Pages

Ads 468x60px

Saturday 30 April 2016

ತೋಟದಲ್ಲಿ ಮಾವಿನಕಾಯಿ




                                   
                                   
 


ಮಾವಿನ ಋತು ಆರಂಭದಲ್ಲೇ ಈ ಬಾರಿಯೂ ಮಗಳು ಬಂದಳು.   ತೋಟದಲ್ಲಿ ಮಾವಿನಕಾಯಿ ಆಗಿತ್ತೋ ಗೊತ್ತಿಲ್ಲ,   " ದೊಡ್ಡಮ್ಮ ಕೊಟ್ಟಿದ್ದೂ ..."  ಅನ್ನುತ್ತಾ ಎರಡು ತೋತಾಪುರಿ ಮಾವಿನಕಾಯಿಗಳನ್ನು ಹಿಡಿದುಕೊಂಡು ಬಂದಳು.

ಹೇಗೂ ಹೊರಡುವಾಗ ಉಪ್ಪಿನಕಾಯಿ ರಾಗ ಎಳೆದೇ ಎಳೆಯುತ್ತಾಳೆ,  " ಬೇಕಿದ್ರೆ ಉಪ್ಪಿನಕಾಯಿ ಹಾಕಿ ಕೊಡ್ತೇನೆ,  ಅಜ್ಜಿ ಹೇಳಿಕೊಟ್ಟ ಕ್ರಮದ್ದೂ..." ಅನ್ನುತ್ತಿದ್ದ ಹಾಗೆ  " ಏನೂ ಬೇಡ,  ಹಾಗೇ ತಿಂತೇನೆ..." ಅಂದಳು.

ಬೇಡದಿದ್ದರೆ ನನ್ನದೇನೂ ಅಭ್ಯಂತರವಿಲ್ಲ.   ಅವಳು ಬೆಂಗಳೂರಿಗೆ ಹೋಗುತ್ತಲೇ ಮಗನ ಸವಾರಿ ಬಂದಿತು.  ಬರುವಾಗ ಸ್ನೇಹಿತರ ಪಟಾಲಂ ಕೂಡಾ ಬಂದಿತ್ತು.   

" ಮಧು ನಾಳೆ ಹೋಗ್ತಾನಲ್ಲ,  ಅವನಿಗೆ ಈ ಮಾವಿನಕಾಯಿ... "  ಎಂದು ನಮ್ಮಕ್ಕ ತೋತಾಪುರಿ ಕೊಯ್ದು ಇಟ್ಟಿದ್ದಳು.   " ಯಾಕೇ ಸುಮ್ಮನೆ,  ಅವನೀಗ ಮಾವಿನ್ಕಾಯಿ ತಿಂದ..." ಅನ್ನುತ್ತಿದ್ದ ಹಾಗೇ ಈ ಹಿಂದೆ ದೆಹಲಿಯಲ್ಲಿ ಕೆಲಸಕ್ಕೆ ಸೇರಿದಾಗ ಭರಣಿಗಟ್ಟಳೆ ಮಾವಿನಮಿಡಿ ಉಪ್ಪಿನಕಾಯಿ ಕಟ್ಟಿಕೊಂಡು ಹೋಗಿದ್ದೂ,   ಅಲ್ಲಿನ ಹವೆಗೆ ನಮ್ಮ ಉಪ್ಪಿನಕಾಯಿಗಳು ತಿನ್ನಲು ಹಿಡಿಸದೇ ಹೋಗಿದ್ದೂ ನೆನಪಾಗಿ ಮಾವಿನಕಾಯಿಗಳನ್ನು ಟೇಬಲ್ ಮೇಲಿಟ್ಟು   " ನಿಂಗೆ ಮಾವಿನಕಾಯ್ ಬೇಡಾ ತಾನೇ..."

" ಇದ್ರೆ ಆದೀತು,   ತುಪ್ಪ ಇಲ್ವಾ...?" 
ತುಪ್ಪದ ಬಾಟಲ್ ಸಿದ್ಧವಾಯ್ತು.
ಮಧು ಹಾಗೂ ಸ್ನೇಹಿತರ ಬಳಗ ಬೆಂಗಳೂರಿಗೆ ತೆರಳುತ್ತಿದ್ದಂತೆ ಬಿಡುವಿನ ವೇಳೆ ಎದುರಾಯಿತು.

ತೋತಾಪುರಿಯಂತಹ ಹುಳಿ ಇಲ್ಲದ ಮಾವಿನಕಾಯಿಗಳು ಎಣ್ಣೆ ಉಪ್ಪಿನಕಾಯಿಗೆ ಚೆನ್ನ.   ಅಗತ್ಯಕ್ಕೆ ಒಂದು ನಿಂಬೆಹಣ್ಣು ಚಿಕ್ಕದಾಗಿ ಹಚ್ಚಿ ಹಾಕಿದ್ರೆ ಹುಳಿ ರುಚಿಯೂ ಆಯ್ತು.   ಎರಡು ಅಥವಾ ಮೂರು ಮಾವಿನ ಕಾಯಿಗಳ ಹೋಳು ಮಾಡಿಕೊಳ್ಳುವುದು 

ಹೋಳುಗಳಿಗೆ ತಕ್ಕಂತೆ ಉಪ್ಪಿನಹುಡಿ ಬೆರೆಸಿಡುವುದು,  3 - 4 ದೊಡ್ಡ ಚಮಚ ಉಪ್ಪು ಅಳೆದು ಹಾಕುವುದು.

ಪ್ಯಾಕೆಟ್ ಉಪ್ಪಿನಕಾಯಿ ಹುಡಿ ತಂದಿಟ್ಕೊಂಡಿದ್ದು ಇದೆ,  ಇದನ್ನೂ ಉಪ್ಪು ಅಳೆದ ಚಮಚಾದಲ್ಲಿ ಮೂರು ಅಥವಾ ನಾಲ್ಕು ಚಮಚ ಹಾಕುವುದು.  
ಇನ್ನೀಗ ಎಳ್ಳೆಣ್ಣೆಯ ಒಗ್ಗರಣೆ ಆಗ್ಬೇಕಾಗಿದೆ,   2 ಚಮಚ ಎಣ್ಣೆ ಸಾಕು,  ಸಾಸಿವೆ ಚಟಚಟ ಅಂದಾಗ ಒಗ್ಗರಣೆ  ಬೀಳಲಿ.   ಉಪ್ಪು ಕಡಿಮೆಯಾಗಬಾರದು,  ನೋಡಿಕೊಂಡು ಒಂದೆರಡು ಚಮಚಾ ಉಪ್ಪು ಮೇಲಿಂದ ಹಾಕಿಟ್ಟು,  ಭದ್ರವಾಗಿ ಉಪ್ಪಿನಕಾಯಿ ಜಾಡಿ ಮುಚ್ಚಿಟ್ಟು ಮಾರನೇ ದಿನವೇ ಉಪಯೋಗಿಸಲು ಪ್ರಾರಂಭಿಸಬಹುದಾಗಿದೆ.

ಎಳ್ಳೆಣ್ಣೆ ಹಿಡಿಸದವರು ಆಯ್ಕೆಗನುಗುಣವಾಗಿ ಇನ್ಯಾವುದೇ ಎಣ್ಣೆ ಹಾಕಿಕೊಳ್ಳಿ.   ಬೆಡೇಕರ್ ಮಸಾಲಾ ಉಪ್ಪಿನಕಾಯಿಯ ಸ್ವಾದ ಇರುವುದೇ ಎಳ್ಳೆಣ್ಣೆಯ ಒಗ್ಗರಣೆಯಲ್ಲಿ ಎಂದು ನನ್ನ ಅನಿಸಿಕೆಯಾಗಿದೆ.

ಉಪ್ಪಿನಕಾಯಿಯ ಜಾಡಿ ಖಾಲಿಯಾಗುತ್ತಿದಂತೆ ನೆನಪಾಯಿತು.   " ಫೊಟೋ ತೆಗೆದಿಟ್ಟಿಲ್ಲ..."  ಲಗುಬಗೆಯಿಂದ ಉಳಿದಿದ್ದ ಎರಡು ಮಾವಿನ ಹೋಳುಗಳನ್ನು ತಟ್ಟೆಯಲ್ಲಿಟ್ಟು ಕ್ಲಿಕ್ಕಿಸಿದ್ದಾಯಿತು.   ಯಾವುದೇ ಬರಹವಿರಲಿ ಅದಕ್ಕೊಂದು ಸೂಕ್ತವಾದ ಚಿತ್ರವಿರದಿದ್ದರೆ ಓದುಗರ ಹಾಜರಾತಿ ಕಡಿಮೆಯೇ...


    

0 comments:

Post a Comment