Sunday, 14 October 2012
" ಅಮ್ಮಂಗೊಂದು ಫೇಸ್ ಬುಕ್ ಮಾಡ್ಕೊಡೇ ......."
ಗ್ರಾಮೀಣ ಪ್ರದೇಶದಲ್ಲಿರುವ ನಮ್ಮ ಮಕ್ಕಳು ಆಧುನಿಕ ವಿಜ್ಞಾನವೆನಿಸಿದ ಕಂಪ್ಯೂಟರ್ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ಧೇಶದಿಂದ ಮಗನಿಗೆ ಗಾಯತ್ರೀ ಮಂತ್ರೋಪದೇಶವಾದ ಮುಹೂರ್ತದಲ್ಲಿ ಮನೆಗೆ ಕಂಪ್ಯೂಟರ್ ಬಂದಿತು . ಹನ್ನೊಂದರಿಂದ ಹದಿಮೂರು ವಯಸ್ಸಿನ ಬಾಲಕರಿಗೆ ಉಪನಯನ ಸಂಸ್ಕಾರದ ವಾಡಿಕೆಯ ಕ್ರಮದಂತೆ ನಾವೂ ಬಂಧು ಬಳಗವನ್ನೆಲ್ಲ ಆಹ್ವಾನಿಸಿ ಗೌಜಿಯ ಸಮಾರಂಭ ನಡೆಸಿದೆವು . ಆಗ ಬಂದಿದ್ದು ಡೆಸ್ಕ್ ಟಾಪ್ . ನಮ್ಮೆಜಮಾನ್ರೂ ಅದಕ್ಕೆ ತಕ್ಕಂತೆ ತಯಾರಿ ನಡೆಸಲು ಪ್ರಾರಂಭಿಸಿದ್ದರು . ಇನ್ನಿತರ ಟೀವಿ , ವೀಡಿಯೋ ರಿಪೇರಿ ಉದ್ಯೋಗಗಳನ್ನು ಮೂಲೆಗಿರಿಸಿ ಸದಾಕಾಲ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಾ .....
ಆಗ ಇಲ್ಲಿ ಅಂರ್ಜಾಲ ಸಂಪರ್ಕವೂ ಇರಲಿಲ್ಲ . ಮಕ್ಕಳು ಬಹು ಬೇಗನೆ ಈ ಯಂತ್ರದ ಮುಂದೆ ಕುಳಿತು ಗೇಮ್ಸ್ ಗಳನ್ನು ಆಡಲು ಕಲಿತರು . " ನೀನೂ ಕಲೀ " ಎಂದು ನನ್ನನ್ನೂ ಹುರಿದುಂಬಿಸಿದರು . " ಈ ಆಟಗಳು ಯಾರಿಗ್ಬೇಕು " ಸುಮ್ಮನಿದ್ದೆ . ಅವನೋ ಮಹಾ ಪ್ರಚಂಡ , ಮಗುವಾಗಿದ್ದಾಗಲೇ ವೀಡಿಯೋ ಗೇಮ್ಸ್ ಆಡ್ತಿದ್ದ . ಈಗ ಕಂಪ್ಯೂಟರ್ ಗೇಮ್ಸ್ ಹೆಚ್ಚುವರಿ ಸೇರ್ಪಡೆಯಾಯ್ತು .
ನನ್ನ ಪ್ರಥಮ ಹವ್ಯಾಸವಾಗಿದ್ದ ಚಿತ್ರಕಲೆಯನ್ನು ಅರಿತಿದ್ದ ಅವನು " ಅಮ್ಮಾ , ಚಿತ್ರ ಮಾಡಲೂ ಬರುತ್ತೆ ಇದರಲ್ಲಿ " ಆಸೆ ಹುಟ್ಟು ಹಾಕಿದ .
" ಹೌದೇ " ಅನ್ನುತ್ತಾ ಪ್ರಯತ್ನಿಸಿದೆ . ಚಿತ್ರಗಳೇನೋ ಚೆನ್ನಾಗಿ ಮೂಡಿ ಬಂದವು . ಆದರೆ ಮಾಡಿದ ಚಿತ್ರಗಳು ಕೆಲವೇ ದಿನಗಳಲ್ಲಿ ಎಲ್ಲಿಗೋ ಅಂತರ್ಧಾನವಾಗುತ್ತಿದ್ದವು .
" ಅಷ್ಟು ಚೆನ್ನಾಗಿ ' ಸಿಂಡ್ರೆಲಾ ' ಚಿತ್ರ ಬಿಡಿಸಿದ್ದೆನಲ್ಲ , ಇವತ್ತು ನೋಡಿದ್ರೆ ಆ ಹುಡುಗಿ ಎಲ್ಲೋ ಓಡಿ ಹೋಗಿದ್ದಾಳೆ , ಛೆ ..ಛೆ " ನನ್ನ ತೊಳಲಾಟ ಈ ಮಕ್ಕಳಿಗೆಲ್ಲಿ ಅರ್ಥವಾಗಬೇಕು ?
ಆಸಕ್ತಿಯೇ ಹೋಯಿತು . ನನಗಾಗಿ ಹಾಡುಗಳನ್ನು ತುಂಬಿಸಿ ಕೊಟ್ಟ , ಆಯ್ತು , " ಕೇಳಿದ ಹಾಡುಗಳನ್ನೇ ಪುನಃ ಪುನಃ ಎಷ್ಟೂಂತ ಕೇಳಲೀ , ಬೇರೆ ಕೆಲ್ಸ ಇಲ್ವೇ "
ಅಲ್ಲಾಂದ್ರೂ ನಾನೂ ಕಂಪ್ಯೂಟರ್ ಹವ್ಯಾಸಿಯಾಗಿ ಅಲ್ಲೇ ಕುಳಿತಿದ್ದರೆ ಮಕ್ಕಳೂ " ಅಮ್ಮನಿಗೆ ಹೇಳಿ ಕೊಡುವ ಆಟ " ಶುರು ಮಾಡ್ಬಿಟ್ಟು ಶಾಲಾ ಪಠ್ಯಗಳ ಓದುವಿಕೆ ಕುಂಠಿತವಾಗಿ ಕಲಿಯುವುದರಲ್ಲಿ ಹಿಂದೆ ಬೀಳುತ್ತಾರೇನೋ ಎಂಬ ಭಯವೂ ಉಂಟಾಗಿ ' ಕಂಪ್ಯೂಟರ್ ಸಹವಾಸವೇ ಬೇಡ ' ಅಂದ್ಕೊಂಡು ದೂರ ಸರಿದೆ .
<><><> <><><>
ಒಂದೆರಡು ವರ್ಷಗಳಲ್ಲಿ ಅಂತರ್ಜಾಲ ಸೌಲಭ್ಯವೂ ಬಂದಿತು . ಎಷ್ಟಾದರೂ ಇದು ಕೇರಳ ರಾಜ್ಯವಲ್ಲವೇ , ' ಮನೆ ಮನೆಗೂ ಕಂಪ್ಯೂಟರ್ ಸಾಕ್ಷರತೆ ' ಯ ಅಭಿಯಾನ ಆರಂಭವಾಗಿತ್ತು . ಶಾಲೆ , ಸರ್ಕಾರೀ ಕಛೇರಿಗಳಿಗೆ ಕಂಪ್ಯೂಟರ್ ಯಂತ್ರ ಬಂದಿತ್ತು . ನಾನು ಆಗಾಗ ಭೇಟಿ ನೀಡುತ್ತಿದ್ದ ' ಹೆದ್ದಾರಿ ಶಾಲಾ ಮಿತ್ರ ಮಂಡಲ' ದ ಲೈಬ್ರರಿ ಕೊಠಡಿಯಲ್ಲಿ ಶಾಲೆಗೆಂದು ಬಂದಿದ್ದ ಕಂಪ್ಯೂಟರ್ ಯಂತ್ರವನ್ನು ಇಟ್ಟುಕೊಂಡಿದ್ದರು .
ಆಗ್ಗಿಂದಾಗ್ಗೆ ಭೇಟಿ ನೀಡುತ್ತ ಇದ್ದ ಈ ಲೈಬ್ರರಿಗೆ ಒಂದು ದಿನ ಹೊಸ ಪುಸ್ತಕಗಳೇನಾದರೂ ಇದ್ದರೆ ತರೋಣವೆಂದು ಹೋಗಿದ್ದೆ . ಲೈಬ್ರೇರಿಯನ್ ಆಚಾರ್ ಮೇಸ್ಟ್ರು ದಿನ ಪತ್ರಿಕೆ ಓದ್ತಾ ಇದ್ದರು . ಅವರನ್ನ ಮಾತಿಗೆಳೆದೆ .
" ಕಂಪ್ಯೂಟರು ಬಂತಲ್ಲ "
" ಬಂದಿದೆ , ನಾವು ಟೀಚರ್ಸ್ ಮೂದಲು ಕಲಿತು ಆಗ್ಲಿ , ಆ ಮೇಲೆ ಈ ಮಕ್ಕಳಿಗೆ ಹೇಳಿ ಕೊಡೋಣಾ "
ಕಂಪ್ಯೂಟರನ್ನು ಇಟ್ಟುಕೊಂಡಿದ್ದಂತಹ ಕೊಠಡಿಗೆ ಇಣುಕಿದೆ . ಇಬ್ಬರು ಅಧ್ಯಾಪಕರು ಅದರ ಮುಂದೆ ನಿಂತು ಗಹನವಾಗಿ ಅವಲೋಕಿಸುತ್ತಿದ್ದಂತೆ , ಲೈಬ್ರರಿ ಬುಕ್ಸ್ ಗಳೊಂದಿಗೆ ಮನೆಯ ಕಡೆ ನಡೆದೆ .
ನಮ್ಮ ನೆರೆಯಲ್ಲಿ ಒಂದು ಚೆಕ್ ಪೋಸ್ಟ್ ಆಫೀಸ್ ಇದೆ . ಅಲ್ಲಿಗೆ ಬಾರದಿರುತ್ತದೆಯೆ , ನಮ್ಮವರು ಅಲ್ಲಿದ್ದ ಮಲಯಾಳೀ ಉದ್ಯೋಗಸ್ಥರೊಂದಿಗೆ ಪಟ್ಟಾಂಗ ಮಾಡಿ ಬಂದ್ರು . " ಸರ್ಕಾರ ಕೊಟ್ಟಿದೆ , ಯಾಕೆ ಬಂದಿದೇ ಅಂತಾನೂ ಗೊತ್ತಿಲ್ಲ , ಇಟ್ಕೊಂಡು ಏನು ಮಾಡೋದು ಅಂತಾನೂ ಗೊತ್ತಿಲ್ವಂತೆ "
ಅಂತರ್ಜಾಲ ಸೌಲಭ್ಯ ಬಂದೊಡನೆ ಸ್ವಲ್ಪ ಚುರುಕಾದೆ . ದೂರದ ದುಬೈಯಲ್ಲಿರುವ ಬಾಲ್ಯ ಗೆಳತಿಯ ನೆನಪಾಯ್ತು . ಅವಳ ಅಮ್ಮಂಗೆ ಫೋನಾಯಿಸಿ ಇ ಮೇಲ್ ಅಡ್ರೆಸ್ ಪಡೆದೆ . ಮಕ್ಕಳ ಸಹಾಯದಿಂದ ಮೇಲ್ ಕಳ್ಸಿ , ಅವಳಿಂದ ಉತ್ತರವೂ ಬಂತು . ಮನೆ ಸುದ್ದಿ , ಮಕ್ಕಳ ಚಟುವಟಿಕೆಗಳ ವಿವರಣೆ ಇತ್ಯಾದಿಯಿಂದ ತೊಡಗಿ ಅಡುಗೆಮನೆ ವಹಿವಾಟಿನವರೆಗೆ ಮೇಲ್ ಓಡಾಡುತ್ತ ಇತ್ತು . ಕಿವಿಗೆ ಹೆಡ್ ಫೋನ್ ತಗಲಿಸಿ ನೇರ ಮಾತುಕತೆಯೂ ಆಯಿತು . ' ಮೆಕ್ಸಿಕನ್ ರೈಸ್ ' ಮಾಡುವ ವಿಧಾನವನ್ನು ಬರೆದು ಕಳಿಸಿದ್ದೇ ಕೊನೆಯದು . ಅಂರ್ಜಾಲ ಸಂಪರ್ಕ ತಾತ್ಕಾಲಿಕವಾಗಿದ್ದುದರಿಂದ ಮಾತುಕತೆ ನಿಂತು ಹೋಯಿತು . ಅವಳು ಆ ತಿಂಡಿಯನ್ನು ಮಾಡಿದಳೋ ಬಿಟ್ಟಳೋ ಒಂದೂ ತಿಳಿಯಲಿಲ್ಲ . ಅಲ್ಲಿಗೆ ಪುನಃ ಕಂಪ್ಯೂಟರ್ ಸಹವಾಸ ಕಡಿಯಿತು .
ಮಕ್ಕಳ ಶಿಕ್ಷಣದ ಪ್ರಗತಿಗೆ ಪೂರಕವಾಗಿರಲಿ ಎಂದು ತಂದ ಕಂಪ್ಯೂಟರ್ ಡೆಸ್ಕ್ ಟಾಪ್ ನಿಂದ ಲ್ಯಾಪ್ ಟಾಪ್ ಗೆ ಜಿಗಿಯಿತು . ಲ್ಯಾಪ್ ಟಾಪ್ ನ ಹೊಸ ಹೊಸ ಅವತರಣಿಕೆಗಳು ಮಾರ್ಕೇಟ್ ಗೆ ಲಗ್ಗೆಯಿಡುತ್ತಿದ್ದಂತೆ ನಮ್ಮ ಮನೆಗೂ ಅದೆಲ್ಲಿಂದಲೋ ಓಡಿ ಬರ್ತಿದ್ವು . ಗಳಿಗೆಗೊಂದು ಥರ ಬಣ್ಣ ಬದಲಾಯಿಸುವ ಗೋಸುಂಬೆಯಂತಹ ಈ ಯಂತ್ರಗಳನ್ನು ನೋಡಿಯೇ ನಾನು ಸುಸ್ತು . ವಾರಕ್ಕೊಮ್ಮೆ ಮಗಳು ತರುತ್ತಿದ್ದ ಲೈಬ್ರರಿ ಪುಸ್ತಕಗಳು , ' ಸುಧಾ ' ಖಾಯಂ ಸಂಗಾತಿಗಳಾಗಿಉಳಿದುವು .
" ಲ್ಯಾಪ್ ಟಾಪ್ ಗಿಂತ ಹೆಚ್ಚಿನದು ಬರ್ತಾ ಇದೆ , ನೋಡ್ತಿರು .." ನಮ್ಮವರು ಆಗಾಗ ಅನ್ತಿದ್ರು . ಅದೂ ಒಂದು ದಿನ ಬಂದಿತು . ಅಮೇರಿಕೆಯಲ್ಲಿದ್ದ ಶ್ಯಾಮ್ ಊರಿಗೆ ಬರುವವನಿದ್ದ . ಬರೋವಾಗ ಐ - ಪ್ಯಾಡ್ ಕೊಂಡು ತರಲು ನಮ್ಮವರು ಹೇಳಿದ್ದರು . ಅವನೂ ತಂದೇ ಬಿಟ್ಟ . ಚಿನ್ನದ ಅಲ್ಲಲ್ಲ , ವಜ್ರಾಭರಣದಂತೆ ಅದನ್ನು ಜೋಪಾನ ಮಾಡುತ್ತಿದ್ದನ್ನು ನೋಡಿದ್ರೆ , ಸಮಾನಮನಸ್ಕ ಸ್ನೇಹಿತರಿಗೆ ತೋರಿಸಿ , ವೈಶಿಷ್ಟ್ಯಗಳ ವರ್ಣನೆ ಮಾಡುತ್ತಾ ಇರಬೇಕಾದರೆ , ನಾವ್ಯಾರೂ ಮುಟ್ಟೋ ಹಾಗೇ ಇರ್ಲಿಲ್ಲ . ಪುಟ್ಟ ಮಕ್ಕಳ ಸ್ಲೇಟಿನಂತಹ ಈ ಸಾಧನವನ್ನು ಕರಗತ ಮಾಡಿಕೊಳ್ಳಲು ನಮ್ಮೆಜಮಾನ್ರು ಹಾಗೂ ಗಿರೀಶ್ ಆ ಸಮಯದಲ್ಲಿ ತುಂಬಾ ಶ್ರಮ ಪಟ್ಟಿದ್ದಾರೆ . ಸ್ವಯಂ ಸಾಧನೆಯಿಂದಲೇ ತುದಿಬೆರಳಿನಿಂದ ಅಂತರ್ಜಾಲದಲ್ಲಿ ವಿಹರಿಸುತ್ತಿದುದನ್ನು ನೋಡುತ್ತಲೇ ಬಂದೆ . ಮಕ್ಕಳೂ ಪಾದರಸ ವೇಗದಲ್ಲಿ ಅಪ್ಪನನ್ನೂ ಮೀರಿಸಿದರು .
<><><> <><><>
" ರಜಾ.....ರಜಾ .. " ಮಗಳು ಕುಣಿಯುತ್ತ ಮನೆಗೆ ಬಂದಳು .
" ಪರೀಕ್ಷೆಗೆ ಓದು "
" ಪರೀಕ್ಷೆಗೆ ಇನ್ನೂ ಎರಡು ತಿಂಗಳಿದೆ , ಒಂದೊಂದು ಪರೀಕ್ಷೆಗೂ ವಾರಗಟ್ಳೆ ಗ್ಯಾಪ್ ಇದೆಯಮ್ಮ , ಈಗಲೇ ಓದಿದ್ರೆ ಮರ್ತು ಹೋಗುತ್ತೆ "
ಮೂರು ಬಸ್ಸು ಬದಲಾಯಿಸಿ ದಿನಾ ಮಂಗಳೂರಿಗೆ ಹೋಗಿ ಬಂದು ಮಾಡ್ತಿದ್ದಳು , ಹೀಗೆ ಹೇಳೂದು ಸಹಜವೇ . ನಾಲ್ಕು ದಿನ ವಿಶ್ರಾಂತಿ ಪಡೆಯಲಿ ಅಂತ ಕೆಲವು ದಿನ ಸುಮ್ಮನಿದ್ದೆ . ಇವಳ ಎಕ್ಸಾಮ್ ಮುಗಿದು , ರಿಸಲ್ಟ್ ಬಂದು , ಅವಳ ಆಯ್ಕೆಯ ವೃತ್ತಿಪರ ಕೋರ್ಸ್ ಆರಂಭ ಆಗುವಷ್ಟರಲ್ಲಿ ಇನ್ನೊಂದಾರು ತಿಂಗಳಾದರೂ ಆದೀತು , ಅಷ್ಟು ದಿನಗಳೂ ನನ್ನ ಪತ್ರಿಕೆಗಳು ಖೋತಾ .
ಕೆಲವು ದಿನ ಸುಮ್ಮನಿದ್ದೆ . " ರಜಾ ಮಜಾ ಅಂತ ಮನೇಲೇ ಇದ್ದೀಯಲ್ಲ , ಲೈಬ್ರರಿ ಬುಕ್ಸ್ ಆದ್ರೂ ತಂದ್ಕೊಡು " ಅವಳು ಕ್ಯಾರೇ ಅನ್ನಲಿಲ್ಲ . ನಮ್ಮವರೂ " ಏನು ಬೇಕಾದ್ರೂ ಕಂಪ್ಯೂಟರ್ ನಲ್ಲಿ ಓದಬಹುದು " ಎಂದು ಛೇಡಿಸಿದರು .
ಸಿಟ್ಟು ಬಂದು ಬಿಟ್ಟಿತು . " ಹೌದೇ , ನಾನೂ ಓದ್ತೀನಿ " ಮಗಳ ಮುಖ ನೋಡಿದೆ . ಅವಳೂ ವಿಧಿಯಿಲ್ಲದೆ " ಹೀಗ್ಹೀಗೆ ಮಾಡು " ಎಂದು ಬೆರಳನ್ನು ಅತ್ತ ಇತ್ತ ಐ - ಪ್ಯಾಡ್ ಮೇಲೆ ಆಡಿಸಿ ತೋರಿಸಿದಳು . ಅಂತೂ ಓದಲು ಸಾಧನ ದೊರೆಯಿತು . ನೆಮ್ಮದಿ ಸಿಕ್ಕಿತು .
ಮಗನೂ ಬಂದ . ಅವನದ್ದೂ ಇಂಜಿನಿಯರಿಂಗ್ ಪರೀಕ್ಷೆ ಮುಗಿದಿತ್ತು . " ಅತ್ರಿ ಬುಕ್ ಸೆಂಟರಿಂದ ನಾನು ಹೇಳಿದ ಪುಸ್ತಕ ತಂದಿದ್ದೀಯಾ " ನನ್ನ ತನಿಖೆ . " ಹೋಗಮ್ಮ , ಮನೆಗೆ ಬಂದ ಕೂಡ್ಲೇ ಶುರುವಾಯ್ತು ನಿಂದು " ರೇಗಾಡಿದ .
ನನ್ನ ಪಾಡಿಗೆ ಐ - ಪ್ಯಾಡ್ ಹಿಡಿದು ಕನ್ನಡಕ ಮೂಗಿಗೇರಿಸಿ ಓದುತ್ತಾ ಮಗ್ನಳಾಗಿದ್ದುದು ಒಂದು ದಿನ ಮಗನ ದೃಷ್ಟಿಗೆ ಬಿತ್ತು . ಏನ್ ಮಾಡ್ತಿದಾಳೆ ಅಂದ್ಕೊಂಡು ಬಗ್ಗಿ ನೋಡಿದ .
" ಅಮ್ಮಂಗೊಂದು ಫೇಸ್ ಬುಕ್ ಮಾಡ್ಕೊಡೇ " ತಂಗಿಗೆ ಆಜ್ಞಾಪಿಸಿದ .
ಅವಳು ಆ ಕೂಡಲೇ ನನ್ನ ಕೈಲಿದ್ದ ಐ - ಪ್ಯಾಡ್ ಅನ್ನು ಕಿತ್ತುಕೊಂಡು ತಟಪಟನೆ ಬೆರಳಾಡಿಸುತ್ತಾ , ನನ್ನ ಜಾತಕವನ್ನೂ ಬರೆದು ಸಿದ್ಧ ಪಡಿಸಿ ಕೊಟ್ಟೂ ಆಯ್ತು .
ಮುಂದೇನಾಯ್ತಂತೆ ,
ನೀರಿಗಿಳಿದ ಮೀನಿನಂತೆ ,
ರೆಕ್ಕೆ ಬಲಿತ ಹಕ್ಕಿಯಂತೆ,
ಕಾಲಿಗೆರಡು ಚಕ್ರ ಬಂದಂತೆ.....
Photo by : Vishnu Vijay
Posted via DraftCraft app
Subscribe to:
Post Comments (Atom)
0 comments:
Post a Comment