Monday, 5 November 2012
ಕೊಕ್ಕೋ ಚಾಕಲೇಟ್
ಚಿಕ್ಕ ಮಕ್ಕಳಿಗೆ ಹೊಸ ತಿಂಡಿಗಳನ್ನು ಮನೆಯಲ್ಲೇ ಸ್ವಾದಿಷ್ಟವಾಗಿ ತಯಾರಿಸಿ ಕೊಡುವುದು ಒಂದು ದೊಡ್ಡ ಸವಾಲ್ . ದಿನಕ್ಕೊಂದು ಹೊಸ ರುಚಿಗಳನ್ನು ಮಾಡುವ ಒತ್ತಡದಿಂದ ನನಗೆ ಸುಲಭವಾಗಿ ಲಭ್ಯವಾಗಿದ್ದು ಟೀವಿ ಚಾನಲ್ ಕಾರ್ಯಕ್ರಮಗಳು . ಆ ಕಾಲದಲ್ಲಿ ಇದ್ದಿದ್ದು ಕನ್ನಡದ ಏಕಮೇವ ' ಚಂದನ ' . ಕ್ರಮೇಣ ಇನ್ನಷ್ಟು ವಾಹಿನಿಗಳು ಬಂದವು . ಅನಿವಾರ್ಯವಾಗಿ ನೋಡ್ತಾ ಇದ್ದೆ , ಬರೆದಿಟ್ಟುಕೊಳ್ಳುವುದೂ , ಪ್ರಯೋಗ ಮಾಡುವುದೂ , ಮಕ್ಕಳಿಂದ ಶಹಬ್ಬಾಸ್ ಗಿರಿ ಪಡೆಯುವುದೂ , ಚೆನ್ನಾಗಿಲ್ಲಾಂದ್ರೆ " ನೀನೇ ತಿನ್ನು " ಅನ್ನಿಸ್ಕೊಳ್ಳುವುದೂ ಮಾಮೂಲಿಯಾಗಿತ್ತು . ಈಗಂತೂ ಅಡುಗೆ ಕಾರ್ಯಕ್ರಮಗಳು ಟೀವಿ ವಾಹಿನಿಗಳ ಅವಿಭಾಜ್ಯ ಅಂಗವಾಗಿವೆ .
ಅಂತಹ ಒಂದು ಸಂದರ್ಭದಲ್ಲಿ ಕಲಿತದ್ದು....
ಒಂದು ಪ್ಯಾಕ್ ಖರ್ಜೂರವನ್ನು ಬೀಜ ತೆಗೆದು ಕುಕ್ಕರಿನಲ್ಲಿ ಒಂದು ವಿಸಿಲ್ ಬರುವವರೆಗೆ ನೀರು ಹಾಕದೆ ಬೇಯಿಸಿ .
ಒಂದು ಕಪ್ ಸಕ್ಕರೆ ಪುಡಿ ಮಾಡಿ .
ಒಂದು ಕಪ್ ಕೊಕ್ಕೋ ಹುಡಿ (ಹೆಚ್ಚಾದರೂ ತೊಂದರೆಯಿಲ್ಲ).
ಬೇಯಿಸಿದ ಖರ್ಜೂರವನ್ನು ಮಿಕ್ಸಿಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕಿ ಪೇಸ್ಟ್ ಮಾಡಿ.
ಒಲೆಯ ಮೇಲೆ ದಪ್ಪ ಬಾಣಲೆ ಇಡಿ . ನಾಲ್ಕು ಚಮಚ ತುಪ್ಪದೊಂದಿಗೆ ಖರ್ಜೂರದ ಮಿಶ್ರಣ , ಸಕ್ಕರೆ ಸೇರಿಸಿ ಕಾಯಲು ಬಿಡಿ . ಕೊಕ್ಕೋ ಪುಡಿ ಹಾಕಿ ಗಟ್ಟಿ ಪಾಕ ಆಗುವವರೆಗೆ ಕಾಯಿಸಿ .
ಕತ್ತರಿಸಿದ ಗೇರುಬೀಜ, ಬಾದಾಮ್ ಸೇರಿಸಿ (ಇದ್ದರೆ).
ಮಣೆಯ ಮೇಲೆ ಬಾಳೆಎಲೆ ಇಟ್ಟು, ಬೆಂದ ಪಾಕವನ್ನು ಹಾಕಿ ಹೊರಳಿಸಿ ಬಾಳೆಹಣ್ಣಿನ ಆಕಾರಕ್ಕೆ ತನ್ನಿ.
ತಣಿಯಲು ಬಿಡಿ. ಉರುಟುರುಟಾಗಿ ಕತ್ತರಿಸಿ ತಿನ್ನಿ .
ಫ್ರಿಜ್ ನಲ್ಲಿ ಇಟ್ಟರೆ ಇನ್ನೂ ಚೆನ್ನಾಗಿರುತ್ತದೆ .
' ಕ್ಯಾಂಪ್ಕೋ 'ದವರ ಲಘು ಪೇಯ ' ವಿನ್ನರ್ ' ಕೊಕ್ಕೋ ಹುಡಿ ಈ ಸಿಹಿ ತಿಂಡಿ ತಯಾರಿಕೆಗೆ ಸೂಕ್ತವಾಗಿದೆ , ಇದು ನನ್ನ ಅನುಭವ .
ಕೊಕ್ಕೋ ಇಲ್ಲಾಂದ್ರೆ ಬಾದಾಮ್ ಹುಡಿ ಹಾಕಿಯೂ ಮಾಡಬಹುದು , ಅಳತೆಯಲ್ಲಿ ಹೆಚ್ಚುಕಮ್ಮಿ ಆದರೂ ರುಚಿಗೆ ಏನೂ ತೊಂದರೆಯಿಲ್ಲ . ' ಬಾದಾಮ್ ಡಿಲೈಟ್ ' ಎಂದು ಹೆಸರಿಟ್ಟರಾಯ್ತು .
Posted via DraftCraft app
Subscribe to:
Post Comments (Atom)
0 comments:
Post a Comment