Pages

Ads 468x60px

Wednesday, 25 July 2012

ಮುಂಜಾನೆಗೊಂದು ತಿಂಡಿ

ಆಹಾ...ಪಚ್ಚೆ ಹಸ್ರು ದೋಸೆ , ತಿನ್ನಲು ರೆಡೀ....:).
ಅಕ್ಕಿ ಹಾಗೂ ಹಸರುಕಾಳನ್ನು. 2 : 1 ಪ್ರಮಾಣದಲ್ಲಿ ನುಣ್ಣಗೆ ಕಡೆದರಾಯಿತು . ಹಿಟ್ಟನ್ನು ಬೇಕಾದಷ್ಟು ತೆಳ್ಳಗೆ ಮಾಡಿ ಝೊಂಯ್ ಎಂದು ಎರೆದರಾಯಿತು . ಹುಳಿ ಬರಿಸಬೇಕಾಗಿಲ್ಲ . ಇದು ದಿಢೀರನೆ ಮಾಡುವಂಥಾದ್ದು . ಬೇಕಿದ್ದಲ್ಲಿ ಹಿತಮಿತವಾಗಿ ಶುಂಠಿ , ಹಸಿಮೆಣಸು ಸೇರಿಸಿ . ಚೆನ್ನಾಗಿರುತ್ತದೆ .

ಹಲಸಿನ ಹಣ್ಣಿನ ದೋಸೆ :
ಈಗ ಹಲಸಿನ ಸೀಸನ್, ಇವತ್ತು ನಮ್ಮನೇಲಿ ಇದೇ ದೋಸೆ ಮಾಡಿದ್ದು . 10 -15 ಹಣ್ಣಿನ ಎಸಳುಗಳು ಇದ್ದರೆ ಸಾಕು . ಮಿಕ್ಸೀಯಲ್ಲಿ ಮುದ್ಧೆ ಮಾಡಿಟ್ಟುಕೊಳ್ಳಿ . 2 ಕಪ್ ಅಕ್ಕಿ ಸಣ್ಣ ಕಡೆದು ಹಣ್ಣಿನ ಮುದ್ದೆಯನ್ನು ಸೇರಿಸಿ ಇನ್ನಷ್ಟು ನುಣ್ಣಗೆ ಮಾಡಿಕೊಳ್ಳಿ .ರುಚಿಗೆ ಉಪ್ಪು ಸೇರಿಸಿ , ದೋಸೆ ಎರೆಯಿರಿ . ಘಮಘಮ ಸುವಾಸನೆಗೆ ಮನೆ ಮಂದಿಯೆಲ್ಲ ಅಡುಗೆಮನೆಗೆ ಓಡಿ ಬರೋದು ಗ್ಯಾರಂಟಿ ! ಹಿಟ್ಟು ನೀರಾಗದಿರಲಿ . ತಳ್ಳಗೆ ಪೇಪರ್ ದೊಸೆ ತಯಾರಿಸೋದ್ರಲ್ಲಿ ನಿಮ್ಮ ಕೈಚಳಕವೇ ಮುಖ್ಯ . ಕಾಯ್ ಚಟ್ನಿಯೊಂದಿಗೆ ಸವಿಯಿರಿ .

1ಕಪ್ ಮೊಸರಿನೊಂದಿಗೆ 2 ಕಪ್ ಅಕ್ಕಿಯನ್ನು ನುಣ್ಣಗೆ ಅರೆಯಿರಿ , 1 ಸೌಟು ಅನ್ನ ಸೇರಿಸಿ ಪುನಃ ಅರೆದು , ಹಿಟ್ಟನ್ನು ದೂಡ್ಡ ಪಾತ್ರೆಗೆ ವರ್ಗಾಯಿಸಿ . 8 ಗಂಟೆಗಳ ಕಾಲ ಮುಚ್ಚಿಡಿ . ಹುಳಿ ಬಂದ ಹಿಟ್ಟು ಪಾತ್ರೆಯ ಮೇಲೆವರೆಗೆ ಬಂದಿರುತ್ತದೆ . 1 ಕಪ್ ಹಸಿ ತೆಂಗಿನಕಾಯಿ ತುರಿಯನ್ನು ರುಚಿಗೆ ಉಪ್ಪು ಸೇರಿಸಿ ಚಟ್ನಿ ಥರ ಅರೆದು ದೋಸೆ ಹಿಟ್ಟಿಗೆ ಸೇರಿಸಿ . ಕಾವಲಿಯಲ್ಲಿ ದೋಸೆ ಎರೆಯಿರಿ . ಎರೆಯುತ್ತದ್ದಂತೆ ಉಬ್ಬಿ ಉಬ್ಬಿ ಬರುತ್ತದೆ . ಒಂದು ಬದಿ ಬೆಂದರೆ ಸಾಕು , ಕವುಚಿ ಹಾಕುವ ಅಗತ್ಯವಿಲ್ಲ . ಇದು ಕೇರಳೀಯರ ಸಾಪ್ರದಾಯಿಕ ಶೈಲಿಯ ದೋಸೆ , ಅಪ್ಪಂ ಅಥವಾ ಪಾಲಪ್ಪಂ ಎಂಬ ಹೆಸರೂ ಈ ನಳಪಾಕ ವಿಧಾನಕ್ಕೆ ಇದೆ . ...


2 ಕಪ್ ಅಕ್ಕಿ ನುಣ್ಣಗೆ ಅರೆದು 1ಕಪ್ ಸಣ್ಣ ಸಜ್ಜಿಗೆ ಸೇರಿಸಿ , ಉಪ್ಪು ರುಚಿಗೆ ತಕ್ಕಷ್ಟು ಸೇರಿಸಿ , ಅವಶ್ಯವಿದ್ದಷ್ಟು ನೀರು ಸೇರಿಸಿ ಝೊಂಯ್ಯನೆ ಎರೆಯಿರಿ . ರವಾ ದೋಸೆ ಸಿದ್ಧ . ಕಾಯ್ ಚಟ್ನಿಯೊಂದಿಗೆ ಸವಿಯಿರಿ .

2 ಕಪ್ ಬೆಳ್ತಿಗೆ ಅಕ್ಕಿ ನುಣ್ಣಗೆ ಕಡೆದು ರುಚಿಗೆ ಉಪ್ಪು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ತನ್ನಿ . ರುಚಿಗೆ ಉಪ್ಪು ಸೇರಿಸಿ ದಪ್ಪ ತಳದ ಬಾಣಲೆಯಲ್ಲಿ ಹದಾ ಉರಿಯಲ್ಲಿ ಕಾಯಿಸಿ. ತಳ ಹಿಡಿಯದಂತೆ ಸೌಟಿನಲ್ಲಿ ಕೈಯಾಡಿಸುತ್ತಿರಿ . ಉಂಡೆ ಕಟ್ಟುವ ಹದಕ್ಕೆ ಬಂದೊಡನೆ ಕೆಳಗಿಳಿಸಿ . ಸ್ವಲ್ಪ ಆರಿದ ನಂತರ ಒಂದೇ ಗಾತ್ರದ ಊಂಡೆಗಳನ್ನು ತಯಾರಿಸಿ ಹಬೆ ಪಾತ್ರೆಯಲ್ಲಿ ಬೇಯಿಸಿ. ಬೆಂದ ಉಂಡೆಗಳನ್ನು ಒತ್ತು ಶಾವಿಗೆ ಒರಲಿನಲ್ಲಿ ಒತ್ತಿ ತಗೆದಿಟ್ಟುಕೊಳ್ಳಿ . ಇದರಿಂದ ಉಪ್ಪಿಟ್ಟು ನಿಮಗೆ ಬೇಕಾದ ವಿಧಾನದಲ್ಲಿ ತಯಾರಿಸಬಹುದು . ಮಾಡಿಟ್ಟ ಶಾವಿಗೆ ಹೆಚ್ಚಾಯಿತೇ ? ಚಿಂತೆಯಿಲ್ಲ , ಬೇಕಾದ ವಿನ್ಯಾಸದಲ್ಲಿ ಕತ್ತರಿಸಿ ಬಿಸಿಲಿಗೆ ಒಣಗಿಸಿ ಡಬ್ಬದಲ್ಲಿ ತುಂಬಿಸಿ . ಬೇಕಾದಾಗ ಸಂಡಿಗೆಯಂತೆ ಕರಿಯಿರಿ . ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ .ಒತ್ತು ಶಾವಿಗೆಯೊಂದಿಗೆ ಬಾಳೇಹಣ್ಣಿನ ರಸಾಯನ ಇರಲೇ ಬೇಕು.
ದಪ್ಪ ತೆಂಗಿನಕಾಯಿ ಹಾಲು ಮಾಡಿ.
ಬಾಳೇಹಣ್ಣು ಚಿಕ್ಕದಾಗಿ ಕತ್ತರಿಸಿಡಿ.
ಬೆಲ್ಲ ಪುಡಿ ಮಾಡಿ ಸ್ವಲ್ಪ ನೀರುಕಾಯಿಹಾಲನ್ನೇ ಎರೆದು ಉರಿಯ ಮೇಲಿಡಿ.
ಬೆಲ್ಲ ಕರಗಿ ಕುದಿಯಲಾರಂಭಿಸಿತೇ, ಕೆಳಗಿಳಿಸಿ.
ಬಾಳೇಹಣ್ಣು ಚೂರುಗಳನ್ನು ಹಾಕಿ.
ದಪ್ಪ ಕಾಯಿಹಾಲು ಎರೆಯಿರಿ.
ಎಳ್ಳು ಹುರಿದು ಹಾಕಿ, ರಸಾಯನ ಆಯ್ತು.


ಬಚ್ಚಂಗಾಯಿ ದೋಸೆ: ಬಚ್ಚಂಗಾಯಿ ಸಾಕಷ್ಟು ದೊಡ್ಡ ಗಾತ್ರದ ಹಣ್ಣು. ಎಲ್ಲವನ್ನೂ ತಿಂದು ಮುಗಿಸಲಸಾಧ್ಯವೆಂದೆನಿಸಿದಲ್ಲಿ ಹೀಗೆ ದೋಸೆ ಮಾಡಿಕೊಳ್ಳಿ. ಹಸಿರು ಸಿಪ್ಪೆ ಹಾಗೂ ಬೀಜಗಳು ಬೇಡ. ಕೆಂಪು ತಿರುಳು ಸಹಿತ 2 ಕಪ್ ಅಕ್ಕಿಯೊಂದಿಗೆ ಅರೆದು ದೋಸೆ ತಯಾರಿಸಿ. ಅರೆಯುವಾಗ ಬೇರೆ ನೀರು ಹಾಕುವುದು ಬೇಡ. ಹುಳಿ ಬರಿಸಬೇಕಾಗಿಲ್ಲ. ಇದೇ ಮಾದರಿಯಲ್ಲಿ ಸೌತೆ, ಕುಂಬಳ, ಸೋರೆ, ಮುಳ್ಳುಸೌತೆಗಳಿಂದಲೂ ದೋಸೆ ಮಾಡಿಕೊಳ್ಳಬಹುದು. ಆಯಾ ಋತುಗಳಲ್ಲಿ ಲಭ್ಯವಿದ್ದ ಹಾಗೆ ತರಕಾರಿಗಳನ್ನು ಉಪಯೋಗಿಸಿ.


ತೆಂಗಿನಕಾಯಿ ತೆಗೆಯುವಾಗ ತೋಟದೊಳಗೆ ಇರುವ ಕಾರ್ಮಿಕ ವರ್ಗಕ್ಕೆ ಗಮ್ಮತ್ತು. ಎಲ್ಲರೂ ಎಳನೀರು ಗ್ರಾಹಕರು, ಅದೂ ಉಚಿತ ಕೊಡುಗೆ. ಮನೆಯ ಕರೆಯುವ ಹಸುವಿಗೆ ಬನ್ನಂಗಾಯಿ ಪ್ರತ್ಯೇಕವಾಗಿ ತೆಗೆದಿರಿಸುವುದು ಹಿಂದಿನಿಂದಲೇ ನಡೆದು ಬಂದ ಪದ್ಧತಿ. ಬಾಣಂತಿ ಹಸುವಿಗೆ ಕಲಗಚ್ಚಿನೊಂದಿಗೆ ಈ ಕಾಯಿಯ ತಿರುಳನ್ನು ತುರಿದು ಕೊಡುವ ವಾಡಿಕೆ. ಕಾಯಿ ಆಗುವ ಹಿಂದಿನ ಹಂತದ ಎಳನೀರಿಗೆ ಬನ್ನಂಗಾಯಿ ಎಂಬ ರೂಢನಾಮ ಇದೆ. ಇಂತಹ ಆರೋಗ್ಯಕ್ಕೆ ಪುಷ್ಟಿದಾಯಕವಾದ ಬನ್ನಂಗಾಯಿಯಿಂದ ದೋಸೆ ತಯಾರಿಸೋಣ:

ಒಂದು ಬನ್ನಂಗಾಯಿ ತಿರುಳು, ತುರಿದಿಡಿ.
2 ಕಪ್ ಅಕ್ಕಿ.
ರುಚಿಗೆ ಉಪ್ಪು.

ಮೊದಲು ಅಕ್ಕಿಯನ್ನು ನುಣ್ಣಗೆ ಅರೆಯಿರಿ. ತುರಿದ ತಿರುಳನ್ನು ಹಾಕಿ ಪುನಃ ಅರೆದು ಉಪ್ಪನ್ನೂ ಹಾಕಿ. ಹಿಟ್ಟನ್ನು ಹುಳಿ ಬರಿಸುವ ಅವಶ್ಯಕತೆಯೇನೂ ಇಲ್ಲ. ಈ ದಪ್ಪ ಹಿಟ್ಟನ್ನು ಕಾವಲಿಯಲ್ಲಿ ತೆಳ್ಳಗೆ ಪೇಪರ್ ದೋಸೆ ಥರ ಸೌಟಿನಲ್ಲಿ ಹರಡಲೂ ಸಾಧ್ಯವಿದೆ. ಹಾಗೆ ಬೇಡಾಂದ್ರೆ ಅವಶ್ಯವಿದ್ದಷ್ಟು ನೀರು ಸೇರಿಸಿ ನೀರುದೊಸೆಯಂತೆ ಎರೆಯಿರಿ.


ಟಿಪ್ಪಣಿ: ದಿನಾಂಕ 22, ಆಗಸ್ಟ್, 2013ರಂದು ಹೊಸತಾಗಿ ಸೇರಿಸಿದ್ದು.

ಗೋಧಿ ದೋಸೆ:

ನಾವು ಪ್ರತಿದಿನವೂ ಉಪಯೋಗಿಸುವ ಗೋಧಿಹಿಟ್ಟಿನ ಮೂಲಸ್ವರೂಪ ಗೋಧಿಕಾಳಿನಲ್ಲಿದೆ. ಗೋಧಿಕಾಳು ವಿಟಮಿನ್ಸ್, ಮಿನರಲ್ಸ್ ಹಾಗೂ ಪ್ರೊಟೀನ್ ಭರಿತವಾಗಿದೆ. ಗೋಧಿಕಾಳುಗಳಿಂದ ದೋಸೆ ಮಾಡುವ ವಿಧಾನ ತಿಳಿಯೋಣ.
2 ಕಪ್ ಇಡಿ ಗೋಧಿ
1 ಕಪ್ ಕಾಯಿತುರಿ
2 ಹಸಿಮೆಣಸು
2 ಎಸಳು ಕರಿಬೇವು
ಚಿಕ್ಕತುಂಡು ಶುಂಠಿ
ರುಚಿಗೆ ಉಪ್ಪು

ಗೋಧಿಯನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಅರೆಯಿರಿ. ನೆನೆ ಹಾಕಬೇಕಾಗಿಲ್ಲ. ಒಂದೊಂದೇ ಕಪ್ ಹಾಕಿ ಅರೆದರೆ ನುಣ್ಣಗಾದೀತು. ಮಿಕ್ಸಿಯ ಪುಟ್ಟ ಜಾರೊಳಗೆ ತೆಂಗಿನತುರಿ ಮತ್ತು ಉಳಿದ ಸಾಮಗ್ರಿಗಳನ್ನು ಹಾಕಿ ಅರೆದು ಗೋಧಿಹಿಟ್ಟಿಗೆ ಕೂಡಿಸಿ. ಹಿಟ್ಟು ಹುಳಿ ಬರಬೇಕಾಗಿಲ್ಲ, ಕೂಡಲೇ ಕಾವಲಿ ಒಲೆಯ ಮೇಲಿಟ್ಟು ತುಪ್ಪ ಸವರಿ ಹಿಟ್ಟನ್ನು ಸಾಕಷ್ಟು ತೆಳ್ಳಗೆ ಮಾಡಿಕೊಂಡು ದೋಸೆ ಎರೆಯಿರಿ. ಬೆಣ್ಣೆ ಹಾಗೂ ಸಕ್ಕರೆಯೊಂದಿಗೆ ಸವಿಯಿರಿ.
ಟಿಪ್ಪಣಿ: ದಿನಾಂಕ 5, ಸಪ್ಟಂಬರ್, 2013ರಂದು ಸೇರಿಸಿದ್ದು.

ಮೈದಾ ದೋಸೆ:
ಪ್ರತಿದಿನವೂ ಅಕ್ಕಿ, ಉದ್ದು ನೆನೆ ಹಾಕಿ, ಅರೆದು ದೋಸೆ ಮಾಡಲು ಸಾಧ್ಯವಾಗುವುದಿಲ್ಲ. ಆದರೂ ಮನೆಮಂದಿ ದೋಸೆಯನ್ನೇ ಬಯಸುತ್ತಿರುತ್ತಾರೆ. ಅಂತಹ ಹೊತ್ತಿನಲ್ಲಿ ಸರಳವಾದ ಈ ದೋಸೆ ತಯಾರಿಸಿ, ಟೊಮ್ಯಾಟೋ ಆಮ್ಲೆಟ್ ಅನ್ನಿ. ಎಲ್ಲರೂ ಇಷ್ಟಪಡುವ ದೋಸೆ ಇದು.

2 ಕಪ್ ಮೈದಾ ಹಿಟ್ಟು
1 ಕಪ್ ದಪ್ಪ ಮಜ್ಜಿಗೆ
ರುಚಿಗೆ ಉಪ್ಪು, ಸಕ್ಕರೆ

2 ಟೊಮ್ಯಾಟೋ
2 ಹಸಿಮೆಣಸು
ಒಂದು ಈರುಳ್ಳಿ
ಬೇವಿನೆಸಳು ಅಥವಾ ಕೊತ್ತಂಬರಿ ಸೊಪ್ಪು
ಚಿಕ್ಕ ತುಂಡು ಶುಂಠಿ
ಚಿಕ್ಕದಾಗಿ ಕತ್ತರಿಸಿ.
ಒಂದು ಹಿಡಿ ಕಾಯಿತುರಿ

ಮೈದಾಹಿಟ್ಟಿಗೆ ಮಜ್ಜಿಗೆ ಹಾಗೂ ಸಾಕಷ್ಟು ನೀರೆರೆದು ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. ಕತ್ತರಿಸಿದ ಸಾಮಗ್ರಿ ಹಾಗೂ ಕಾಯಿತುರಿಗಳನ್ನು ಹಾಕಿ ಬಿಡಿ. ಉಪ್ಪು, ಬೇಕಿದ್ದರೆ ಸಕ್ಕರೆ ಬೆರೆಸಿ ದಿಢೀರ್ ದೋಸೆ ಎರೆಯಿರಿ. ಮೇಲಿನಿಂದ ತುಪ್ಪ ಎರೆದು, ಒಮ್ಮೆ ಕವುಚಿ ಹಾಕಿ ತೆಗೆಯಿರಿ. ಚಟ್ನಿ ಬೇಡ, ಸಕ್ಕರೆ ಹಾಗೂ ಬೆಣ್ಣೆಯೊಂದಿಗೆ ತಿನ್ನಿ.

2 comments:

  1. ಈ ದೋಸೆ ಲಾಯ್ಕವ್ತು...ಆನುದೇ ಟ್ರೈ ಮಾಡಿತ್ತಿದೆ..ಹುಳಿ ಬರ್ಸಿ ಮಾಡಿರೆ ಕೆಲವರಿಂಗೆ ಹೊಟ್ಟೆಲಿ ಸಮಸ್ಯೆ ಅವತು...ಹಾಂಗಾಗಿ ನಿಂಗ ಹೇಳಿದಾಂಗೆ ಮಾಡಿರೆ ಲಾಯಕ.. ಧನ್ಯವಾದ -

    ಗಣೇಶ್ ಭಟ್ - ಹಾಲುಮಜಲು

    ReplyDelete