ಅಡುಗೆ ಕೆಲಸವೆಲ್ಲ ಮುಗಿದಿತ್ತು . ಊಟಕ್ಕೆ ಇನ್ನೂ ಬೇಕಾದಷ್ಟು ಸಮಯವಿತ್ತು .
" ಒಂದು ದಿಢೀರ್ ಸಾರು ಮಾಡೋಣ " ಅನ್ನಿಸಿದ್ದೇ ತಡ , ನಾಲ್ಕಾರು ಪುನರ್ಪುಳಿ ಹಣ್ಣಿನ ಒಣ ಸಿಪ್ಪೆಗಳು ಡಬ್ಬದಿಂದ ನೀರಿಗೆ ಬಿದ್ದುವು .
ಹತ್ತಾರು ಬೆಳ್ಳುಳ್ಳಿ ಎಸಳುಗಳು ಸಿಪ್ಪೆ ಬಿಚ್ಚಿ ತಯಾರಾಗಿ ಒಗ್ಗರಣೆ ಸಟ್ಟುಗ ಏರಿದುವು .
ನೀರಿನಲ್ಲಿ ಪುನರ್ಪುಳಿ ಬಣ್ಣ ಬಿಡುತ್ತ ಕೆಂಪಾಯಿತು . ಕುದಿ ಕುದಿದು ಇನ್ನಷ್ಟು ಕೆಂಪಾಯಿತು .
ಒಗ್ಗರಣೆ ಸೌಟನ್ನು ಉರಿಯಲ್ಲಿಟ್ಟು ಬೆಳ್ಳುಳ್ಳಿ ' ಘಂ ' ಅನ್ನಿಸಿ ಸಾಸಿವೆ ಚಟ ಚಟ ಸದ್ದು ಮಾಡುತ್ತಾ ಸಾರಿನೊಳಗೆ ಬಿದ್ದಾಯಿತು .
" ಒಹ್ , ಬೆಲ್ಲ ಹಾಕಿಲ್ಲ " ಬೆಲ್ಲ ಪುಡಿ ಪುಡಿಯಾಗಿ ಸಾರಿನೊಳಗೆ ಬಿದ್ದಿತು .
ಅಷ್ಟಾಗುವಾಗ ತಲೆಯಲ್ಲೊಂದು ಹೊಸ ಯೋಚನೆ ಬಂದಿತು .
" ಇದಕ್ಕೆ ಸಾಂಬ್ರಾಣಿ ಸೊಪ್ಪು ಹಾಕಿದರೆ ಹೇಗೆ "
ಸರಿ , ಅಂಗಳಕ್ಕಿಳಿದು ಒಂದ್ಹತ್ತು ಎಲೆಗಳನ್ನು ಚಿವುಟಿ ತಂದು , ಸಣ್ಣಗೆ ತುಂಡರಿಸಿ , ತುಪ್ಪದಲ್ಲಿ ಬಾಡಿಸಿ , ಮಿಕ್ಸಿಯಲ್ಲಿ ತಿರುಗಿಸಿ ಪುನಃ ಸಾರಿಗೆ ಸೇರಿಸಿ ಕುದಿಸಬೇಕಾಯಿತು .
ಕುದಿಯುತ್ತಿದ್ದಂತೆ " ಏನಾಗ್ಹೋಯ್ತು " , ಪುನರ್ಪುಳಿಯ ಗಾಢ ಬಣ್ಣವೆಲ್ಲ ಮಾಯ ! ಸಾರಿನ ಮಾಸಲು ವರ್ಣ ನೋಡಿ " ಛೆ , ಏನ್ಮಾಡ್ಬಿಟ್ಟೆ " ಪರಿತಪಿಸುವ ಸರದಿ .
" ನೋಡೋಣ " ಒಂದು ಸೌಟು ಸಾರನ್ನು ತೆಗೆದು ಚಿಕ್ಕ ತಟ್ಟೆಗೆ ಎರೆದು ಕುಡಿಯಬೇಕಾಯಿತು , " ಆಹ್, ಏನು ಸುವಾಸನೆ ! ಅದೇನೇನೋ ಅಡುಗೆ ಮಾಡಿ ತೋರಿಸ್ತಾರಲ್ಲ ಟೀವಿ ಅಡುಗೆ ಕಾರ್ಯಕ್ರಮಗಳಲ್ಲಿ , ಇದೇ ಚೆನ್ನಾಗಿದೆ ", ಊಟದ ಸಿದ್ಧತೆ ನಡೆಯಿತು .
ದೊಡ್ಡಪತ್ರೆ ಎಂದೂ ಹೆಸರಿರುವ ಈ ಎಲೆಯನ್ನು ಅಡುಗೆಯಲ್ಲಿ ವೈವಿಧ್ಯಮಯವಾಗಿ ಬಳಸಲು ಮಹಿಳೆಯರು ತಿಳಿದಿದ್ದಾರೆ . ಬೋಂಡಾ , ಬಜ್ಜಿ , ಪಕೋಡಾ , ಇತ್ಯಾದಿ . ದೋಸೆಯನ್ನೂ ಮಾಡಬಹುದು . ಎಲ್ಲವೂ ಅವರವರ ಪಾಕ ಪ್ರಾವೀಣ್ಯತೆಗೆ ಬಿಟ್ಟಿದ್ದು . ಗಾಢ ಸುವಾಸನೆಯಿಂದಾಗಿ ನಾನ್ ವೆಜ್ ಅಡುಗೆಯಲ್ಲೂ ಬಳಸುತ್ತಾರೆ .
ಶೀತ , ಕೆಮ್ಮು , ಜ್ವರಗಳಿಗೆ ಉಪಶಮನಕಾರಿಯಾಗಿ ಇದು ಮನೆಮದ್ದಾಗಿ ಉಪಯೋಗದಲ್ಲಿದೆ . ಎಳೆಯ ಹಾಲುಹಸುಳೆ ಏನೇ ತೊಂದರೆಯಾದರೂ ಅಳುವಿನಲ್ಲಿ ತೋರ್ಪಡಿಸುತ್ತದೆ . ಅನುಭವಸ್ಥ ಅಜ್ಜಿಯಂದಿರು ಕೂಡಲೇ ಮಗುವಿನ ಸಮಸ್ಯೆಯನ್ನು ಗುರ್ತಿಸಿ , ಹಿತ್ತಿಲಿನಿಂದ ಸಾಂಬ್ರಾಣಿ ಸೊಪ್ಪು ತಂದು , ಒಲೆಯ ಕೆಂಡದ ಮೇಲಿಟ್ಟು ಬಾಡಿಸಿ , ರಸ ಹಿಂಡಿ ಜೇನಿನೊಂದಿಗೆ ಕುಡಿಸಿ ಬಿಡುತ್ತಾರೆ . ಮಗುವಿಗೆ ಹೊಟ್ಟೆ ಕಟ್ಟಿದ್ದರೆ , ವಾಯು ತೊಂದರೆಯಾಗಿದ್ದರೆ , ಕಫ ತುಂಬಿ ಬಾಧೆ
ಪಡುತ್ತಿದ್ದರೆ , ಸಾಂಬ್ರಾಣಿ ಜೇನಿನ ರಸವನ್ನು ಕುಡಿಸಿದಂತೆ ಮಲವಿಸರ್ಜನೆಯಾಗಿ ಮಗು ನಿರಾತಂಕವಾಗಿ ಆಟ ಪ್ರಾರಂಭಿಸುವುದು . ಹೀಗೆ ಎರಡು ದಿನಕ್ಕೊಮ್ಮೆ ಈ ರಸ ಕುಡಿಸುತ್ತಾ ಬಂದಲ್ಲಿ ಆರೋಗ್ಯದಲ್ಲಿ ಯಾವ ವ್ಯತ್ಯಯವೂ ಆಗುವುದಿಲ್ಲ . " ಮಗು ಮೈ ಹುಷಾರಿಲ್ಲ " ಎಂದು ವೈದ್ಯರಲ್ಲಿಗೆ ಹೋಗಬೇಕಾಗುವುದೂ ಇಲ್ಲ . " ಒಲೆಯೆಲ್ಲಿದೆ , ಕೆಂಡವೆಲ್ಲಿದೆ ? " ಅನ್ನದಿರಿ . ಮೈಕ್ರೋವೇವ್ ಅವೆನ್ ಒಳಗಿಟ್ಟು ತೆಗೆಯಿರಿ .
ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುವ ನರಗಳ ಸೆಡವು ಅಥವಾ ' ಬಾಲಗ್ರಹ ' ಇನ್ನೊಂದು ಪೀಡೆ . ಈ ಸಮಸ್ಯೆಗೂ ಪರಿಣಾಮಕಾರೀ ಔಷಧಿಯಾಗಿ ಸಾಂಬ್ರಾಣಿ ನಮ್ಮ ನಾಟೀ ವೈದ್ಯ ಪದ್ಧತಿಯಲ್ಲಿದೆ .
ಜೀರ್ಣ ಶಕ್ತಿ ಚುರುಕಾಗುವುದು . ಯಾವಾಗ ತಿಂದ ಆಹಾರ ಸರಿಯಾಗಿ ಪಚನವಾಗುವುದಿಲ್ಲವೋ ಆಗಲೇ ಶರೀರದ ಅಂಗಾಂಗಗಳು ಮುಷ್ಕರ ಹೂಡಲು ಪ್ರಾರಂಭ ಎಂದೇ ತಿಳಿಯಿರಿ . ಹೀಗಾಗದಂತಿರಲು ನಿಯಮಿತವಾಗಿ ಸಾಂಬ್ರಾಣಿಯ ಬಳಕೆ ಮಾಡುವುದು ಸೂಕ್ತ . ಗ್ರಾಮೀಣ ಪ್ರದೇಶದ ರೈತಾಪಿ ಹೆಂಗಸರು ಆಸ್ಪತ್ರೆಗೆ ಹೋಗುವುದು ತೀರಾ ಕಡಿಮೆ . ಇಂತಹ ಔಷಧಯುಕ್ತ ವನ್ಯಸಸ್ಯಗಳ ಬಳಕೆಯಲ್ಲಿ ಅವರು ನಿಷ್ಣಾತರಾಗಿದ್ದಾರೆ , ತಮಗೆ ತಿಳಿದಿರುವ ಗುಟ್ಟುಗಳನ್ನು ಅಷ್ಟು ಸುಲಭವಾಗಿ ಬಿಟ್ಟು ಕೊಡುವವರೂ ಅಲ್ಲ . ಪಂಡಿತರಂತೆ ವಿವರಿಸಿ ಹೇಳಲೂ ಅವರಿಗೆ ತಿಳಿದಿರುವುದೂ ಇಲ್ಲ . ವಿವರಿಸಿ ಹೇಳುತ್ತೇನೆ ಕೇಳಿ , ನಮ್ಮ ತೋಟದಲ್ಲಿ ಅಶೋಕ ವೃಕ್ಷಗಳು ಬೇಕಾದಷ್ಟು ಇವೆ . ಊರಿನ ನಾಟೀ ವೈದ್ಯರೊಬ್ಬರು ವಾರಕ್ಕೊಮ್ಮೆ ಬಂದು ಆ ಮರಗಳ ತೊಗಟೆಯನ್ನು ಕೆತ್ತಿ ತೆಗೆದು ಕೊಂಡೊಯ್ಯುತ್ತಿದ್ದರು . " ಯಾಕೆ , ಯಾರಿಗೆ ?" ಎಂದು ಪ್ರಶ್ನಿಸುವವರಿಲ್ಲ . ಕೇಳಿದರೆ ಅವರು ಹೇಳುವವರೂ ಅಲ್ಲ . ಆ ವೈದ್ಯರಿಗೆ ಗೊತ್ತಿದ್ದ ಆ ನಾಟೀ ಮದ್ದು ಅವರ ತಲೆಮಾರಿಗೇ ಮುಕ್ತಾಯವಾಗಿಬಿಟ್ಟಿದೆ .
ಕೇವಲ ನೆಗಡಿ , ಕೆಮ್ಮುಗಳಿಗೆ ಮಾತ್ರವಲ್ಲ , ಶರೀರದ ಒಳಾಂಗಗಳಾದ ಲಿವರ್ , ಕಿಡ್ನಿಗಳ ತೊಂದರೆಗೂ ಇದು ಔಷಧಿಯಂತೆ . ಪಿತ್ತಜನಕಾಂಗದಲ್ಲಿ ಕಲ್ಲುಗಳು ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಖಾಯಿಲೆ . ಅದಕ್ಕೂ ಇದು ಔಷಧವಂತೆ . ಆಸ್ಪತ್ರೆಗೆ ಹೋಗಿ ಆಪರೇಶನ್ ಮಾಡಿಸುವ ಆಂಗಾಂಗಗಳನ್ನು ಕತ್ತರಿಸುವ ತಂತ್ರವೊಂದೇ ನಮಗೆ ತಿಳಿದಿದೆ . ಆಸ್ಪತ್ರೆಗಳೂ ಅಷ್ಟೇ , ಆಪರೇಷನ್ ಮಾಡಿ ಬಡಪಾಯಿ ರೋಗಿ ಜೀವನ್ಮರಣದಲ್ಲಿ ಹೋರಾಟ ನಡೆಸುತ್ತಿದ್ದಾನೊ ಎಂಬಂತೆ ಕೃತಕ ಯಂತ್ರೋಪಕರಣಗಳನ್ನು ಜೋಡಿಸಿ , ಕೊನೆಗೊಮ್ಮೆ " ಈ ಕೇಸು ಪ್ರಯೋಜನವಿಲ್ಲ " ಎಂದು ಕೈ ಚೆಲ್ಲಿ ಬಿಡುತ್ತಾರೆ . ಆ ಹೊತ್ತಿಗೆ ಲಕ್ಷಗಟ್ಟಲೆ ಸುಲಿಗೆಯಂತೂ ಆಗಿರುತ್ತದೆ .
ಹಿಂದಿನಿಂದಲೂ ಇದು ಜನಸಾಮಾನ್ಯರ ಔಷಧೀಯ ಸಸ್ಯವಾಗಿತ್ತು . ಇದರ ಮರ್ಮಗಳನ್ನು ತಿಳಿದು ಉಪಯೋಗಿಸುವ ಪಂಡಿತೋತ್ತಮರು ನಮ್ಮ ನಡುವೆ ಬಹಳಷ್ಟಿಲ್ಲ . ಪರಂಪರಾಗತ ಔಷಧವಿಜ್ಞಾನದಲ್ಲಿ ನಾವು ನಂಬಿಕೆ ಕಳಕೊಳ್ಳಲು ಇದೂ ಒಂದು ಕಾರಣವಿರಬಹುದೇನೋ.. ಸರಿಯಾದ ಮಾನದಂಡವಿಲ್ಲದೆ ಅದ್ಭುತ ವೈದ್ಯಕೀಯ ಸಸ್ಯಗಳನ್ನು ಬೇಕಾಬಿಟ್ಟಿ ಉಪಯೋಗಿಸಿ, ಕೊನೆಗೆ ಈ ' ಅಣಲೆಕಾಯಿ ಮದ್ದು ' ಗಳು ನಿರರ್ಥಕ ಎಂಬ ತೀರ್ಮಾನಕ್ಕೆ ಬರುವುದರಿಂದ ನಮ್ಮ ಪ್ರಾಚೀನ ಔಷಧ ಶಾಸ್ತ್ರ ಯಾರಿಗೂ ಬೇಡವಾದ ಜ್ಞಾನವಾಗಿ ಹೋದೀತು .
ಚೇಳು ಕಡಿತ , ಚರ್ಮದ ಅಲರ್ಜಿ , ಹುಣ್ಣುಗಳು , ಗಾಯಗಳು , ಜ್ವರ , ಅತಿಸಾರಗಳಲ್ಲಿ ಪರಿಣಾಮಕಾರಿಯಾಗಿ ಉಪಯೋಗ . ಆಂಟಿ ಸೆಪ್ಟಿಕ್ , ಸೋಂಕು ನಿವಾರಕ .
ಏನೇ ತಲೆನೋವು ಬರಲಿ , " ಒಂದು ಮಾತ್ರೆ ತಿಂದರಾಯ್ತು " ಅಂದ್ಕೊಂಡು ವರ್ಷಪೂರ್ತಿ ಪಾರಾಸಿಟಾಮಾಲ್ ಮಾತ್ರೆಗಳನ್ನು ನುಂಗುತ್ತ ದಿನ ನೂಕುವವರಿದ್ದಾರೆ . ಇದು ಮಿತಿ ಮೀರಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ . ಈ ಮದ್ದುಗಳ ಸೇವನಾನಂತರ ಶರೀರದ ಪಚನಾಂಗಗಳು ಉಳಿದ ಶೇಷವನ್ನು ಹೊರ ಹಾಕುತ್ತವೆಯೇ , ಖಂಡಿತ ಇಲ್ಲ . ಲಿವರ್ , ಕಿಡ್ನಿ , ಗಾಲ್ ಬ್ಲಾಡರ್, ಪ್ಯಾಂಕ್ರಿಯಾಸ್ ....ಎಲ್ಲವೂ ಹಾನಿಗೊಳಗಾಗುತ್ತವೆ . ನಿಯಮಿತವಾಗಿ ಸಾಂಬ್ರಾಣಿಯ ಬಳಕೆ ಮಾಡುತ್ತಿದ್ದಲ್ಲಿ ಇಂತಹ ತೊಂದರೆಗಳನ್ನು ತಡೆಯಬಹುದೆಂದು ಈಗಿನ ವೈದ್ಯಕೀಯ ಸಂಶೋಧನೆಗಳು ಹೇಳುತ್ತವೆ .
ಆಡುನುಡಿಯಲ್ಲಿ ' ಸಾಂಬ್ರಾಣಿ ' ಯಾಗಿರುವ ಈ ಸಸ್ಯ ಶಿಷ್ಟ ಕನ್ನಡದಲ್ಲಿ ' ದೊಡ್ಡಪತ್ರೆ ' ಯಾಗಿದೆ.
ಮಲಯಾಳಂ ನಲ್ಲಿ പനിക്കൂർക്ക ಎಂದೂ , ತಮಿಳು ಭಾಷೆಯಲ್ಲಿ கற்பூரவள்ளி ಎಂದೂ ಹೆಸರಿರಿಸಿದ್ದಾರೆ . ಸಸ್ಯಶಾಸ್ತ್ರೀಯವಾಗಿ ಇದು Plectranthus amboinicus , ಹಾಗೂ Lamiaceae ಕುಟುಂಬಕ್ಕೆ ಸೇರಿದೆ . ಇದು ಒಂದು ಅಪ್ಪಟ ಭಾರತೀಯ ಸಸ್ಯ .
ಕೈದೋಟದಲ್ಲಿ ಅಲಂಕಾರಿಕ ಸಸ್ಯ . ಕ್ರೋಟನ್ ಗಿಡಗಳಂತೆ ಬೇರೆ ಬೇರೆ ವರ್ಣಗಳಲ್ಲಿ ಲಭ್ಯ . ವಿಪರೀತ ಬಿಸಿಲು ಇದರ ಸೌಂದರ್ಯವನ್ನು ಮಂಕಾಗಿಸುತ್ತದೆ . ಒಳಾಂಗಣದ ಕುಂಡಗಳಲ್ಲಿಯೂ ಬೆಳೆಸಬಹುದು .
Posted via DraftCraft app
Subscribe to:
Post Comments (Atom)
0 comments:
Post a Comment