿಗೆ ಅಕ್ಕಿ
ಉದ್ದು, ಪಚ್ಚೆಹಸ್ರು ಕಾಳು ಜೊತೆಯಾಗಿ ಒಂದು ಕಪ್. ಪಚ್ಚೆಹಸ್ರನ್ನೇ ಜಾಸ್ತಿ ಹಾಕಿ.
ಒಂದು ಚಮಚ ಮೆಂತೆ
ಒಂದು ಕಪ್ ರಾಗಿ ಹುಡಿ
ಧಾನ್ಯಗಳನ್ನೂ ಅಕ್ಕಿಯನ್ನೂ ಪ್ರತ್ಯೇಕವಾಗಿ ನೆನೆ ಹಾಕಿಟ್ಟು, ತೊಳೆದು, ಮೊದಲು ಧಾನ್ಯಗಳನ್ನು ನುಣ್ಣಗೆ ಅರೆಯಿರಿ.
ಅಕ್ಕಿಯನ್ನೂ ನುಣ್ಣಗೆ ಅರೆದು, ಹಿಟ್ಟು ತೆಗೆಯುವ ಮುನ್ನ ರಾಗಿ ಹುಡಿ ಸೇರಿಸಿ ಅರೆಯುವ ಯಂತ್ರ ತಿರುಗಿಸಿ ತೆಗೆದ ಹಿಟ್ಟುಗಳನ್ನು ಒಟ್ಟುಗೂಡಿಸಿ, ಉಪ್ಪು ಬೆರೆಸಿ ಮುಚ್ಚಿ ಇಡಿ. ಎಂಟು ಗಂಟೆಗಳ ಕಾಲ ಹುದುಗು ಬಂದ ನಂತರ ಗರಿಗರಿಯಾದ ದೋಸೆ ಎರೆದು ಕಾಯ್ ಚಟ್ನಿ, ಗಟ್ಟಿ ಮೊಸರಿನೊಂದಿಗೆ ಸವಿಯಿರಿ.
ಅಕ್ಕಿ, ಪಚ್ಚೆಹಸ್ರು, ರಾಗಿ - ಒಂದೇ ಪ್ರಮಾಣದಲ್ಲಿ ನುಣ್ಣಗೆ ಅರೆದು ಎರೆಯಿರಿ. ಈ ಹಿಟ್ಟು ಹುಳಿ ಬರಬಾರದು.
ಯುಗಾದಿಯೂ ಬಂದಿತ್ತು. " ಗೇರುಬೀಜದ ಪಾಯಸ ಆದೀತೇ ?"
" ಬೇಡ್ವೇ ಬೇಡ, ಖರ್ಜೂರದ್ದು ಪಾಯಸ ಮಾಡಮ್ಮ"
ಮನೆಯಲ್ಲಿದ್ದವರು ನಾವು ಮೂರೇ ಮಂದಿ.
ಒಂದ್ಹತ್ತು ಖರ್ಜೂರ ಬಿಡಿಸಿ, ಬೀಜ ತೆಗೆದು, ಒಂದು ಕುದಿ ಕುದಿಸಿ ಕೆಳಗಿಟ್ಟುಕೊಳ್ಳಿ.
ಒಂದು ಚಮಚ ಗಸಗಸೆ ಹುರಿದಿಟ್ಟುಕೊಳ್ಳಿ.
ತೆಂಗಿನಕಾಯಿ ಹಾಲು ಸಿದ್ಧವಾಗಲಿ.
ನೀರು ಕಾಯಿ ಹಾಲಿಗೆ 2 ಚಮಚ ರಾಗಿ ಹುಡಿ ಹಾಕಿ ಕಲಸಿಟ್ಟುಕೊಳ್ಳಿ.
ಖರ್ಜೂರ ತಣಿಯಿತೇ, ಅರೆಯುವ ಯಂತ್ರದಲ್ಲಿ ಒಂದು ಸುತ್ತು ತಿರುಗಲಿ.
ರಾಗಿ ಬೆರೆಸಿದ ಕಾಯಿ ಹಾಲು ಒಲೆಯ ಮೇಲೇರಲಿ.
ಕುದಿಯುತ್ತಾ ಹಿಟ್ಟು ದಪ್ಪವಾಯಿತೇ, ಖರ್ಜೂರದ ಮಿಶ್ರಣವೂ ಸೇರಲಿ.
ಹುರಿದಿಟ್ಟ ಗಸಗಸೆಯೂ ಬೀಳಲಿ.
ಸಕ್ಕರೆ ಒಂದು ಕಪ್ ಹಾಕಿ, ಕರಗಲಿ.
ಸಕ್ಕರೆ ಕರಗಿತೇ, ದಪ್ಪ ಕಾಯಿಹಾಲು ಇಳಿಯಲಿ.
ಒಂದು ಕುದಿ ಬರಲಿ.
ದ್ರಾಕ್ಷಿ, ಗೋಡಂಬಿ ಬೇಕಾದೋರು ಹಾಕಿಕೊಳ್ಳಿ. ಗಸಗಸೆ ಹಾಕಿರೋದ್ರಿಂದ ಏಲಕ್ಕಿ ಬೇಡ.
ಊಟದ ಕೊನೆಯಲ್ಲಿ ಕುಡಿಯಲು ಹಿತಕರ, ಬಿರುಬಿಸಿಲಿಗೂ ಸುಖವಾದ ನಿದ್ರೆ ಬಂದೀತು.
0 comments:
Post a Comment