Pages

Ads 468x60px

Sunday 17 December 2017

ಬಾಳೆಹಣ್ಜಿನ ಗೊಜ್ಜು




ಬಾಳೆಗೊನೆ ಹಣ್ಣಾಗುವ ಲಕ್ಷಣ ಕಾಣುತ್ತಿಲ್ಲ, ತೋಟದಿಂದ ಬರುವಾಗಲೇ ಬೆಳೆದು ಪಕ್ವವಾದ ಬಾಳೆಗೊನೆ, ದಿನ ಹದಿನೈದಾಯ್ತು... ಕೆಲವೊಮ್ಮೆ ನಮಗೆ ಗೋಚರವಾಗದೆ ಕೊಳೆತು ಹೋಗುವುದಿದೆ. ಏನೇ ಆಗಲಿ, ಅಗತ್ಯದ ಪರಿಕರಗಳನ್ನು ಮೆಟ್ಟುಕತ್ತಿ ಎದುರಿಗಿಟ್ಟು ಬಾಳೆಗೊನೆ ಅಡುಗೆಮನೆಯ ಲ್ಯಾಬೋರೇಟರಿಯಲ್ಲಿ ಡಿಸೆಕ್ಷನ್ ಮಾಡಲ್ಪಟ್ಟಿತು. ಕೊಳೆತೂ ಇಲ್ಲ, ಹಣ್ಣೂ ಆಗಿಲ್ಲ. ಕೆಲವು ಕಾಯಿಗಳು ಬೆಳೆದದ್ದು ಜಾಸ್ತಿಯಾಗಿ ಬಿರಿದಿವೆ. ಇಂತಹ ಕಾಯಿಗಳನ್ನು ಮಾರಾಟ ಮಾಡುವಾಗಲೂ ತೆಗೆದಿಟ್ಟೇ ಕೊಡಬೇಕು, ಅದಕ್ಕೆ ಬೆಲೆಯಿಲ್ಲ. ಈ ಅರೆಗಾಯಿ ನನ್ನ ಮಾಮೂಲಿ ಬಾಳೆಹಣ್ಣು ಹಲ್ವಾ ಕಾಯಿಸುವ ಯೋಗ್ಯತೆ ಪಡೆದಿಲ್ಲ. ಆದರೂ ನಾಲ್ಕಾರು ಅರೆಗಾಯಿ ಯಾ ಅರೆಹಣ್ಣುಗಳನ್ನು ಸುಲಿದು ಹೆಚ್ಚಿಟ್ಟು ಆಯ್ತು.

“ ಏನು ಮಾಡುವ ಅಂದಾಜೂ... “
“ ಬಟಾಟೆ ಗೊಜ್ಜು ಮಾಡ್ತೀವಲ್ಲ, ಅದೇ ಥರ ಮಾಡೋಣ, ಸಿಹಿ ಹುಳಿ ರುಚಿ ಕೂಡಿ ಚೆನ್ನಾಗಿದ್ದೀತು ನೋಡೋಣ, ಊಟದ ತಟ್ಟೆ ತುಂಬ ಬಡಿಸಲು ಒಂದು ವ್ಯಂಜನವೂ ಆಯ್ತು. “

ಹೆಚ್ಚಿಟ್ಟ ಹೋಳುಗಳನ್ನು ರುಚಿಗೆ ಬೇಕಾದ ಉಪ್ಪು ಹಾಕಿ ಬೇಯಿಸಿ, ಅರೆಹಣ್ಣಲ್ಲವೇ, ಬೇಗನೆ ಬೇಯುವ ವಸ್ತು.
ಬೆಂದ ನಂತರ ನೀರು ಬಸಿದು, ತುಸು ನುರಿದು, ಒಂದು ಲೋಟ ಮೊಸರು ಅಥವಾ ದಪ್ಪ ಮಜ್ಜಿಗೆ ಎರೆದು ಒಗ್ಗರಣೆ ಕೊಡುವಲ್ಲಿಗೆ ಬಾಳೆಹಣ್ಣಿನ ಮೊಸರುಗೊಜ್ಜು ಸಿದ್ಧವಾಗಿದೆ. ರುಚಿಕರವಾಗಲು ಚಿಕ್ಕ ಮಾವಿನಶುಂಠಿ ಚೂರುಚೂರಾಗಿ ಬಿದ್ದಿತು. ಹಸಿಮೆಣಸನ್ನೂ ಹಾಕಬಹುದು.



ತರಕಾರಿ ಗೊಜ್ಜು
ಮನೆಹಿತ್ತಲ ತರಕಾರಿ ಬೆಳೆಗಳ ಮೇಲೆ ಕಣ್ಣಾಡಿಸುತ್ತ ಬಂದಾಗ ಈ ದಿನ ಮೂರು ತೊಂಡೆಕಾಯಿಗಳೂ, ಎರಡು ಅಲಸಂದೆಯೂ ಕೊಯ್ಯಲು ಸಿಕ್ಕಿತು. ಕೊಯ್ದು ಇಟ್ಟು, ದಿನವೆರಡು ಕಳೆದಾಗ ಆಚೆ ಎಸೆಯುವುದು ಅಂತೀರಾ, ಛೇ, ಅದಾಗುವಂತಿಲ್ಲ.  

 ನಮ್ಮ ಹಿತ್ತಲ ತಾಜಾ ತರಕಾರಿಯಲ್ವೇ, ಅಲಸಂದೆ ಹಾಗೂ ತೊಂಡೆಕಾಯಿಗಳನ್ನು ಚಿಕ್ಕದಾಗಿ ಹೆಚ್ಚಿಟ್ಟು, ಸ್ವಲ್ಪ ನೀರು ಎರೆದು, ಉಪ್ಪು ಸಹಿತವಾಗಿ ಬೇಯಿಸಿ.

ಬೆಂದ ತರಕಾರಿ, ಚೆನ್ನಾಗಿ ಆರಿದ ನಂತರ ಎರಡು ಸೌಟು ಮೊಸರು ಎರೆದು, ಒಂದು ಗಾಂಧಾರಿ ನುರಿದು ಇಡುವಲ್ಲಿಗೆ ಇಂದಿನ ನಮ್ಮ ಭೋಜನಕ್ಕೆ ದೊರೆಯಿತು ರುಚಿಕರವಾದ ಒಂದು ಸಹವ್ಯಂಜನ.




0 comments:

Post a Comment