Pages

Ads 468x60px

Sunday 12 May 2013

ಹಣ್ಣು ಹಲಸು, ಸವಿ ಸವಿ ತಿನಿಸು








ಸಿಹಿಯಾದ ಬಕ್ಕೆ ಹಲಸಿನ ಹಣ್ಣು ಮನೆಯೊಳಗೆ ಬಂದಿತು.   ಮೊದಲನೆಯದಾಗಿ,  ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು  ತಿಂದು ಮುಗಿಸುವುದು.   ಎಷ್ಟು ತಿನ್ನಬಹುದೂ, ನೀವೇ ಹೇಳಿ,  ಉಳಿಯಿತು.  ದೋಸೆ ಮಾಡಿಕೊಳ್ಳೋಣ.

2  ಕಪ್ ಅಕ್ಕಿ.   ನೆನೆಸಿಡಿ.
10ರಿದ 15 ಬಿಡಿಸಿದ ಹಣ್ಣಿನ ಸೊಳೆಗಳು.
ರುಚಿಗೆ ಉಪ್ಪು.

ಹಣ್ಣುಗಳನ್ನು ಮಿಕ್ಸೀಯಲ್ಲಿ ಪುಡಿ ಪುಡಿ ಮಾಡಿಕೊಳ್ಳಿ.
ಅಕ್ಕಿಯನ್ನು ನುಣ್ಣಗೆ ಅರೆದು ಪುಡಿ ಅಥವಾ ಮುದ್ದೆಯಾದ ಹಣ್ಣನ್ನು ಸೇರಿಸಿ,  ಇನ್ನೆರಡು ಸುತ್ತು ತಿರುಗಿಸಿ, ರುಚಿಗೆ ಉಪ್ಪು ಸೇರಿಸಿ ಮುಚ್ಚಿಡಿ.   ಅರ್ಧ ಗಂಟೆ ಬಿಟ್ಟು ದೋಸೆ ಎರೆಯಿರಿ.   ಖಾರವಾದ ಶುಂಠೀ ಚಟ್ನಿ ಇರಲಿ.

ಇದೇ ಹಿಟ್ಟಿನಿಂದ ಸಿಹಿ ಭಕ್ಷ್ಯ ಮಾಡಿಕೊಳ್ಳೋಣ,  ಹೇಗೇ ಅಂತೀರಾ ?

ದೋಸೆ ಹಿಟ್ಟು ಮಿಕ್ಕಿದ್ದು ಸಾಕು.   ಹಿಟ್ಟು ಹುಳಿ ಬಂದಿರಬಾರದು.

 ದಪ್ಪ ತಳದ ಬಾಣಲೆ ಒಲೆಯ ಮೇಲೆ ಇಟ್ಟು ಒಂದು ಚಮಚ ಎಳ್ಳು ಹುರಿಯಿರಿ.

ಒಂದು ಅಚ್ಚು ಬೆಲ್ಲ ಪುಡಿ ಮಾಡಿ ಅದೇ ಬಾಣಲೆಗೆ ಹಾಕಿಕೊಳ್ಳಿ,  ಸ್ವಲ್ಪವೇ ನೀರೆರೆದು ಕುದಿಸಿ,   ಬೆಲ್ಲ ಕರಗಿ ನೊರೆ ನೊರೆಯಾಗಿ ಮೇಲೆ ಬರುತ್ತಿದ್ದಂತೆ,  ಈ ದೋಸೆಹಿಟ್ಟನ್ನು ಸುರಿದು,  ಸೌಟಿನಲ್ಲಿ ಚೆನ್ನಾಗಿ ಬೆರೆಸಿ,  ಕೆಳಗಿಳಿಸಿ.

ಅಪ್ಪದ ಕಾವಲಿಗೆ ತುಪ್ಪ ಎರೆದು ಒಲೆಯ ಮೇಲೆ ಇಟ್ಟು,  ಬಿಸಿಯಾದ ಗುಳಿಗಳಿಗೆ ಈ ಹಿಟ್ಟು ಎರೆದು ಎರಡೂ ಬದಿ ಕೆಂಪಗಾದೊಡನೆ ತೆಗೆಯಿರಿ.  ಈ ಅಪ್ಪಂ ಎರಡು ದಿನ ಇಟ್ಟುಕೊಳ್ಳಬಹುದು.




                     <><><>     <><><>




ಈಗ ಕಡುಬು ಮಾಡುವ ವಿಧಾನವನ್ನೂ ನೋಡಿಕೊಳ್ಳೋಣ.

ಹಲಸಿನ ಹಣ್ಣಿನ ಕಡುಬು ತಯಾರಿಗೆ ಬಾಳೆ ಎಲೆ ಅವಶ್ಯ.   ಹಬೆಯಲ್ಲಿ ಬೇಯಿಸುವ ಈ ಕಡುಬನ್ನು  2 - 3 ದಿನ ಇಟ್ಟು ಉಪಯೋಗಿಸಬಹುದಾಗಿದೆ.   ಗೆಣಸಲೆ,  ಕೊಟ್ಟಿಗೆ, ಗಟ್ಟಿ,  ಅಡ್ಯ,  ಅಡೆ  ಹೀಗೆ ಹತ್ತು ಹಲವು ಹೆಸರುಗಳೂ ಈ ತಿಂಡಿಗೆ ಇದೆ.   ಈಗ ನಾವು ಸರಳ ವಿಧಾನದಲ್ಲಿ ಮಾಡೋಣ.

ಬಾಳೆ ಎಲೆಗಳನ್ನು ಬಾಡಿಸಿ ಇಟ್ಟುಕೊಳ್ಳಿ,  ಮೈಕ್ರೋವೇವ್ ಆವೆನ್ ಬಳಸಬಹುದು.
2  ಕಪ್ ಅಕ್ಕಿ.  ಅಕ್ಕಿತರಿಯಾದರೆ ಉತ್ತಮ.  ನೆನೆಸಿಡಿ.
ಒಂದು ಬಟ್ಟಲು ಹಣ್ಣುಗಳನ್ನು  ( ಚಿತ್ರದಲ್ಲಿ ಇರುವಷ್ಟು )  ಮಿಕ್ಸೀಯಲ್ಲಿ ಪುಡಿ ಮಾಡಿ.
ಒಂದು ಅಚ್ಚು ಬೆಲ್ಲದ ಪುಡಿ,  ರುಚಿಗೆ ಉಪ್ಪು,  ನೆನೆಸಿಟ್ಟ ಅಕ್ಕೀತರಿ ಸೇರಿಸಿ ಪುನಃ ಕಡೆಯಿರಿ.   ಹೆಚ್ಚು ನುಣ್ಣಗಾಗುವ ಅಗತ್ಯವಿಲ್ಲ.   ನೀರು ಮಿತವಾಗಿ ಬಳಸಿ.  ಸೌಟಿನಲ್ಲಿ ಮುದ್ದೆಯಾಗಿ ಎತ್ತಲು ಬರುವಂತಿರಬೇಕು.

ಬಾಡಿಸಿದ ಬಾಳೆಲೆಯೊಳಗೆ ಚಿಕ್ಕ ಸೌಟಿನಲ್ಲಿ ಹಿಟ್ಟು ತುಂಬಿ,  ಚೆನ್ನಾಗಿ ಮಡಚಿ ಉಗಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ.

ರಾತ್ರಿ ಮಾಡಿ ಇಟ್ಟುಕೊಂಡಲ್ಲಿ  " ಬೆಳಗಿನ ತಿಂಡಿ ಏನು ಮಾಡಲೀ "  ಎಂದು ಪರದಾಡುವ ಚಿಂತೆಯಿಲ್ಲ.   ಬೇಕಿದ್ದರೆ  ಶುಂಠಿ ಚಟ್ನಿ ಮಾಡಬಹುದು.   ಹಾಗೇನೇ ಮೇಲೆ ತೆಂಗಿನೆಣ್ಣೆ ಎರೆದು ತಿನ್ನುವುದು ವಾಡಿಕೆ,  ತುಪ್ಪವೂ ಆದೀತು.




Posted via DraftCraft app

0 comments:

Post a Comment