Pages

Ads 468x60px

Sunday, 23 October 2016

ಅವಲಕ್ಕಿ ಹಲ್ವಾ
" ಅವಲಕ್ಕೀದು ಹಲ್ವನಾ,  ಬಾಳೆಹಣ್ಣಿನ ಹಾಗೆ ಕಾಣುತ್ತಪ್ಪ.. "
" ಅಲ್ಲೇ ಇರೂದು ಒಳಗುಟ್ಟು.. "
" ಹೌದಾ,  ಹೇಗೆ ಮಾಡಿದ್ದೂ? "
" ಹೇಗೆ ಅಂತ ಕೇಳ್ತೀರಾ,  ಯಾಕೆ ಮಾಡಿದ್ದೂ ಅನ್ನಿ. "

 ಅದೇನಾಗಿತ್ತೂಂದ್ರೆ ಪತ್ತನಾಜೆ ಬಂದಿತ್ತಲ್ಲ,  ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ  ಪತ್ತನಾಜೆ ಸೇವೆ  ಇದ್ದಿದ್ದರಿಂದ ಹೋಗಿದ್ದೆವು.   ಪೂಜಾದಿಗಳೆಲ್ಲ ಮುಗಿದು ನಮಗೆ ಪ್ರಸಾದರೂಪವಾಗಿ ಕಲಸಿದ ಅವಲಕ್ಕಿ,  ಸೀಯಾಳ,  ಹಣ್ಣುಕಾಯಿ, ಹೂವು, ಗಂಧ ಎಲ್ಲ ದೊರೆಯಿತು.  ಸಮಾರಾಧನೆ ಊಟವಾಗಿ ಮನೆಗೆ ಬಂದೆವು.

ಸಂಜೆವೇಳೆಗೆ ಹಿರಣ್ಯದ ಮಹಿಷಂದಾಯ ದೈವಗುಡಿಯಲ್ಲಿ ಪತ್ತನಾಜೆ ಬಾಬ್ತು ವಿಶೇಷ ಪೂಜೆ, ತಂಬಿಲಸೇವೆ,  ಪ್ರಾರ್ಥನೆ ಇತ್ಯಾದಿ ಆದ ನಂತರ ಬಂದಂತಹ ಭಕ್ತಾದಿಗಳಿಗೆ ಪುನರ್ಪುಳಿ ಶರಬತ್ತು,   ಕಲಸಿದ ಅವಲಕ್ಕಿ....

ದೈವಸನ್ನಿಧಿಯಲ್ಲೇ ತಿಂದು ಕಸ ಮಾಡಲಿಕ್ಕುಂಟೇ,  ಪ್ರಸಾದ ಮನೆಗೆ ಬಂದಿತು.

" ನಮ್ಮ ಮನೆಯಲ್ಲಿ ಗಣಹೋಮ ಇತ್ತು. "  ಅಂದ್ಬಿಟ್ಟು ಹೇಮಕ್ಕ ಬಾಳೆಲೆ ತುಂಬ ಅವಲಕ್ಕಿ ಪ್ರಸಾದ ತಂದಿಟ್ಟಿದ್ರು.  ಅಷ್ಟದ್ರವ್ಯ ಎಂಬ ವಿಶೇಷಣದ ಇದನ್ನು ಅವಲಕ್ಕಿ ಕಲಸಿದ್ದು ಅನ್ನುವಂತಿಲ್ಲ,  ಅಷ್ಟದ್ರವ್ಯದಲ್ಲಿ ಬೆಲ್ಲ ತೆಂಗಿನಕಾಯಿ ಅವಲಕ್ಕಿ ಮಾತ್ರವಲ್ಲ, ಒಟ್ಟಾರೆಯಾಗಿ ಎಂಟು ವಿಧ ಫಲವಸ್ತುಗಳು ಇರುತ್ತವೆ,   ಅರಳು,  ಎಳ್ಳು ,  ತುಪ್ಪ, ಕಬ್ಬು, ಬಾಳೆಹಣ್ಣು ....

ಮನೆಯಲ್ಲಿ ಮಕ್ಕಳಿದ್ದಿದ್ರೆ ಕ್ಷಣ ಮಾತ್ರದಲ್ಲಿ ತಿಂದು ಮುಗಿಸ್ತಿದ್ರು,   ಈ ಅವಲಕ್ಕಿ ವೈವಿಧ್ಯಗಳನ್ನು ನಾವಿಬ್ಬರು ಎಷ್ಟು ತಿನ್ನಲಾದೀತು?

ಅದೂ ಅಲ್ಲದೆ ಸೆಕೆಗಾಲದ ಬಾಳೆಗೊನೆ ಕೂಡಾ ಹಣ್ಣಾಗಿ ಕಳಿತು,  ಕುಳಿತಿದೆ.   ಕೊಳೆತು ಹೋಗುವ ಮೊದಲೇ ಹಲ್ವ ಮಾಡಿ ತಿನ್ನಬೇಕಾಗಿದೆ.

ಎಂದಿನಂತೆ ಸಿಪ್ಪೆ ತೆಗೆದು ಹಣ್ಣಿನ ಒಳ್ಳೆಯ ಭಾಗ ಕಟ್ ಕಟ್ ಆಗಿ ಒಲೆಯ ಮೇಲೇರಿತು.  ದಪ್ಪ ಬಾಣಲೆಗೆ ಎಳ್ಳೆಣ್ಣೆ ಸವರಿ ಒಲೆಯ ಮೇಲಿಟ್ಟರೆ ಅಡಿ ಹಿಡಿಯುವುದಿಲ್ಲ (ತಳ ಹತ್ತುವುದಿಲ್ಲ).

ಚಿಕ್ಕ ಉರಿಯಲ್ಲಿ ಆಗಾಗ ಸೌಟಾಡಿಸುತ್ತಿದ್ದ ಹಾಗೆ ತುಪ್ಪ 2 - 3 ಚಮಚ ಬಿದ್ದಿತು.   ತುಪ್ಪದ ಸುವಾಸನೆಯೊಂದಿಗೆ ಬೆಂದ ಪರಿಮಳ ಬಂದಿತೇ,  ಹಣ್ಣಿನ ಗಾತ್ರದಷ್ಟೇ ಬೆಲ್ಲ ಪುಡಿಪುಡಿಯಾಗಿ ಬಾಣಲೆಗೆ ಇಳಿಯಿತು.

ಬೆಲ್ಲ ಕರಗಿ ಕರಗಿ ರಸಪಾಕವಾಗುತ್ತಿದ್ದಾಗ ತಲೆಯಲ್ಲಿ ಸೂಪರ್ ಐಡಿಯಾ ಬಂದಿತು,   ಮೂರು ಪ್ರತಿ ಅವಲಕ್ಕಿಗಳಿದ್ದುವಲ್ಲ,  ಒಂದು ಪ್ರತಿ ಹೇಗೋ ತಿಂದು ಮುಗಿಸಿದ್ದಾಗಿತ್ತು,  ಮತ್ತೊಂದು ಹಳಸಲು ಪರಿಮಳ ಬಂದಿದೆಯೆಂದು ಹೊರಗೆ ಹೋಗಿತ್ತು.  ಇನ್ನೊಂದು ಉಳಿದ ಅವಲಕ್ಕಿ ಪ್ರತಿ ಚೆನ್ನಾಗಿಯೇ ಇದ್ದಿತು.   ಅದನ್ನು ತಂದು ಬಾಂಡ್ಲಿಗೆ ಸುರುವಿ ಸೌಟಾಡಿಸುತ್ತಾ ಇದ್ದ ಹಾಗೆ ಗಟ್ಟಿಪಾಕ ಬಂದೇ ಬಿಟ್ಟಿತು!   ಸಂಜೆಯ ಚಹಾ ಜೊತೆ ತಿನ್ನಲು ಬೇಕಾದಷ್ಟಾಯಿತು....  ನಾಲ್ಕಾರು ದಿನ ಇಟ್ಟುಕೊಳ್ಳಲೂ ತೊಂದರೆಯಿಲ್ಲ.

ಹಾಗೇ ಸುಮ್ಮನೆ ತಿನ್ನಲು ಅವಲಕ್ಕಿ ಹಾಗೂ ಬಾಳೆಹಣ್ಣು ಸೊಗಸಾಗಿಯೇ ಇರುತ್ತದೆ,  ಈ ಸಂಯೋಜನೆಯ ರಸಪಾಕ ಕೂಡಾ ಚೆನ್ನಾಗಿ ಬಂದಿತ್ತು ಎಂದು ಬೇರೆ ಹೇಳಬೇಕಾಗಿಲ್ಲ.  ನನ್ನದಂತೂ ಹೊಸ ಪ್ರಯೋಗ,  ನೀವೂ ಮಾಡಿ ನೋಡಿ.  ಹ್ಞಾಂ,  ಸುಮ್ ಸುಮ್ಮನೇ ಅವಲಕ್ಕಿಗೆ ಬೆಲ್ಲ ಕಾಯಿತುರಿ ಹಾಕಿ ಕಲಸದಿರಿ.   ಒಂದು ಪಾವು ಅವಲಕ್ಕಿಯನ್ನು ಹುರಿದು ಪುಡಿ ಮಾಡ್ಬಿಟ್ಟು ಬಾಳೆಹಣ್ಣಿನ ಪಾಕಕ್ಕೆ ಸೇರಿಸಿ.  ದ್ರಾಕ್ಷಿ , ಗೋಡಂಬಿ, ಏಲಕ್ಕಿ ಹಾಕಿದ್ರೆ ಇನ್ನೂ ಚೆನ್ನ.                                       ಅಡಿಕೆ ತೋಟ ಇರುವಲ್ಲಿ ಬಾಳೆ ಇದ್ದೇ ಇರುತ್ತದೆ.   ಬಾಳೆಗೊನೆ ಹಣ್ಣಾಗಿ ದೊರೆತಾಗ ಇನ್ನಮ್ಮೆ ಕೇವಲ ಅವಲಕ್ಕಿ ಮಾತ್ರ ಉಪಯೋಗಿಸಿ ಮಾಡಿದ್ದೂ ಆಯ್ತು.
ಸಾಮಾನ್ಯ ಅಳತೆಯ ಪ್ರಮಾಣ ಹೀಗಿರಲಿ,

ಹತ್ತರಿಂದ ಹದಿನೈದು ಬಾಳೆಹಣ್ಣುಗಳು,   ತೆಳ್ಳಗೆ ಕತ್ತರಿಸಿ.
ದೊಡ್ಡ ಅಚ್ಚು ಬೆಲ್ಲ,  ಪುಡಿ ಮಾಡಿದ್ರಾ,  ಎರಡು ಲೋಟ ತುಂಬ ಇರಲಿ.
ಎರಡರಿಂದ ಮೂರು ಚಮಚ ಸುವಾಸನೆಯುಳ್ಳ ತುಪ್ಪ.
ಒಂದು ಲೋಟ ಅವಲಕ್ಕಿ,  ನಾನ್ ಸ್ಟಿಕ್ ತವಾದಲ್ಲಿ ಹುರಿದು, ಮಿಕ್ಸಿಯಲ್ಲಿ ಬೀಸಿದ್ದು.
ಮಾಡುವ ವಿಧಾನ:  ಪುನಃ ಮೊದಲು ಬರೆದಿದ್ದನ್ನು ಓದಿಕೊಳ್ಳುವುದು... 


                       


ಟಿಪ್ಪಣಿ:  ಸದಭಿರುಚಿಯ ಮಾಸಪತ್ರಿಕೆ  ' ಉತ್ಥಾನ ' ದಲ್ಲಿ ಪ್ರಕಟಿತ ಬರಹ.  ಸಪ್ಟಂಬರ್, 2016.


0 comments:

Post a Comment