Pages

Ads 468x60px

Saturday, 9 April 2016

ಯುಗಾದಿಯ ಸಿಹಿ

ಯುಗಾದಿ ಬಂದಿದೆ,  ಈ ಬಾರಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿಗಳೆರಡೂ ಒಂದೇ ವಾರದ ಅಂತರದಲ್ಲಿ ಬಂದಿವೆ.  ಎರಡು ಬಾರಿ ಸಿಹಿಯೂಟ ತಿನ್ನುವ ಭಾಗ್ಯ ನಮ್ಮದು.  ಎಲ್ಲ ದವಸಧಾನ್ಯಗಳ ಬೆಲೆಯೇರಿಕೆಯಾಗಿದ್ದರೂ,  ಮನೆಯೊಳಗೆ ಹಿಂದಿನಂತೆ ಜನಸಂದಣಿಯಿಲ್ಲದಿದ್ದರೂ,  ರೇಷನ್ ಶಾಪ್ ಸಕ್ಕರೆ ವಿತರಿಸದಿದ್ದರೂ ಸಿಹಿ ತಿನ್ನಬೇಡವೇ.   ಸಿಹಿತಿನಿಸುಗಳಲ್ಲಿ ಪಾಯಸ ಅತಿ ಕಡಿಮೆ ಖರ್ಚಿನಲ್ಲಿ ಆಗುವಂತಹುದು.   ಮನೆಯೊಳಗೆ ಏನೇನಿದೆ ಎಂದು ನೋಡಿಕೊಂಡು ಎಷ್ಟು ಬೇಕೋ ಅಷ್ಟೇ ಮಾಡಿ ತಿನ್ನೋಣ.

ಮುಂಜಾನೆ ಎಂದಿನಂತೆ ಒಂದು ತೆಂಗಿನಕಾಯಿ ಒಡೆದಿದ್ದಾಯ್ತು.  ದೋಸೆಗೊಂದು ಚಟ್ಣಿ,  ಬದನೇ ಸಾಂಬಾರ್,   ಪಲ್ಯಕ್ಕೊಂದಿಷ್ಟು ಕಾಯಿತುರಿ ಬಳಸಿ ಉಳಿದ ಕಾಯಿತುರಿಯಿಂದ ಕಾಯಿಹಾಲು ತೆಗೆದಿರಿಸಿ.  ಅಲ್ಲಿಗೆ ಒಂದು ತೆಂಗಿನಕಾಯಿ ಖರ್ಚು ಆದ ಹಾಗಾಯಿತು.

ತಂದ ತರಕಾರಿಗಳಲ್ಲಿ ಬೀಟ್ರೂಟ್ ಗೆಡ್ಡೆ ಉಪಯೋಗವಾಗದೆ ಹಾಗೇ ಬಿದ್ದಿವೆ.   ಒಂದು ಬೀಟ್ರೂಟ್ ಗೆಡ್ಡೆಯನ್ನು ಸಿಪ್ಪೆ ತೆಗೆದು ತುರಿದೂ ಆಯಿತು.

ಡಬ್ಬಾದಲ್ಲಿ ಶಾವಿಗೆ ಅಥವಾ ಚಿರೋಟಿ ರವೆ ಇದೆಯಾ?  ಇದೆ,  ಎರಡೂ ಇವೆ.   ಚಿರೋಟಿ ರವೆಯಾದರೂ ಮುಂಜಾನೆಯ ತಿಂಡಿಗಾದೀತು.   ಸರಿ,  ಅಗತ್ಯವಿದ್ದ ಅರ್ಧ ಕುಡ್ತೆ ಶಾವಿಗೆಯನ್ನು ತುಪ್ಪದ ಪಸೆಯಲ್ಲಿ ಹುರಿದಿಟ್ಟೂ ಆಯ್ತು,   ಹುರಿಯದಿದ್ದರೂ ನಡೆಯುತ್ತದೆ.

ತೆಂಗಿನಕಾಯಿ ಹಾಲು ಆಗಿದೆ,  ದಪ್ಪ ಹಾಲು ಪ್ರತ್ಯೇಕ ಇರಲಿ.  ಎರಡನೇ ಹಾಗೂ ಮೂರನೇ ಹಾಲನ್ನು ಬೀಟ್ರೂಟ್ ಹಾಗೂ ಶಾವಿಗೆ ಬೇಯಲು ಬಳಸಿ.  ಕುಕರ್ ಒಂದು ವಿಸಿಲ್ ಹಾಕುತ್ತಲೂ ಬೆಂದಿತೆಂದು ತಿಳಿಯಿರಿ.

ಏಲಕ್ಕಿ ಪುಡಿ ಮಾಡದಿದ್ದರಾದೀತೇ,  ದ್ರಾಕ್ಷಿ ಗೋಡಂಬಿ ಇದ್ದ ಹಾಗೆ ಹುರಿದುಕೊಳ್ಳುವುದು.

ಕುಕರ್ ಒಳಗೆ ಬೆಂದಂತಹ ಶಾವಿಗೆ, ಬೀಟ್ರೂಟು ತುರಿಗಳಿಗೆ ಸಕ್ಕರೆ ಹಾಕಿ ಕುದಿಯಲು ಇಟ್ಟಾಯಿತು,  ಒಂದು ಕುಡ್ತೆ ಸಕ್ಕರೆ ಸಾಕಾದೀತು.   ಕುಕರ್ ಹೇಗೂ ದಪ್ಪ ತಳದ ಪಾತ್ರೆಯಲ್ವೇ,  ಬೇರೆ ತಪಲೆಗೆ ವರ್ಗಾಯಿಸಬೇಕೆಂದಿಲ್ಲ.

ಈಗ ನಾವು ಕೊನೆಯ ಹಂತಕ್ಕೆ ಬಂದೆವು.  ದಪ್ಪ ಕಾಯಿಹಾಲು, ಪ್ರತ್ಯೇಕವಾಗಿ ಇಟ್ಟುಕೊಂಡಿದ್ದನ್ನು ಈಗ ಎರೆಯಿರಿ.   ಏಲಕ್ಕಿ ಪುಡಿ ಉದುರಿಸಿ.   ದ್ರಾಕ್ಷಿ ಗೋಡಂಬಿಗಳೂ ಬೀಳಲಿ.  ಒಂದು ಕುದಿ ಬಂದಾಗ ಕೆಳಗಿಳಿಸಿ.   ಆಗಿಯೇ ಹೋಯ್ತು ಯುಗಾದಿಯ ಸಿಹಿ!

ಎಷ್ಟೇ ಲೆಕ್ಕಾಚಾರ ಹಾಕಿ ಮಾಡಿದ್ರೂನೂ ಪಾಯಸದೂಟ,  ಅದೂ ನಾವಿಬ್ಬರು ಇರೋದು,  ಉಳಿದೀತು ಅಂದ್ಬಿಟ್ಟು  ಪಕ್ಕದಲ್ಲೇ ಇರುವ ನಮ್ಮ ಮನೆಯಕ್ಕನಿಗೆ ಕೊಟ್ಟೆ,  ಅವಳೂ ತನ್ನ ಕಡ್ಲೆಬೇಳೆ ಪಾಯಸ ಕೊಟ್ಟಿದ್ರಲ್ಲಿ ಯುಗಾದಿ ಡಬಲ್ ಧಮಾಕಾ ಆಗ್ಹೋಯ್ತು! 0 comments:

Post a Comment