Pages

Ads 468x60px

Saturday 23 August 2014

ಜಾಮ್ ಜಾಮ್ ತಿಂಡಿತಿನಿಸು



ಒಂದು ಸಂದರ್ಭದಲ್ಲಿ ನಾವು ಬಂಧುಬಳಗವೆಲ್ಲ ಸೇರಿದ್ದೆವು,  ತಿಂಡಿತೀರ್ಥಗಳಿಗೂ ಮಾತುಕತೆಗಳಿಗೂ ಕೊರತೆಯಿಲ್ಲ.   ಚಕ್ಕಪ್ಪ ಹಿಂದಿನದನ್ನು ಜ್ಞಾಪಿಸಿಕೊಳ್ಳುತ್ತಾ   " ಅತಿರಸ ಎಷ್ಟು ಚೆನ್ನಾಗಿ ಮಾಡ್ತಿದ್ಳು ನನ್ನಮ್ಮ " ಅಂದರು.  
" ಹ್ಞ  ಹೌದ,   ಅಜ್ಜಿ ಅಡಿಗೆ ಮಾಡಿದ್ದನ್ನು ಒಮ್ಮೆಯೂ ನೋಡಿಲ್ಲ,  ಅಪ್ಪಚ್ಚಿ ಸುಳ್ಳು ಹೇಳ್ತೀಯ..."
" ನೀನು ನೋಡಿಲ್ಲ,  ಅಮ್ಮ ಮಾಡಿದ್ದನ್ನು ತಿಂದೋನು ನಾನಲ್ವೇ.."
" ಹೇಗೆ ಮಾಡೂದಂತ ಗೊತ್ತಿದ್ರೆ ಹೇಳು,  ಟ್ರೈ ಮಾಡಿ ನೋಡ್ತೇನೆ "
" ಅದಾ,    ಬೆಲ್ಲ,  ಅಕ್ಕಿ, ಕಾಯಿ ಇಷ್ಟು ಬಗೆ ಇದ್ದರೆ ಸಾಕು,   ಸಣ್ಣಕೆ ಕಡೆದು ಚಟ್ಟೆ ಚಟ್ಟೆ ವಡೆ ತಟ್ಟಿ ಎಣ್ಣೆಯಲ್ಲಿ ಹುರಿಯುವುದು,   ಅದಕ್ಕೆ ಕಾಳುಮೆಣಸೂ ಹಾಕಲಿಕ್ಕುಂಟು,  ಸಿಹಿ, ಖಾರ....ವಾಹ್ ಏನ್ ರುಚಿ ಗೊತ್ತಾ " ಅಂದ್ರು ಚಿಕ್ಕಪ್ಪ.
" ಎಷ್ಟ್ ಎಣ್ಣೆ ಕುಡೀತದೋ ಈ ಅತ್ರಸ?"
" ಹಾಗೇನಿಲ್ಲ,  ಮಾಡಿದ್ದನ್ನು ಮಣ್ಣಿನ ಅಳಗೆಯಲ್ಲಿ ಹಾಕಿಡೂದು,   ಹೆಚ್ಚಾದ ಎಣ್ಣೆ ಎಲ್ಲ ಮಣ್ಣಿನ ಪಾತ್ರೆ ಕುಡೀತದೆ ಗೊತ್ತಾಯ್ತಾ .."
ಓ, ಮಣ್ಣಿನ ಮಡಕೆಯ ಒಳಗುಟ್ಟು ಹೀಗೂ ಉಂಟಲ್ವ !"
ಆದರೆ ಈ ಮಾತುಕತೆ ಆದ ನಂತರ  " ಯಾರಿಗೆ ಬೇಕು ಈ ಓಬೀರಾಯನ ಕಾಲದ ತಿಂಡಿಗಳ ಸಹವಾಸ "  ಅನ್ನೋ ಥರ  ಅತಿರಸ ಮರೆತೇ ಹೋಗಿತ್ತು.

ಟೀವಿ ಮಾಧ್ಯಮ ಮನೆಯೊಳಗೆ ಬಂದಿತಲ್ಲ,   ಅದರ ಆರಂಭಿಕ ಪ್ರಹಸನವನ್ನು ಈ ಹಿಂದೆಯೇ ಬರೆದಿದ್ದೇನೆ.   ಕನ್ನಡ ಕಾರ್ಯಕ್ರಮಗಳು,  ಅದರಲ್ಲೂ ದಿನನಿತ್ಯ ಅಡುಗೆ ವೀಕ್ಷಣೆ ಸಿಗಲಾರಂಭಿಸಿದ ನಂತರ ನಾನೂ ನೋಡಿಟ್ಕೊಂಡು, ಬರೆದಿಟ್ಟುಕೊಳ್ಳಲೂ ನನ್ನಮ್ಮನೇ ಪ್ರೇರಣೆ.

ಒಂದು ದಿನ ಟೀವಿ ಅಡುಗೆಯನ್ನು ಠೀವಿಯಿಂದ ನೋಡುತ್ತಿದ್ದಾಗ ಅರೆ! ಅತಿರಸ ಪ್ರತ್ಯಕ್ಷವಾಯಿತು.     ಪೂರ್ತಿ ಕಾರ್ಯಕ್ರಮ ವೀಕ್ಷಿಸಿ ಪ್ರಯೋಗಕ್ಕೆ ಸಿದ್ಧತೆ ನಡೆಯಿತು.   ಆ ಕಾರ್ಯಕ್ರಮದಲ್ಲಿ ಹೇಳಿಕೊಟ್ಟಂತೆ ಅಕ್ಕಿ ಹಾಗೂ ಸಕ್ಕರೆಯ ಮಿಶ್ರಣದ ಹಿಟ್ಟಿನಿಂದ ವಡೆ ತಟ್ಟಿ ಕಾದ ಎಣ್ಣೆಗೆ ಇಳಿಸಿದೆನಾ,  ಹಿಟ್ಟೆಲ್ಲವೂ ಎಣ್ಣೆಗೆ ಬಿಟ್ಟುಕೊಂಡಿತು.    ನನ್ನ ಪಾಕ ಸರಿಯಾಗಿರಲಿಲ್ವೋ,   ಟೀವಿ ಪಾಕತಜ್ಞೆ ಹೇಳ್ಕೂಟ್ಟಿದ್ದು ನನ್ನ ತಲೆಗಿಳಿದಿಲ್ವೋ...  ಚಿಂತೆ ಮಾಡ್ತಾ ಕೂತರಾಗಲಿಲ್ಲ,  ಸ್ವಯಂಬುದ್ಧಿಯಿಂದ ಹಿಟ್ಟಿಗೆ ಗೋಧಿ ಹುಡಿ ಬೆರೆಸಿ ಇನ್ನೊಮ್ಮೆ ಎಣ್ಣೆಗಿಳಿಯಿತು ಅತಿರಸದ ವಡೆ.   ಚೆನ್ನಾಗಿ ಮೇಲೆದ್ದು ಬಂದಿತು.   ಅಂತೂ ಕಲಸಿದ ಹಿಟ್ಟು ವ್ಯರ್ಥವಾಗಲಿಲ್ಲ,   ಮಕ್ಕಳೂ,  ಮಕ್ಕಳ ಅಪ್ಪನೂ ಸಂಜೆಯ ಈ ತಿನಿಸನ್ನು ಸಂಭ್ರಮದಿಂದ ತಿಂದರು.

ಸಾಂಪ್ರದಾಯಿಕವಾಗಿ ಅತಿರಸ ಹೀಗೆ ಮಾಡೋಣ.     ತೆಂಗಿನ ಕಾಯಿ,  ಬೆಲ್ಲ,  ಅಕ್ಕಿ ಇವಿಷ್ಟು ಪರಿಕರಗಳಿಂದ ವೈವಿಧ್ಯಮಯ ತಿಂಡಿತಿನಿಸುಗಳನ್ನು ಮಾಡುವಲ್ಲಿ ನಮ್ಮ ಹಿಂದಿನ ತಲೆಮಾರಿನ ಗೃಹಿಣಿಯರು ಸಿದ್ಧಹಸ್ತರು.   ಇವಿಷ್ಟೇ ಪರಿಕರಗಳಿಂದ ಮಾಡಬಹುದಾದ ತಿಂಡಿತಿನಿಸುಗಳು ಸಾಕಷ್ಟಿವೆ.

ಅಕ್ಕಿಹುಡಿ 1 ಕಪ್,  ನುಣ್ಣಗಿನ ಹುಡಿಯಾಗಿರಬೇಕು.
ಬೆಲ್ಲದ ಹುಡಿ 1 ಕಪ್
ತೆಂಗಿನತುರಿ 1 ಕಪ್
ರುಚಿಗೆ ಉಪ್ಪು
ಕಾಳುಮೆಣಸಿನ ಹುಡಿ,  ಏಲಕ್ಕಿ ಹುಡಿ,  ಹುರಿದ ಎಳ್ಳು - ಪರಿಮಳಕ್ಕೆ ತಕ್ಕಷ್ಟು ಬಿದ್ದರೆ ಸಾಕು.
ತೆಂಗಿನತುರಿಯನ್ನು ನೀರು ಹಾಕದೆ ಮಿಕ್ಸೀಯಲ್ಲಿ ಎರಡು ಸುತ್ತು ತಿರುಗಿಸಿ ತೆಗೆಯಿರಿ.
ಬೆಲ್ಲ ಹಾಗೂ ಕಾಯಿತುರಿಗಳನ್ನು ನಾನ್ ಸ್ಟಿಕ್ ತವಾದಲ್ಲಿಟ್ಟು ಬೆಚ್ಚಗೆ ಮಾಡಿಕೊಳ್ಳಿ.
ಬೆಲ್ಲ ಕರಗಿ ಕಾಯಿತುರಿಯೊಂದಿಗೆ ಸೇರಿತೇ,  ಕೆಳಗಿಳಿಸಿ.
ಉಪ್ಪು,  ಇನ್ನಿತರ ಪರಿಕರಗಳನ್ನು ಕೂಡಿಸಿ,  ಬೆರೆಸಿಕೊಳ್ಳಿ.
ಅಕ್ಕಿಹುಡಿಯನ್ನೂ ಹಾಕಿ ಅವಶ್ಯವಿದ್ದಷ್ಟೇ ನೀರೆರೆದು ಮುದ್ದೆಗಟ್ಟುವ ಹದಕ್ಕೆ ತನ್ನಿ.
ಚಪಾತಿಗೆ ಗೋಧಿಹಿಟ್ಟು ಕಲಸಿದ ಮುದ್ದೆಯಂತಿರಬೇಕು.
ಒಂದೆರಡು ಘಂಟೆ ಹಿಟ್ಟನ್ನು ಮುಚ್ಚಿಟ್ಟಿರಿ.
 ಲಿಂಬೆ ಗಾತ್ರದ ಉಂಡೆ ಮಾಡಿಟ್ಕೊಳ್ಳಿ.
ಪಾಲಿಥೀನ್ ಹಾಳೆ ಅಥವಾ ಬಾಳೆಲೆಗೆ ಎಣ್ಣೆ ಸವರಿ, ವಡೆಯಂತೆ ತಟ್ಟಿ ಇಟ್ಟಾಯ್ತೇ,
ಏನೂ ಬೇಡ,  ಅಂಗೈಯಲ್ಲೇ ವಡೆ ಒತ್ತಿಕೊಳ್ಳಬಹುದು.
ಒಲೆ ಮೇಲೆ ಎಣ್ಣೆ ಬೆಚ್ಚಗಾಯ್ತೇ, 
ಒಂದೊಂದೇ ವಡೆಯನ್ನು ಎಣ್ಣೆಗಿಳಿಸಿ ಕರಿದು ತೆಗೆಯಿರಿ.
ಬಿಸಿ ಆರಿದ ನಂತರ ಬಿಸಿ ಚಹಾದೊಂದಿಗೆ ಸವಿಯಿರಿ.  ಮಳೆ ಬರುವಾಗ ಮನೆಯೊಳಗೆ ಬೆಚ್ಚಗೆ ಕುಳಿತು ತಿನ್ನಲು ಚೆನ್ನ.





 ಮಾಡುವ ವಿಧಾನವನ್ನು ಬರೆಯುತ್ತಿರಬೇಕಾದರೆ,  ಕಳೆದ ಮಳೆಗಾಲದಲ್ಲಿ ಮಾಡಿ ತಿಂದಿದ್ದ ಈ ಅತಿರಸವನ್ನು ಇನ್ನೊಮ್ಮೆ ಮಾಡಿ ತಿನ್ನದಿದ್ದರೆ ಹೇಗೆ?  ಬರವಣಿಗೆಯನ್ನು ನಿಲ್ಲಿಸಿ ಅಡುಗೆಮನೆಯೆಂಬ ಲ್ಯಾಬೋರೇಟರಿಯೊಳಗೆ ಬೇಕಾದ ಪರಿಕರಗಳಿವೆಯೇ ಎಂದು ಪರಿಶೀಲಿಸಲಾಗಿ,
ಮುಂಜಾನೆಯ ತೆಳ್ಳವು ಎರೆದ ಅಕ್ಕಿಹಿಟ್ಟು " ನಾನಿದ್ದೇನೆ ಅಕ್ಕಾ " ಅಂದಿತು.
ತೆಂಗಿನ ಕಡಿ ಬಾಯ್ತೆರೆದು ಕುಳಿತಿತ್ತು.
ಬೆಲ್ಲ ಡಬ್ಬದಿಂದ ಹೊರ ನೆಗೆಯಿತು.
 ಅಕ್ಕಿಹಿಟ್ಟಿನ ಅನಾವಶ್ಯಕ ನೀರನ್ನು ಬಸಿದು ತೆಗೆಯಲಾಯಿತು.
ತೆಂಗಿನ ತುರಿ,  ಬೆಲ್ಲದ ಹುಡಿ ಮಿಕ್ಸಿಯಲ್ಲಿ ತಿರುಗಿ ಬಾಣಲೆಗೆ ಬಿದ್ದು ಬಿಸಿಯ ತಾಪದಲ್ಲಿ ಪಾಕವಾಯಿತು.
ಅಕ್ಕಿ ಹಿಟ್ಟು,  ಕಾಳುಮೆಣಸು,  ಹುರಿದ ಎಳ್ಳು ಪಾಕದಲ್ಲಿ ಕೂಡಿದಾಗ ಮುದ್ದೆಯಾಗಿ ಒದ್ದೆಯಾಗಿ ಪಾಕ ಎಡವಟ್ಟಾಯಿತು.

ಅಕ್ಕಿ ಹುಡಿ ಇಲ್ಲದಿರಲು
ಗೋಧಿಹುಡಿ ಹೊರಗೆ ಬರಲು
ಆಯಿತಲ್ಲ, ಒಂದು ಮುದ್ದೆ
ಅಂತೂ ನಾನು ಗೆದ್ದೆ
ಅತಿರಸವೆಂದು ಹೆಸರಿಸಲಾಗದಿದ್ದರೇನಾಯಿತು
ಜಾಮ್ ಜಾಮ್ ತಿಂಡಿತಿನಿಸು ದೊರೆಯಿತು.




ಈ ಹಳೆಯಕಾಲದ,  ನಮ್ಮ ಅಜ್ಜಿಯಂದಿರು ಮಾಡಿಟ್ಟುಕೊಳ್ಳುತ್ತಿದ್ದ ತಿಂಡಿಗಳ ನೆನಪು ಮೂಡಿಸಿದ್ದು ಒಂದು ಮುದ್ದಾದ ಫೊಟೋದೊಂದಿಗೆ ಫೇಸ್ ಬುಕ್ ಮಿತ್ರರಾದ ಶಾಂತಾರಾಂ ಶೆಟ್ಟಿ.   ಈ ಬರಹಕ್ಕೆ ಪ್ರೇರಣೆ ನೀಡಿದ  ಜಾಮ್ ಜಾಮ್ ತಿಂಡಿ ಇಲ್ಲಿದೆ.   ತುಳು,  ಕೊಂಕಣಿ,  ಕನ್ನಡಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಒಂದೇ ತಿಂಡಿ ಇರುವುದು ಸಾಮಾನ್ಯ.  ಎಣ್ಣೆಮುಳ್ಕ ಅಂತಲೂ,  ಎಣ್ಣೆಕಜ್ಜಾಯ ಎಂದೂ ಹೆಸರಿಸಬಹುದಾದ ಈ ತಿಂಡಿ ನಮ್ಮ ಕಡೆ ಹೋಟಲ್ ಗಳಲ್ಲಿ ಜಾಂಬೂ ಅನಿಸಿಕೊಂಡಿದೆ.   ಮಾಡುವ ವಿಧಾನ ಹೇಳಿಕೊಟ್ಟಿದ್ದು ಪಕ್ಕದಮನೆಯ ಹೇಮಾ ಚಿದಾನಂದ್.

" ಜಾಂಬೂ ಗೊತ್ತಿಲ್ವ,   ಅಕ್ಕಿ,  ಬೆಲ್ಲ, ತೆಂಗಿನ್ಕಾಯಿ ಅರೆದು ಎಣ್ಣೆಗೆ ಹಾಕೂದು ಅಷ್ಟೇ,  ಮತ್ತೇನಿಲ್ಲ.    ಮುಂಚೆ ಮಾಡ್ತಿದ್ದೆ,   ಈಗ ಇವ್ರಿಗೆ ಶುಗರು..  ಅದೆಲ್ಲ ಮಾಡ್ಲಿಕ್ಕಿಲ್ಲ "
" ಹಾಗೆಯಾ,   ನಾವು ಸುಟ್ಟವು ಅಂತ ಮಾಡ್ತೇವಲ್ಲ,  ಅದೇ ಥರ ..."
" ಹಾಂ,  ಇದಕ್ಕೆ ಗೋಡಂಬಿ ಬೇಕಾದ್ರೆ ಹಾಕ್ಬಹುದು,  ಅದು ಹಾಕದಿದ್ರೂ ನಡೀತದೆ "

ಇನ್ನು ಹೋಟಲ್ ಜಾಂಬೂ ಹೇಗೆ ಮಾಡ್ತಾರೋ ಎಂದೂ ತಿಳಿಯುವ ಕುತೂಹಲ ಹುಟ್ಟಿತು.    ಸಿದ್ಧಿಕ್ ಆಗಮನವಾಯಿತು.   ಇವನು ಊರೂರು,  ದೇಶವಿದೇಶ ಸುತ್ತಿದವನು.   ಗೊತ್ತಿದೀತು,   " ಈ ನಮೂನೆಯ ತಿಂಡಿ ಗೊತ್ತಾ ?"

" ಜಾಂಬುವಾ,  ಗೊತ್ತುಂಟಲ್ಲ,   ನಾನು ಎರಡು ವರ್ಷ ಹೋಟ್ಲು ಕೆಲ್ಸವೂ ಮಾಡಿದ್ದೇನೆ ಅಕ್ಕ "
" ಹಾಗಿದ್ರೆ ಮಾಡುವ ಕ್ರಮ ಹೇಳಿಬಿಡು "
" ಬೆಲ್ಲದ ಪಾಕ ಮಾಡ್ಬೇಕು,   ತಣಿದ ಮೇಲೆ ಮೈದಾ,  ಸೋಡಹುಡಿ ಹಾಕಿ ಕಲಸೂದು.   ಬಿಸಿಬಿಸೀ ಎಣ್ಣೆಗೆ ಕೈಯಲ್ಲಿ ಉರುಟುರುಟಾಗಿ ಹಾಕುದು ಅಷ್ಟೇಯ..."
" ಗೋಳಿಬಜೆ ಥರಾನೇ..."
" ಹೂಂ,  ಚೆಂಡಿನ ಹಾಗೆ ಉಬ್ತದೆ...  ಸೌಟಿನಲ್ಲೂ ಎಣ್ಣೆಗೆ ಇಳಿಸ್ ಬೋದು "
" ತೆಂಗಿನ್ಕಾಯಿ ಹಾಕ್ಲಿಕ್ಕಿಲ್ಲವಾ..."
" ಏಯಿ.. ಅದೆಲ್ಲ ಬೇಡ "

ಅಂತೂ ಜಾಂಬೂ ವಿಧಗಳನ್ನು ತಿಳಿದಾಯ್ತು.  ಹೇಮಕ್ಕ ತಿಳಿಸಿಕೊಟ್ಟಂತೆ ಈಗ ಮಾಡೋಣ.  ಇದನ್ನು ಮಾಡಲು ಸುಲಭ ಹಾಗೂ ತಿನ್ನಲು ರುಚಿಕರ ಖಾದ್ಯ.
ಅಕ್ಕಿಹಿಟ್ಟು  2 ಕಪ್
ಬೆಲ್ಲ ಒಂದು ಕಪ್
ಕಾಯಿತುರಿ ಒಂದು ಕಪ್ 
ರುಚಿಗೆ ಉಪ್ಪು 
ಕರಿಯಲು ತೆಂಗಿನೆಣ್ಣೆ
ಬೆಲ್ಲ ಕಾಯಿತುರಿಗಳನ್ನು ಅರೆಯಿರಿ,   ಬಾಣಲೆಗೆ ಹಾಕಿ ಬೆಚ್ಚಗಾಗಿಸಿ.
ಅಕ್ಕಿ ಹಿಟ್ಟು ಎರೆದು,  ಉಪ್ಪು ಕೂಡಿಸಿ.   ಹಿಟ್ಟನ್ನು ಉಂಡೆಯಾಗಿಸುವ ಹದಕ್ಕೆ ತನ್ನಿ.   ಇದು ಈಗ ಅರೆಬೆಂದ ಹಿಟ್ಟಾಗಿದೆ, ಬಾಣಲೆ ಕೆಳಗಿಳಿಸಿ.
ಒಲೆಯ ಮೇಲೆ ಎಣ್ಣೆ ಕಾಯಲು ಇಟ್ಟಾಯ್ತೇ,   ಕಾದ ಎಣ್ಣೆಗೆ ಪುಟ್ಟ ಲಿಂಬೇಗಾತ್ರದ ಹಿಟ್ಟು ಇಳಿಸುತ್ತಾ ಬನ್ನಿ.   ಎಣ್ಣೆಯಲ್ಲಿ ಹಿಡಿಸುವಷ್ಟು ಹಾಕಿ ಕರಿದು ತೆಗೆಯಿರಿ.

ನಾನೂ ಇದೇ ಮೊದಲ ಬಾರಿ ಮಾಡ್ತಿರೋದು,   ರುಚಿ ಹೇಗಿರುತ್ತೆ ಎಂಬ ಕುತೂಹಲ.   ಮಗಳೂ ಮನೆಯಲ್ಲಿದ್ದಳು,   " ಅಮ್ಮ, ತುಂಬಾ ಟೇಸ್ಟ್ ಇದೇ...  ಸಂಜೆ ಹಾಸ್ಟೆಲ್ ಗೆ ಹೋಗುವಾಗ ಕಟ್ಟಿಕೊಡು "  ಅಂದಳು.   ನಮ್ಮೆಜಮಾನ್ರು ಕೇಳ್ಬೇಕೇ... ತಿಂದರು. 

ಸಂಜೆ ಗಂಟೆ ಆರಾಗಿತ್ತು,  ಸಮೀಪದ ಪಳ್ಳತ್ತಡ್ಕದಿಂದ ನಮ್ಮ ಅನಂತ ಹರಟೆ ಹೊಡೆಯಲು ಬಂದ.   ಮಾಡಿದ ಜಾಂಬೂ ತಟ್ಟೆಯಲ್ಲಿ ಇನ್ನೂ ಎರಡಿತ್ತು.   ಬಿಸಿ ಚಹಾದೊಂದಿಗೆ ಇದ್ಯಾವ ತಿಂಡಿ ಎಂಬ ವಿವರಣೆಯೊಂದಿಗೆ ಜಾಂಬೂ ತಿಂಡಿಯನ್ನು ಅವನೂ ತಿಂದ.



Posted via DraftCraft app

0 comments:

Post a Comment