Pages

Ads 468x60px

Saturday, 6 June 2015

ಅಬ್ಬಾ, ಏನು ಬಿಸಿಲು!
ಅಡುಗೆಮನೆಗೆ ಹೋಗುವುದಕ್ಕಿಲ್ಲ,  ಬೆವರಧಾರೆ.   ಮಳೆ ಬಂದು ತಂಪಾಯ್ತು ಅಂತಿದ್ರೆ ಈಗ  ರಣ ರಣ ಬಿಸಿಲು.   ಅಡುಗೆಮನೆಯೊಳಗೆ ಗಾಳಿ ಬೀಸೋರು ಬೇಕಲ್ಲ.

ಈ ಸೆಕೆಗೆ ಒಂದು ಸಾರೂ ಅನ್ನ ಇದ್ರೆ ಸಾಕೂ ಅಂತೀರಾ,  ಕುಡಿಯಲು ಧಾರಾಳ ಮಜ್ಜಿಗೆನೀರು ಇದ್ದರಾಯಿತು.   ಉಪ್ಪಿನಕಾೖ ಇದೇ,  ಆದರೂ ನಿತ್ರಾಣ ಆಗದಂತೆ ಒಂದು ಪಲ್ಯ ಇರಲಿ.  ಕಟ್ ಸಾರು ಹಾಗೂ ಬೆಂಡೆಕಾಯಿ ಪಲ್ಯ ಮಾಡೋಣ.   ಅತಿವೇಗವಾಗಿ ಏನೂ ಪ್ರಯಾಸವಿಲ್ಲದೆ ಮಾಡಬಹುದಾದ್ದು ಬೆಂಡೆಕಾಯಿ ಪಲ್ಯ,  ಕಟ್ ಸಾರು ಕೂಡಾ ಹಾಗೇನೇ,  ಚಿಟಿಕೆ ಹೊಡೆಯುವಷ್ಟರಲ್ಲಿ ಮಾಡಿಟ್ಬಿಡೋಣ.  ಮಾವಿನಹಣ್ಣು ಇದ್ರೂನೂ ಜಾಸ್ತಿ ತಿನ್ನೋ ಹಾಗಿಲ್ಲ,  ಅದೂ ಕಂಡಾಬಟ್ಟೆ ಉಷ್ಣ,  ತಿಳೀತಲ್ಲ.

  ಕಟ್ ಸಾರು ಮಾಡೋದು ಹೇಗೇ?
 ಟೊಮ್ಯಾಟೋ,  ಹಸಿಮೆಣಸು,  ಕೊತ್ತಂಬ್ರಿ ಸೊಪ್ಪುಗಳನ್ನು ಬೇಕಾದ ಹಾಗೆ ಕತ್ತರಿಸಿ.  ಕೊತ್ತಂಬ್ರಿ ಸೊಪ್ಪು ಇಲ್ವೇ,  ಬೇಡ ಬಿಡಿ.  ಹಸಿಮೆಣಸು ಕೂಡಾ ಅಷ್ಟೇ,  ಚಿಕ್ಕಮಕ್ಕಳ ಬಾಯಿಗೆ ಸಿಕ್ಬಿಟ್ರೆ ಕಷ್ಟ, ಅಳು ಶುರುವಾಗುತ್ತೆ, ಹಾಗಾಗಿ ಹಸಿಮೆಣಸೂ ಹೋಗ್ಲಿ...  ಟೊಮ್ಯಾಟೋ ಇಲ್ಲದಿದ್ದರೂ ನಡೆಯುತ್ತೇ ಅಂತೀರಾ.. ಅದೂ ಹೌದು,  ಈಗ ತಾಜಾ ಹುಣಸೇಹಣ್ಣು ಇರುವಾಗ  ಸಾರು ಸಿದ್ಧಪಡಿಸಲೆಷ್ಟು ಹೊತ್ತು?
ಹ್ಞು, ಸಾರಿನ ಹುಡಿ ಇದೇ ತಾನೇ,  ಮನೆಯಲ್ಲೇ ಮಾಡಿದ್ದು ಉತ್ತಮ,  ಪೇಟೆಯಲ್ಲಿ ಬೇರೆ ಬೇರೆ ಬ್ರಾಂಡ್ ಗಳ ಸಾರಿನ ಹುಡಿ ಲಭಿಸುವುದಾದರೂ ಎಲ್ಲಾದಕ್ಕೂ ಒಂದೇ ಸುವಾಸನೆ.  ಪ್ರತಿದಿನವೂ ಅಂಗಡಿಯಿಂದ ತಂದ ಮಸಾಲಾ ಪ್ಯಾಕೆಟ್ಟುಗಳನ್ನು ಸುರುವಿ ಚಿತ್ರವಿಚಿತ್ರವಾದ ಭೋಜನ ತಯಾರಿಯಲ್ಲಿ ಏನೂ ಸ್ವಾರಸ್ಯವಿಲ್ಲ.  ಬಾಯಿರುಚಿಗೂ ವೈವಿಧ್ಯ ಬೇಕಲ್ಲ!

.
ಏನ್ಮಾಡೋದೂಂತೀರಾ,  ಒಂದು ಚಮಚ ತೊಗರಿಬೇಳೆ, 2 ಒಣಮೆಣಸಿನಕಾಯಿಗಳು,  ಇಂಗು,  ಒಂದೆಸಳು ಕರಿಬೇವು ಹುರಿಯಿರಿ.  ಘಂ ಸುವಾಸನೆ ಬರಲಿ.
2 ಚಮಚ ತೆಂಗಿನಕಾಯಿ ತುರಿ ಇರಲಿ.
ಹುರಿದ ಸಾಮಗ್ರಿಗಳನ್ನು ತೆಂಗಿನಕಾಯಿ ತುರಿಯೊಂದಿಗೆ ನೀರು ಹಾಕದೆ ಅರೆಯಿರಿ.
ಈ ಮಸಾಲೆಯನ್ನು ಬೇಯಿಸಿದ ಟೊಮ್ಯಾಟೋ ಜೊತೆ ಕೂಡಿಸಿ,  ಟೊಮ್ಯಾಟೋ ಇಲ್ಲದವರು ಹುಣಸೇಹಣ್ಣಿನ ರಸ ಗಿವುಚಿ ಇಟ್ಕಂಡಿದ್ದೀರಲ್ಲ, 
ಸಾರಿನ ಹುಡಿ,  ನಿಮ್ಮ ಖಾರದ ಆಯ್ಕೆಗನುಸಾರ ಹಾಕಿರಿ,  ನೀರು ಕೂಡಿಸಿ ಸಾಕಷ್ಟು ತೆಳ್ಳಗಾಗಿಸಿದ್ರಾ,  ರುಚಿಕರವಾದ ಸಾರು ದೊರೆಯಬೇಕಾದರೆ ಉಪ್ಪು ಮರೆಯದಿರಿ,  ಬೆಲ್ಲ ನಿಮ್ಮ ಆಯ್ಕೆಗೆ ಬಿಟ್ಟಿದ್ದು.  ಇದನ್ನೇ ಕೈ ರುಚಿ ಅಂತಾನೂ ಹೇಳಬಹುದು.   ಕುದಿಸಬೇಕು,  ತುಪ್ಪದ ಒಗ್ಗರಣೆ ಆಗಬೇಕು.   ಸಾರಿನಲ್ಲಿ ಉಣ್ಣುತ್ತಿದ್ದಾಗ ಅಮ್ಮ ಮಾಡುತ್ತಿದ್ದ ಕಟ್ ಸಾರು ಕಣ್ಣೆದುರು ಬಂದಿತು,  ಅಂದು ಅಮ್ಮ ಮಾಡಿಕೊಟ್ಟಿದ್ದನ್ನು ತಿನ್ನಲು ಮಾತ್ರ ತಿಳಿದಿದ್ದ ಕಾಲವಾಗಿತ್ತು.

ಪಲ್ಯ ಮಾಡೋಣ:
ಮಾರ್ಕೆಟ್ಟಿನಿಂದ ತಂದ ಬೆಂಡೆಗಳನ್ನು ಮೊದಲು ಚೆನ್ನಾಗಿ ತೊಳೆಯಿರಿ.  ತೊಟ್ಟು ತೆಗೆದು ತೆಳ್ಳಗೆ ಹಚ್ಚಿರಿ.  ಬೆಳೆದ ಬೆಂಡೆಗಳನ್ನು ಉಪಯೋಗಿಸದಿರಿ.
ಬೆಂಡೆಕಾೖಗಳನ್ನು ಕತ್ತರಿಸಿಟ್ಟು ತೊಳೆಯುವಂತಿಲ್ಲ.  ನೀರಿನಲ್ಲಿ ಮುಳುಗಿದ ಬೆಂಡೆ ಹೋಳುಗಳು ಲೋಳೆಯಂತಾಗಿ ಉಪಯೋಗಶೂನ್ಯವಾದೀತು.  
 ಬೆಂಡೆ ಹೋಳುಗಳನ್ನು ಚೆನ್ನಾಗಿ ಹುರಿಯುವುದರಿಂದ ಯಾ ಹುಳಿ ಹಾಕಿ ಬೇಯಿಸುವುದರಿಂದ ಲೋಳೆಯ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.
ಇಷ್ಟೆಲ್ಲ ಮೂಲಸೂತ್ರಗಳನ್ನು ತಿಳಿದಿದ್ದರೆ ಬೆಂಡೆಕಾೖ ಪಾಕಪ್ರವೀಣರಾಗಲು ಸಾಧ್ಯ.

ಪಲ್ಯಕ್ಕೆ ಹುಳಿ ಹಾಕಬೇಕಾಗಿಲ್ಲ,  ಹಾಗಾಗಿ ಬಾಣಲೆಗೆ ಒಂದೆರಡು ಚಮಚ ಎಣ್ಣೆ ಎರೆದು ಒಗ್ಗರಣೆ ಸಿದ್ಧತೆ ಆಗಲಿ.   ಸಾಸಿವೆ,  ಉದ್ದಿನಬೇಳೆ, ಒಣಮೆಣಸು ಹಾಕಿದ್ರಾ,  ಸಾಸಿವೆ ಸಿಡಿದಾಗ ಕರಿಬೇವು, ಚಿಟಿಕೆ ಅರಸಿಣ ಬೀಳಲಿ.  ಈಗ ಬೆಂಡೆ ಹೋಳುಗಳನ್ನು ಹಾಕಿ ಹುರಿಯಿರಿ.  ನಾನ್ ಸ್ಟಿಕ್ ತವಾ ಹಾಗೂ ಇಂಡಕ್ಷನ್ ಸ್ಟವ್ ಇದ್ದರಂತೂ ಬೆಂಡೆ ಪಲ್ಯ ಸಲೀಸು.  ಮೈಕ್ರೋವೇವ್ ಅವೆನ್ ಇದ್ದರೆ ಅದರೊಳಗಿಟ್ಟರಾಯಿತು.

ಹಾಂ,  ತೆಂಗಿನತುರಿ,  ರುಚಿಗೆ ತಕ್ಕ ಉಪ್ಪು ಕೂಡಿಸಿ,  ಸೌಟಾಡಿಸಿ,  ಬೆಂದ ನಂತರವಷ್ಟೇ ಇಳಿಸಿ .  ಗರಿಗರಿಯಾದ ಬೆಂಡೆ ಪಲ್ಯ ಸಿದ್ಧ.0 comments:

Post a Comment