Pages

Ads 468x60px

Sunday, 28 August 2016

ಅಜ್ಜಿಯ ಸೀರೆ
ಮಗನ ಮದುವೆಗೆ ದಿನ ನಿಗದಿಯಾಗುತ್ತಿದ್ದಂತೆ ವೈದಿಕ ಸಾಹಿತ್ಯದ ಲಿಸ್ಟ್,  ಮದುಮಗನ ದಿಬ್ಬಣ ಕಲ್ಯಾಣಮಂಟಪಕ್ಕೆ ಆಗಮಿಸಬೇಕಾದರೆ ನಾವು ರೂಢಿಸಿ ಇಟ್ಟುಕೊಳ್ಳಬೇಕಾದ ಪರಿಕರಗಳ ಪಟ್ಟಿ  ಪುರೋಹಿತರಾದ ಪರಕ್ಕಜೆ ಅನಂತ ಭಟ್ಟರ ವಾಟ್ಸಪ್ ಮುಖೇನ ಬಂದಿತು.ಮದುವೆಯಂತಹ ಆಡಂಬರದ ಸಡಗರ ಇದೇ ಮೊದಲ ಬಾರಿ ನಾವು ಎದುರಿಸುವುದಾಗಿದ್ದರಿಂದ,  ಎಲ್ಲವನ್ನೂ ನಿಭಾಯಿಸಲು ಹಿರಿಯರಾದ ನಮ್ಮವರ ಭಾವ,  ರಾಮ ಶರ್ಮ ಸುಬ್ರಹ್ಮಣ್ಯದಿಂದ ಬಂದಿಳಿದರು.

ಕನ್ನಡಕ ಮೂಗಿಗೇರಿಸಿ ಪಟ್ಟಿ ಓದುತ್ತಾ  " ಅಡಿಕೆ... ತೆಂಗಿನಕಾಯಿ, ಸಿಂಗಾರ... "
" ಅದನ್ನೆಲ್ಲ ಚೆನ್ನಪ್ಪ ರೂಢಿಸಿ ಇಟ್ಟಿದ್ದಾನೇ..."
" ಇಟ್ಟರಾಯಿತೇ,  ಎಲ್ಲಿದೇ ಅಂತ ಹುಡುಕುವಂತಾಗಬಾರದು..  ಈಗಲೇ ಪ್ಯಾಕ್ ಮಾಡಬೇಕು. "

" ಸಿಂಗಾರ ಯಾತಕ್ಕೇ ಗೊತ್ತಾ.. ಮದುಮಗನ ಬಾಸಿಗ ಕಟ್ಟಲಿಕ್ಕೆ... ಈಗಲೇ ಕಟ್ಟಿ ಇಡುವುದು ಉತ್ತಮ.. "
" ಯಾಕೆ ಸುಮ್ನೇ,  ಪುರೋಹಿತರೇ ಮೊನ್ನೆ ನಾಂದಿ ದಿನ ಕಟ್ಟಿದ್ಹಂಗಿತ್ತು..."
" ನಾಳೆ ಎಲ್ಲ ಕೆಲ್ಸ ಜಲ್ದಿ ಆಗ್ಬೇಕು,  ಬಾಳೆಬಳ್ಳಿ ಎಲ್ಲುಂಟು?  ತಂದಿಡು. " ಆ ಹೊತ್ತಿಗೆ ನಮ್ಮಕ್ಕ ಒಳ ಬಂದಳು.
" ಬಾಸಿಗ ನೀನೇ ಕಟ್ಟಿಡ್ತೀಯಾ,  ಬಾಳೆಬಳ್ಳಿ ತಂದ್ಕೊಡ್ತೇನೆ. "
" ಬಾಳೆಬಳ್ಳಿ ನೀರಿನಲ್ಲಿ ನೆನೆಸಿಯೇ ತಂದ್ಕೊಡು,  ಕಟ್ಟಿದ ಮಾಲೆ ತುಂಡಾಗಬಾರದು. "
ಬಾಸಿಗ ಕಟ್ಟುವ ವಿಧಾನ ಹೇಳಿಕೊಡಲು ಭಾವಯ್ಯ ಮುಂದಾದರು.  " ನನಗ್ಗೊತ್ತಿದೆ,  ಸಿಂಗಾರದ ಐದು ಎಸಳು ತಪ್ಪಿದ್ರೆ ಏಳು ಎಸಳು, ಮಲ್ಲಿಗೆ ನೆಯ್ದ ಹಾಗೆ ಕಟ್ಟಿದರಾಯಿತು. " ಅಂದಳು ನಮ್ಮ ಹಿರಿಯಕ್ಕ.
"ಅದೂ ಹೂವಿನೆಸಳು ಮೇಲ್ಮುಖವಾಗಿರಬೇಕು. " 
ಬಾಸಿಗದ ಕೆಲಸ ಆಯ್ತು.

" ಕೆಂಪು ತೆರೆ ಸೀರೆ... " ಅನ್ನುತ್ತಾ,  " ಇದೆಯಾ,  ಪಟ್ಟೆ ಸೀರೆ ಕೆಂಪು ಕಲರಿಂದೂ? "  ಎಂದು ನನ್ನನ್ನು ಕೂಗಿ ಕರೆದರು.
" ಓ,  ಸೀರೆಯಾ,  ಇದೆ ಇದೆ ನನ್ನಜ್ಜಿ ಕೊಟ್ಟಿದ್ದು. "
" ಅಜ್ಜಿಯಾ,  ಯಾವಾಗ ಕೊಟ್ಟಿದ್ದೂ?  ಚೆನ್ನಾಗಿದೆಯಾ,  ಹರಿದದ್ದು,  ತೂತು ಬಿದ್ದದ್ದು ಆಗಲಿಕ್ಕಿಲ್ಲ ನೋಡು.. "
" ಚೆನ್ನಾಗಿಯೇ ಇದೆ.  ನಾನು ಕಾಲೇಜು ಓದುತ್ತಿದ್ದಾಗ ಕೊಟ್ಟಿದ್ದು,  ಅದನ್ನು ಉಟ್ಕೊಂಡು ಒಂದು ಫೋಟೋ ಕೂಡಾ ತೆಗೆಸಿಟ್ಕೊಂಡಿದ್ದೇನೆ ಗೊತ್ತಾ... "


                                                           


ಆ ಕಾಲದ ನಮ್ಮ ಕಾಸರಗೋಡಿನ ಸ್ಟುಡಿಯೋ ಕಲರ್ ಫೋಟೋಗ್ರಾಫಿ ಹೊಂದಿರಲಿಲ್ಲ,  ಮನೆ ಪಕ್ಕದಲ್ಲೇ ಇದ್ದ ಸುಂದರರಾಯರ ಪ್ರಕಾಶ್ ಸ್ಟುಡಿಯೋ ಹಾಗೂ ಬ್ಯಾಂಕ್ ರಸ್ತೆಯಲ್ಲಿದ್ದ ಶೆಟ್ಟೀಸ್ ಸ್ಟುಡಿಯೋಗಳೆರಡರಲ್ಲೂ ಕಪ್ಪು ಬಿಳುಪಿನ ಛಾಯಾಗ್ರಹಣ ಲಭ್ಯವಿದ್ದಿತು.  ಹೀಗೇ ಸುಮ್ಮನೆ ಸೀರೆ ಉಟ್ಕೊಂಡು ಕಪ್ಪು ಬಿಳುಪಿನಲ್ಲಿ ಸಮಾಧಾನ ಪಟ್ಟುಕೊಂಡಿದ್ದಷ್ಟೇ ಲಾಭ.

ಕಪಾಟಿನ ಬಾಗಿಲು ತೆರೆಯಿತು.   ನಿತ್ಯೋಪಯೋಗಿ ಉಡುಪು ಅಲ್ಲವಾದ್ದರಿಂದ ಕೈಗೆಟುಕದಷ್ಟು ಎತ್ತರದಲ್ಲಿತ್ತು.  ಎತ್ತರದ ಮಣೆಯಿಟ್ಟು ಹತ್ತಿದಾಗ ಸೀರೆ ಕೆಳಗಿಳಿದು ಬಂದಿತು.   ಅದರೊಂದಿಗೆ ಇನ್ನೂ ಎರಡು ಕೆಂಪು ಪಟ್ಟೇವಸ್ತ್ರಗಳೂ ಇದ್ದವು.
" ಎಲ್ಲವನ್ನೂ ಬಿಡಿಸು ನೋಡೋಣಾ.. "
" ಲುಂಗಿ ಗಾತ್ರದ ಈಯೆರಡು ಬಟ್ಟೆ ಮಧೂ ಉಪನಯನದ್ದು. "
" ಇದಾಗಲಿಕ್ಕಿಲ್ಲ,  ಅಂತರಪಟ ಹಿಡಿಯುವಾಗ ವರನಿಗೆ ಹುಡುಗಿ ಮುಖ ಕಾಣಿಸಬಾರದು,  ಮಂಟಪದ ಅಗಲಕ್ಕೆ ಹೊಂದುವಷ್ಟು ಉದ್ದವೂ ಇರಬೇಕು. "  ಅಂದರು ಭಾವಯ್ಯ.
" ಈ ಅಜ್ಜಿಯ ಸೀರೆ ಉಂಟಲ್ಲ,  ನೀವು ಹೇಳಿದಂತೆ ಅಂತರಪಟ ಹಿಡಿಯಲಿಕ್ಕೆ ಹೇಳಿ ಮಾಡಿಸಿದ ಹಾಗಿದೆ. "
"ಬಿಡಿಸು ಅದನ್ನೂ..."
ಸೀರೆಯನ್ನು ಬಿಡಿಸಲಾಯಿತು,  ಹತ್ತಿಯಂತೆ ಹಗುರಾದ ಕಾಶಿಪಟ್ಟೆ,   ತನ್ನ ಹಳೆಯ ಸೀರೆಯನ್ನು ಮುದ್ದಿನ ಮೊಮ್ಮಗಳಿಗೆ ಅಜ್ಜಿ ಕೊಟ್ಟಿದ್ದು.
" ಹೌದೂ,  ಕಾಲೇಜಿಗೆ ಹೋಗ್ತಿದ್ದಾಗ ಸಿಕ್ಕಿದ ಈ ಸೀರೆಗೆ ಈಗ ಮೂವತ್ತೇಳು ವರ್ಷ ಆಯಿತು,  ಅಜ್ಜಿಗೆ ಅವರಪ್ಪ ಕೊಟ್ಟಿದ್ದಾಗಿರಬಹುದು,  ಏನಿಲ್ಲಾಂದ್ರೂ ಇವತ್ತಿಗೆ ಈ ಸೀರೆ ಎಪ್ಪತೈದು ವರ್ಷ ದಾಟಿದೆ. "  ಇದು ನನ್ನ ಲೆಕ್ಕಾಚಾರ.

ಕಾಶಿಪಟ್ಟೆ ಸೀರೆ ಮದುವೆಮಂಟಪದಲ್ಲಿ ಅಂತರಪಟವಾಗಿ ಮೆರೆಯಿತು.   " ಅಜ್ಜಿಯ ಸೀರೆ ಮರಿಮಗನ ಮದುವೆಗೂ ಬಂತು... "   ತಂಗಿ ಗಾಯತ್ರಿಯಂತೂ ಎಲ್ಲರೊಂದಿಗೂ ಹೇಳಿಕೊಂಡು ಬಂದಳು.

" ಸುಲಗ್ನಾ ಸಾವಧಾನ... ಸುಮುಹೂರ್ತೇ ... "  ನಂತರ ಪೆಟ್ಟಿಗೆ ಸೇರಿದ ಸೀರೆ, ಸಂಜೆ ಮನೆ ತಲುಪಿತು.  ಮೊದಲಾಗಿ ಅಜ್ಜಿಯ ಸೀರೆಗೆ ಗಾಳಿಯಾಡಲಿ ಎಂದು ನೇತು ಹಾಕಿದ್ದೂ ಆಯ್ತು.

ಎರಡು ದಿನಗಳ ಮದುವೆಯ ಸಭಾ ಕಾರ್ಯಕ್ರಮಗಳೆಲ್ಲ ಮುಗಿದುವು.  ಮಧು-ಮೈತ್ರಿ ಜೋಡಿಯನ್ನು  ಬೆಂಗಳೂರಿಗೆ ಕಳುಹಿಸಿ,  ಮನೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆ ಬರೆ, ವಸ್ತು ಸಾಮಗ್ರಿಗಳನ್ನು ಒತ್ತರೆಯಾಗಿ ಇಡುತ್ತಿದ್ದ ಹಾಗೆ ಅಜ್ಜಿಯ ಪಟ್ಟೆ ಸೀರೆ ನೆನಪಾಯ್ತು. 

ಮುಂದಿನ ತಿಂಗಳು ತಂಗಿ ಮಗಂದೂ ಮದುವೆ ಇದೆ,  ಆಗಲೂ ಅಂತರಪಟವಾಗಿ ಈ ಸೀರೆಯನ್ನೇ ಬಳಸಬಹುದೆಂಬ ತೀರ್ಮಾನಕ್ಕೆ ಬಂದಿದ್ದೆವು.  ಸೀರೆಯನ್ನು ಮೊದಲು ಒಳಗಿಡೋಣ,  ವರಲಕ್ಷ್ಮಿ ಬಂದಾಗ ಕೊಟ್ಟರಾಯ್ತು,  ಮದುವೆ ಹಾಲ್ ಗೆ ಹಿಡಿದುಕೊಂಡು ಹೋದರೂ ಸಾಕಾದೀತು... ಅಂದ್ಕೊಂಡು ನೋಡಿದ್ರೆ ಸೀರೆ ಕಾಣಿಸಲಿಲ್ಲ.   ಬಟ್ಟೆಬರೆಗಳ ರಾಶಿಯಲ್ಲಿ ಅಜ್ಜಿಯ ಸೀರೆ ಎಲ್ಹೋಯ್ತು ಎಂದು ಹುಡುಕಾಡಿ ಸಾಕಾಯ್ತು.  ಕುಂಬ್ಳೆಯಲ್ಲಿರುವ ತಂಗಿಗೂ ದೂರವಾಣಿ ಕರೆ ಹೋಯಿತು.  " ಸೀರೆ ಏನಾದ್ರೂ ವರಲಕ್ಷ್ಮಿ ಕೈಗೆ ಕೊಟ್ಟಿದೀಯಾ.. "
" ಇಲ್ವಲ್ಲ,  ನಿನ್ನ ಸೀರೆ ಇದ್ದ ಬ್ಯಾಗ್ ಒಳಗೆ ತುರುಕಿದ್ದು ನೆನಪಿದೆ. "
" ಹೌದಾ,  ಇನ್ನೊಮ್ಮೆ ನೋಡ್ತೀನಿ.."  ಬಟ್ಟೆಗಳನ್ನು ಅತ್ತ ಇತ್ತ ಎಳೆದಾಡಿ,  ಕಪಾಟಿನೊಳಗೆ ಇಟ್ಟು ಬಿಟ್ಟಿದ್ದೀನೋ ಎಂದೂ ಹುಡುಕಾಡಿದ್ದೂ ಆಯ್ತು.
" ಅದ್ಯಾಕೆ ಹುಡುಕ್ತೀಯ,  ನಾಳೆ ಬೆಳಗ್ಗೆ ನೋಡಿದ್ರಾಯ್ತು..." ಅಂದರು ನಮ್ಮೆಜಮಾನ್ರು.

" ಹ್ಞೂ, ದೇವರ ದೀಪ ಹಚ್ಚಿಟ್ಟು ಊಟಕ್ಕೆ ಅಣಿ ಮಾಡಲು ಹೊರಟೆ, ಟೇಬಲ್ ಮೇಲೆ ಊಟದ ಸಾಹಿತ್ಯಗಳನ್ನು ಇರಿಸಿ,  ದೇವರಿಗೆ ಅಡ್ಡ ಬಿದ್ದು,  ದೀಪವಾರಿಸಿ,  ಎದ್ದಾಗ ದೇವರಮನೆಯಲ್ಲೇ ತೂಗಹಾಕಿದ್ದ ಅಜ್ಜಿಯ ಕೆಂಪು ಪಟ್ಟೆ ಸೀರೆ ಕಣ್ಣಿಗೆ ಬಿತ್ತು!


      .

0 comments:

Post a Comment