Pages

Ads 468x60px

Thursday, 18 June 2015

ಬೋಳು ಹುಳಿ

" ತರಕಾರೀ ಏನೂ ಇಲ್ವಲ್ಲ "

" ಈಗ ಹೇಳಿದ್ರೆ ನನ್ನಿಂದಾಗದು,  ಸಂಜೆ ಲಿಸ್ಟ್ ಕೊಡು "

" ಹಾಗಾದ್ರೆ ಬೋಳು ಸಾರು ಮಾಡಿದ್ರೆ ಸಾಕಾ..."

" ಅಲ್ಲಿ ಹಿಂದೆ ಇದೆಯಲ್ಲ  ಕರಿಕೆಸವು,  ಅದರ ಕಾಲು ಹಾಕಿ ಬೆಂದಿ ಮಾಡು "
ನಮ್ಮೆಜಮಾನ್ರು ಹೇಳಿದ್ರೂಂತ ನಾನೇನೂ ಕರಿಕೆಸವಿನ ದಂಟಿನ ಪದಾರ್ಧ ಮಾಡುವ ಉಸಾಬರಿಗೇ ಹೋಗಿರಲಿಲ್ಲ.

ಮಳೆಗಾಲದಲ್ಲಿ ಮಾಡುವಂಥಹ ಈ ಬೋಳುಹುಳಿಯನ್ನು ಇಂದು ಮಾಡುವಂತಾಯಿತು.   ಇದ್ದಕ್ಕಿದ್ದಂತೆ ಮಳೆಗಾಲದ ವಾತಾವರಣ ಸೃಷ್ಟಿಯಾಗಿತ್ತು.   ಜೋರು ಮಳೆ ಬೇರೆ,  ಅಂಗಳದ ಅಡಿಕೆಯೆಲ್ಲ ಒದ್ದೆ ಒದ್ದೆ.   ಈದಿನ ತರಕಾರಿ ಇಲ್ಲ ಎಂದು ಹೇಳುವ ಗೋಜಿಗೇ ಹೋಗದೆ ಕೆಸುವಿನ ದಂಟು ಕತ್ತರಿಸಿ ತಂದೆ,  ಎರಡು ದಂಟು ಸಾಕು.
ಕರಿಕೆಸು ತುರಿಸದು.   ದಂಟಿನ ನಾರು ಬಿಡಿಸಿ,  ಕತ್ತರಿಸಿ ಇಟ್ಟಾಯಿತು.  ಬೀಂಬುಳಿ ಇರುವ ಸಮಯದಲ್ಲಿ ನನ್ನ ಅಡುಗೆಗೆ ಹುಣಿಸೆ ಹುಳಿ ಹಾಕಲಿಕ್ಕಿಲ್ಲ.  2-3 ಬೀಂಬುಳಿ ಕತ್ತರಿಸಿದ್ದಾಯಿತು.  ಖಾರದ ಬಾಬ್ತು ಎರಡು ಹಸಿಮೆಣಸು ಸಿಗಿದಿದ್ದಾಯಿತು.   ರುಚಿಕರವಾಗಲು ಉಪ್ಪು ಬೆಲ್ಲ ಕೂಡಿಸಿದ್ದೂ ಆಯಿತು.  ಕುಕ್ಕರಿನಲ್ಲಿ ಒಂದು ಶೀಟಿ ಹೊಡೆಸಿದ್ದೂ ಆಯಿತು.

ಹ್ಞಾ,  ಮರೆತಿದ್ದೆ,   ಒಂದು ಹಿಡಿ ತೊಗರೀಬೇಳೆಯೂ ಇರಲಿ,  ಶರೀರದ ತ್ರಾಣಕ್ಕೆ ಒಳ್ಳೆಯದು.   ಉಪ್ಪು,  ಹುಳಿ ಕೂಡಿಸಿದ ತರಕಾರಿಯೊಂದಿಗೆ ತೊಗರಿಬೇಳೆ ಬೇಯುವುದಿಲ್ಲ,  ಬೇಳೆ ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ.  ಮರೆತೇಹೋಗಿತ್ತು, ಹಲಸಿನಬೇಳೆ ಗಂಟು ಕಟ್ಟಿ ಇಟ್ಕೊಂಡಿದ್ದು ಇತ್ತು.   ಅದನ್ನೇ ಬೇಳೆ ಜಜ್ಜಿ ಹಾಕಬಹುದಾಗಿತ್ತು.   ಹೋಗಲಿ, ಇನ್ನೊಮ್ಮೆ ನೆನಪಾದ್ರೆ ಮಾಡಿದ್ರಾಯ್ತು.   ನೆನಪಿರಲಿ, ಊಟದೊಂದಿಗೆ ಬೇರೆ ಕೂಟು ಕರಿ್ರ ಇದ್ದಲ್ಲಿ ಈ ವಿಧವಾದ ಬೋಳುಹುಳಿಗೆ ತೊಗರಿಬೇಳೆಯನ್ನೂ ಹಾಕಲಿಕ್ಕಿಲ್ಲ.

ಈಗ ಬೆಂದ ಬೇಳೆ,  ಬೆಂದ ಕೆಸುವಿನ ದಂಟುಗಳನ್ನು ತಪಲೆಗೆ ಹಾಕಿಕೊಳ್ಳಿ.  ಸಾಕಷ್ಟು ನೀರು ಕೂಡಿಸಿ,  ಇನ್ನಷ್ಟು ಉಪ್ಪು,  ಹುಳಿ, ಬೆಲ್ಲ ಬೆರೆಸಿ ಚೆನ್ನಾಗಿ ಕುದಿಸಿ.  ಕೊನೆಯದಾಗಿ ಬೆಳ್ಳುಳ್ಳಿ ಹಾಗೂ ಕರಿಬೇವು ಒಗ್ಗರಣೆ ಕಡ್ಡಾಯ.

Xanthosoma sagittifolium ಎಂಬ ವೈಜ್ಞಾನಿಕ ನಾಮಧೇಯವನ್ನು ಈ ಕರಿ ಕೆಸು ಹೊಂದಿದೆ.  ಫಲವತ್ತಾದ ಮಣ್ಣು ದೊರೆತಲ್ಲಿ ಬೃಹದಾಕಾರದ ಎಲೆಗಳಿಂದ ಕಂಗೊಳಿಸುವ ಇದರ ಗೆಡ್ಡೆ  ಕೂಡಾ ಖಾದ್ಯಯೋಗ್ಯವಾಗಿರುತ್ತದೆ.  ಮುಂಡಿಗೆಡ್ಡೆಯಂತೇ ಬೃಹತ್ತಾಗಿ ಬೆಳೆದ ಕರಿಕೆಸು ಹಿಂದೆ ನಮ್ಮ ಅಡಿಕೆ ತೋಟದೊಳಗೆ ಸಾಮಾನ್ಯವಾಗಿ ಕಾಣ ಸಿಗುತ್ತಿತ್ತು. ಈಗ ಕಾಣಸಿಗದು.  ಹಸಿರು ದಂಟಿನ ಕೆಸು ತುಸು ತುರಿಕೆಯಿದೆ,  ತುರಿಕೆಯಿದ್ದರೂ ಅಡುಗೆ ಮಾಡಲಿಕ್ಕೂ ಬರುತ್ತದೆ, ಚೆನ್ನಾಗಿ ಬೇಯಿಸಿ ಹುಳಿ ತುಸು ಜಾಸ್ತಿ ಹಾಕಿದರಾಯಿತು.   ಒಂದು ಕಾಲದಲ್ಲಿ ನಾನೂ ಪತ್ರೊಡೆ ಮಾಡ ಹೊರಟು,  ತಿನ್ನಲು ಹೊರಟಾಗ ತುರಿಕೆಯ ಅನುಭವ ದೊರೆಯಿತು.  ದೊಡ್ಡ ಅಟ್ಟಿನಳಗೆಯಲ್ಲಿ  ಮನೆಮಂದಿಗೂ, ಕೆಲಸದಾಳುಗಳಿಗೂ ತಿನ್ನಬಹುದಾಗಿದ್ದ ಪತ್ರೊಡೆ ,  ಕಲ್ಯಾಣಿ ಹೊತ್ತೊಯ್ದಳು ತನ್ನ ಮನೆಗೆ.  ಮಾರನೇದಿನ ಅವಳನ್ನು ವಿಚಾರಿಸದಿರುತ್ತೇನಾ,  " ಏನಿಲ್ಲ ಅಕ್ಕ,  ನನ್ನ ಸೊಸೆ ಇನ್ನೂ ಹೆಚ್ಚು ಹೂತ್ತು ಬೇಯಿಸಿದ್ದು ಬಿಟ್ರೆ ಬೇರೇನೂ ಮಾಡಲಿಲ್ಲ,  ನೀವು ಹಾಕಿದ ಮಸಾಲೆ ಅಚ್ಚುಕಟ್ಟಾಗಿತ್ತು.  ನಾವೆಲ್ಲ ಹೊಟ್ಟೆ ತುಂಬಾ ತಿಂದೆವು "  ಅಂದಳು ಕಲ್ಯಾಣಿ.

ಕರಿಕೆಸವು,  ಕರಿಕೆಸುವು,  ಕರಿಕೆಸು ಇತ್ಯಾದಿ ನಾಮಗಳಿಂದ ಕಂಗೊಳಿಸುವ ಈ ಸಸ್ಯವನ್ನು ಸಾಮಾನ್ಯವಾಗಿ ಮನೆಹಿತ್ತಲಲ್ಲಿ ನೆಟ್ಟು ಉಪಯೋಗಿಸುವ ಪದ್ಧತಿ,  ಮಾರುಕಟ್ಟೆಯಲ್ಲಿ ಸಿಗಬಹುದಾದರೂ ತಾಜಾತನ ಇರದು.   ಖನಿಜಾಂಶಗಳಿಂದ ಸಮೃದ್ಧವಾಗಿರುವ ಕರಿಕೆಸುವಿನಲ್ಲಿ ಜಾತಿಗಳು ಬಹಳಷ್ಟಿವೆ.   ತುರಿಕೆ ಇದ್ದರೂ, ಇಲ್ಲದಿದ್ದರೂ ಹುಳಿ ಹಾಕಿಯೇ ಅಡುಗೆಯಲ್ಲಿ ಬಳಸಬೇಕು.  ವಿಶೇಷ ಆರೈಕೆಯನ್ನೇನೂ ಇದು ಬಯಸದು.  ತಾಜಾ ತರಕಾರಿಯಾಗಿ ಉಪಯೋಗಿಸಬೇಕಿದ್ದರೆ ಮನೆಯ ಹಿಂದೆ ಅಥವಾ ಜಾಗ ಇದ್ದಲ್ಲಿ ನೆಟ್ಟುಕೊಳ್ಳುವುದು ಉತ್ತಮ.  ಕೆಸುವಿನ ಗೆಡ್ಡೆ ಕೂಡಾ ರುಚಿಕರ ಆಹಾರ ಪದಾರ್ಥವಾಗಿದೆ.   ಬಟಾಟೆಯಂತೆ ಬೇಯಿಸಿ,  ಸಿಪ್ಪೆ ತೆಗೆದು,  ಹುಳಿ ಸಾಕಷ್ಟು ಹಾಕಿ ಬೇಕಾದ ರೀತಿಯಲ್ಲಿ ಅಡುಗೆ ಮಾಡಬಹುದಾಗಿದೆ.ಟಿಪ್ಪಣಿ:  ಉತ್ಥಾನ ಮಾಸಪತ್ರಿಕೆಯ 2015 ರ ಜೂನ್ ತಿಂಗಳ ಸಂಚಿಕೆಯಲ್ಲಿ ಪ್ರಕಟಿತ.

0 comments:

Post a Comment