ಮಳೆಗಾಲದ ವರ್ಷಧಾರೆ ಪ್ರಾರಂಭವಾಯಿತೋ, ನೆಲದಿಂದ ಮೇಲೆದ್ದು ಬರುವ ಹತ್ತು ಹಲವು ಸಸ್ಯರಾಶಿ ! ಅವುಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ ತಗತೆ ಗಿಡ. ರಸ್ತಯ ಇಕ್ಕೆಲಗಳಲ್ಲಿ ಹಸಿರು ಹುಲ್ಲಿನ ಹಾಸಿಗೆಯ ಹಾಗೆ, ಎಲ್ಲೆಲ್ಲ ಖಾಲಿ ಜಾಗ ಇದೆಯೋ ಅಲ್ಲೆಲ್ಲ ಮೊಳೆತು ಕಂಗೊಳಿಸುವ ದೃಶ್ಯ ನನ್ನ ಬಾಲ್ಯದಲ್ಲಿ ಸರ್ವೇಸಾಮಾನ್ಯವಾಗಿತ್ತು. ಆ ಕಾಲದ ರಸ್ತೆಗಳು ಇಂದಿನಂತೆ ಕಾಂಕ್ರೀಟು ಹೊದಿಕೆ ಮುಚ್ಚಿದವುಗಳಲ್ಲ. ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ ಇರಲೇ ಇಲ್ಲ. ಅಂಗಡಿ , ಮಾರ್ಕೇಟು ಕಡೆ ಹೋಗಬೇಕಾದರೆ ಬಟ್ಟೆಯಿಂದ ಹೊಲಿದ ಚೀಲಗಳನ್ನು ಬಳಸುತ್ತಿದ್ದೆವು. ದಿನಸಿ ಅಂಗಡಿಯವನು ನೀಟಾಗಿ ಕಾಗದದ ಪೊಟ್ಟಣದಲ್ಲಿ ಮಾಲು ಕಟ್ಟಿ ಕೊಡ್ತಿದ್ದ. ಪಾರ್ಥೇನಿಯಂ ಕಳೆಯ ಹೆಸರೇ ಗೊತ್ತಿರಲಿಲ್ಲ. ಆಗ ನಮ್ಮಪಾಲಿಗೆ ಈ ತಗತೆ ಗಿಡವೇ ಕಳೆ ಸಸ್ಯ !
ನಮ್ಮ ಮನೆಯ ವಠಾರದಲ್ಲೂ ಅಷ್ಟೇ, ಖಾಲಿ ಜಾಗ ಇದ್ದಲ್ಲೆಲ್ಲ ತಗತೆಯದ್ದೇ ದರ್ಬಾರು. ಚಿಗುರಿದ ಎರಡೇ ತಿಂಗಳಲ್ಲಿ ಹೂವರಳಿ, ಹೂ ಕಾಯಾಗಿ ಉದ್ದನೆಯ ಕೋಡುಗಳು ಬಲಿಯುತ್ತಿದ್ದಂತೆ ಗಿಡದ ಆಯುಸ್ಸು ಮುಗಿಯಿತು. ಮತ್ತೆ ಮುಂದಿನ ಮಳೆಗಾಲಕ್ಕೇ ಅದರ ದರ್ಶನ. ನನ್ನಮ್ಮ ಈ ತಗತೆಯಿಂದ ತಯಾರಿಸದ ಖಾದ್ಯಗಳಿಲ್ಲ. ದುಡ್ಡು ಕೊಟ್ಟು ತರಬೇಕಾಗಿಲ್ಲ, ಮನೆ ಹಿತ್ತಿಲಲ್ಲಿ ಇರುವ ಸಸಿಗಳನ್ನು ಮುರಿದುಕೊಂಡರಾಯಿತು. ಅಚ್ಚುಕಟ್ಟಾಗಿ ಪತ್ರೊಡೆ ತಯಾರಿಸೋರು ನನ್ನಮ್ಮ, ಕೆಸುವಿನ ಹಾಗೆ ತುರಿಸದು. ಹೆಚ್ಚು ಹುಳಿಯ ಅಗತ್ಯವಿಲ್ಲ. ತೊಗರಿ ಬೇಳೆ ಸಾಂಬಾರಿಗೆ ಇನ್ನಿತರ ಸೊಪ್ಪುಗಳನ್ನು ಬಳಸುವಂತೆ ಇದನ್ನೂ ಧಾರಾಳವಾಗಿ ಹಾಕ್ತಿದ್ದರು.
ಪಲ್ಯ ಮಾಡುವುದು ಹೀಗೆ : ಬಾಣಲೆಯಲ್ಲಿ ಒಗ್ಗರಣೆ ತಯಾರಿಸಿ. ಎರಡು ಮುಷ್ಟಿ ಸೊಪ್ಪು ಹಾಕಿ ಸೌಟಿನಲ್ಲಿ ಆಡಿಸಿ. ಒಂದು ಹಿಡಿ ಹಲಸಿನ ಬೇಳೆಗಳನ್ನು ಸಣ್ಣದಾಗಿ ಹಚ್ಚಿ ಹಾಕಿ. ರುಚಿಗೆ ಉಪ್ಪು, ಇನ್ನಿತರ ಮಸಾಲೆ ಬೇಕಿದ್ದರೆ ಹಾಕಿಕೊಳ್ಳಿ. ತುಸು ನೀರು ಹಾಕಿ ಮೆತ್ತಗೆ ಬೇಯಿಸಿ. ಬೆಂದ ಪಲ್ಯಕ್ಕೆ ತೆಂಗಿನತುರಿ ಹಾಕಿದರೆ ಆಯಿತು. " ಹಲಸಿನ ಬೇಳೆ ಎಲ್ಲಿಂದ ತರಲೀ " ಅಂತೀರಾ, ಬಟಾಟೆ ಸಣ್ಣಗೆ ಹಚ್ಚಿ ಹಾಕಿ, ಪರವಾಗಿಲ್ಲ.
ವಡೆ ಮಾಡುವುದು ಹೀಗೆ : ಅಕ್ಕಿ ಕಡ್ಲೆಬೇಳೆಗಳನ್ನು ತರಿತರಿಯಾಗಿ ರುಬ್ಬಿಕೊಂಡು ಒಂದು ಹಿಡಿ ಸೊಪ್ಪು ಸೇರಿಸಿ ಇನ್ನಿತರ ವಡೆಗಳಂತೆ ವಡೆ ತಟ್ಟಿ ಎಣ್ಣೆಯಲ್ಲಿ ಕರಿದರಾಯಿತು.
ತಂಬುಳಿ ತಯಾರಿಸೋಣ ಹೀಗೆ : ಒಂದು ಹಿಡಿ ಸೊಪ್ಪನ್ನು ತುಪ್ಪದಲ್ಲಿ ಬಾಡಿಸಿಕೊಳ್ಳಿ. ಜೀರಿಗೆ, ತೆಂಗಿನತುರಿ, ದಪ್ಪ ಮಜ್ಜಿಗೆಯೊದಿಗೆ ನುಣ್ಣಗೆ ಅರೆಯಿರಿ. ಸಾಕಷ್ಟು ತೆಳ್ಳಗೆ ಮಾಡಿಕೊಂಡು ಉಪ್ಪು ಸೇರಿಸಿ ಒಗ್ಗರಣೆ ಕೊಟ್ಟು ಬಿಡಿ. ಅಡುಗೆಯ ಒಳಗುಟ್ಟು ಅರಿತಿರುವ ಗೃಹಿಣಿಯರು ಹೊಸ ಹೊಸ ಖಾದ್ಯಗಳನ್ನು ತಾವೇ ತಯಾರಿಸಬಲ್ಲರು.
ಗ್ರಾಮೀಣ ಪ್ರದೇಶದ ಜನತೆ ಇದರ ಔಷಧೀಯ ಗುಣಗಳನ್ನು ಮೊದಲಾಗಿ ಕಂಡುಕೊಂಡವರು.
ನಿಂಬೆರಸದೊಂದಿಗೆ ಇದರ ಬೇರನ್ನು ಅರೆದು ಚರ್ಮವ್ಯಾಧಿಗೆ ಲೇಪ ಹಾಕುವ ಪಧ್ಧತಿ ಇದೆ.
ಬೀಜವನ್ನು ಹುರಿದು ಹುಡಿಮಾಡಿ ಕಾಫಿ ಯಂತೆ ಬಳಸಬಹುದು.
ಸೊಪ್ಪಿನ ಕಷಾಯ ಅಜೀರ್ಣಕ್ಕೆ ಉತ್ತಮ ಹಳ್ಳಿಮದ್ದು.
ಸೊಪ್ಪನ್ನು ಅರೆದು ತುರಿಕಜ್ಜಿ, ರಿಂಗ್ವರ್ಮ್ ಇತ್ಯಾದಿ ಚರ್ಮರೋಗಗಳಿಗೆ ಔಷಧಿಯಾಗಿ ಬಳಸುತ್ತಾರೆ.
ಇನ್ನೊಂದು ಮಾಹಿತಿಯ ಪ್ರಕಾರ, ಉಪಯೋಗ - ರಕ್ತಬೇದಿಗೆ, ತುರಿಕಜ್ಜಿಗೆ, ಜ್ವರಕ್ಕೆ, ದದ್ದಿಗೆ, ಜೇನು ಚೇಳು ಕಡಿತಕ್ಕೆ. ಇದು ಕಳೆಗಿಡವೇ ಆಗಿದ್ದರೂ ಬೇರು, ಎಲೆ, ಕಾಯಿಗಳೆಲ್ಲ ಉಪಯುಕ್ತವಾಗಿವೆ.
ಚೆನ್ನಾಗಿ ಬಲಿತ ಗಿಡದ ಕಾಂಡವನ್ನು ತುಂಡರಸಿ ಚಿಕ್ಕ ಚಿಕ್ಕ ತುಂಡುಗಳನ್ನು ಒಣಗಿಸಿ. ಬೇಕಾದಾಗ ಕಷಾಯ ತಯಾರಿಸಿ. ಇದು ದಾಲ್ಚೀನಿಯಂತೆ ಸುಗಧಭರಿತವಾಗಿರುವುದು.
ಅಡುಗೆಯ ಖಾದ್ಯಗಳ ರುಚಿ ಹಾಗೂ ಗುಣಗಳನ್ನು ಅಧಿಕಗೊಳಿಸುವುದು.
ಆಷಾಢಮಾಸದಲ್ಲಿ ಇದನ್ನು ಅಡುಗೆ ಮಾಡಿ ತಿನ್ನಬೇಕೆಂಬ ಸಂಪ್ರದಾಯವೂ ನಮ್ಮ ತುಳು ಜನಾಂಗದವರಲ್ಲಿದೆ . ತುಳು ಭಾಷೆಯಲ್ಲಿ ಇದು ತಜಂಕ್ ಎಂದೇ ಜನಪ್ರಿಯವಾಗಿದೆ.
ಕನ್ನಡದಲ್ಲಿ ತೊಗಟೆಗಿಡವಾಗಿರುವ ಇದರ ಸಸ್ಯಶಾಸ್ತ್ರೀಯ ನಾಮಧೇಯ Cassia tora.
ಮರಗಿಡಗಳಿಗೆ ಉತ್ತಮ ಹಸಿರೆಲೆ ಗೊಬ್ಬರ. ಜೊತೆಗೆ ಮಣ್ಣಿನ ಫಲವಂತಿಕೆಯನ್ನು ಹೆಚ್ಚಿಸುವುದು. ಅಡಿಕೆ ತೋಟಗಳ ಮಣ್ಣಿನ ಆಮ್ಲೀಯತೆ ಹೆಚ್ಚಾದಲ್ಲಿ ಇಳುವರಿ ಕಡಿಮೆಯಾಗುವುದು. ಅಂಥ ಸಂದರ್ಭದಲ್ಲಿ ಮರಗಳ ಬುಡಕ್ಕೆ ತಗತೇಸೊಪ್ಪನ್ನು ತುಂಡರಿಸಿ ಹಾಕಿದಲ್ಲಿ ತೋಟ ನಳನಳಿಸುವುದು. " ತಗತೆ ಸಸ್ಯ ಸಂಕುಲವನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಪಾರ್ಥೇನಿಯಂ ಕಳೆ ತೊಲಗಬಹುದು " - ಇದು ಸಸ್ಯ ವಿಜ್ಞಾನಿಗಳ ಅಭಿಮತ.
ಬೀಜದಲ್ಲಿ ಪ್ರೊಟೀನ್ ಅಧಿಕ, ಪಕ್ಷಿಗಳ ಪ್ರಿಯ ಆಹಾರ.
ಒಂದು ನೈಸರ್ಗಿಕ ಕೀಟನಾಶಕ, ಸಾವಯವ ಕೃಷಿಕರ ಅಚ್ಚುಮೆಚ್ಚಿನ ಸಸ್ಯ .
ನನ್ನ ಬಾಲ್ಯದಲ್ಲಿ ಹೀಗೆ ಕಂಗೊಳಿಸುತ್ತಿದ್ದ ತಗತೆ ಈಗ ಹಿಂದಿನಂತೆ ಕಾಣಸಿಗುತ್ತಿಲ್ಲ. ಇದಕ್ಕೆ ಪರಿಸರ ಮಾಲಿನ್ಯವೇ ಪ್ರಮುಖ ಕಾರಣ. ಎಲ್ಲೆಂದರಲ್ಲಿ ನಾವು ಬಿಸುಡುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳು ಇದರ ಬೆಳವಣಿಗೆಯನ್ನು ತಡೆ ಹಿಡಿದಿವೆ. ರಸ್ತೆಬದಿಯಲ್ಲಿ ಕಾಣಸಿಕ್ಕರೂ ಹಿಂದಿನ ಅಪ್ಯಾಯತೆಯಿಂದ ಚಿವುಟಿಕೊಳ್ಳಲು ಮನಸ್ಸು ಬಾರದು.
ಟಿಪ್ಪಣಿ: ದಿನಾಂಕ 7, ಆಗಸ್ಟ್ 2015ರಂದು ಸೇರಿಸಿದ ಹೊಸ ಚಿತ್ರ - ಬರಹ.
Friday, 6 July 2012
ತಗತೆ ಬೆಳೆಸಿ, ಪಾರ್ಥೇನಿಯಂ ಅಳಿಸಿ !
ಪತ್ತನಾಜೆಯ ದಿನ ಗ್ರಾಮದ ದೇವಸ್ಥಾನಕ್ಕೆ ಹೋಗಿದ್ದೆವು. ಆಗಿನ್ನೂ ಮೇ ತಿಂಗಳ ಕೊನೆಯ ವಾರ, ಈ ಬಾರಿ ಮೇ ಆರಂಭದಲ್ಲೇ ಜೋರಾಗಿ ಗಾಳಿಮಳೆ ಶುರು ಆಗ್ಬಿಟ್ಟಿತ್ತಲ್ಲ, ಎಲ್ಲೆಡೆಯೂ ಹಸಿರೇ ಹಸಿರು ತುಂಬಿಕೊಂಡಿತ್ತು. ಪೂಜೆ, ಸಮಾರಾಧನೆ ಊಟ ಮುಗಿಸಿ ಹೊರ ಬಂದ ಹಾಗೆ ದೇಗುಲದ ಹೊರ ಆವರಣದಲ್ಲಿದ್ದ ಕಟ್ಟೆಯಲ್ಲಿ ಹಸಿರು ಹಾಸಿಗೆಯಂತೆ ಬೆಳೆದು ನಿಂತಿದ್ದ ತಗತೆ ಸಸ್ಯರಾಶಿ !
ಏನಿದ್ದರೂ ಆಟಿ ತಿಂಗಳಲ್ಲಿ ತಿನ್ನುವಂತಹ ತಗತೆ ಸೊಪ್ಪು ಈಗಲೇ ಕೈ ಬೀಸಿ ಕರೆಯತ್ತಿದೆ. ನಮ್ಮೆಜಮಾನ್ರ ಕೈಲಿದ್ದ ಐಫೋನ್ ಎಗರಿಸಿ ಒಂದು ಫೋಟೋ ಕ್ಲಿಕ್ಕಿಸಿದ್ದಾಯಿತು. ಯಾಕೋ ಏನೋ ಸೊಪ್ಪು ಚಿವುಟಬೇಕೂಂತ ತೋರಲೇ ಇಲ್ಲ ! ಬಹುಶಃ ಪಾಯಸದೂಟ ತಿಂದಿದ್ರೀಂತ ಕಾಣುತ್ತೆ, ಬೇಗ ಮನೆಗೆ ಹೋಗಿ ಮಲಕ್ಕೊಂಡ್ರೆ ಸಾಕು ಅನ್ಸಿದ್ದೂ ಕಾರಣ ಇರಬಹುದು. ಅದೇನೇ ಇರಲಿ, ಆಷಾಢ ಮಾಸದಲ್ಲಿ ಪುನಃ ಬಾಯಾರು ಪಂಚಲಿಂಗೇಶ್ವರ ದೇವಳಕ್ಕೆ ಹೋಗುವ ಸಂದರ್ಭ ಬಂದಿತು.
ಅದೇನಾಯ್ತೂಂದ್ರೆ ಹೊಚ್ಚಹೊಸದಾದ ಕಾರು ಮನೆಗೆ ಬಂದಿದೆ, ಕಾರಿನಲ್ಲಿ ಮೊದಲ ಸಲ ಹೊರ ಹೊರಡುವಾಗ ದೇವಾಲಯಕ್ಕೇ ಹೋಗೋಣವೆಂದು ತೀರ್ಮಾನಕ್ಕೆ ಬಂದು, ಊರ ದೇವಸ್ಥಾನ ಇಲ್ಲೇ ಹತ್ತಿರದಲ್ಲಿದೆ, ಮುಂಜಾನೆಯ ತಿಂಡಿ ಮುಗಿಸಿ ಹೊರಟೆವು. ದೇವರಿಗೆ ಪ್ರದಕ್ಷಿಣೆ ಬಂದು ಯಥಾನುಶಕ್ತಿ ಕಾಣಿಕೆ ಡಬ್ಬಿಗೆ ಹಾಕಿ ಹೊರ ಬಂದಾಗ ಪುನಃ ನನ್ನ ಕಣ್ಣು ತಗತೆ ಸೊಪ್ಪು ಇದ್ದಲ್ಲಿಗೆ ಹೋಯಿತು. ಈ ಬಾರಿ ಕೈಯಲ್ಲಿ ಹಿಡಿಸುವಷ್ಟು ಕುಡಿ ಸೊಪ್ಪುಗಳನ್ನು ಚಿವುಟಿಕೊಂಡಾಯ್ತು.
" ಹೌದಾ, ಸೊಪ್ಪು ಏನಡಿಗೆ ಮಾಡಿದ್ರೀ... ?"
ಹತ್ತು ಹನ್ನೆರಡು ಹಲಸಿನಬೇಳೆಗಳನ್ನು ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ.
ಒಂದು ಹಿಡಿ ತೆಂಗಿನಕಾಯಿ ತುರಿ.
ಆಯ್ದ ತಗತೆಯ ಚಿಗುರೆಲೆಗಳು.
ಬಾಣಲೆಯಲ್ಲಿ ಒಂದೆರಡು ಚಮಚ ಎಣ್ಣೆ ಎರೆದು,
ಒಗ್ಗರಣೆ ಸಾಹಿತ್ಯ ಉದುರಿಸಿ,
ಚಟಪಟ ಅಂದಾಗ ತಗತೆ ಸೊಪ್ಪು ಹಾಕಿ ಬಾಡಿಸಿ.
ಚಿಟಿಕೆ ಅರಸಿನ, ರುಚಿಗೆ ಉಪ್ಪು ಕೂಡಿಸಿ, ಹಲಸಿನಬೇಳೆ ಚೂರುಗಳನ್ನೂ ಹಾಕಿರಿ.
ಬೇಯಲು ತುಸು ನೀರು ಎರೆದು, ಮುಚ್ಚಿ ಬೇಯಿಸಿ.
ಬೆಂದ ನಂತರ ತೆಂಗಿನ ತುರಿ ಹಾಕಿರಿ.
ಇನ್ನೊಮ್ಮೆ ಸೌಟಾಡಿಸಿ,
ಕೆಳಗಿಳಿಸಿ ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ.
ಆಷಾಢ ಮಾಸದಲ್ಲಿ ಒಮ್ಮೆಯಾದರೂ ತಗತೆ ಸೊಪ್ಪು ತಿನ್ನಬೇಕೆಂಬ ಶಾಸ್ತ್ರ ಯಶಸ್ವಿಯಾಗಿ ಮುಕ್ತಾಯವಾಯಿತು.
ಸೂಚನೆಗಳು: ರುಚಿಕರವಾಗಲು ಬೆಲ್ಲ ಹಾಕಬಹುದು. ಹಲಸಿನಬೇಳೆ ಇಲ್ಲದಿದ್ದರೆ ಹೆಸ್ರು ಕಾಳುಗಳನ್ನು ಬಳಸಿ. ಪ್ರೆಶರ್ ಕುಕ್ಕರ್ ಉಪಯೋಗಿಸಿದರೆ ಉತ್ತಮ.
ಟಿಪ್ಪಣಿ: ಜುಲೈ, 17, 2016.... ಬರಹ ಮುಂದುವರಿದಿದೆ.
ಮಳೆಗಾಲದ ನೆಂಟ
ಪ್ರತಿದಿನವೂ ಅಡುಗೆಗೆ ಸೊಪ್ಪು ತರಕಾರಿ ಬಳಸುವುದನ್ನು ಗಮನಿಸುತ್ತಿದ್ದ ಚೆನ್ನಪ್ಪ, ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದ ಹಾಗೆ ಒಂದು ದಿನ ತಗತೆ ಸೊಪ್ಪು ಹಿಡಿದುಕೊಂಡು ಬಂದ. ಅಡುಗೆಮನೆಗೆ ಆಗಮಿಸಿದ ತಗತೆಸೊಪ್ಪಿನ ರಾಶಿ ನೋಡಿ ನನ್ನ ಬಾಯಲ್ಲಿ ನೀರೂರದಿದ್ದೀತೇ, " ಪತ್ರೊಡೆ ಮಾಡಲೇಬೇಕು, ಸಂಜೆವೇಳೆ ಬಾಳೆಲೆ ತಂದಿಟ್ಟಿರು..."
" ಕೆಸುವಿನ ಸೊಪ್ಪು ಬೇಕಿದ್ರೂ ತಂದ್ಕೊಡ್ತೇನೆ. " ಅನ್ನುತ್ತಾ ಚೆನ್ನಪ್ಪ ಮುಂಜಾನೆಯ ಮಾಮೂಲಿ ಕೆಲಸವಾದ ತೆಂಗಿನಕಾಯಿ ಹೆಕ್ಕಿ ತರಲು ತೋಟಕ್ಕೆ ತೆರಳಿದ.
ಕೆಸುವಿನ ಸೊಪ್ಪಿಂದು ಪತ್ರೊಡೆ ಇದ್ದಿದ್ದೇ, ಹಿತ್ತಿಲಲ್ಲೇ ಸೊಪ್ಪು ಇರುತ್ತದೆ. ತಗತೆಯಾದರೆ ಹಾಗಲ್ಲ, ಸೊಪ್ಪು ಚಿವುಟಲು ರಸ್ತೆ ಪಕ್ಕ ನಾನು ಹೋದರೆ ಕಾಣುವ ಜನ ಏನೆಂದಾರು? " ಏನಕ್ಕಾ, ರಸ್ತೆ ಪಕ್ಕದ ಸೊಪ್ಪು ಯಾಕಕ್ಕಾ ? " ಎಂಬ ಕೋರಸ್ ಕೇಳಬೇಕಾದೀತು. ತಗತೆಯ ಪತ್ರೊಡೆ ತಿನ್ನದೇ ಯಾವುದೋ ಕಾಲವಾಗಿತ್ತು, ಚಿಕ್ಕಂದಿನಲ್ಲಿ ಅಮ್ಮ ಮಾಡ್ಕೊಟ್ಟಿದ್ದು, ನಾವು ತಿಂದಿದ್ದು ಅಷ್ಟೇ ನೆನಪು.
ಮನೆಯೊಳಗೆ ಸೀಮಿತ ಸದಸ್ಯರ ದೆಸೆಯಿಂದಾಗಿ ಈಗ ವಿಪರೀತ ಅಕ್ಕಿ, ಅದೂ ಕುಚ್ಚುಲಕ್ಕಿ ಬಳಸಿ ಯಾವುದೇ ತಿಂಡಿ ತಿನಿಸು ಮಾಡುವಂತಿಲ್ಲ, ಕುಚ್ಚುಲಕ್ಕಿ ಒದಗು ಜಾಸ್ತಿ ಅಲ್ವೇ, ಅರೆಯಲು ಮಿಕ್ಸೀ ಒಪ್ಪುವುದೂ ಇಲ್ಲ, ಹಾಗಾಗಿ ಬೆಳ್ತಿಗೆ ಅಕ್ಕಿಯ ಆಯ್ಕೆ ನನ್ನದು.
ಚೆನ್ನಪ್ಪ ತಂದಿಟ್ಟಿರೋ ಸೊಪ್ಪಿಗೆ ಎರಡು ಪಾವು ಬೆಳ್ತಿಗೆ ಅಕ್ಕಿ ಸಾಕು, ಅಳೆದು ನೆನೆ ಹಾಕಿದ್ದೂ ಆಯ್ತು.
ಬೆಳ್ತಿಗೆ ಅಕ್ಕಿಯಿಂದ ಮಾಡುವ ಕಡುಬು ಮೃದುವಾಗಿ ಬರಬೇಕಾದರೆ ತೆಂಗಿನತುರಿ ಅವಶ್ಯ.
ಹುಣಸೆಹುಳಿಯ ಬದಲಾಗಿ ಸಿಹಿ ಮಜ್ಜಿಗೆಯನ್ನೇ ಎರೆಯೋಣ.
ತಗತೆ ಕೆಸುವಿನಂತಲ್ಲ, ತುರಿಸದು, ರುಚಿಕರವಾಗಲು ಅಗತ್ಯವಿರುವ ಹುಳಿ ಸಾಕು.
ಇದು ಪೂರ್ವಿಭಾವಿ ಸಿದ್ಧತೆ.
ಸಂಜೆಯಗುತ್ತಲೂ ಒಂದು ಹಸಿ ತೆಂಗಿನಕಾಯಿ ಸುಲಿದು, ಒಡೆದು ಅರ್ಧ ಕಡಿ ಕಾಯಿ ತುರಿದಾಯ್ತು, ಅಕ್ಕಿ ತೊಳೆದಿದ್ದೂ ಆಯ್ತು.
ತೆಂಗಿನತುರಿಯೊಂದಿಗೆ ಅರೆಯಬೇಕಾಗಿರುವ ಮಸಾಲಾ ಸಾಮಗ್ರಿಗಳು:
4-6 ಕುಮ್ಟೆಮೆಣಸು, ಖಾರದ ಅಗತ್ಯಕ್ಕೆ ಬೇಕಾದ ಹಾಗೆ ಹೆಚ್ಚುಕಮ್ಮಿ ಮಾಡಬಹುದು.
ಕೊತ್ತಂಬ್ರಿ, ಕೈಯಳತೆಯಲ್ಲಿ ಬಂದಷ್ಟು.
ಜೀರಿಗೆ, ಒಂದಿಷ್ಟು.
ಅರಸಿಣ, ಕೈ ಚಿಟಿಕೆಯಷ್ಟು.
ಉಪ್ಪು, ರುಚಿಗೆ ತಕ್ಕಷ್ಟು.
ಬೆಲ್ಲ, ಸಿಹಿ ಬೇಕಿದ್ದಷ್ಟು.
ಕಾಯಿತುರಿ ಈ ಎಲ್ಲ ಸಾಮಗ್ರಿಗಳನ್ನು ಕೂಡಿಕೊಂಡು, ಮಜ್ಜಿಗೆಯನ್ನೂ ಎರೆದು ಅರೆಯಲ್ಪಟ್ಟಿತು.
ಮಸಾಲಾ ಕಾಯಿ ಅರಪ್ಪು ತಪಲೆಗೆ ಸುರುವಿ, ಅಕ್ಕಿಯನ್ನೂ ಅರೆಯೋಣ. ತರಿತರಿಯಾಗಿ ಬಂದರೆ ಸಾಕು, ಹೆಚ್ಚು ನೀರುನೀರಾಗಕೂಡದು. ಅದಕ್ಕಾಗಿ ಅರೆದಾದ ಮಸಾಲಾ ಕಾಯಿ ಅರಪ್ಪು ಎರೆದು ಅರೆದಿದಾದರೆ ನೀವು ಗೆದ್ದಂತೆ. ಈ ಹಿಟ್ಟಿಗೆ ತಗತೆ ಸೊಪ್ಪು ಸೇರಿಸುವುದು, ಹ್ಞಾ, ಸೊಪ್ಪನ್ನು ಹಾಗೇನೇ ಸೇರಿಸುವುದಲ್ಲ. ಎಳೆ ಚಿಗುರು ಹಾಗೂ ದಂಟು ತೆಗೆದ ಸೊಪ್ಪು ಮಾತ್ರ ಅಡುಗೆಗೆ ಯೋಗ್ಯ. ಬೆಳಗ್ಗೆ ಕೊಯ್ದ ಸೊಪ್ಪನ್ನು ಹರಡಿ ಇಟ್ಟಲ್ಲಿ ಸಂಜೆವೇಳೆ ತುಸು ಬಾಡಿದಂತಾಗಿ ಎಲೆಗಳು ತಾನಾಗಿಯೇ ಕಿತ್ತು ಬರುತ್ತವೆ, ಅಂತೂ ಕಾಲುಗಂಟೆ ಸೊಪ್ಪು ಆಯಲು ಬೇಕಾದೀತು, ತೊಂದರೆಯಿಲ್ಲ, ಪತ್ರೊಡೆ ತಿನ್ನಬೇಡವೇ?
ಸೊಪ್ಪು, ಹಿಟ್ಟು ಕೂಡಿಕೊಳ್ಳುವಂತೆ ಕಲಸಿದ್ದೂ ಆಯ್ತು.
ಈ ವೇಳೆಗೆ ಅಟ್ಟಿನಳಗೆಯಲ್ಲಿ ನೀರು ಕುದಿಯುತ್ತಿರಲಿ.
ಬಾಳೆ ಎಲೆಗಳನ್ನು ಬಾಡಿಸಿ, ಸಮಗಾತ್ರದಲ್ಲಿ ಹೊಂದಿಸಿ ಇಟ್ಕೊಂಡಿದ್ದೀರಾ, ಇನ್ನೇಕೆ ತಡ, ಒಂದೊಂದು ಸೌಟು ಪತ್ರೊಡೆಯ ಹಿಟ್ಟನ್ನು ತುಂಬಿಸಿ, ಅಚ್ಚುಕಟ್ಟಾಗಿ ಮಡಚಿ, ಅಟ್ಟಿನಳಗೆಯೊಳಗೆ ವೃತ್ತಾಕಾರದಲ್ಲಿ ಜೋಡಿಸಿ, ಮುಚ್ಚಿ ಬೇಯಲು ಬಿಡಿ. ನೀರು ಕುದಿದ ನಂತರ ಅಂದಾಜು ಇಪ್ಪತ್ತು ನಿಮಿಷ ಸಾಕು, ಪತ್ರೊಡೆ ತಿನ್ನಲು ತಯಾರಾಗಿರಿ. ಊಟದೊಂದಿಗೆ ಸವಿಯಿರಿ, ಮುಂಜಾನೆಯ ತಿಂಡಿಯನ್ನು ಉಪ್ಕರಿ ಮಾಡಿ ತಿನ್ನಿ, ಸಂಜೆಯ ಲಘು ಉಪಹಾರಕ್ಕಾಗಿ ಕಡ್ಲೆ ಹಿಟ್ಟಿನಲ್ಲಿ ಮುಳುಗಿಸಿ ಪೋಡಿ ಯಾ ಬಜ್ಜಿ ಕರಿಯಿರಿ.
Subscribe to:
Post Comments (Atom)
0 comments:
Post a Comment