Pages

Ads 468x60px

Friday, 14 April 2017

ಕಾಯಿಮುಂಙೆಯ ದೋಸೆ

                            

ಅಟ್ಟದಲ್ಲಿರುವ ತೆಂಗಿನಕಾಯಿಗಳು ವರ್ಷಕ್ಕೊಮ್ಮೆಯಾದರೂ ವಿಲೇವಾರಿಯಾಗಬೇಕಲ್ಲ,  ಆ ಪ್ರಯುಕ್ತ ಚೆನ್ನಪ್ಪ ಕಾಯಿಗಳನ್ನು ಸುಲಿಯುವ ಕಾಯಕದಲ್ಲಿ ನಿರತನಾಗಿದ್ದ.    " ಗೋಟುಕಾಯಿಗಳನ್ನು ಮಾರಾಟ ಮಾಡಿ ದುಡ್ಡು  ಎಷ್ಟು ಬಂತೂ.. " ಎಂದು ಇದುವರೆಗೆ ನಾನು ಕೇಳಿದ್ದೂ ಇಲ್ಲ,  ಇವರು ಹೇಳಿದ್ದೂ ಇಲ್ಲ.   ಅಡುಗೆಗೆ ತೆಂಗಿನಕಾಯಿ ಸುಲಿದು ಇಟ್ಟಿದ್ರೆ ಸಾಕು ಅನ್ನೋ ಜಾಯಮಾನ ನನ್ನದು.


ಕಾಯಿಗಳನ್ನು ಸುಲಿಯುತ್ತಿರುವ ಚೆನ್ನಪ್ಪನಿಗೆ ಅಕ್ಕಪಕ್ಕದ ಮನೆಯ ಮಕ್ಕಳು ಸ್ನೇಹಿತರು.  ಕಾಯಿ ಸುಲಿಯುವಾಗ ಸಿಗುವ ಮೊಳಕೆಕಾಯಿಗಳಿಗೆ ಈ ಮಕ್ಕಳು ಉಚಿತ ಗಿರಾಕಿಗಳು.  ತೆಂಗಿನಕಾಯಿ ಮೊಳಕೆ,  ಯಾ ಮುಂಙೆ ಆರೋಗ್ಯಕ್ಕೆ ಒಳ್ಳೆಯದು,  ಅದೂ ಬೆಳೆಯುವ ಮಕ್ಕಳಿಗೆ ಅತ್ಯುತ್ತಮ.  


" ಕಾಯಿಮುಂಙೆ ಒಳ್ಳೆಯದು "  ಅನ್ನುತ್ತ ನನಗೂ ಒಂದು ಮುಂಙೆ ಕೊಟ್ಟ. 

" ಹೌದು,  ಒಳ್ಳೆಯದಂತೆ.. " ನಾನೂ ತಿಂದೆ.


ಮಾರನೇ ದಿನ ಮುಂಜಾನೆ ಚಹಾ ಕುಡಿಯುತ್ತ ಚೆನ್ನಪ್ಪ ಅಂದ,  " ಅಕ್ಕ,  ಕಾಯಿಮುಂಙೆಯ ದೋಸೆ ಆಗುತ್ತಂತೆ.  "

" ಓ,  ಹೌದ.. "  ಇದು ನನಗೂ ಹೊಸ ವಿಷಯ,  " ನಮ್ಮ ದೋಸೆಗೆ ನಾಲ್ಕು ಮುಂಙೆ ಬೇಕಾದೀತು,  ಉಂಟಾ? "


" ಹ್ಞೂ,  ತೆಗೆದಿಡುತ್ತೇನೆ. "  ಸಂಜೆಯ ವೇಳೆಗೆ ತಪಲೆ ತುಂಬ ಮುಂಙೆಗಳು ಬಂದುವು.


ಏನೇ ಹೊಸತನದ ಅಡುಗೆ ಮಾಡುವಾಗ ಗಾಯತ್ರಿ ಬಳಿ ಹೇಳದಿದ್ದರೆ ಹೇಗೆ?  ಅವಳೂ ಹ್ಞೂಗುಟ್ಟಿದಳು.   " ನಂಗೆ ಅಷ್ಟೇನೂ ಮುಂಙೆ ಸಿಕ್ಕಿರಲಿಲ್ಲ,   ಒಂದೆರಡು ಸಾರಿ ಮಾಡಿದ್ದೇನೆ. "  ಅಂದಳು.


ಈಗ ನಮ್ಮ ಬಳಿ ಇರುವ ಮುಂಙೆಗಳು ಎರಡು ಅಥವಾ ಮೂರು ದಿನ ದೋಸೆ ಎರೆಯಲು ಸಾಕು.  ಒಂದು ದಿನ ಅಕ್ಕಿ ಹಾಗೂ  ಮುಂಙೆ,  ಮಾರನೇ ದಿನ  ಮುಂಙೆ ಉದ್ದಿನ ದೋಸೆ... ಹೀಗೆ ಪ್ಲಾನ್ ತಯಾರಿ ಆಯಿತು.

" ಹಾಗೇ ಮಾಡು,  ಹೇಗಾಯ್ತೂ ಅಂತಾನೂ ಹೇಳು,  ಫೋಟೋ ಕಳ್ಸು..."


2 ಪಾವು ಬೆಳ್ತಿಗೆ ಅಕ್ಕಿ  ಚೆನ್ನಾಗಿ ತೊಳೆದು ನಾಲ್ಕು ಗಂಟೆ ನೆನೆಸಿಡುವುದು,  ರಾತ್ರಿ ಮಲಗುವ ಮುನ್ನ ಅರೆಯುವುದು.


ತೆಂಗಿನ ಮುಂಙೆಯಲ್ಲಿ ನಿರುಪಯುಕ್ತ ಭಾಗ ಅಂತೇನೂ ಇಲ್ಲ,  ಕೈಯಲ್ಲೇ ಸಿಗಿದು ತುಂಡುಗಳನ್ನಾಗಿಸಿ,  ಮಲ್ಲಿಗೆಯಷ್ಟು ಮೃದುವಾದ ತಿರುಳನ್ನು ಅಕ್ಕಿಯೊಂದಿಗೆ ಅರೆಯಿರಿ.   ಹ್ಞಾ,  ಸುವಾಸನೆಗೆ ಒಂದು ಅಥವಾ ಎರಡು ಹಸಿಮೆಣಸನ್ನೂ ಅರೆಯುವಾಗ ಹಾಕಿರಿ.  ರುಚಿಗೆ ಉಪ್ಪು ಕೂಡಿ,  ಮುಚ್ಚಿಟ್ಟು ಮಲಗಿರಿ.


ಇದೇ ಮೊದಲ ಬಾರಿ ಕಾಯಿಮುಂಙೆಗಳನ್ನು ಅರೆದಿದ್ದು,  ಅರೆಯುವಾಗಲೇ ಉದ್ದಿನಹಿಟ್ಟಿನೋಪಾದಿಯಲ್ಲಿ ದಪ್ಪನಾದ ಹಿಟ್ಟು ಆಗಿತ್ತು.  ಇದನ್ನು ನಾಳೆ ಎರೆಯುವ ವಿಧಾನ ಹೇಗೆ?  ನೀರುದೋಸೆಯಂತೆ ಹಿಟ್ಟನ್ನು ತೆಳು ಮಾಡ್ಬಿಟ್ಟು ಎರೆದರೆ ಕಾವಲಿಯಿಂದ ಮೇಲೇಳುತ್ತದೋ ಇಲ್ಲವೋ.. ಹೀಗೆಲ್ಲ ಚಿಂತೆಗಳು.  ರಗಳೆ ಬೇಡ,  ಹಿಟ್ಟು ಇದ್ದಂತೆ ಎರೆದು ತಿನ್ನುವ ನಿಶ್ಚಯ ಮಾಡಿದ್ದಾಯಿತು.


ಈಗ ಚಳಿಯಲ್ವೇ,   ದೋಸೆಹಿಟ್ಟೇನೂ ಹುಳಿ ಬಂದಿರಲಿಲ್ಲ.   ದಪ್ಪ ಹಿಟ್ಟನ್ನು ನೀರೆರೆದು ತೆಳ್ಳಗೆ ಮಾಡಲು ಮನ ಒಗ್ಗಲಿಲ್ಲ.   ಹಾಗೇನೇ ದಪ್ಪ ಹಿಟ್ಟನ್ನು ಎರೆದು,  ಎರಡೂ ಬದಿ ಬೇಯಿಸಿ ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದೆವು.   ನಮ್ಮೆಜಮಾನ್ರೂ ದಪ್ಪ ದಪ್ಪ ದೋಸೆಯಾದರೂ ಏನೂ ಕಿರಿಕ್ ಅನ್ನದೆ ತಿಂದರು.


ಹತ್ತುಗಂಟೆಯ ಚಹಾ ಹೊತ್ತಿಗೆ ಇನ್ನೊಮ್ಮೆ ದೋಸೆ ಎರೆಯುವುದಿದೆ,  ಈಗ ದೋಸೆಹಿಟ್ಟು ತಳದಲ್ಲಿದೆ,  " ನೀರುದೋಸೆ ಆಗುತ್ತೋ ನೋಡೇ ಬಿಡೋಣ. "  ತುಸು ನೀರು ಎರೆದ್ಬಿಟ್ಟು ತೆಳ್ಳವು ಎಂಬ ಹೆಸರಿನ ಹಿಟ್ಟನ್ನು ಹಾರಿಸಿ ಎರೆಯುವ ದೋಸೆ ಸಿದ್ಧವಾಯಿತು.


" ಇದೇ ಚೆನ್ನ,  ದಪ್ಪ ದೋಸೆ ಸುಮ್ಮನೆ "  ಅಂದಿತು ಮನ.

ದೋಸೆಯ ಐಡಿಯಾ ಹೇಳಿಕೊಟ್ಟ ಚೆನ್ನಪ್ಪನೂ  " ತೆಳ್ಳವು ಲಾಯಕ್.. " ಅಂದ.


ಮುಂಙೆ ಉದ್ದಿನ ದೋಸೆ


2 ಪಾವು ಬೆಳ್ತಿಗೆ ಅಕ್ಕಿ

ಒಂದು ಹಿಡಿ ಉದ್ದು

ನಾಲ್ಕು ಮುಂಙೆ

ರುಚಿಗೆ ಉಪ್ಪು


ನೆನೆ ಹಾಕಿ,  ತೊಳೆದು,  ಹುದುಗು ಬರಲು ಮುಚ್ಚಿಟ್ಟು,  ಹ್ಞಾ,  ಸ್ವಲ್ಪ ಬೇಗನೆ ಅರೆಯಿರಿ,  ಚಳಿಗೆ ಹುದುಗು ಬರೋದು ನಿಧಾನ.


ಊಟದೊಂದಿಗೆ ಸಹ ವ್ಯಂಜನವಾಗಿಯೂ ಬಳಸಬಹುದಾದ ತೆಂಗಿನಕಾಯಿ ಮುಂಙೆಗಳು ಮಾರಾಟಕ್ಕೂ ಸಿಗುತ್ತವೆ.   ಕಾಸರಗೋಡಿನ ತೆಂಗು ಸಂಶೋಧನಾ ಕೇಂದ್ರದ ಕ್ಯಾಂಪಸ್ ರಸ್ತೆ ಪಕ್ಕ ಮಾರಾಟಕ್ಕೆ ಸಿದ್ಧವಾಗಿರುವ ತೆಂಗಿನ ಮೊಳಕೆಗಳು ಲಭ್ಯವಿರುತ್ತದೆ.


ಮನೆ ಹಿತ್ತಲಿನಲ್ಲಿ ತೆಂಗಿನ ಮರ ಇದೆ,  ಒಳ್ಳೆಯ ಗುಣಮಟ್ಟದ,  ಸುಲಿಯದ ಹಸಿ ತೆಂಗಿನಕಾಯಿಗಳನ್ನು ನೀರು ಹರಿದು ಹೋಗುವ,  ತೇವಾಂಶ ಸದಾಕಾಲವೂ ಇರುವ ಸ್ಥಳದಲ್ಲಿ ಇಟ್ಟು ಬಿಡಿ.   ಬಲು ನಿಧಾನ ಗತಿಯಲ್ಲಿ ಮೊಳಕೆ ಮೂಡುವುದನ್ನು ಕಾಣುವಿರಿ.   ಮೊಳಕೆ ಮೂಡಿದೊಡನೆ ತೆಗೆಯಬೇಕೆಂದೇನಿಲ್ಲ,  ಮೂರು ನಾಲ್ಕು ತಿಂಗಳು ಹಾಗೇ ಇಟ್ಟರೂ ಮುಂಙೆಯೇನೂ ಕೆಡದು.   ಮೊಳಕೆ ಕಟ್ಟುವ ಸಸ್ಯೋತ್ಪನ್ನಗಳಲ್ಲಿ ತೆಂಗಿನ ಮೊಳಕೆಯೇ ಗಾತ್ರದಲ್ಲಿ ದೊಡ್ಡದು.   ಅಗತ್ಯ ಬಂದಾಗ ಉಪಯೋಗಿಸಿ.


ಬೇಳೆಕಾಳುಗಳನ್ನು ಮೊಳಕೆ ಬರಿಸಿ ಕೋಸಂಬರಿ, ಸಲಾಡ್ ಮಾಡಿ ಅನ್ನದೊಂದಿಗೆ ಸಹ ವ್ಯಂಜನವಾಗಿ ಬಳಸುವ ವಾಡಿಕೆಯಿದೆ.   ಪುಟ್ಟ ಮಕ್ಕಳಿಗೆ ಉತ್ತಮ ಎಂದು ತಾಯಂದಿರು ತಿನ್ನಿಸಲು ಹರಸಾಹಸ ಪಡುತ್ತಾರೆ.  ಈ ಕಾಯಿಮುಂಙೆ ಅದರಂತಲ್ಲ, ಉಪ್ಪು ಹುಳಿ ಒಗ್ಗರಣೆ ಎಂದು ಒದ್ದಾಡಬೇಕಿಲ್ಲ,  ಮಗು ತಾನಾಗಿಯೇ ಇಷ್ಟಪಟ್ಟು ತಿನ್ನುವಂತಹುದಾಗಿದೆ.   ತೆಂಗಿನ ಮೊಳಕೆಯು ಹಾಗೇನೇ ತಿನ್ನಲು ರುಚಿಕರ,  ಒಂದು ಮುಂಙೆ ತಿಂದಾಗ ತೆಂಗಿನಕಾಯಿಯ ಎಲ್ಲ ಉತ್ಕೃಷ್ಟ ಗುಣ ವಿಶೇಷಗಳು ಲಭಿಸಿದಂತಾಯಿತು ಅಲ್ವೇ,  ಏನಂತೀರ? ಟಿಪ್ಪಣಿ:  ಇದು ಉತ್ಥಾನ ಮಾಸಪತ್ರಿಕೆಯ 2017 ರ ಮಾರ್ಚ್ ಸಂಚಿಕೆಯಲ್ಲಿ ಪ್ರಕಟಗೊಂಡಿರುವ ಬರಹವಾಗಿರುತ್ತದೆ.


0 comments:

Post a Comment