Pages

Ads 468x60px

Saturday 20 September 2014

ಮೊದಲ ಹನಿ ಮಳೆ, ದೊರೆತ ಹೊಸ ಬೆಳೆ






" ಎಲ್ಲಿಂದಲೋ ಗಾಳಿಗೆ ಹಾರಿ ಬಂದ ಬಿತ್ತು ಬಿದ್ದು ಇಲ್ಲೊಂದು ಹರಿವೆ ಸಸಿ ಆಗಿದೆ ನೋಡಿದ್ದೀಯಾ "
" ಇಲ್ಲವಲ್ಲ.." ಅನ್ನುತ್ತಾ ಗೌರತ್ತೆಯ ಕರೆಗೆ ಓಗೊಟ್ಟು ನಾನೂ ಕಣ್ಣು ಹಾಯಿಸದಿದ್ದರಾದೀತೇ,   ಹಸಿರು ಬಣ್ಣದ ಹರಿವೇ ಗಿಡ ಒಂಟಿಯಾಗಿ ನಿಂತಿತ್ತು.
" ಇದು ಒಂದು ಗಿಡ ಸಾಕು,  ಎಷ್ಟು ಬೇಕಾದ್ರೂ ಹರಿವೆ ಕೊಯ್ಯಬಹುದು "
" ಮುಂದಿನ ವರ್ಷಕ್ಕಲ್ಲವೇ,  ಆಗಿನ ಕಥೆ ಹೇಗೋ "
" ಈ ವರ್ಷದ ಕಥೆ ನಾನು ಹೇಳಿದ್ದು,  ಇದು ಸ್ವಲ್ಪ ದೊಡ್ಡದಾಗಲಿ,  ದಂಟು ಕತ್ತರಿಸಿ ಸಾಸಮೆ ಮಾಡು,  ಕತ್ತರಿಸಿದ ಗಂಟು ಚಿಗುರ್ತದೆ ಗೊತ್ತಾ..  ಚಿಗುರಿದ ಹಾಗೇ ತೆಗೆದು ಅಡಿಗೆ ಮಾಡಿದ್ರಾಯ್ತು "
ವರ್ಷಗಳ ಹಿಂದೆ ನನ್ನ ಹಾಗೂ ಗೌರತ್ತೆ ನಡುವಿನ ಸಂಭಾಷಣೆ ಇದು.  

ಆ ಒಂದು ಗಿಡದಲ್ಲಿ ನಾನೇನೂ ಬೀಜಗಳನ್ನು ಆರಿಸಿ ಒಣಗಿಸಿ ತೆಗೆದಿಟ್ಟುಕೊಳ್ಳುವ ಗೋಜಿಗೇ ಹೋಗಿರಲಿಲ್ಲ.   ಎಲ್ಲಿಯೋ ತೆಗೆದಿಡೂದು,  ಮುಂದಿನ ಮಳೆಗಾಲದ ವಿರಾಮದ ವೇಳೆಯಲ್ಲಿ ತೆಗೆದಿರಿಸಿದ್ದೆಲ್ಲಿ ಎಂದು ನೆನಪಾಗದಿರುವುದು,  ಒಂದು ವೇಳೆ ಸಿಕ್ಕರೂ ಇರುವೆಗಳು ದ್ವಂಸ ಮಾಡಿಟ್ಟ ಖಾಲಿ ಕಟ್ಟು, ಹೀಗೆಲ್ಲ ಕಿರಿಕಿರಿಯೇ ಬೇಡವೆಂದು ಹರಿವೇ ಗಿಡವನ್ನು ಅದರ ಪಾಡಿಗಿರಲಿ ಅಂತಿದ್ರೆ....   ಮಳೆಗಾಲ ಆರಂಭ ಆಗ್ಬೇಕಾದ್ರೇ  " ಮೊದಲ ಹನಿ ಮಳೆ, ದೊರೆತ ಹೊಸ ಬೆಳೆ "  ಅನ್ನೋ ಹಾಗಾಯ್ತು.




" ಆಯ್ತೂ,  ಹರಿವೆ ಕೊಯ್ದಿದ್ದೀರಾ... ಏನಡಿಗೆ ಇವತ್ತು ?"
ಹರಿವೆ ದಂಟಿನ ಕೂಟು ಮಾಡೋಣ,  ಸೊಪ್ಪು ಪಲ್ಯಕ್ಕಿರಲಿ.
" ಕೂಟು ಹೇಗೇ ಮಾಡೂದು ?"

ದಂಟುಗಳನ್ನು ಕತ್ತರಿಸಿ ಇಟ್ಕೊಳ್ಳಿ.
ಹಲಸಿನ ಬೇಳೆಗಳೂ ಇರಲಿ.   ಜಜ್ಜಿಕೊಂಡರೆ ಉತ್ತಮ.
ಉಪ್ಪು ಕೂಡಿಸಿ ಬೇಯಿಸಿ.
ತೆಂಗಿನ ತುರಿ
2-3 ಒಣಮಣಸು, ಹುರಿದುಕೊಳ್ಳಿ,   ಕಾಯಿತುರಿಯೊಂದಿಗೆ ಅರೆಯಿರಿ.  ಅರೆಯುವಾಗ ಚಿಕ್ಕ ನೆಲ್ಲಿ ಗಾತ್ರದ ಹುಳಿ ಕೂಡಿಸಿಕೊಳ್ಳಿ.   ಕೊನೆಯಲ್ಲಿ ಹುರಿದ 2 ಚಮಚ ಕೊತ್ತಂಬ್ರಿ,  ಚಿಕ್ಕ ಚಮಚ ಮೆಂತೆ ಕೂಡಿಸಿ ಇನ್ನೆರಡು ಸುತ್ತು ತಿರುಗಿಸಿ ತೆಗೆಯಿರಿ.
ಬೆಂದ ತರಕಾರಿಗೆ ಅರೆದ ಮಸಾಲೆ ಹಾಗೂ ಅವಶ್ಯವಿದ್ದ ಹಾಗೆ ನೀರು ಎರೆದು,  ಉಪ್ಪು ಕೂಡಿಸಿ,  ಕುದಿಸಿ ಒಗ್ಗರಣೆ ಕೊಟ್ಟು ಬಿಡಿ.   

ಈ ಪಾಕ ವಿಧಾನ ಜಯಾ ಶೆಣೈ ಬರೆದಿರುವ  ' ಸುಲಭ ಅಡುಗೆ '  ಎಂಬ ಪಾಕ ಪುಸ್ತಕದಲ್ಲಿಯೂ ಇದೆ.   ಅವರು ಹರಿವೆ ದಂಟಿನ ಸಗ್ಳೆ ಎಂದು ಹೆಸರಿಸಿದ್ದಾರೆ.



ಸೊಪ್ಪಿನ ಪಲ್ಯ :  
 ಸೊಪ್ಪುಗಳು  ಶೀಘ್ರವಾಗಿ ಬೇಯುವಂತಹವು.   ಮೈಕ್ರೊವೇವ್ ಅವೆನ್ ಇದ್ದಲ್ಲಿ ಹಚ್ಚಿಟ್ಟುಕೊಂಡ ಸೊಪ್ಪುಗಳಿಗೆ ಒಗ್ಗರಣೆ, ಕಾಯಿತುರಿ,  ತುಸು ಉಪ್ಪು,  ಚಿಟಿಕೆ ಅರಸಿಣ ಬೆರೆಸಿ ಒಳಗಿಟ್ಟು ತೆಗೆದರಾಯಿತು.   ಸೊಪ್ಪು ತಾಜಾತನವನ್ನು ಕಳೆದುಕೊಳ್ಳುವುದಿಲ್ಲ,  ನೀರು ಹಾಕೂದೂ ಬೇಡ.   ಮೈಕ್ರೊವೇವ್ ಅವೆನ್ ಇಲ್ಲದಿದ್ದವರು ಮಾಮೂಲಿಯಾಗಿ ಮಾಡಿ ಬಿಡಿ. ತೋರನ್ ( തോരാൻ ) ಎಂಬ ಹೆಸರಿನಲ್ಲಿ ಈ ಪಲ್ಯ  ಕೇರಳದ ಸಾಂಪ್ರದಾಯಿಕ ಖಾದ್ಯಗಳಲ್ಲೊಂದಾಗಿದೆ.  ' ಓಣಂ ಸದ್ಯ '  (ಓಣಂ ಹಬ್ಬದೂಟ ) ದಲ್ಲಿ ಇಂತಹ ಪಲ್ಯ ಬಾಳೆಯ ಮೇಲೆ ಇರಲೇಬೇಕು.  



ಮಜ್ಜಿಗೆ ಹುಳಿ:
ಕೋಮಲವಾದ ದಂಟುಗಳನ್ನು, ಎಲೆಗಳನ್ನು ಉಪ್ಪು ಹಾಕಿ ಬೇಯಿಸಿ.  
ಒಂದು ಹಿಡಿ ತೊಗರಿಬೇಳೆಯನ್ನೂ ಬೇಯಿಸಿಡಿ.
ಒಂದು ಕಡಿ ತೆಂಗಿನ ತುರಿಯನ್ನು ಹಸಿಮೆಣಸಿನೊಂದಿಗೆ ನುಣ್ಣಗೆ ಅರೆಯಿರಿ. 
ಬೆಂದ ಬೇಳೆ ಹಾಗೂ ಹರಿವೆಯನ್ನು ಒಲೆಯ ಮೇಲೆ ಇರಿಸಿ ಒಂದು ದೊಡ್ಡ ಸೌಟು ಸಿಹಿ ಮಜ್ಜಿಗೆ ಎರೆದು ಬಿಡಿ.
ಅರೆದಿಟ್ಟ ತೆಂಗಿನ ಕಾಯಿ ಕೂಡಿಸಿ.   ಸಿಹಿ ಬೇಕಿದ್ದರೆ ಚಿಕ್ಕ ತುಂಡು ಬೆಲ್ಲ ಹಾಕಬಹುದು.  ಕುದಿಸಿ,  ಒಗ್ಗರಣೆ ಕೊಡಿ.



ಪಚ್ಚೆ ಹರಿವೆ,  green amaranth,  ಸಸ್ಯಶಾಸ್ತ್ರೀಯವಾಗಿ Amaranthus viridis ಎಂದು ಕರೆಯಲ್ಪಡುವ ಈ ಸೊಪ್ಪು ತರಕಾರಿ  Amaranthaceae ಕುಟುಂಬವಾಸಿ.  ಪ್ರಾಚೀನ ಕಾಲದಿಂದಲೇ ಇದು ದಕ್ಷಿಣ ಭಾರತೀಯರ ಖಾದ್ಯ ತರಕಾರಿಗಳಲ್ಲಿ ಒಂದಾಗಿದೆ.  ಆಯುರ್ವೇದವೂ ಈ ಪಚ್ಚೆ ಹರಿವೆಯನ್ನು ಔಷಧೀಯ ಸಸ್ಯವಾಗಿ ಸ್ವೀಕರಿಸಿದೆ,  ಸಂಸ್ಕೃತದಲ್ಲಿ ತಣ್ಡುಲೀಯ ಎಂಬ ನಾಮಕರಣವೂ ಇದಕ್ಕೆ ಇದೆ.  ಕೇರಳೀಯರು ಕುಪ್ಪಚ್ಚೀರ (കുപ്പച്ചീര) ಅಂದಿದ್ದಾರೆ.   ಪಚ್ಚೆ ಹರಿವೆಯು ಉತ್ತಮ ಪೋಷಕಾಂಶಗಳಿಂದ ಕೂಡಿದ ಸೊಪ್ಪು ತರಕಾರಿ ಎಂಬುದಕ್ಕೆ ಅನುಮಾನಕ್ಕೆಡೆಯಿಲ್ಲ. ವಿಟಮಿನ್ ಮಾತ್ರೆಗಳನ್ನು ದೂರ ತಳ್ಳಿ,  ಅಡುಗೆಯಲ್ಲಿ ಸೊಪ್ಪು ತರಕಾರಿಗಳನ್ನು ಧಾರಾಳವಾಗಿ ಬಳಸಿರಿ,  ವಿಟಮಿನ್ ಸಮೃದ್ಧವಾಗಿರುವ,  ಖನಿಜಾಂಶಗಳು ತುಂಬಿರುವ ತಾಜಾ ಸೊಪ್ಪುಗಳ ಬಳಕೆಯಿಂದ ಆರೋಗ್ಯವನ್ನೂ ಉಳಿಸಿಕೊಳ್ಳಿ,  

 ಬಣ್ಣಬಣ್ಣಗಳಲ್ಲಿ ಕಂಗೊಳಿಸುವ ಹರಿವೆಯಲ್ಲಿ ಜಾತಿಗಳು ಹೇರಳವಾಗಿವೆ.   ಗದ್ದೆಯಲ್ಲಿ ತರಕಾರಿ ವ್ಯವಸಾಯ ಮಾಡುವಾಗ ಬಣ್ಣದ ಹರಿವೆಗಳನ್ನೂ ನೆಟ್ಟುಕೊಳ್ಳುವ ವಾಡಿಕೆಯಿದೆ.  ಇದಕ್ಕೆ ವಿಶೇಷ ಪೋಷಣೆಯೇನೂ ಬೇಡ.   ತರಕಾರಿ ಗಿಡ ಬಳ್ಳಿಗಳಲ್ಲಿ ಫಲ ದೊರೆಯುವ ಮೊದಲೇ ಹರಿವೆ ಸೊಪ್ಪು ಅಡುಗೆಮನೆಗೆ ಬಂದಿರುತ್ತದೆ.   ಮನೆಯಂಗಳದ ಕೈದೋಟದೊಳಗೆ ಹರಿವೆ ಗಿಡಗಳು ಸೊಗಸಿನ ನೋಟವನ್ನೂ ಕೊಡುತ್ತವೆ.  ಬಿಳಿ ದಂಟು,  ಕೆಂಪು ದಂಟು ಇತ್ಯಾದಿಯಲ್ಲದೆ ಎಲೆಗಳೂ ತರಹೇವಾರಿ ವರ್ಣಗಳಲ್ಲಿ ಚೇತೋಹಾರಿಯಾಗಿರುತ್ತವೆ.   

ಒಂದು ಹರಿವೆ ಗಿಡದಲ್ಲಿ ಹೂವರಳಿದ ನಂತರ ಅಸಂಖ್ಯ ಬೀಜಗಳು ಲಭ್ಯ.   ಒಣಗಿದ ಕಾಂಡಗಳನ್ನು ಕತ್ತರಿಸಿ ಪೇಪರುಗಳ ಮೇಲೆ ಹರಡಿ ಒಣಗಿಸಿ ಬೀಜಗಳನ್ನು ಬೇರ್ಪಡಿಸಿ  ಸಂಗ್ರಹ ಮಾಡಿಟ್ಟು  ತೇವಾಂಶ ಇರುವಲ್ಲಿ ಹಾಕಿ ಬಿಡಬೇಕು.  ಪುನಃ ಸಸಿಗಳು ಮೊಳಕೆಯೊಡುತ್ತವೆ.  ಮುಂದಿನ ಮಳೆಗಾಲಕ್ಕೆ ಕಾಪಿಟ್ಟುಕೊಳ್ಳಲೂ ಬಹುದು.


Posted via DraftCraft app

0 comments:

Post a Comment