Pages

Ads 468x60px

Sunday 10 December 2017

ಉಪ್ಪು ಸೊಳೆ ಸಾಂಬಾರ್



ನೀರುಳ್ಳಿ, ಹಸಿಮೆಣಸು, ಶುಂಠಿ, ಟೊಮ್ಯಾಟೋ ಬಿಟ್ರೆ ಬೇರೇನೂ ಇರಲಿಲ್ಲ, ನಿನ್ನೆಯೂ ನೀರುಳ್ಳಿ ಸಾಂಬಾರ್, ಇವತ್ತೂ ಅದೇನಾ…. ಅಡುಗೆ ಮಾಡುವವರಿಗೂ ಉಮೇದು ಬರಬೇಡವೇ?

ಮೂಲೆಯಲ್ಲಿಟ್ಟಿದ್ದ ಉಪ್ಪು ಸೊಳೆಯ ಜಾಡಿ ನಕ್ಕು ಬಿಟ್ಟಿತು!

ಹೌದಲ್ಲವೇ, ಜಾಡಿಯಿಂದ ಎರಡು ಹಿಡಿ ಸೊಳೆಗಳನ್ನು ತೆಗೆದು ನೀರಿನಲ್ಲಿ ಹಾಕಲಾಯಿತು. ಆಟಿ ತಿಂಗಳಲ್ಲಿ ಒಮ್ಮೆ ಹೇಮಕ್ಕ ಬಂದು, “ ನನಗೊಂದು ಸ್ವಲ್ಪ ಉಪ್ಪು ಸೊಳೆ ಕೊಡ್ರೀ… “ ಅಂದಾಗ ಜಾಡಿ ಬಿಡಿಸಿ ಕೊಟ್ಟಿದ್ದಲ್ಲದೆ ನಾನು ಇದುವರೆಗೆ ಅಡುಗೆ ಮಾಡಿದ್ದಿಲ್ಲ, ಇನ್ನೇನು ಹೊಸ ಹಲಸಿನ ಗುಜ್ಜೆಗಳು ಬರಲಿಕ್ಕಾಯಿತು, ಇದನ್ನು ಹೇಗಾದರೂ ಮುಗಿಸಬೇಕು.

ನೀರಿನಲ್ಲಿ ತೊಳೆದ ಉಪ್ಪು ಸೊಳೆ ಉಪ್ಪು ಬಿಟ್ಕೊಂಡು ಮಡಿ ಮಡಿಯಾಗಿ, ಉದ್ದಕ್ಕೂ ಅಡ್ಡಕ್ಕೂ ತುಂಡರಿಸಲ್ಪಟ್ಟು ಕುಕ್ಕರಿನಲ್ಲಿ ತುಂಬಿಕೊಂಡಿತು.

2 ನೀರುಳ್ಳಿ, 3 ಟೊಮ್ಯಾಟೋ, 2 ಹಸಿಮೆಣಸೂ ಜೊತೆಗೂಡಿ ಬೆಂದುವು. ಒಂದು ಸೀಟಿ ಸಾಕು. ಉಪ್ಪು ಸೊಳೆಗೆ ಕುಕ್ಕರ್ ಬೇಕೆಂದೇನೂ ಇಲ್ಲ. ತುಸು ಮೆತ್ತಗಿರುವ ಸೊಳೆ ಒಂದು ಕುದಿ ಬಂದೊಡನೆ ಬೆಂದಿರುತ್ತದೆ. ಅಂತಹ ಸೊಳೆಗಳು ರೊಟ್ಟಿ, ಉಂಡ್ಳಕಾಳು ತಯಾರಿಕೆಗೆ ಯೋಗ್ಯವಾಗಿರುತ್ತವೆ. ನನ್ನ ಉಪ್ಪು ಸೊಳೆಯ ಸಂಗ್ರಹ ಸ್ವಲ್ಪವೂ ಮೆತ್ತಗಾಗಿಲ್ಲ, ಗಟ್ಟಿ ಸೊಳೆಗಳು.

ಇದಕ್ಕೆ ನಾನು ಸಾಂಬಾರು ಎಂದು ಹೆಸರು ನೀಡಿದರೂ ತೊಗರಿಬೇಳೆ ಹಾಕಿಲ್ಲ. ಬೆಂದಂತಹ ಹಲಸಿನ ಸೊಳೆ ದಪ್ಪ ರಸ ಪದಾರ್ಥವೇ ಆಗಿರುತ್ತದೆ. ಯಾಕೆ ಸುಮ್ಮನೇ ತೊಗರಿಬೇಳೆ ಹಾಕಲಿ?

ಅರ್ಧ ಕಡಿ ತೆಂಗಿನ ತುರಿ
4 ಒಣಮೆಣಸು
2 ಚಮಚ ಕೊತ್ತಂಬರಿ
1 ಚಮಚ ಜೀರಿಗೆ
ತುಸು ಎಣ್ಣೆಪಸೆಯಲ್ಲಿ ಮೇಲಿನ ಮಸಾಲೆಗಳನ್ನು ಹುರಿದು,
ತೆಂಗಿನ ತುರಿಯೊಂದಿಗೆ ಅರೆದು,
ಬೇಯಿಸಿದ ತರಕಾರಿಗಳಿಗೆ ಕೂಡಿಸಿ,
ಅವಶ್ಯವಿದ್ದಂತೆ ನೀರು ಎರೆದು,
ರುಚಿಗೆ ಹಿತವಾಗುವಂತೆ ಬೆಲ್ಲ ಇರಲಿ,
ಉಪ್ಪು ಬೇಕಿದ್ದರೆ ಮಾತ್ರ,
ಕುದಿಸಿ,
ಬೆಳ್ಳುಳ್ಳಿ ಹಾಗೂ ಕರಿಬೇವು ಒಗ್ಗರಣೆ ಕಡ್ಡಾಯ.
ಸಾಂಬಾರು ಯಾ ಸಾರು ಆಯ್ತು ಅನ್ನಿ.






0 comments:

Post a Comment