Pages

Ads 468x60px

Saturday, 29 November 2014

ಬೆಳೆ ಹೇರಳ, ಇದು ಪೇರಳೆ...
ಪೇರಳೆ ಮರ ಅಡಿಕೆ ತೋಟದೊಳಗೆ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅದೇನೂ ನಾವು ಬಿತ್ತಿ ನೆಟ್ಟಿದ್ದೂ ಅಲ್ಲ. ಹಕ್ಕಿಪಕ್ಷಿಗಳು ಎಲ್ಲಿಂದಲೋ ಹೊತ್ತು ತರುತ್ತವೆ. ಯಾವಾಗಲೂ ತೇವಾಂಶವಿರುವ ತೋಟದಲ್ಲಿ ಬೀಜ ಮೊಳೆತು ಸಸಿಯಾಗಲು ತಡವಿಲ್ಲ. ಹಾಗೇ ಸುಮ್ಮನೆ ಮೇಲೆದ್ದು ಮರವಾದ ಈ ಪೇರಳೆಯಲ್ಲಿ ಜಾತಿಗಳೆಷ್ಟು, ಬಣ್ಣಗಳ ಸೊಗಸೇನು, ರುಚಿಯಲ್ಲಿರುವ ಭಿನ್ನತೆ ಇವುಗಳನ್ನೆಲ್ಲ ತಿಳಿಯಬೇಕಾದರೆ ತೋಟದ ಸುತ್ತ ತಿರುಗಾಡಿ, ಕಂಡ ಪೇರಳೆಗಳನ್ನು ಕೊಯ್ದು, ಅಲ್ಲೇ ಕಚ್ಚಿ ತಿಂದು ಸವಿದರೇನೇ ತಿಳಿದೀತು.

ಕೃಷಿಕರ ಬದುಕಿಗೆ ಸಮೀಪವರ್ತಿ ಸಸ್ಯ ಇದು. ಬೆಳೆಸಲು ಕಷ್ಟವಿಲ್ಲ, ರೆಂಬೆಕೊಂಬೆಗಳು ಬಲು ಗಟ್ಟಿಯಾಗಿರುವ ಪೇರಳೆ ಮರಕ್ಕೆ ರೋಗಬಾಧೆಯಿಲ್ಲ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಹಾಗೂ ಬೇಡಿಕೆ ಇರುವ ಪೇರಳೆ ಹಣ್ಣಿನ ಕೃಷಿಯಲ್ಲಿ ನಮ್ಮ ಕೃಷಿಕರು ಆಸಕ್ತಿ ವಹಿಸಿದಂತಿಲ್ಲ. ಸದಾ ಕಾಲವೂ ಹಸಿರೆಲೆಗಳಿಂದ ನಳನಳಿಸುತ್ತಿರುತ್ತದೆ ಪೇರಳೆ ಮರ.

ಬೇರು ಕಸಿಯಿಂದ ಪೇರಳೆ ಗಿಡಗಳನ್ನು ಅಭಿವೃದ್ಧಿ ಪಡಿಸಬಹುದು. ಇದು ನನಗೆ ತಾನಾಗಿಯೇ ತಿಳಿಯಿತು. ಹೇಗೇ ಅಂತೀರಾ?

ವರ್ಷಗಳ ಹಿಂದೆ ತೋಟದೊಳಗೆ ಇದ್ದ ಕೆಂಪು ಪೇರಳೆ ಮರವನ್ನು ಕಾರ್ಮಿಕರ ಕೊಡಲಿಯೇಟಿನಿಂದ ಸಂಹರಿಸಲಾಯಿತು. ಮನೆಯ ಹಿಂಭಾಗದಲ್ಲಿ ಏನೇನೋ ಕೃಷಿ ಸಲಕರಣೆಗಳನ್ನು ಇಟ್ಟುಕೊಳ್ಳುವುದಿದೆ. ಮಳೆಗಾಲದಲ್ಲಿ ಅದಕ್ಕೂ ರಕ್ಷಣೆ ಬೇಕಲ್ಲ, ಒಂದು ಗೂಡಿನಂತಹ ಮನೆ ಪೇರಳೆಯ ಮರದ ಕತ್ತರಿಸಲ್ಪಟ್ಟ ಕಾಂಡದಿಂದಲೇ ಸಿದ್ಧವಾಯಿತು. ಅಡಿಕೆ ಮರದ ಕಾಂಡ ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸುತ್ತಾರೆ, ಆದರೆ ಅದನ್ನು ಪ್ರತಿವರ್ಷವೂ ಬದಲಿಸಬೇಕಾಗುತ್ತದೆ. ಗಟ್ಟಿಮುಟ್ಟಾದ ಪೇರಳೆಯ ಕಾಂಡಕ್ಕೆ ಆ ಸಮಸ್ಯೆಯಿಲ್ಲ.
ಕೆಂಪು ತಿರುಳಿನ ಪೇರಳೆ ಹಣ್ಣುಗಳು ತಿನ್ನಲು ಸಿಗುತ್ತಿರಲಿಲ್ಲ, ಕಾರಣ ಮರವೂ ಅಡಿಕೆ ಮರಕ್ಕೆ ಸವಾಲೊಡ್ಡುವಂತೆ ಎತ್ತರ ಬೆಳೆದಿತ್ತು. ಮರ ಹೋದರೇನಂತೆ, ತೋಟದೊಳಗಿನ ತೇವಾಂಶದಿಂದಲೇ ಬೇರಿನಿಂದ ಅಸಂಖ್ಯ ಗಿಡಗಳು ಮೇಲೆದ್ದಿವೆ. ಎಲ್ಲವೂ ಇರಲಿ.

ತುಸು ಗಟ್ಟಿಯಾಗಿರುವ ಕಾಯಿಯನ್ನೇ ಮಕ್ಕಳು ಇಷ್ಟ ಪಟ್ಟು ತಿನ್ನುವಂತಹುದು. ಅದಕ್ಕೆ ಉಪ್ಪಿನ ಹುಡಿ ಉದುರಿಸಿ ತಿಂದಾಗ ಸ್ವರ್ಗಕ್ಕೆ ಮೂರೇ ಗೇಣು! ಹಣ್ಣಾದಾಗ ಹಸಿರಿನಿಂದ ಹಳದಿ ಬಣ್ಣಕ್ಕೆ ತಿರುಗುವ ಪೇರಳೆ ಮೆತ್ತಗಾಗಿ ಬಿಡುತ್ತದೆ. ಸಿಹಿ ರುಚಿಯೂ, ಸುವಾಸನೆಯೂ ಈ ಹಂತದಲ್ಲಿ ಅಧಿಕ. ಹಣ್ಣಿನ ಜ್ಯೂಸ್, ಮಿಲ್ಕ್ ಶೇಕ್, ಜಾಮ್ ಹೀಗೆ ಏನೇನೋ ಮಾಡಿ ಸವಿಯಬಹುದು. ಐಸ್ ಕ್ರೀಂ, ಫ್ರುಟ್ ಸಲಾಡ್ ಗಳಿಗೂ ಪೇರಳೆ ಹಣ್ಣು ಉಪಯುಕ್ತ. ಸಂಸ್ಕರಿಸಿ ಒಣಗಿಸಲಾದ ಪೇರಳೆ ಹಣ್ಣಿನ ಹುಡಿಯನ್ನು ಐಸ್ ಕ್ರೀಂ ಉದ್ಯಮದಲ್ಲಿ ಬಳಸಲಾಗುತ್ತಿದೆ. ಈ ಐಸ್ ಕ್ರೀಂ ಸ್ವಾದಭರಿತವೂ ಸುವಾಸನಾಯುಕ್ತವೂ ಆಗಿರುತ್ತದೆ. ಏನೇ ಮಾಡುವುದಿದ್ದರೂ ಬೀಜಗಳನ್ನೂ, ಸಿಪ್ಪೆಯನ್ನೂ ತೆಗೆಯುವ ಅವಶ್ಯಕತೆ ಇದೆ.

ಚಿಗುರೆಲೆಗಳ ಕಷಾಯ ಶರೀರದ ನಿತ್ರಾಣವನ್ನು ತೊಲಗಿಸುವುದು. ಮಹಿಳೆಯರ ಮಾಸಿಕ ರಜಸ್ರಾವದ ಏರುಪೇರುಗಳನ್ನು ಸುಸ್ಥಿತಿಗೆ ತರುವುದು. ಪ್ರಸವಾನಂತರ ಶರೀರ ಸುಸ್ಥಿತಿಗೆ ಮರಳಲು ಸಹಾಯಕ, ಇದನ್ನು ಹಿಂದಿನ ಕಾಲದ ಸೊಲಗಿತ್ತಿಯರು ಅರಿತಿದ್ದರು.
ಅತಿಸಾರದಿಂದ ಬಳಲುತ್ತಿದ್ದರೂ ಈ ಕಷಾಯದಿಂದ ಪರಿಹಾರ. ಕಾಲೆರಾ ಎಂಬಂತಹ ವಾಂತಿಭೇದಿ ಖಾಯಿಲೆ ಇದೆಯಲ್ಲ, ಪೇರಳೆ ಕಷಾಯದಿಂದಲೇ ನಿಯಂತ್ರಣ ಸಾಧ್ಯವಿದೆ.   ಚಿಗುರೆಲೆಗಳನ್ನು ಅಗಿಯುವುದರಿಂದ ಗಂಟಲ ಕಿರಿಕಿರಿ, ಬಾಯಿಯ ದುರ್ವಾಸನೆಯನ್ನೂ ಹೋಗಲಾಡಿಸಬಹುದಲ್ಲದೆ, ಹಲ್ಲಿನ ವಸಡುಗಳ ರಕ್ತಸ್ರಾವ, ಬಾಯಿಹುಣ್ಣು ಇತ್ಯಾದಿಗಳನ್ನೂ ಸಮರ್ಥವಾಗಿ ತಡೆಗಟ್ಟಬಹುದಾಗಿದೆ. ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಬಾಯಿ ಮುಕ್ಕುಳಿಸುತ್ತಿದ್ದರೂ ನಡೆದೀತು.

ಕಷಾಯ ಹೇಗೆ ಮಾಡ್ತೀರಾ ?
ಪೇರಳೆಯ ಚಿಗುರೆಲೆಗಳನ್ನು ಕಾಂಡ ಸಹಿತವಾಗಿ ಚಿವುಟಿ ತಂದಿರಾ ?
ತಪಲೆಗೆ 3 ಲೋಟ ನೀರೆರೆದು ಸೊಪ್ಪುಗಳನ್ನು ಕುದಿಸಿ, ಕಾಂಡದ ಭಾಗವನ್ನು ಗುಂಡುಕಲ್ಲಿನಲ್ಲಿ ಜಜ್ಜಿದರೆ ಉತ್ತಮ. ಕುದಿದ ನೀರು ಆರುತ್ತಾ ಬರುವಾಗ ನಾಲ್ಕು ಕಾಳು ಜೀರಿಗೆ , ರುಚಿಗೆ ಬೆಲ್ಲ ಹಾಕಿಕೊಳ್ಳಿ. ಸಕ್ಕರೆ ಬೇಡ. ಬತ್ತಿದ ನೀರು ಒಂದು ಲೋಟದಷ್ಟು ಆದಾಗ ಕಷಾಯ ಕುಡಿಯಲು ಹಿತವಾಗುವಂತೆ ಹಾಲು ಎರೆದು ಇನ್ನೊಂದು ಕುದಿ ಬಂದಾಗ ಕೆಳಗಿಳಿಸಿ. ಜಾಲರಿ ಸೌಟಿನಲ್ಲಿ ಕಷಾಯ ಶೋಧಿಸಿ ಕುಡಿಯಬೇಕಾದವರಿಗೆ ಕೊಡಿ.

ತಂಬುಳಿ:
ಬೇಯಿಸಿದ ಚಿಗುರೆಲೆ, ಚಿಕ್ಕದಾಗಿ ಕತ್ತರಿಸಿ ತುಪ್ಪದಲ್ಲಿ ಬಾಡಿಸಿದರೂ ಆದೀತು. ತೆಂಗಿನ ತುರಿ, ಸಿಹಿ ಮಜ್ಜಿಗೆ, ತುಸು ಜೀರಿಗೆ, ರುಚಿಗೆ ಉಪ್ಪು, ಬೆಲ್ಲ ಕೂಡಿಸಿ ನುಣ್ಣಗೆ ಅರೆಯಿರಿ. ಸಾಕಷ್ಟು ತೆಳ್ಳಗಾಗಿಸಿ ಅನ್ನದೊಂದಿಗೆ ಸವಿಯಿರಿ.

ಈ ಪೇರಳೆಯು ಸಸ್ಯಶಾಸ್ತ್ರೀಯವಾಗಿ Psidium guajava ಅನ್ನಿಸಿಕೊಂಡಿದೆ. Myrtaceae ಕುಟುಂಬವಾಸಿ ಸಸ್ಯ. ದಕ್ಷಿಣ ಅಮೆರಿಕಾ ಮೂಲದ ಉಷ್ಣ ವಲಯದ ಬೆಳೆಯಾಗಿರುವ ಪೇರಳೆ ನಮ್ಮ ದೇಶದ ಹವಾಮಾನಕ್ಕೆ ಸೂಕ್ತವಾಗಿಯೇ ಹೊಂದಿಕೊಂಡಿದೆ ಎಂದರೂ ತಪ್ಪಾಗಲಾರದು.


0 comments:

Post a Comment