Pages

Ads 468x60px

Saturday, 6 October 2012

ಮುಳ್ಳುಸೌತೆಯ ರಸದೌತಣ



ಅಷ್ಟಮೀ  ಚೌತೀ  ಹಬ್ಬಗಳು  ಮುಗಿದಿವೆ.   ನವರಾತ್ರೀ ದಿನಗಳು  ಬರಲಿವೆ.    ದೀಪಾವಳಿಯೂ  ಬರಲಿದೆ.   ಈ  ಹೊತ್ತಿಗೆ  ಮನೆಯಂಗಳದ  ಮಳೆಗಾಲದ  ಇನ್ನಿತರ  ತರಕಾರಿಗಳು ಖಾಲಿಯಾಗಿಬಿಡುತ್ತವೆ.  ಆದರೆ  ಅಂಗಳದ  ಬದಿಯಲ್ಲಿ  ನಾಟಿ  ಮಾಡಿದ್ದಂತಹ  ಮುಳ್ಳುಸೌತೆ ಬಳ್ಳಿಗಳು  ಸೊಗಸಾಗಿ  ಬೆಳೆದು,   ಹುಲುಸಾಗಿ  ಚಪ್ಪರದಲ್ಲಿ  ಏರಿ  ಫಲ  ನೀಡಲು ಆರಂಭಿಸುತ್ತ  ಇವೆಯಲ್ಲ !   ಗೃಹಿಣಿಯಾದವಳು  ಈ  ತರಕಾರಿಯನ್ನು  ತನ್ನ  ದಾಸ್ತಾನು ಕೋಣೆಯಲ್ಲಿ  ಭದ್ರವಾಗಿ  ಇರಿಸಿಕೊಳ್ಳುತ್ತಾಳೆ.   ಒಂದು  ಮುಳ್ಳುಸೌತೆ  ಏನಿಲ್ಲವೆಂದರೂ  ನಾಲ್ಕರಿಂದ  ಐದು  ಕಿಲೋ  ಆದರೂ ಇರುತ್ತದೆ.    ತಿಂಡಿಯ  ಹೊತ್ತಿಗೆ  ದೋಸೆಯಿಂದ  ಪ್ರಾರಂಭವಾದರೆ,  ಊಟದ  ಟೇಬಲ್  ಮೇಲೆ  ಸಲಾಡ್,  ಸಳ್ಳಿ,  ಗೊಜ್ಜು  ಇನ್ನು  ಏನೇನೋ  ಐಟಂಗಳು  ಸಿದ್ಧವಾಗಲಿವೆ.   ಹಾಗಾಗಿ ಮುಳ್ಳುಸೌತೆ  ಚಪ್ಪರದ  ಕಾಳಜಿ  ವಹಿಸುವುದು  ಅನಿವಾರ್ಯ. 

  ಮನೆಮಂದಿಯನ್ನು  ನಂಬುವಂತಿಲ್ಲ.   ಆಚೆ ಈಚೆ  ಹೋಗುವ  ಕೆಲಸದಾಕೆ  ಕಲ್ಯಾಣಿಯನ್ನೂ  ನಂಬುವಂತಿಲ್ಲ.

   " ನಿನ್ನೆ  ಇದ್ದ  ಮುಳ್ಳುಸೌತೆ ಮಿಡಿ  ಕಾಣಿಸ್ತಾ  ಇಲ್ಲ,  ಏನಾಯ್ತು "  ಕೇಳುವಂತಿಲ್ಲ.

" ರಾತ್ರಿ  ಹೊತ್ತಿಗೆ  ನರಿ  ಕೊಂಡ್ಹೋಗಿರಬೇಕು "  ಅನ್ನೋ  ಸಿದ್ಧ  ಉತ್ತರ  ಅವಳಿಂದ  ಬಂದೇ ಬರುತ್ತದೆ.   ಅದೆಲ್ಲ  ಇರಲೀ,





2  ಕಪ್  ಬೆಳ್ತಿಗೆ  ಅಕ್ಕಿ  ನೆನೆ  ಹಾಕಿ.   ಎಳೆ  ಮುಳ್ಳುಸೌತೆಯಾದರೆ  ಸಿಪ್ಪೆ  ತೆಗೆಯದೇ  ತುರಿದು  ಇಟ್ಟುಕೊಳ್ಳಿ.   ಬಲಿತದ್ದಾದರೆ  ಸಿಪ್ಪೆ  ಹಾಗೂ  ಬೀಜಗಳನ್ನು  ತೆಗೆದು  ತುರಿಯಿರಿ.    ಮುಳ್ಳುಸೌತೆ ತುರಿ  ಹಾಗೂ  ಅಕ್ಕಿಯನ್ನು  ನುಣ್ಣಗೆ  ಅರೆಯಿರಿ.   ಬೇರೆ  ನೀರು  ಹಾಕಬೇಕಾದ  ಅವಶ್ಯಕತೆಯಿಲ್ಲ.   ಹುಳಿ  ಬರಬೇಕಾಗಿಲ್ಲ.   ಕಾವಲಿಯಲ್ಲಿ  ನೀರುದೋಸೆಯಂತೆ  ಎರೆದರಾಯಿತು.   ಘಮಘಮಿಸುವ ದೋಸೆ  ಸಿದ್ಧ. 

  ದೋಸೆ  ತಯಾರಿಸಿ  ಮಿಕ್ಕುಳಿದ  ಹಿಟ್ಟಿಗೆ  ಬೆಲ್ಲ  ಪುಡಿ  ಮಾಡಿ  ಹಾಕಿಡಿ.   ಸಂಜೆಯ ವೇಳೆ  ಸಿಹಿ ದೋಸೆ  ತಯಾರಿಸಿ.

2  ಕಪ್  ಅಕ್ಕಿ,   1  ಚಮಚ  ಮಂತ್ಯ,   ಅರ್ಧ ಕಪ್  ಉದ್ದಿನಬೇಳೆ  ನೆನೆಸಿಟ್ಟು  2  ಕಪ್  ಮುಳ್ಳುಸೌತೆ ತುರಿ  ಸೇರಿಸಿ  ಸಂಜೆ ವೇಳೆ  ದೋಸೆ ಹಿಟ್ಟು  ಮಾಡಿಟ್ಟುಕೊಳ್ಳಿ.   ರುಚಿಗೆ  ಉಪ್ಪು  ಹಾಕಿ  ಮುಚ್ಚಿ  ಇಡಿ.   ಮಾರನೇ ದಿನ  ಉದ್ದಿನ ದೋಸೆಯಂತೆ  ಎರೆಯಿರಿ. 

ಗುಳಿಯಪ್ಪ  ( ಪಡ್ಡು )   ಹೀಗೆ  ಮಾಡಿಕೊಳ್ಳಿ,   ಮೇಲೆ  ಹೇಳಿದಂತೆ  ಹಿಟ್ಟು  ತಯಾರಿಸಿ.   ಸಿಹಿ ಸಿಹಿಯಾಗುವಷ್ಟು  ಬೆಲ್ಲ  ಪುಡಿ  ಹಾಕಿ  ಒಲೆಯ  ಮೇಲಿಡಿ.   ಇಡ್ಲಿ  ಹಿಟ್ಟಿನ  ಹದಕ್ಕೆ  ಬಂದೊಡನೆ  ಕೆಳಗಿಳಿಸಿ.   ಅಪ್ಪದ   ಕಾವಲಿಯನ್ನು  ಉರಿಯಲ್ಲಿಟ್ಟು  ಎಲ್ಲಾ  ಗುಳಿಗಳಿಗೂ  ತುಪ್ಪ  ಎರೆಯಿರಿ.  ಬಿಸಿಯಾಗುತ್ತಿದ್ದಂತೆ  ಚಿಕ್ಕ ಸೌಟಿನಲ್ಲಿ  ಗುಳಿ  ಮುಳುಗುವಷ್ಟು  ಹಿಟ್ಟನ್ನು  ಎರೆದು  ಸಣ್ಣ  ಉರಿಯಲ್ಲಿ  ಮುಚ್ಚಿ  ಬೇಯಿಸಿ.  ತುಪ್ಪದ  ಶಾಖದಲ್ಲಿ  ಬೆಂದಂತೆ  ಚಮಚದಿಂದ  ಎಬ್ಬಿಸಿ  ಕವುಚಿ ಹಾಕಿ.  ಹಿಗೆ  ಎರಡೂ  ಬದಿ  ಕೆಂಪಗಾದ  ಅಪ್ಪಗಳನ್ನು  ತಗೆದಿರಿಸಿ.

ಕಡುಬು  ಮಾಡೋಣ,   ಮುಂಜಾನೆಯ  ತಿಂಡಿಯ  ಹೊತ್ತಿಗೆ  ಹತ್ತರಿಂದ  ಹದಿನೈದು  ಮಂದಿಯಾದರೂ  ಇದ್ದರೆ  ಹೀಗೆ   ' ಮುಳ್ಳುಸೌತೆ  ಕೊಟ್ಟಗೆ '   ಮಾಡುವ  ರೂಢಿ  ಇದೆ.   ಇದಕ್ಕೆ  ಬೆಳ್ತಿಗೆ  ಅಕ್ಕಿ ತರಿಯನ್ನು  ಮುಳ್ಳುಸೌತೆ ತುರಿಯೊಂದಿಗೆ  ಬೆರೆಸಿ,  ಬಾಡಿಸಿದ  ಬಾಳೆಲೆಯಲ್ಲಿ  ಎರೆದು  ಹಬೆಪಾತ್ರೆಯಲ್ಲಿ  ನೀರು  ಕುದಿಯುತ್ತಿದ್ದಂತೆ  ಇಟ್ಟು  ಬೇಯಿಸಬೇಕು.    ಇದಕ್ಕೂ  ಬೆಲ್ಲ,  ತೆಂಗಿನತುರಿ, ಏಲಕ್ಕಿ  ಕೂಡಾ  ಹಾಕಿದರೆ  ಹೆಚ್ಚು  ಚೆನ್ನಾಗಿರುತ್ತದೆ.    ಬಾಳೆಲೆ  ಸಿಗದಿದ್ದರೆ  ಬೇಡ,  ಇಡ್ಲಿ  ಮಾಡಿ.   2  ಕಪ್  ಅಕ್ಕಿತರಿಗೆ   2  ಬಟ್ಟಲು ತುರಿ ಹಾಕಿದ್ರೆ  ಸಾಕು.    ದೀಪಾವಳಿಗೆ  ಗೋಪೂಜೆ  ಮಾಡ್ತೀವಲ್ಲ,  ಆಗ  ಮನೆಯ  ಮುದ್ದಿನ  ಹಸುಗಳಿಗೆ  ಕುಂಕುಮದ  ತಿಲಕವಿಟ್ಟು,  ಹೂಮಾಲೆ  ತೊಡಿಸಿ,  ಆರತಿ  ಬೆಳಗಿ,   ಮುಳ್ಳುಸೌತೆ  ಕೊಟ್ಟಿಗೆ  ತಿನ್ನಿಸುವ  ಸಂಪ್ರದಾಯವಿದೆ.




ಮುಳ್ಳುಸೌತೆ  ಪಾಯಸ :


ಯಾವುದೇ  ಪಾಯಸವಾಗಲೀ,   ತೆಂಗಿನಕಾಯಿ  ಹಾಲು  ಅವಶ್ಯ.   ಮೊದಲು  ಕಾಯಿಹಾಲು ಮಾಡಿಕೊಳ್ಳಿ.   " ಹೇಗೇ ..."  ಅಂತೀರಾ,   ಮಿಕ್ಸೀಯ ಜಾರಿನೊಳಗೆ ಕಾಯಿತುರಿ  ತುಂಬಿಸಿ  ಅವಶ್ಯವಿದ್ದಷ್ಟು  ನೀರು  ಎರೆದು  ಕಡೆದು  ತೆಗೆಯಿರಿ,  ನುಣ್ಣಗಾಗಬೇಕೆಂದೇನೂ  ಇಲ್ಲ.   ಶುಭ್ರವಾದ  ಬಟ್ಟೆಯಲ್ಲಿ  ಜಾಲಿಸಿ,  ಹಿಂಡಿ  ಹಾಲು  ತೆಗೆದಿರಿಸಿ.   ಇದು  ದಪ್ಪ  ಹಾಲು.   ಅದೇ  ಕಾಯಿ ಚರಟಕ್ಕೆ  ಇನ್ನೊಮ್ಮೆ  ನೀರು  ಎರೆದು  ಪುನಃ  ಕಾಯಿಹಾಲು  ತೆಗೆಯಿರಿ.  ಇದು  ತೆಳ್ಳಗಿನ  ಹಾಲು. 

  ಒಂದು ಹದ ಗಾತ್ರದ  ಮುಳ್ಳುಸೌತೆ  ತುರಿಯನ್ನು  ಈ  ತೆಳ್ಳಗಿನ  ಕಾಯಿಹಾಲಿನಲ್ಲಿ  ಬೇಯಿಸಿ.   
ಒಂದು  ಚಿಕ್ಕ  ಬಟ್ಟಲು ಅಕ್ಕಿ ಹಿಟ್ಟು  ಹಾಕಿ ಪುನಃ  ಬೇಯಿಸಿ,  ಗಂಟು ಕಟ್ಟದಂತೆ ನೋಡಿಕೊಳ್ಳಿ.  ಕುದಿಯುತ್ತಿದ್ದಂತೆ   ದಪ್ಪವಾದೊಡನೆ  ಸಿಹಿಯಾಗುವಷ್ಟು  ಬೆಲ್ಲ  ಹಾಕಿ.

ಬೆಲ್ಲ  ಕರಗಿ  ಕುದಿಯಲು ಸುರುವಾಯಿತೇ,  ಈಗ  ದಪ್ಪ ಕಾಯಿಹಾಲು  ಎರೆದು  ಏಲಕ್ಕಿ ಪುಡಿ  ಉದುರಿಸಿ.
ಒಂದು  ಕುದಿ ಬಂದ ಕೂಡಲೇ  ಕೆಳಗಿಳಿಸಿ.   ಸವಿ ಸವಿ  ಪಾಯಸ  ಸಿದ್ಧ.
ನವರಾತ್ರಿಯ  ದಿನಗಳಲ್ಲಿ   ಈ ಪಾಯಸಕ್ಕೆ  ಆದ್ಯತೆ.  ನೆಂಟರಿಷ್ಟರು  ಬಂದರು  ಅಂತಿಟ್ಕೊಳ್ಳಿ,  ದುಬಾರಿ ಕ್ರಯದ  ಬೇಳೆಕಾಳುಗಳ  ಪಾಯಸ  ಮಾಡಬೇಕಾಗಿಲ್ಲ,  ಇದು  ಬೇಗನೇ  ಆಗುವಂಥಾದ್ದು.  ಶರೀರಕ್ಕೂ  ಹಿತ.

ಟೀವಿ  ಅಡುಗೆ  ಕಾ೧್ಯಕ್ರಮಗಳಲ್ಲಿ  ಪಾಯಸ  ಮಾಡೋರು  ಪ್ಯಾಕೆಟ್  ಹಾಲು  ಹಾಕುವುದನ್ನು  ನೋಡಿದ್ದೇನೆ.   ತೆಂಗಿನಕಾಯಿ ಹಾಲಿನಿಂದ  ಮಾಡಿದ  ಪಾಯಸದ  ರುಚಿಗೆ  ಯಾವುದೂ  ಸಾಟಿಯಿಲ್ಲ.




ಇನ್ನು  ಊಟದ  ಜತೆಗಿನ  ವ್ಯಂಜನಗಳು,   ಇವುಗಳನ್ನು  ಕುದಿಸುವ  ಅವಶ್ಯಕತೆಯಿಲ್ಲ.   ಧಿಡೀರನೆ  ಮಾಡುವಂತಹವು.   ಎಳೆ  ಮುಳ್ಳುಸೌತೆಯನ್ನು  ಸಣ್ಣಗೆ ಹಚ್ಚಿ  ಅಥವಾ  ತುರಿದು  ಹಸಿಮೆಣಸು,  ಶುಂಠಿ,  ಉಪ್ಪು  ಬೆರೆಸಿದರಾಯಿತು.  ಇದು  ' ಸಳ್ಳಿ '.    ಇದಕ್ಕೆ  ಮೊಸರು  ಬೆರೆಸಿ  ಒಗ್ಗರಣೆ  ಕೊಟ್ಟಲ್ಲಿ  ' ಗೊಜ್ಜು '.    ಬೇಕಿದ್ರೆ  ತೆಂಗಿನತುರಿ  ರುಬ್ಬಿ  ಹಾಕಬಹುದು.  ತೆಂಗಿನತುರಿಯೊಂದಿಗೆ  ಸಾಸಿವೆ  ರುಬ್ಬಿ ಹಾಕುವುದು ಮತ್ತೊಂದು  ವೈವಿಧ್ಯ.  ತೆಂಗಿನತುರಿಯೊಂದಿಗೆ ಸಾಸಿವೆ,  ಅರಸಿನಹುಡಿ,  ಮೆಣಸಿನಹುಡಿ  ರುಬ್ಬಿದ  ಮಸಾಲೆ   ಹಾಕಿದ್ರೆ  'ಉಪ್ಪಿನಕಾಯಿ  ಗೊಜ್ಜು '  ಆಗಿ ಹೋಯಿತು.   ಎಳೆ ಮುಳ್ಳುಸೌತೆ,  ಟೊಮೇಟೋ,  ಶುಂಠಿ,  ಹಸಿಮೆಣಸು,  ಕ್ಯಾರೆಟ್ ಇತ್ಯಾದಿಗಳ ಮಿಶ್ರಣ  ' ಸಲಾಡ್ ',   ಸಣ್ಣಗೆ ಹಚ್ಚಿಕೊಂಡು  ಉಪ್ಪು  ಬೆರೆಸಿ  ತುಪ್ಪದಲ್ಲಿ  ಒಗ್ಗರಣೆ  ಕೊಟ್ಟು ಬಿಡಿ.   ಮುಳ್ಳುಸೌತೆ  ತಿರುಳನ್ನು  ಬಿಸುಡಬೇಕಾಗಿಲ್ಲ.   ತೆಂಗಿನತುರಿ,  ಸಾಸಿವೆ, ಹಸಿಮೆಣಸು,  ಉಪ್ಪಿನೊಂದಿಗೆ  ರುಬ್ಬಿ  ದೊಡ್ಡ ಸೌಟು  ಸಿಹಿ ಮಜ್ಜಿಗೆ  ಎರೆದು ಒಗ್ಗರಣೆ  ಕೊಟ್ಟು ಬಿಡಿ.   ಇದು ನಮ್ಮೂರಿನ  ಆಡು ಭಾಷೆಯ  ' ಕೊಂಡಾಟ '.    ಇವನ್ನೆಲ್ಲ  ಊಟದ  ಹೊತ್ತಿಗೆ  ಅಗತ್ಯವಿದ್ದಷ್ಟೇ  ಮಾಡಿದರೆ  ಸಾಕು.    ಸಾಂಬಾರು,  ಮಜ್ಜಿಗೆ ಹುಳಿ,   ಬೋಳು ಹುಳಿ,  ಪಲ್ಯ  ವಗೈರೆಗಳನ್ನು  ಮಾಡಬಹುದು.   ಆದರೂ  ಊಟದ  ಜತೆ  ವ್ಯಂಜನವಾಗಿ  ಹಸಿಯಾಗಿಯೇ ಬಳಕೆ  ರೂಢಿಯಲ್ಲಿದೆ.



ಈ  ಬಳ್ಳಿ  ತರಕಾರಿ,  ಅಪ್ಪಟ  ಭಾರತೀಯ  ಸಸ್ಯ.   ವೈಜ್ಞಾನಿಕವಾಗಿ  Cucumis sativus   ಎಂದು  ಹೆಸರಿಸಿಕೊಂಡಿದೆ.   ನೂರಕ್ಕೆ  ಶೇಕಡಾ  ತೊಂಬತ್ತರಷ್ಟು  ನೀರಿನಂಶವಿರುವ  ತರಕಾರಿ,   ಬಿರು ಬೇಸಿಗೆಯಲ್ಲಿ  ಶರೀರಕ್ಕೆ  ತಂಪು ತಂಪು ...   ಚರ್ಮದ  ಕಾಂತಿ  ವರ್ಧಕ,  ಕಣ್ಣುಗಳ  ಹೂಳಪು  ರಕ್ಷಕ.

ಒಂದು  ನೈಸರ್ಗಿಕ  ಆಂಟಿ ಓಕ್ಸಿಡೆಂಟ್,  ವಿಜ್ಞಾನಿಗಳ  ಅಭಿಮತದಂತೆ  ಹೃದಯರೋಗಗಳು,  ಕ್ಯಾನ್ಸರ್ ಹಾಗೂ  ವಯಸ್ಸಾದಂತೆ  ಚರ್ಮ  ಸುಕ್ಕುಗಟ್ಟುವುದನ್ನು   ತಡೆಗಟ್ಟುವಲ್ಲಿ  ಈ  ಆಂಟಿ ಓಕ್ಸಿಡೆಂಟ್ ಗಳು  ಮಹತ್ವದ  ಪಾತ್ರ  ವಹಿಸಿವೆ.    ವಿಟಾಮಿನ್ C ,  ಬಿಟಾ - ಕೆರೋಟಿನ್ ಹಾಗೂ  ಮ್ಯಾಂಗನೀಸ್  ಇದರಲ್ಲಿ  ಹೇರಳವಾಗಿರುವುದೇ  ಮುಖ್ಯ  ಕಾರಣ.



  ಚೆನ್ನಾಗಿ  ಬಲಿತ  ಕಾಯಿಗಳನ್ನು  ಸಂಗ್ರಹಿಸಿ  ದಾಸ್ತಾನು  ಮಾಡಿಕೊಳ್ಳಬಹುದು.  ಗ್ರಾಮೀಣ  ಪ್ರದೇಶಗಳಲ್ಲಿ  ಈ  ಪದ್ಧತಿ  ಹಿಂದಿನಿಂದಲೂ  ನಡೆದುಕೊಂಡು  ಬಂದಿದೆ.  ದೊಡ್ಡ  ಜಾತಿ, ಚಿಕ್ಕದು,  ಕೆಂಪು ತಿರುಳಿನದು, ನಮ್ಮೂರಿನ  ಆಡುನುಡಿಯಲ್ಲಿ  ' ಚಕ್ಕರ್ಪೆ ' ಯಾಗಿರುವ  ಮುಳ್ಳುಸೌತೆಯಲ್ಲಿ  ಬೇರೆ ಬೇರೆ  ವೆರೈಟಿಗಳಿವೆ.   ಈಗ  ಮಾರುಕಟ್ಟೆಯಲ್ಲಿ  ವರ್ಷವಿಡೀ  ಸಿಗುವುದಾದರೂ  ನಾವು  ಮನೆಯಲ್ಲಿ  ನೆಟ್ಟು  ಮಾಡಿದ  ಫಲದ  ರುಚಿ  ಅದಕ್ಕಿಲ್ಲ,  ಸಂಗ್ರಹಿಸಿ  ಇಡಲೂ  ಆಗುವುದಿಲ್ಲ,  ಕೊಂಡು  ತಂದ  ದಿನವೇ  ಕೆಟ್ಟೂ ಹೋಗಿರುತ್ತದೆ.   ಹಿಂದಿನಂತೆ  ಗ್ರಾಮೀಣ  ಪ್ರದೇಶಗಳಲ್ಲಿ  ತರಕಾರೀ ಕೃಷಿ  ಈಗ  ನಡೆಯುತ್ತಿಲ್ಲ.   ಕೃಷಿ  ಕಾರ್ಮಿಕರ  ಅಲಭ್ಯತೆ,  ಕೃಷ್ಯುತ್ಪನ್ನಗಳಿಗೆ  ಸೂಕ್ತ ದರ  ಸಿಗದಿರುವುದು,  ಯುವ ಜನಾಂಗ  ಕೃಷಿಯಲ್ಲಿ  ನಿರಾಸಕ್ತಿ  ತಾಳಿರುವುದು,    ಫಲವತ್ತಾದ  ಕೃಷಿಭೂಮಿ  ಇನ್ನಿತರ  ವಾಣಿಜ್ಯ  ಉದ್ದೇಶಗಳಿಗೆ  ಬಳಕೆ,  ಹೀಗೇ  ಏನೇನೋ  ಕಾರಣಗಳು ...


ಫೋಟೋ  ಕೃಪೆ :  ಶಂಕರನಾರಾಯಣ ಭಟ್.

Posted via DraftCraft app

0 comments:

Post a Comment