Pages

Ads 468x60px

Saturday 9 August 2014

ಆಷಾಢದ ಅಡುಗೆ






ಊಟ ತಯಾರಿದೆ,
ಇಂದಿನ ಸ್ಪೆಶಲ್
ಹಲಸಿನ ಬೇಳೆ ಪಲ್ಯ

ಮಳೆಗಾಲದ ಆರಂಭದಲ್ಲಿ ದಾಸ್ತಾನು ಮಾಡಿಟ್ಟ ಹಲಸಿನ ಬೇಳೆಗಳು ಒಂದೆರಡು ತಿಂಗಳು ಕಳೆದ ನಂತರ ಸಿಹಿ ರುಚಿಯನ್ನು ಪಡೆಯುತ್ತವೆ.   ಇದಲ್ಲವೇ ಪ್ರಕೃತಿ ವೈಚಿತ್ರ್ಯ ,  ಎಲ್ಲಿಂದ ಹೇಗೆ, ಸಿಹಿ ಹುಟ್ಟಿತು ಈ ಬೇಳೆಯೊಳಗೇ... 

ಕೇವಲ ಹಲಸಿನ ಬೇಳೆ ಸಾಲದು,  ಒಂದು ಹಣ್ಣು ಸೌತೆ ಅವಶ್ಯವಿದೆ.  
ಸೌತೆಯನ್ನು ತೆಳ್ಳಗೆ ಹೋಳು ಮಾಡಿಕೊಳ್ಳಿ.
7-8 ಹಲಸಿನ ಬೇಳೆಗಳನ್ನು ಸಿಪ್ಪೆ ತೆಗೆದು ತುಂಡುಮಾಡಿ.
ಬಾಣಲೆಯಲ್ಲಿ ಒಗ್ಗರಣೆಗಿಟ್ಟು,  ಸಾಸಿವೆ ಸಿಡಿದಾಗ ಕರಿಬೇವಿನೆಸಳು,  ಚಿಟಿಕೆ ಅರಸಿನ ಬೀಳಲಿ.
ಸೌತೆಹಾಗೂ ಬೇಳೆ ಹೋಳುಗಳನ್ನು ಹಾಕಿ, ಬೇಯಲು ಅಗತ್ಯದ ನೀರು ಎರೆದು,  ರುಚಿಗಿಷ್ಟು ಉಪ್ಪು ಕೂಡಿಸಿ.
ಮಂದಾಗ್ನಿಯಲ್ಲಿ ಮುಚ್ಚಿ ಬೇಯಿಸಿ.
ಬೇಳೆ ಹಾಗೂ ಸೌತೆ ಬೇಗನೆ ಬೇಯುವಂಥವು.
ಒಮ್ಮೆ ಸೌಟಾಡಿಸಿ,  ಕಾಯಿತುರಿಯ ಅಲಂಕರಣವೂ ಇರಲಿ.

ಈ ಪ್ರಕಾರದ ಪಲ್ಯಕ್ಕೆ ಮಳೆಗಾಲದಲ್ಲಿ ಯಥೇಚ್ಛವಾಗಿ ಲಭಿಸುವ ತಗತೇಸೊಪ್ಪು ಹಾಕುವ ರೂಢಿಯೂ ಇದೆ.  ಮಾಡಲು ಬಹಳ ಸರಳ ಈ ಪಲ್ಯ.   ನಿಸರ್ಗದಲ್ಲಿ ಉಚಿತವಾಗಿ ಲಭ್ಯವಾಗುವ ಪರಿಕರಗಳಿಂದಲೇ ಶರೀರಕ್ಕೆ ಹಿತವಾದಂತಹ ಅಡುಗೆಗಳನ್ನು ಮಾಡಲು ನಮ್ಮ ಹಿರಿಯರು ತಿಳಿದಿದ್ದರು ಅಲ್ಲವೇ ? ಆಷಾಢದ ಮಾಸದಲ್ಲಿ ಈ ರೀತಿಯಲ್ಲೇ ಅಡುಗೆ ಮಾಡಿ ಉಣ್ಣಬೇಕೆಂಬ ನಿಯಮವೂ ನಮ್ಮದು.   ಮಳೆಗಾಲದ ಕಾಯಿಲೆಕಸಾಲೆಗಳನ್ನು ನಿಸರ್ಗದಲ್ಲೇ ಲಭ್ಯ ಉತ್ಪನ್ನಗಳ ಹಿತಮಿತವಾದ ಬಳಕೆಯಿಂದ ದೂರತಳ್ಳುವ ಜಾಣ್ಮೆಯೂ ಇಲ್ಲಿದೆ.

  ಕಾಟ್ ಕೆಸುವಿನ ಪುಟ್ಟ ಪುಟ್ಟ ಚಿಗುರು ಸೊಪ್ಪುಗಳನ್ನು ಕೊಯ್ದು ತಂದ ಅರ್ಧ ಗಂಟೆಯೊಳಗೆ ಬಾಡಿ ಹೋಗುವುದು. ಇಂತಹ ಬಾಡಿದ ಎಲೆಗಳನ್ನು ಚಾಪೆಯಂತೆ ಸುರುಳಿ ಸುತ್ತಿ, ಗಂಟು ಹಾಕಿಟ್ಟು ಹಲಸಿನ ಬೇಳೆ ಪಲ್ಯಕ್ಕೆ ಸೇರಿಸುವ ವಾಡಿಕೆಯೂ ಇದೆ.   ಈ ಪಲ್ಯಕ್ಕೆ ಕೆಸುವಿನ ಚೇಟ್ಳ ಪಲ್ಯ ಎಂಬ ಹೆಸರೂ ಇದೆ.   ಕೆಸುವಿನ ಸೊಪ್ಪು ಹೆಚ್ಚು ಹಾಕಲಿಕ್ಕಿಲ್ಲ,   ಹಾಕುವುದಿದ್ದರೆ ತುಸು ಹುಳಿ ಸೇರಿಸಬೇಕಾದೀತು.


ಒಂದು ಹಲಸಿನ ಕಾಯಿಯಲ್ಲಿ ಒಂದೆರಡಲ್ಲ,  ನೂರಾರು ಬೀಜಗಳಿರುತ್ತವೆ.   ಬೃಹತ್ ಫಲವಾದ ಹಲಸಿನಕಾಯಿ 3ರಿಂದ 30 ಕಿಲೋ ಮೇಲ್ಪಟ್ಟು ತೂಕ ಹೊಂದಿರುವಂತಹುದು.   ದೈತ್ಯ ವೃಕ್ಷವೂ ಆಗಿರುವ ಹಲಸಿನ ಮರದ ಒಂದು ಪುಟ್ಟ ಬೀಜದಲ್ಲಿ ಮುಂದಿನ ವೃಕ್ಷಾಂಕುರವಿರುತ್ತದೆ.   

ಪಿಷ್ಟವೂ ಅಧಿಕವಾಗಿರುವ ಹಲಸಿನಬೇಳೆ ಹಿಂದಿನಕಾಲದಲ್ಲಿ ಬಡವರ ಆಹಾರವೂ ಆಗಿತ್ತು.   ಗದ್ದೆಯ ಬೆಳೆ ಕೈಗೆ ಬರುವ ತನಕ ಉಪವಾಸವೇ ಗತಿಯಾಗಿದ್ದ ಕಾಲದಲ್ಲಿ ಬೇಳೆಯಿಂದಲೇ ಉಣಬಹುದಾದ ಖಾದ್ಯಗಳನ್ನು ತಿಳಿದಿದ್ದರು ನಮ್ಮ ಜನ.   ಬೇಳೆಯನ್ನು ಮಳೆಗಾಲದ ಆರಂಭದಲ್ಲೇ ಸಂಗ್ರಹಿಸಿಟ್ಟು,  ಕೆಡದಂತೆ ದಾಸ್ತಾನು ಇಡುವ ತಿಳುವಳಿಕೆಯೂ ನಮ್ಮ ಹಿಂದಿನ ತಲೆಮಾರಿನ ಜನರಲ್ಲಿತ್ತು. 

ಒಳ್ಳೆಯ ಕೆಂಪುಮಣ್ಣಿನ ಲೇಪ ಕೊಡುವ ವಿಧಾನದಿಂದ ಹಾಗೂ ತಂಪು ಸ್ಥಳದಲ್ಲಿ ಶೇಖರಿಸಿಟ್ಟು ಬೇಕಾದಾಗ ತೆಗೆದು ಉಪಯೋಗಿಸುವ ಪದ್ಧತಿ ಇತ್ತು.   ನನ್ನಮ್ಮ,  ನನ್ನತ್ತೆ ಮಣ್ಣು ಉಜ್ಜಿಟ್ಟ ಬೇಳೆಗಳಿಂದ ಅಡುಗೆಯಲ್ಲಿ ತರುತ್ತಿದ್ದ ವೈವಿಧ್ಯತೆಯನ್ನು ಮರೆಯಲುಂಟೇ ?   ಆದರೆ ಈಗ ಕಾಲ ಮುಂದುವರಿದಿದೆ.   ಹಲಸಿನಬೇಳೆಯನ್ನು ಚೆನ್ನಾಗಿ ತೊಳೆದು,  ನೀರಪಸೆ ಹೋಗುವ ತನಕ ಗಾಳಿಗೆ ಆರಲು ಬಿಟ್ಟು ಒಳ್ಳೆಯ ಪಾಲಿಥೀನ್ ಚೀಲದೊಳಗೆ ಗಾಳಿ ಹೋಗದಂತೆ ಭದ್ರಪಡಿಸಿದರಾಯಿತು.   ಈ ಹೊಸ ವಿದ್ಯೆಯನ್ನು ನನ್ನ ಕೆಲಸದಾಕೆ ಕಲ್ಯಾಣಿ ಹೇಳಿಕೊಟ್ಟಳು.   ಹಲಸಿನಬೇಳೆ ಲಭ್ಯವಿದ್ದ ಹಾಗೆ ಸಂಗ್ರಹಿಸಿಟ್ಟುಕೊಳ್ಳಿ,   ಹಳೆಯ ಖಾದ್ಯಗಳನ್ನು ಮಾಡೋಣ,  ಹೊಸ ತಿನಿಸು ಕಂಡುಹಿಡಿಯೋಣ.



ಪ್ರತೀ ನೂರು ಗ್ರಾಂ ಹಲಸಿನ ಬೇಳೆಯಲ್ಲಿರುವ ಪೋಷಕಾಂಶಗಳು ಈ ರೀತಿಯಾಗಿವೆ.
0.4 ಗ್ರಾಂ ಕೊಬ್ಬು
6.6 ಗ್ರಾಂ ಪ್ರೊಟೀನ್
38.4 ಗ್ರಾಂ ಕಾರ್ಬೋಹೈಡ್ರೇಟ್ಸ್ ಹಾಗೂ 1.5 ಗ್ರಾಂ ನಾರಿನಂಶದೊಂದಿಗೆ 98 ಕ್ಯಾಲೊರಿ ಶಕ್ತಿ ಸಮೃದ್ಧವಾಗಿದೆ ಹಲಸಿನಬೇಳೆ.
ಕ್ಯಾಲ್ಸಿಯಂ,  ಫಾಸ್ಫರಸ್,  ಸೋಡಿಯಂ,  ಪೊಟಾಸಿಯಂ ಹಾಗೂ ಕಬ್ಬಿಣಾಂಶಗಳೂ ಮಿತ ಪ್ರಮಾಣದಲ್ಲಿವೆ.  ವಿಟಮಿನ್ ಗಳನ್ನೂ ಒಳಗೊಂಡಿರುವ ಹಲಸಿನ ಬೇಳೆಯು ಇತ್ತಿತ್ತಲಾಗಿ ನಿರ್ಲಕ್ಷಿಸಲ್ಪಟ್ಟ ಹಲಸಿನ ಉತ್ಪನ್ನವಾಗಿದೆ ಎಂದರೂ ತಪ್ಪಾಗಲಿಕ್ಕಿಲ್ಲ.

ಹಲಸಿನ ಬೇಳೆಯ ಸಾಂತಾಣಿ:

ಹಲಸಿನ ಹಪ್ಪಳ ತಯಾರಿಯ ಸಂದರ್ಭದಲ್ಲೇ ಸಾಂತಾಣಿ ಮಾಡಿಟ್ಟುಕೊಳ್ಳುವ ವಾಡಿಕೆ,  ಆಗ ಬಿಸಿಲೂ ಇರುತ್ತದೆ,  ಹಪ್ಪಳ ಒಣಗುವಾಗ ಸಾಂತಾಣಿಯೂ ಒಣಗದೇ...   ಡಬ್ಬಿಯಲ್ಲಿ ತುಂಬಿಡುವುದಿದೆ.    ಮಳೆಗಾಲದಲ್ಲಿ ಚಳಿ ಚಳಿ ಅನ್ನಿಸುವುದಿದೆ,  ಒಂದು ಸಾಂತಾಣಿ ಬಾಯಿಗೆ ಹಾಕಿಕೊಳ್ಳುವುದಿದೆ.      ಮಕ್ಕಳೂ ಇಷ್ಟಪಟ್ಟು ತಿನ್ನುವ ಸಾಂತಾಣಿಯನ್ನು ಶಾಲೆಗೂ ಒಯ್ಯುವುದಿದೆ,  ಸ್ನೇಹಿತರಿಗೂ ಹಂಚಿ ಕಟುಕುಟು ಅಗಿಯುವುದಿದೆ,   ಮೇಸ್ಟ್ರ ಕೋಲಿನ ಏಟಿಗೂ ಗುರಿಯಾಗುವುದಿದೆ.

ತುಂಡಾಗದ, ಮೊಳಕೆ ಬಂದಿರದ ಒಳ್ಳೆಯ ಗುಣಮಟ್ಟದ,  ಗಾತ್ರದಲ್ಲಿ ದೊಡ್ಡ ಬೇಳೆಗಳನ್ನು ಆಯ್ದು ಪ್ರೆಶರ್ ಕುಕ್ಕರಿನಲ್ಲಿ ತುಂಬಿಸಿ.   ರುಚಿಗೆ ಉಪ್ಪು ಹಾಗೂ ಬೇಳೆ ಬೇಯಲು ಅಗತ್ಯವಾದ ನೀರು ಎರೆದು ಒಂದು ವಿಸಿಲ್ ಕೂಗಿದ ನಂತರ ಸ್ಟವ್ ಆರಿಸಿ ತಣಿಯಲು ಬಿಡಿ.  ಆರಿದ ಮೇಲೆ ನೀರು ಬಸಿದು ತೆಗೆಯಿರಿ.   ನಾಲ್ಕಾರು ದಿನ ಬಿಸಿಲಿಗೆ ಇಟ್ಟು ಒಣಗಿಸಿಕೊಳ್ಳಿ.   ಚೆನ್ನಾಗಿ ಒಣಗಿದ ಈ ಹಲಸಿನ ಬೇಳೆ ಈಗ ಸಾಂತಾಣಿ ಎಂಬ ಹೆಸರನ್ನು ಹೊಂದಿತು!



ಹಲಸಿನ ಬೇಳೆಯನ್ನು ಇನ್ನಿತರ ದವಸಧಾನ್ಯಗಳಂತೆ ಅಡುಗೆಯಲ್ಲಿ ಬಳಸಬಹುದು.   ಮಿತಪ್ರಮಾಣದಲ್ಲಿ ರಸಂ. ಕೂಟು ಇತ್ಯಾದಿಗಳಿಗೆ ಹಾಕಲಡ್ಡಿಯಿಲ್ಲ.   ಎಣ್ಣೆಯಲ್ಲಿ ಕರಿದು ಬೇಳೆವಡೆ ಕೂಡಾ ಮಾಡಬಹುದು.   ಇಷ್ಟು ಸಾಲದು ಎಂಬಂತೆ ಪಾಯಸ,  ಹೋಳಿಗೆ ಯಾ ಒಬ್ಬಟ್ಟು ಕೂಡಾ ಬೇಳೆಯ ಖಾದ್ಯಗಳಲ್ಲಿವೆ. ಬರೆಯುತ್ತಾ ಇದ್ದ ಹಾಗೆ ಒಂದು ಶಿಶುಗೀತೆ ನೆನಪಾಯಿತು....

ಒಂದು ಎರಡು 
ಬಾಳೆಲೆ ಹರಡು
ಮೂರು ನಾಲ್ಕು 
ಪಲ್ಯ ಹಾಕು
ಐದು ಆರು
ಬೇಳೆ ಸಾರು....

ಇಲ್ಲಿರುವಂಥ ಬೇಳೆ ಸಾರು ಹಲಸಿನ ಬೇಳೆಯಿಂದಲೂ ಮಾಡಿಕೊಳ್ಳಬಹುದು.   ತೊಗರಿಬೇಳೆ ಬೇಡ,  ನಾಲ್ಕು ಹಲಸಿನ ಬೇಳೆ ಹೊರಗಿನ ಸಿಪ್ಪೆ ತೆಗೆದು ಬೇಯಿಸಿ, ಸಾರಿನ ಮಸಾಲಾ ಸಾಮಗ್ರಿಗಳೊಂದಿಗೆ ಅರೆಯಿರಿ.   ಉಪ್ಪು,  ಹುಳಿ,  ಬೆಲ್ಲದೊಂದಿಗೆ ಸಾಕಷ್ಟು ನೀರು ಕೂಡಿಸಿ,  ಕುದಿಸಿ,  ಒಗ್ಗರಣೆ ಕೊಡಿ.  ಹುಳಿಗೆ ಟೊಮ್ಯಾಟೋ ಹಾಕಿದರೂ ಆದೀತು.  ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು ಇರಲಿ.


Posted via DraftCraft app

0 comments:

Post a Comment