Pages

Ads 468x60px

Saturday 13 September 2014

ನಮ್ಮ ಬಸಳೆ - ನಮ್ಮ ಬೇಳೆ








" ಚಪ್ಪರದ ಬಸಳೆ ಬಂತು ನೋಡು "  ಅಂದರು ಗೌರತ್ತೆ.

" ಯಥಾಪ್ರಕಾರ ಬಸಳೆ ಬೆಂದಿ..."

"ಯವಾಗಲೂ ಒಂದೇ ಕ್ರಮದ ಅಡಿಗೆ ಏನೂ ಚೆನ್ನಾಗಿರಲ್ಲ,  ಹಲಸಿನ ಬೇಳೆ ಉಂಟಲ್ಲ..."

" ಬೇಳೆ ಹಾಕಿ ಬಸಳೆ ಬೆಂದಿಯಾ... ಚೆನ್ನಾಗಿರ್ತದ ?  ಹೀಗೂ ಮಾಡ್ತಾರೇಂತ ನನಗ್ಗೊತ್ತಿಲ್ಲ "  ಅಂದೆ.

" ಪುಸ್ತಕದ ಬದ್ನೇಕಾಯಿ ನೋಡಿ ಅಡಿಗೆ ಮಾಡೂದಲ್ಲ...  ಈಗ ಒಂದ್ಹತ್ತು ಬೇಳೆ ಸುಲಿದು ..."

ಗೌರತ್ತೆ ಹಲಸಿನ ಬೇಳೆ ಸುಲಿದು ಕಟ್ ಕಟ್ ಮಾಡಿ ತರುವಷ್ಟರಲ್ಲಿ ನನ್ನದು ಕೊತ್ತಂಬ್ರಿ,  ಒಣಮೆಣಸು ಇತ್ಯಾದಿಗಳನ್ನು ಹುರಿದ ಮಸಾಲೆ ತೆಂಗಿನತುರಿಯೊಂದಿಗೆ ಅರೆದ ಅರಪ್ಪು ಸಿದ್ಧವಾಗಿತ್ತು.

" ಬೇಳೆ ಬಸಳೆ ಒಟ್ಟಿಗೆ ಬೇಯಿಸಿ ಬಿಡೂದಾ ಹೇಗೆ ?"

" ಒಟ್ಟಿಗೇ ಬೇಯಿಸು "

" ಬಸಳೆ ಬೇಯುವಷ್ಟರಲ್ಲಿ ಈ ಬೇಳೆ ಮುದ್ದೆಯಾದೀತಾ..."

" ಹಾಗೇನೂ ಇಲ್ಲ "  ಗೌರತ್ತೆ ಧೈರ್ಯ ನೀಡುತ್ತ  " ಹಲಸಿನ ಬೇಳೆ ಬೇಯುವುದು ನಿಧಾನ "  ಅಂದರು.

ಗೌರತ್ತೆಯ ಸಲಹೆಯಂತೆ ಬೆಳ್ಳುಳ್ಳಿ ಒಗ್ಗರಣೆಯೂ, ರುಚಿಕರವಾಗಲು ಬೇಕಾದ ಉಪ್ಪು ಹುಳಿಗಳೊಂದಿಗೆ ಹೀಗೊಂದು ಬಸಳೆ ಬೆಂದಿ ಕ್ರಮ ಪ್ರಕಾರವಾಗಿ ಒಲೆಯಲ್ಲಿ ಬೆಂದು ತಯಾರಾಯಿತು.   ಸಿಹಿ ಇಷ್ಟಪಡುವವರಿಗೆ ಬೆಲ್ಲ ಹಾಕಿದರಾಯಿತು.

ಈಗ ಬಸಳೆ ಪಲ್ಯ ಮಾಡೋಣ.   ಸೊಪ್ಪಿನ ಪಲ್ಯಗಳನ್ನು ಖಾರ ಮಾಡಲಿಕ್ಕಿಲ್ಲ.   ವಿಟಮಿನ್ ಎ ಅನ್ನಾಂಗ ಧಾರಾಳವಾಗಿರುವ ಸೊಪ್ಪು ಅನ್ನದೊಂದಿಗೆ ಕಲಸಿ ತಿನ್ನಲು ಚೆನ್ನಾಗಿರುವುದು.
ಒಂದು ಬಟ್ಟಲು ತುಂಬ ಸೊಪ್ಪು ಕತ್ತರಿಸಿಡುವುದು,
ಒಂದು ದೊಡ್ಡ ನೀರುಳ್ಳಿ,  ಇದನ್ನೂ ಚಿಕ್ಕದಾಗಿ ತುಂಡು ಮಾಡುವುದು,
ಬಾಣಲೆಯಲ್ಲಿ ಒಗ್ಗರಣೆಗಿಡುವುದು,  
ಚಟಪಟ ಸದ್ದು ನಿಂತಾಗ ಚಿಟಿಕೆ ಅರಸಿಣ ಹಾಕುವುದು,
ನೀರುಳ್ಳಿ ಬಾಣಲೆಗೆ ಬೀಳುವುದು,
ತಟಪಟ ಸೌಟಾಡಿಸಿದಾಗ ನೀರುಳ್ಳಿ ಬಾಡುವುದು,
ಬಸಳೆ ಸೊಪ್ಪು ಬಾಣಲೆಗೆ ಇಳಿಯುವುದು,
ಉಂಟೇ, ಉಪ್ಪು ಹಾಕಲು ಮರೆಯುವುದು,
ಇನ್ನೊಮ್ಮೆ ತಟಪಟ ಸೌಟಾಡಿಸಿ ಮುಚ್ಚಿ ಮಂದಾಗ್ನಿಯಲ್ಲಿ ಬೇಯಿಸುವುದು,
ಕೊನೆಯಲ್ಲಿ ಕಾಯಿತುರಿ ಹಾಕಲು ಸೊಗಸಿನ ನೋಟ ಬರುವುದು.





Basella alba ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿದೆ ನಮ್ಮ ಬಸಳೆ,  malabar spinach,  Ceylon spinach ಅಂತಾನೂ ಹೇಳ್ತಾರೆ.  ಆಂಗ್ಲ ಭಾಷೆಯಲ್ಲಿ vine spinach ಎಂದು ಹೇಳಲ್ಪಡುವ ಬಸಳೆ, Basellaceae ಕುಟಂಬವಾಸಿ.   ಇದರಲ್ಲಿ ಹಸಿರು ಹಾಗೂ ನಸುಕೆಂಪು ಬಣ್ಣದ ದಂಟು ಹೊಂದಿರುವ ಜಾತಿಗಳಿವೆ.   ಕೆಂಪು ದಂಟಿನ ಬಸಳೆ ಅಷ್ಟೇನೂ ಸ್ವಾದಿಷ್ಟವಲ್ಲ.   ಇದು ಕೂಡಾ ಭಾರತ ಮೂಲದ ಬಳ್ಳಿ ತರಕಾರಿ,   ಸಾಮಾನ್ಯವಾಗಿ ಮನೆ ಹಿತ್ತಿಲಲ್ಲಿ ನೀರು ಸರಾಗವಾಗಿ ಹರಿದು ಬೀಳುವಂತಹ ಸ್ಥಳದಲ್ಲಿ ಚಪ್ಪರ ಹೊಂದಿಸಿ ನೆಟ್ಟುಕೊಳ್ಳುತ್ತಾರೆ.   

 ಮಡಿವಂತರು ತಿನ್ನಲಾಗದ ಬಸಳೆ,  ಹಿಂದಿನ ತಲೆಮಾರಿನ ಸಂಪ್ರದಾಯಸ್ಥರಲ್ಲಿ ಬಸಳೆ ನಿಷಿದ್ಧ ಸೊಪ್ಪು ಆಗಿರಲು ಕಾರಣವೇನೋ ತಿಳಿಯದು.  ಬಹುಶಃ ನೀರುಳ್ಳಿ,  ಬೆಳ್ಳುಳ್ಳಿಗಳು ಬಸಳೆಯ ಅಡುಗೆಯಲ್ಲಿ ಬೆರೆತು ಹೋಗಿರುವುದೂ ಕಾರಣವಾಗಿರಬಹುದು.   ಅದೇನೇ ಇರಲಿ ಪೌಷ್ಟಿಕಾಂಶಗಳ ಆಗರವಾಗಿದೆ ಬಸಳೆ.

 ದಂಟಿನಲ್ಲಿ ನಾರು ಅಧಿಕವಿದೆ,  ಮಲಬದ್ಧತೆ ನಿವಾರಕ ಆಹಾರವಾಗಿದೆ.
 ಖನಿಜಾಂಶಗಳು ಅಧಿಕವಾಗಿವೆ,   ನಿಯಮಿತ ಸೇವನೆಯಿಂದ ಧೃಡಕಾಯರಾಗಲು ಸಾಧ್ಯ.
ವಿಟಮಿನ್ ಬಿ ಕಾಂಪ್ಲಕ್ಸ್ ನಿಂದ ಸಮೃದ್ಧವಾಗಿದೆ,  ಬಸುರಿ ಸ್ತ್ರೀಯರ ಆಹಾರದಲ್ಲಿ ಇರಲೇಬೇಕಾದ ತರಕಾರಿ.
ಕೆಂಪು ರಕ್ತಕಣಗಳ ಪೂರೈಕೆ,  ಕಬ್ಬಿಣದ ಧಾತು ಬಸಳೆಯಲ್ಲಿದೆ.
ಅತ್ಯುತ್ತಮ ಆಂಟಿ ಓಕ್ಸಿಡೆಂಟ್,  ರೋಗ ಪ್ರತಿಬಂಧಕವಾಗಿ ವಿಟಮಿನ್ ಸಿ ಇಲ್ಲಿದೆ.
ಇಲ್ಲಿರುವ ವಿಟಮಿನ್ ಎ,  ಕಣ್ಣುಗಳ ಆರೋಗ್ಯ ಹಾಗೂ ಚರ್ಮದ ಕಾಂತಿರಕ್ಷಕ.
ಎಳೆಯ ಶಿಶುವಿನಿಂದ ವೃದ್ಧರವರೆಗೆ ಬಸಳೆ ಆಹಾರದಲ್ಲಿರಲಿ.

Posted via DraftCraft app

0 comments:

Post a Comment