ಊಟದಲ್ಲಿ ಸಾರು ಇರಲೇಬೇಕು, ಸಾರಿನಲ್ಲಿ ವೈವಿಧ್ಯತೆ ತರಲೇಬೇಕು, ಹೌದು ತಾನೇ. ಇಂದು ಸಾರಿನ ಗಮನ ಬೀಂಬುಳಿಯ ಕಡೆ ಸೆಳೆಯಲ್ಪಟ್ಟಿತು. ಮರದಲ್ಲಿ ಗೆಜ್ಜೆ ಕಟ್ಟಿದಂತೆ ಬೀಂಬುಳಿಗಳು ನಲಿದಾಡುತ್ತಿವೆ. ಒಂದ್ಹತ್ತು ಬೀಂಬುಳಿಗಳನ್ನು ಒಂದು ಬಟ್ಟಲಲ್ಲಿ ಕೊಯ್ದು ತಂದಾಯ್ತು, ಫೊಟೋ ಕೂಡಾ ಕ್ಲಿಕ್ಕಿಸಿ ಆಯಿತು.
ಸಾರು ಅಂದ್ರೆ ತೊಗರೀಬೇಳೆ ಬೇಯಲೇಬೇಕು, ಬೇಯಿಸಿದ್ದೂ ಆಯಿತು.
2 ಒಣಮೆಣಸು, 2 ಚಮಚ ಕೊತ್ತಂಬ್ರಿ, ಕಾಲು ಚಮಚ ಜೀರಿಗೆ, ಮೆಂತೆ, ಚಿಟಿಕೆ ಇಂಗು ಎಣ್ಣೆಪಸೆಯಲ್ಲಿ ಹುರಿಯಲ್ಪಟ್ಟುವು. ಹುರಿದು ತೆಗೆಯುವಷ್ಟರಲ್ಲಿ ಕರಿಬೇವಿನೆಲೆಯೂ ಕೂಡಿಕೊಂಡಿತು.
ತುಸು ಕಾಯಿತುರಿಯೊಂದಿಗೆ ಎಲ್ಲವನ್ನೂ ಅರೆಯಲಾಯಿತು. ಅರೆಯುವಾಗ ಒಂದು ಬೀಂಬುಳಿಯೂ ಸೇರಿಕೊಳ್ಳಲಾಗಿ ನೀರು ಹಾಕುವ ಪ್ರಮೇಯ ಉಳಿಯಿತು.
ಇನ್ನೂ ಮೂರು ಬೀಂಬುಳಿಗಳು ಕತ್ತರಿಸಲ್ಪಟ್ಟು ಕಾಯುತ್ತಾ ಇದ್ದ ಹಾಗೇ... ಹ್ಞಾ, ಹೇಳೋದೇ ಮರೆತಿದ್ದೆ, ಹೊಚ್ಚ ಹೊಸದಾದ ಇಂಡಕ್ಷನ್ ಸ್ಟವ್ ಅಡುಗೆಮನೆಗೆ ಬಂದಿದೆ, ಜೊತೆಗೆ ಮೂರು ನಾನ್ ಸ್ಟಿಕ್ ತಪಲೆಗಳೂ...
ಅದೇನೇ ಹೊಸ ವಸ್ತು ತಂದ ಕೂಡಲೇ ಉಪಯೋಗಿಸಿ ನೋಡದಿದ್ದರೆ ನಮ್ಮೆಜಮಾನ್ರ ಕೆಂಗಣ್ಣಿಗೆ ಗುರಿಯಾಗುವ ಕಿರಿಕಿರಿ ತಪ್ಪಿದ್ದಲ್ಲ. ನಾನ್ ಸ್ಟಿಕ್ ತಪಲೆಯಲ್ಲೇ ಒಗ್ಗರಣೆಗಿಟ್ಟು, ಒಗ್ಗರಣೆ ಸಿಡಿದಾಗ ಬೇಯಿಸಿಟ್ಟ ಬೇಳೆ, ಅರೆದಿಟ್ಟ ತೆಂಗಿನ ಮಸಾಲೆಯ ಅರಪ್ಪು, ನೀರು, ಉಪ್ಪು ಬೆಲ್ಲ ಇತ್ಯಾದಿ ಕೂಡಿಕೊಂಡು ಸಾರು ಕುದಿಯಿತು, ಫೋಟೋ ತೆಗೆದಿರಿಸುವಲ್ಲಿಗೆ ನನ್ನ ಕೆಲಸ ಮುಗಿಯಿತು.
" ಊಟಕ್ಕಾಯಿತೇಳಿ.." ಅನ್ನುತ್ತಿದ್ದ ಹಾಗೇ ನಮ್ಮೆಜಮಾನ್ರೂ ಒಳ ಬಂದು ಉಂಡು ಕೈ ತೊಳೆದು ಹೋದರು. ನಮ್ಮವರ ಊಟ ಮುಗಿಯುವ ತನಕ ಫೇಸ್ ಬುಕ್ ನೋಡುವ ಸಮಯ.
ನನ್ನ ಊಟ ಸಾವಕಾಶವಾಗಿ ಮುಂದುವರಿಯಿತು. ಸಾರಿನಲ್ಲಿ ಉಣ್ಣುತ್ತಿದ್ದಂತೆ ರುಚಿ ಎಂದಿನಂತೆ ಬರಲಿಲ್ಲವೇಕೆ ಎಂಬ ವಿಚಾರ ತಲೆಯಲ್ಲಿ ತಿಣುಕ ತೊಡಗಿತು. ಅಂತೂ ಊಟ ಮುಗಿಯಿತು, ಬಟ್ಟಲು ತೊಳೆದು ಒಳಗೆ ಯಥಾಸ್ಥಾನದಲ್ಲಿಡಲು ಬಂದಾಗ ಕಂಡಿದ್ದೇನು? ಕತ್ತರಿಸಿಟ್ಟ ಬೀಂಬುಳಿಗಳು ತಟ್ಟೆಯಲ್ಲಿ ಹಾಗೇ ಬಿದ್ದಿವೆ. ಅಚ್ಚುಕಟ್ಟಾಗಿ ಮಾಡಿದ್ದ ಸಾರಿನ ಎಡವಟ್ಟು ತಿಳಿಯಿತು.
ಅಡುಗೆಮನೆಯಿಂದ ಈಚೆ ಬಂದಾಗ ತೆಗೆದಿರಿಸಿದ್ದ ಎರಡು ಅದ್ಭುತ ಫೋಟೋಗಳು ಕೈ ಬೀಸಿ ಕರೆದುವು. ಬಟ್ಟಲಲ್ಲಿ ಬೀಂಬುಳಿ, ನಾನ್ ಸ್ಟಿಕ್ ತಪಲೆಯ ಸಾರು, ಎರಡೂ ಚಿತ್ರಗಳು ಸೊಗಸು, ಎಷ್ಟಾದರೂ iPhone 6 ಫೋಟೋಗ್ರಫಿ ಅಲ್ವೇ....
ಬೆಳಗಿನ ಹೊತ್ತು ಹೊಸದಾಗಿ ಒಂದು ಫೋಟೋಗ್ರಫಿ ಆಪ್ಸ್ ಅನ್ನು ಸ್ಥಾಪಿಸಿ ಇಟ್ಟಿದ್ದೆ. ಅದರ ಕಾರ್ಯಕ್ಷಮತೆ ಹೇಗಿದೆಯೆಂದು ಪರೀಕ್ಷಿಸಬೇಕಾಗಿತ್ತು. ಐಪಾಡ್ ಹಾಗೂ ಐಫೋನ್ ಗಳ ನಿರ್ವಹಣೆಯಲ್ಲಿ ವ್ಯತ್ಯಾಸವೇನೂ ಇಲ್ಲ. ಐಫೋನ್ ಪುಟ್ಟದು, ಹಾಗಾಗಿ ಸ್ಕ್ರೀನ್ ಕೂಡಾ ಸಣ್ಣದು. ಫೋಟೋ ಎಡಿಟಿಂಗ್ ಎಂಬಂತಹ ಕುಸುರಿ ಕೆಲಸ ಕಷ್ಟವಾದೀತೇನೋ ಎಂಬ ಸಂಶಯವೂ ಮೂಡಿತ್ತು. ಬೀಂಬುಳಿಗಳೂ ಸಾರಿನ ತಪಲೆಯೂ ಆಪ್ಸ್ ಒಳ ಹೋಗಿ ಹೊರ ಬರಲಾಗಿ " ವಾಹ್ ವಾಹ್... ಬಟ್ಟಲಲ್ಲಿ ಬೀಂಬುಳಿ, ಸಾರು ಆಯ್ತೇ ಹುಳಿ ಹುಳಿ..." ಹಾಡು ಹೊರಟಿತು. "ಆಹ! ಇದಪ್ಪ ಸಾರು ಅಂದ್ರೆ..."
ತಂತ್ರಜ್ಞಾನ ಮುಂದುವರಿದ ಹಾಗೆ ಫೋಟೋ ತಾಂತ್ರಿಕತೆಯೂ ಮುಂದುವರಿದಿದೆ. ಬಾಳೆಗಿಡದಲ್ಲಿ ಏಳೆಂಟು ಗೊನೆಗಳು ಮೂಡಿರುವಂಥಹ ಚಿತ್ರಗಳನ್ನು ಸೃಷ್ಟಿಸಿ ಆನಂದಿಸಬಹುದು, ಒಣಗಿದ ಗಿಡದಲ್ಲಿ ಹೂವನ್ನರಳಿಸಬಹುದು, ಕೆಂಪು ಗುಲಾಬಿ ಕಪ್ಪು ಬಣ್ಣದಲ್ಲೂ ಅರಳಬಹುದು. ಇದಕ್ಕಾಗಿ ನಾವು ತಂತ್ರವೇನೂ ಕಲಿಯಬೇಕಾಗಿಲ್ಲ, ಹೊಸ ತಾಂತ್ರಿಕ ಅವಿಷ್ಕಾರಗಳನ್ನು ಉಪಯೋಗಿಸಲು ತಿಳಿದಿದ್ದರೆ ಸಾಕು, ನಮ್ಮ ಅಭಿರುಚಿಗನುಸಾರ ಮುಂದಿನದನ್ನು ನಮ್ಮ ಕೈಯಲ್ಲಿರುವ ಕಂಪ್ಯೂಟರ್ ಸಾಧನವೇ ಹೇಳಿಕೊಡುತ್ತದೆ.
Posted via DraftCraft app
0 comments:
Post a Comment