Pages

Ads 468x60px

Saturday 17 June 2017

ಜಿಲೇಬಿಯ ಕಲೆಗಾರಿಕೆ




                        


ಹೊಸ ವರ್ಷ ಬಂದಿದೆ,  ಹೊಸ ತಿನಿಸು ತಿನ್ನಬೇಕಿದೆ.   ಎಂದಿನಂತೆ ನಮ್ಮ ಮನೆಯಲ್ಲಿ ಶ್ರಾದ್ಧದ ಅಡುಗೆ ಡಿಸೆಂಬರ್ ಕೊನೆಯ ವಾರದಲ್ಲಿ,  ಕ್ರಿಸ್ಮಸ್ ಚಳಿಗೆ ಬಂದಿದೆ.   ರಜಾಸಮಯ,  ಮಕ್ಕಳೆಲ್ಲ ಮನೆಗೆ ಬಂದಿದ್ದಾರೆ. 


  "  ಈ ಬಾರಿ ಜಿಲೇಬಿ ಮಾಡ್ಸೋಣಾ.. "

" ಜಿಲೇಬಿಯಾ... ಮೈದಾ ಹಾಕಿ ಮಾಡೂದಲ್ವ,  ಎಣ್ಣೆಣ್ಣೆ... "

" ಅಕ್ಕಿ ಮತ್ತು ಉದ್ದು ಹಾಕಿದ ಜಿಲೇಬಿ ವಾರವಾದ್ರೂ ಗರಿಗರಿಯಾಗಿರುತ್ತವೆ ಗೊತ್ತಾ.. " ಎಂದಳು ನಮ್ಮಕ್ಕ.

" ಹಾಗಾದರೆ ಸರಿ. "

" ಅಡುಗೆಯ ಗಣಪಣ್ಣ ಸಂಜೆ ಬರುತ್ತಾನಂತೆ,  ಅಕ್ಕಿ, ಉದ್ದು ಈಗಲೇ ನೀರಿನಲ್ಲಿ ಹಾಕಿಟ್ಟಿರು. "

" ಯಾವುದು ಎಷ್ಟೆಷ್ಟು? "

" ಬೆಳ್ತಿಗೆ ಅಕ್ಕಿ ಒಂದೂವರೆ ಸೇರು,  ಉದ್ದು ಒಂದೂವರೆ ಪಾವು,  ಬೇರೆ ಬೇರೆ ನೆನೆಯಲಿಕ್ಕೆ ಹಾಕು ತಿಳೀತಾ. "


" ಹೌದೂ,  ಜಿಲೇಬಿ ಮಾಡಲಿಕ್ಕೆ ಅಕ್ಕಿ ಯಾಕೆ?  ಉದ್ದು ಯಾಕೆ?    ಮೈದಾಹಿಟ್ಟಿಗೆ ಮೊಸರು ಕಲಸಿ ಎಣ್ಣೆಗೆ ಬಿಟ್ರಾಯ್ತು,  ಸಕ್ಕರೆಪಾಕಕ್ಕೆ ಹಾಕಿದರಾಯ್ತು ಅಷ್ಟೇ,  ಅಂತೀರಾ.. 


" ಉಹ್ಞು,  ಇದು ನಮ್ಮ ಸಂಪ್ರದಾಯದ ಜಿಲೇಬಿ ಕಣ್ರೀ...  ಓಬೀರಾಯನ ಕಾಲದಿಂದಲೇ ಜಿಲೇಬಿ ಇತ್ತು ತಾನೇ,  ಆವಾಗ ಮೈದಾಹಿಟ್ಟು ಎಲ್ಲಿತ್ತೂ?  ಅಕ್ಕಿ ಬೇಳೆಯಂತಹ ದವಸಧಾನ್ಯಗಳೇ ತಿಂಡಿ ತಯಾರಿಕೆಯ ಮೂಲದ್ರವ್ಯಗಳು.  ಅರೆಯುವುದು ಅಥವಾ ಬೀಸುವುದು ಇದೇ ಅಂದಿನ ಮಹಿಳೆಯರ ದಿನಚರಿಯಾಗಿತ್ತು ಎಂಬುದನ್ನು ಮರೆಯದಿರೋಣ.  ಈಗ ಏನಿದ್ರೂ ದಿಢೀರೆಂದು ಅಡುಗೆ ಮಾಡಬಹುದಾದ ತರಹೇವಾರಿ ಹುಡಿಗಳು, ಮಿಶ್ರಣಗಳು,  ಹಿಟ್ಟುಗಳು ಮಾರುಕಟ್ಟೆಯಲ್ಲಿವೆ.   ಜಿಲೇಬಿ ಮಿಕ್ಸ್ ಕೂಡಾ ಸಿಗುತ್ತದೆ,  ಬೇಕರಿಗೆ ಹೋದ್ರೆ ತಿನ್ನಲು ಸಿದ್ಧವಾದ ಜಿಲೇಬಿಗಳನ್ನು ಕೊಂಡು ತಂದರಾಯಿತು.   ಇದರ ಹೂರಣ ಕೇವಲ ಅನಾರೋಗ್ಯಕರವಾದ ಮೈದಾ ಹಿಟ್ಟು ಎಂದು ತಿಳಿದಿರಲಿ.


ಅಕ್ಕಿಬೇಳೆಗಳ ಅಳತೆ ತಿಳಿಯಿತು.  ಸಂಜೆಯ ಚಹಾ ಜೊತೆ ಮಾಡಿ ತಿನ್ನೋಣಾ ಅಂದ್ರೆ ಒಂದೂವರೆ ಸೇರು ಅಂದ್ರೆ ಬರೋಬ್ಬರಿ ಒಂದೂವರೆ ಕಿಲೋ ಅಕ್ಕಿಯ ಅಳತೆ ಕಟ್ಕೊಂಡು ಏನ್ಮಾಡ್ಲಿ...  ಈ ಚಿಂತೆ ನನ್ನನ್ನೂ ಕಾಡಿತು.   ಇದಕ್ಕೆ ಪರಿಹಾರವೂ  ಅಡುಗೆ ಗಣಪಣ್ಣನ ಮೂಲಕ ದೊರೆಯಿತು.


ಒಂದು ಪಾವು ಬೆಳ್ತಿಗೆ ಯಾ ದೋಸೆ ಅಕ್ಕಿ

ಒಂದು ಹಿಡಿ ಉದ್ದು


ನೀರಿನಲ್ಲಿ ಚೆನ್ನಾಗಿ ನೆನೆದ ನಂತರ ತೊಳೆದು ನುಣ್ಣಗೆ ಅರೆಯಿರಿ.   ಇಡ್ಲಿ ಹಿಟ್ಟಿನ ಸಾಂದ್ರತೆ ಇರಬೇಕು.   ರುಚಿಗೆ ತಕ್ಕ ಉಪ್ಪು ಕೂಡಿಸಿ ಎಂಟು ಗಂಟೆಗಳ ಕಾಲ ಮುಚ್ಚಿ ಇಡುವುದು.  ನಾವು ಮಾಮೂಲಿಯಾಗಿ ಉದ್ದಿನ ದೋಸೆ ಹಿಟ್ಟನ್ನು ಹುದುಗು ಬರಲು ಇಡ್ತೀವಲ್ಲ,  ಅದೇ ಥರ.   ಸೋಡಾ ಹುಡಿ,  ಬೇಕಿಂಗ್ ಪೌಡರುಗಳ ಅವಶ್ಯಕತೆಯೇ ಇಲ್ಲಿಲ್ಲ.


ಮೊದಲನೆಯದಾಗಿ ಸಕ್ಕರೆಪಾಕ ಆಗಬೇಕಿದೆ.   ಒಂದು ಪಾವು ಸಕ್ಕರೆಗೆ ಮುಳುಗುವಷ್ಟು ನೀರೆರೆದು ಜೇನುಪಾಕ ಬರುವ ತನಕ ಕುದಿಸಿ.


ಜಿಲೇಬಿ ಬೇಯಿಸುವ ಬಾಣಲೆ ಹೇಗಿರಬೇಕು?

ದಪ್ಪ ತಳದ ಸಪಾಟಾದ ತಟ್ಟೆ ಆಗಬೇಕಿದೆ.  ಕಟ್ಟಿಗೆಯ ಒಲೆಯಲ್ಲಿ ಜಿಲೇಬಿ ಬೇಯಿಸಲು  ಕಂಚಿನ ತಟ್ಟೆ ಬಳಸುತ್ತಿದ್ದರು,  ಹಿತ್ತಾಳೆಯ ಹರಿವಾಣವನ್ನೂ ಬಳಸುತ್ತಿದ್ದುದನ್ನು ಕಂಡಿದ್ದೇನೆ.  ಈಗಿನ ಕಾಲಕ್ಕೆ ನಾನ್ ಸ್ಟಿಕ್ ಬಾಣಲೆ ಸೂಕ್ತ.   ಪ್ರೆಷರ್ ಪ್ಯಾನ್ ಕೂಡಾ ಆದೀತು.   ಜಿಲೇಬಿಗೆಂದೇ ಕಬ್ಬಿಣದ ಬಾಣಲೆಗಳು ಮಾರುಕಟ್ಟೆಯಲ್ಲಿ ದೊರಕುತ್ತವೆ.


ಜಿಲೇಬಿಯನ್ನು ಎಣ್ಣೆಗೆ ಇಳಿಸುವುದು ಹೇಗೆ?


 ಕರಾವಳಿ ಕಡೆಯವರು ತೆಂಗಿನ ಗೆರಟೆಗೆ ತೂತು ಕೊರೆದು,  ಹಿಟ್ಟನ್ನು ಗೆರಟೆಯಲ್ಲಿ ತುಂಬಿಸಿ ಕಾದ ಎಣ್ಣೆಗೆ ವೃತ್ತಾಕೃತಿಯಲ್ಲಿ ಇಳಿಸುವ ಪದ್ಧತಿ,  ಹಿಟ್ಟು ಅಗತ್ಯವಿದ್ದಷ್ಟೇ ಇಳಿಯುವಂತೆ ಕೈ ಬೆರಳಿನಿಂದ ಗೆರಟೆಯ ತೂತನ್ನು ಮುಚ್ಚಲಾಗುತ್ತದೆ.  ಇದಕ್ಕೂ ಸೂಕ್ಷ್ಮ ಪರಿಣತಿ ಬೇಕು.  ಜಿಲೇಬಿಯನ್ನು ವೃತ್ತಾಕಾರದಲ್ಲಿ ಎಣ್ಣೆಗೆ ಇಳಿಸುವುದೂ ಒಂದು ಕಲೆಗಾರಿಕೆ.   ಇಷ್ಟಪಟ್ಟು ಅಭ್ಯಾಸ ಮಾಡಿದರೆ ಮಾತ್ರ ಜಿಲೇಬಿಯ ರೂಪ ಬಂದೀತು.  ಹಾಗೆಂದೇ ಜಿಲೇಬಿ ತಯಾರಿಯು ಒಂದು ಕಲೆ.  ಈಗ ತೆಂಗಿನ ಗೆರಟೆ ಮೂಲೆಗುಂಪಾಗಿದೆ,  ಪ್ಲಾಸ್ಟಿಕ್ ಬಾಟಲ್,  ಮಕ್ಕಳು ಸ್ಕೂಲಿಗೆ ಹೋಗುವಾಗ ಒಯ್ಯುವ ನೀರಿನ ಬಾಟಲ್ ಕೂಡಾ ಸಾಕು.   ಮಾರುಕಟ್ಟೆಯಲ್ಲಿ ಜಿಲೇಬಿ ಮೇಕರ್ ಎಂಬ ಸಾಧನವೂ ಸಿಗುತ್ತದೆ.


 ಎಣ್ಣೆಯಲ್ಲಿ ಗರಿಗರಿಯಾಗಿ ಕಾದ ಜಿಲೇಬಿಯನ್ನು ಸಕ್ಕರೆಪಾಕಕ್ಕೆ ಹಾಕಿಟ್ಟು,  ಇನ್ನೊಂದು ತಟ್ಟೆಗೆ ವರ್ಗಾಯಿಸುತ್ತ,  ಅದೇ ಹೊತ್ತಿಗೆ ಜಿಲೇಬಿ ಎರೆಯುತ್ತ,  ಬಾಣಲೆಯಿಂದ ತೆಗೆಯುತ್ತ,  ಸಕ್ಕೆಪಾಕದಲ್ಲಿ ಮುಳುಗಿಸಿ ತೆಗೆಯುವ ಗಣಪಣ್ಣನ ಕೈಚಳಕಕ್ಕೆ ನಮ್ಮದೊಂದು ಸಲಾಂ.


ವಾರವಾದರೂ ಮೆತ್ತಗಾಗದ ಜಿಲೇಬಿ ಇದಾಗಿದೆ.   ಮುಂಜಾನೆ ಹೊತ್ತು ದೋಸೆ ಇಡ್ಲಿಗಳಂತೆ ಮೆಲ್ಲಲು ಅಡ್ಡಿಯಿಲ್ಲ.  ದೇಹಾರೋಗ್ಯಕ್ಕೆ ಬಾಧಕವೇನೂ ಇಲ್ಲದ ಈ ಜಿಲೇಬಿಗಳನ್ನು ಪ್ಯಾಕ್ ಮಾಡಿ ಮಗಳು ಬೆಂಗಳೂರಿಗೂ ಒಯ್ದಳು.



                     





ಟಿಪ್ಪಣಿ:  2017, ಮೇ ತಿಂಗಳ ಉತ್ಥಾನ ಮಾಸಪತ್ರಿಕೆಯಲ್ಲಿ ಪ್ರಕಟಿತ ಬರಹ.



0 comments:

Post a Comment