Pages

Ads 468x60px

Tuesday 6 June 2017

ಹಲಸಿನಕಾಯಿ ಸಾರು




               
                   


ಹಲಸಿನ ಸುಗ್ಗಿಯ ಕಾಲ,   " ಸೋಂಟೆ ಮಾಡೋಣ. "  ಅಂದಿದ್ದೇ ತಡ,  ತೋಟದಿಂದ ದೊಡ್ಡ ಗಾತ್ರದ ಹಲಸಿನಕಾಯಿ ಬಂದಿತು.


ಮಧ್ಯಾಹ್ನದ ಊಟಕ್ಕೆ ಒಂದು ಪಲ್ಯ ಆಯ್ತು.   ನಾಳೆ ಹಲಸಿನಕಾಯಿ ದೋಸೆ ಮಾಡುವ ದೂರಾಲೋಚನೆಯಿಂದ ಸಂಜೆಯ ಹೊತ್ತಿಗೆ ಪುನಃ ಉಳಿದ ಹಲಸಿನಕಾಯಿ ಸೊಳೆಗಳನ್ನು ಆಯ್ದು ತಪಲೆ ತುಂಬ ಇಟ್ಕೊಂಡಿದ್ದಾಯ್ತು.   ಮಳೆಗಾಲದ ಆರಂಭ ಅಲ್ವೇ,   ವಿದ್ಯುತ್ ಕಣ್ಣಾಮುಚ್ಚಾಲೆ ಆಟವೂ ಆರಂಭವಾಗಿ ಸಂಜೆ ಹೋದ ವಿದ್ಯುತ್ ಬೆಳಗಾದ್ರೂ ಬರಲೇ ಇಲ್ಲ.   ಆದ್ರೂ ನನ್ನ ಅಗತ್ಯಕ್ಕೆ ಬೇಕಾದ ಸೋಂಟೆಗಳು ತಯಾರಾದುವು.   ತಪಲೆಯಲ್ಲಿ ಉಳಿದ ಸೊಳೆಗಳನ್ನು ನಾಳೆ ತನಕ ಹಾಳಾಗದಂತೆ ಕಾಪಾಡಬೇಕಾಗಿದೆ.   ಸೊಳೆಗಳ ಮೇಲೆ ತುಸು ಉಪ್ಪು ಹರಡಿ ಮುಚ್ಚಿಟ್ಟರೂ ಆದೀತು,  ಉಪ್ಪು ಹಾಕದೆ ಒದ್ದೆ ಬಟ್ಟೆಯನ್ನು ಹೊದೆಸಿದರೂ ಆದೀತು.   ಕತ್ತಲೆಯ ರಾಜ್ಯದಲ್ಲಿ ಇನ್ನೇನೂ ಅಡುಗೆಯ ಆಟ ಆಟುವಂತಿಲ್ಲ,  ಒದ್ದೆ ವಸ್ತ್ರ ಮುಚ್ಚಿಟ್ಟು ಸುಮ್ಮನಾಗಬೇಕಾಯ್ತು.


ಮಾರನೇ ಹಗಲು ಪೂರ ಕರೆಂಟಿಲ್ಲ,   ಹಾಗಂತ ದೋಸೆಗಾಗಿ ತೆಗೆದಿರಿಸಿದ  ಹಲಸಿನ ಸೊಳೆ ಬಿಸಾಡುವುದೇ..  ಅದಾಗದು.   ಒಂದು ಸಾರು ಮಾಡೋಣ.   


ಹದಿನೈದರಿಂದ ಇಪ್ಪತ್ತು ಸೊಳೆಗಳನ್ನು ಒಂದೇಗಾತ್ರದಲ್ಲಿ ಕತ್ತರಿಸುವುದು.

ತೊಗರಿಬೇಳೆಯ ಬದಲು ನಾಲ್ಕು ಹಲಸಿನ ಬೇಳೆಗಳನ್ನು ಚಿಕ್ಕದಾಗಿ ಕತ್ತರಿಸಿ ಇಡುವುದು.

ಸಾರು ಅಂದ್ಮೇಲೆ ಟೊಮ್ಯಾಟೋ ಇಲ್ಲದಿದ್ದರೆ ನಡೆದೀತೇ,   ಮೂರು ಟೊಮ್ಯಾಟೋ ಕತ್ತರಿಸಿಕೊಳ್ಳುವುದು.

ಹಿತ್ತಲ ಬೆಳೆಯಾದ ಬಜ್ಜಿ ಮೆಣಸನ್ನು ವ್ಯರ್ಥ ಮಾಡದೆ ಖಾರ ಹಾಗೂ ಸುವಾಸನೆಗಾಗಿ ಎರಡು ಮೆಣಸು ಸಿಗಿದು ಇಡುವುದು.   ತದನಂತರ ತುಸು ನೀರು ಎರೆದು ರುಚಿಗೆ ತಕ್ಕಷ್ಟು ಉಪ್ಪು ಕೂಡಿ ಬೇಯಿಸುವುದು.   ಕುಕ್ಕರ್ ಗಿಕ್ಕರ್ ಏನೂ ಬೇಡ,   ಬೆಳೆದ ಹಲಸಿನ ಸೊಳೆ ಅತಿ ಶೀಘ್ರಗತಿಯಲ್ಲಿ ಬೇಯುವಂತಹುದು.   ಸಿಹಿ ಬೇಕಿದ್ದರೆ ಒಂದು ತುಂಡು ಬೆಲ್ಲ ಹಾಕಬಹುದು.  


ಬೆಂದಿತು.   ಕರಿಬೇವು,  ಬೆಳ್ಳುಳ್ಳಿ, ಸಾಸಿವೆ,  ಒಣಮೆಣಸು ಸಹಿತವಾದ ಒಗ್ಗರಣೆ ಕೊಡುವುದು.   ಇಲ್ಲಿಗೆ ಹಲಸಿನಕಾಯಿ ಸಾರು ಯಾ ಗೊಜ್ಜು ಸಿದ್ಧವಾಯಿತು.   ಖಾರ ಬೇಕಿದ್ದರೆ ಮೆಣಸಿನಹುಡಿ ಹಾಗೂ ಸಾರಿನಹುಡಿಗಳನ್ನು  ಹಾಕಬಹುದು.


ಸೊಳೆ ಹುಳಿಬೆಂದಿ ಎಂಬಂತಹ ಹಳೆಯ ಅಡುಗೆ ಇಲ್ಲಿ ಹಲಸಿನಕಾಯಿ ಸಾರು ಆಗ್ಬಿಟ್ಟಿದೆ,  ಕಾಲಕ್ಕೆ ತಕ್ಕಂತೆ ಕುಣಿಯಬೇಡವೇ...



0 comments:

Post a Comment