ಆಸೆಯಿಂದ ತಂದ ಲಿಲ್ಲಿ ಹೂವು
ನೆಲದಾಳದಿಂದ, ಮನದಾಳದಿಂದ
ಮೇಲೇಳಲಿಲ್ಲ
ಗೊಬ್ಬರ ಕೊಟ್ಟು ನೀರು ಹನಿಸಿ
ಮೇಲೆ ಮಣ್ಣು ಮುಚ್ಚಿ
ತರಗೆಲೆಯ ತಂಪು ನೀಡಿ
ಊಹ್ಞೂಂ...
ಗಿಡ ಚಿಗುರಲಿಲ್ಲ |
ಕಣ್ಣಿಗೂ ಕಾಣಿಸದಾಗಿ, ಮರೆಯಾಗಿ
ಹೋಯಿತೇಕೆ ತಿಳಿಯಲಿಲ್ಲ
ಅದೇನು ಆಗಸದ ಅಬ್ಬರ
ಮಿಂಚು ಗುಡುಗುಗಳ ಮೇಲಾಟ
ಸುರಿಯಿತೇ ವರ್ಷಧಾರೆ
ನೆಲ ತಣಿಯಿತೇ
ಕವಿಸಮಯ ಬಂದಿತೇ
ಸುರಿಸುರಿದು ಧುಮ್ಮಿಕ್ಕಿ
ಹರಿಹರಿದು ಒಸರುಕ್ಕಿ
ಆಹ್ಹಾ...
ಹೂವರಳಿಯೇ ಬಿಟ್ಟಿತು |
ವರ್ಷಧಾರೆ ಸುರಿಯುತಿದೆ
ಮನ ಗುನುಗುನುಗುತಿದೆ |
ಝಿಲ್ ಝಿಲ್ ಅನಿಸಲಿ ಮಿಂಚು ಸೆಳೆ
ಇಳಿಇಳಿದು ಬಾ ಮಳೆ
ಹಾಡುತಿರುವಳೆ
ಈ ತರಳೆ |
ಮುಗಿಲು ಹಾಕಿ, ಬೀಸಿ ಗಾಳಿ
ಸುರಿದೇ ಬಿಟ್ಟಿತು ಮಳೆ
ಆಹಾ ....
ಮಣ್ಣಿಗೂ ಪರಿಮಳ |
ಕವಿತೆಯ ರಸಧಾರೆ ಹರಿದಂತೆ
ಮಳೆಯ ಜಲಧಾರೆ ಸುರಿದಿಲ್ಲವಂತೆ
ಕೆಸರು ಕೊಳೆ ಅಲ್ಲಲ್ಲಿ ಉಳಿಯಿತೇ
ಹೆಚ್ಚಾಯಿತೆ ಮಣ್ಣ ಫಲವತ್ತತೆ
ಹ್ಞಾ ...
ಇದು ಸಂಭ್ರಮದ ಸಂಗತಿ ಗೊತ್ತೇ |
ಅರಳಿಹಳು ಲಿಲ್ಲೀ ಬಿಳಿ ಬಿಳಿ
ನೋಡಿ ಬಿಡಿ ಒಮ್ಮೆ ಇಲ್ಲಿ ಕಣ್ಣರಳಿ
ಹಸಿರೆಲೆಯ ಮೇಲೆ ಬಿಳಿಯರಳಿ
ಇದೇನಿದು ನಿಸರ್ಗದ ಮೈಮಾಟ
ತೆಗೆಯಲು ಉಲ್ಲಾಸದಿ ಚಿತ್ರಪಟ
ಆಗಸವೇ ತಾನ್ ಮೇಲಾಗಿ ಬಿಳಿ ಲಿಲ್ಲಿಯರಳಿ
- ದಂತೆ, ಮುಗಿಲು ಮೇಲೆದ್ದಿಹುದು ಇಳಿ
- ದು ಬಂದಂತೆ ಇಳೆಗೆ
ನಾಳೆಗೆ ಮುದುಡುವ ಹೂ ನೀನಾಗಿ
ಇಂದೇ ಬಿರಿಯುವ ಮುಗಿಲ್ ತಾನಾಗೆ
ಅರಳಿಹ ಹೂ ಕೆಳ ಬೀಳುವ ಮುನ್ನ
ಕೈ ಹಿಡಿದೆತ್ತಿರಿ ಒಮ್ಮೆ ನನ್ನ
ಮತ್ತೆ ಪುನರಾಗಮನ
ಮುಂದಿನ ವರುಷಕೇ ಚೆನ್ನ
ಓಹ್ಹೋ ....
ಅಹುದಹುದೆನ್ನಿ |
Posted via DraftCraft app
ಗುಡುಗು ಸಿಡಿಲಿನ ಆರ್ಭಟ
ಮೇಲೆದ್ದಿತಲ್ಲ ಹೂ ಕಿರೀಟ
ಮುಂಜಾನೆಯ ಬಯಲಾಟ
ಟಿಪ್ಪಣಿ: ಬುಧವಾರ, ತಾರೀಕು 25, 2016ರಂದು ಬರೆದ ಚಿತ್ರಕವನ
0 comments:
Post a Comment